-->
ಜೀವನ ಸಂಭ್ರಮ : ಸಂಚಿಕೆ - 35

ಜೀವನ ಸಂಭ್ರಮ : ಸಂಚಿಕೆ - 35

ಜೀವನ ಸಂಭ್ರಮ : ಸಂಚಿಕೆ - 35


                      ಶ್ರೀಮಂತರು.
                 --------------------
        ನಾನು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ "ಕಥಾಮೃತ" ಪುಸ್ತಕ ಓದುವಾಗ ಈ ಕಥೆ ಇದಕ್ಕೆ ಒಳ್ಳೆಯ ಉದಾಹರಣೆ ಅನಿಸಿತು. ಆ ಕಥೆಯ ಸಾರಾಂಶ ಹೀಗಿದೆ. ಮಕ್ಕಳೇ, ಇದನ್ನು ಆನಂದವಾಗಿ ಓದಿ.
         ಅಕ್ಬರ್ ಬಾದಶಹ ಒಬ್ಬ ರಾಜ. ಆತನ ಆಸ್ಥಾನದಲ್ಲಿ ಒಬ್ಬ ಶ್ರೇಷ್ಠ ಸಂಗೀತಗಾರ ಇದ್ದ. ಆತನ ಹೆಸರು ತಾನಸೇನ. ತಾನಸೇನ ಹಾಡಿದರೆ ರಾಜರು , ಆಸ್ಥಾನದ ಮಂದಿ ಮತ್ತು ಜನ ಸಂಗೀತದಲ್ಲಿ ತಲ್ಲೀನರಾಗಿರುತ್ತಿದ್ದರು. ಅಷ್ಟು ಅದ್ಭುತವಾಗಿ ಹಾಡುತ್ತಿದ್ದ. ಈತನ ಹಾಡಿಗೆ ಮನಸೋಲದವರೇ ಇಲ್ಲ. ತಾನಸೇನನ ಅದ್ಭುತ ಗಾಯನ ಕೇಳಿದ ರಾಜನಿಗೆ ತಾನಸೇನನ ಗುರುಗಳ ಗಾಯನ ಕೇಳಬೇಕೆನಿಸಿತು. ರಾಜ, ತಾನಸೇನ ನಿಗೆ ಹೇಳಿದ , "ನಿನ್ನ ಗುರುಗಳನ್ನು ಅರಮನೆಗೆ ಕರೆಸು , ಅವರ ಗಾಯನ ಕೇಳಬೇಕು ಹಾಗೂ ಅವರಿಗೆ ಸನ್ಮಾನ ಮಾಡಬೇಕೆಂದಿದ್ದೇನೆ" ಎಂದು ಹೇಳಿದ. ಆಗ ತಾನಸೇನ ಹೇಳಿದ್ದು , ನನ್ನ ಗುರುಗಳ ಹಾಡು ಕೇಳಬೇಕಾದರೆ , ಅವರು ಇರುವಲ್ಲಿ ಹೋಗಬೇಕು. ಅವರು ತಾವು ಕರೆದರೆಂದು ಬಂದು ಹಾಡುವುದಿಲ್ಲ. ಅವರು , ಅವರಿಗಾಗಿ , ಅವರ ಆನಂದಕ್ಕಾಗಿ ಹಾಡುತ್ತಾರೆ. ಇದನ್ನು ಕೇಳಿದ ರಾಜ ಸರಿ ನಾವು ನಿಮ್ಮ ಗುರುಗಳ ಹಾಡನ್ನು ಕೇಳಬೇಕು. ಇಂದೇ ಹೋಗೋಣ ಎಂದರು. ಅದರಂತೆ ಸಂಜೆ ತಾನಸೇನನ ಗುರು ಹರಿದಾಸನ ಗುಡಿಸಿಲಿನ ಹತ್ತಿರ ಬರುತ್ತಾರೆ. ಅಂದು ಬೆಳದಿಂಗಳ ಹುಣ್ಣಿಮೆ. ಆಕಾಶದಲ್ಲಿ ಪೂರ್ಣಚಂದ್ರ ಬಂದು ಇಡೀ ಪ್ರದೇಶವನ್ನೇ ಬೆಳಗಿದ್ದ. ರಾಜ ಬಾದಶಹ ಹಾಗೂ ತಾನಸೇನ , ಹರಿದಾಸನ ಗುಡಿಸಲಿನ ಪಕ್ಕದ ಮರದ ಕೆಳಗೆ ಹರಿದಾಸನಿಗೆ ಕಾಣದಂತೆ ಬಂದು ಕುಳಿತುಕೊಂಡರು. ಹರಿದಾಸ ಯಮುನಾ ನದಿ ಪಕ್ಕ ಸುಂದರ ತೋಟದೊಳಗೆ ಸಣ್ಣ ಗುಡಿಸಿಲಿನಲ್ಲಿ ವಾಸವಾಗಿದ್ದ. ರಾತ್ರಿ ಚಂದ್ರನ ಬೆಳಕಿನಲ್ಲಿ ಹರಿದಾಸ ಹಾಡಲು ಪ್ರಾರಂಭಿಸಿದ. ಆ ಹಾಡಿನ ದಾಟಿಗೆ ಯಮುನಾ ನದಿಯ ಮೇಲೆ ಶ್ರೀಕೃಷ್ಣ ನರ್ತಿಸುತ್ತಿದ್ದ ಅನುಭವವಾಗುತ್ತಿತ್ತು. ಆ ಗಾಯನ ಕೇಳಿದ ಮೇಲೆ ರಾಜ ಬಾದಶಹ ಹೇಳುತ್ತಾನೆ , "ನಿನ್ನ ಗುರು ಗಾಯನ ಕೇಳಿದ ಮೇಲೆ ನಿನ್ನ ಗಾಯನ ಏನೂ ಅಲ್ಲ" ಎಂದು. ಅದಕ್ಕೆ ತಾನಸೇನ ಹೇಳುತ್ತಾನೆ , "ಹೌದು ಸ್ವಾಮಿ , ನನ್ನ ಗುರುಗಳು ತಮ್ಮ ಆನಂದಕ್ಕಾಗಿ, ದೇವನಿಗಾಗಿ ಹಾಡುತ್ತಾನೆ. ನಾನು ನೀವು ನೀಡುವ ಹಣಕ್ಕಾಗಿ ಹಾಡುತ್ತೇನೆ‌. ಆದರೆ ನನ್ನ ಗುರು ಹಾಡಿನಲ್ಲಿ ಆನಂದ ಪಡುತ್ತಾರೆ , ಸುಂದರ ಜೀವನ ಸಾಗಿಸುತ್ತಿದ್ದಾರೆ."
        ಮಕ್ಕಳೇ, ಈ ಕಥೆ ಓದಿದ ಮೇಲೆ ಶ್ರೀಮಂತರು ಯಾರು...? ನಾವೆಲ್ಲ ತಿಳಿದು ಕೊಂಡಿರುವುದು ಹೆಚ್ಚು ಹಣ , ಆಸ್ತಿ , ಒಡವೆ , ಮುತ್ತು ಮತ್ತು ರತ್ನಗಳನ್ನು ಹೊಂದಿರುವವರನ್ನು ಶ್ರೀಮಂತರೆನ್ನುತ್ತೇವೆ. ಇದು ತಪ್ಪು. ಇವರು ಹಣದಲ್ಲಿ ಶ್ರೀಮಂತರು ನಿಜ. ಆದರೆ ಎಲ್ಲದರಲ್ಲೂ ಶ್ರೀಮಂತರಲ್ಲ. ಈ ಭೂಮಿಯ ಮೇಲಿರುವ ಪ್ರತಿಯೊಬ್ಬರು ಎಲ್ಲಾ ವಿಷಯಗಳಲ್ಲಿ ಶ್ರೀಮಂತರು ಅಲ್ಲ . ಅದೇ ರೀತಿ ಬಡವರೂ ಅಲ್ಲ. ಈ ಮೇಲಿನ ಕಥೆಯಲ್ಲಿ ಹರಿದಾಸ ಗುಡಿಸಲಿನಲ್ಲಿ ಇದ್ದರೂ ಸಂಗೀತ ಕ್ಷೇತ್ರದಲ್ಲಿ ಆತನೇ ಸಾಮ್ರಾಟ ಮತ್ತು ಶ್ರೀಮಂತ. ಕೆಲವರು ಚಿತ್ರಕಲೆಯಲ್ಲಿ ಸಿರಿವಂತರು. ಕೆಲವರು ಶಿಲ್ಪಕಲೆಯಲ್ಲಿ ಶ್ರೀಮಂತರು. ಕೆಲವರು ಸಾಹಿತ್ಯದಲ್ಲಿ, ಕೆಲವರು ನಟನೆಯಲ್ಲಿ. ಕೆಲವರು ಕ್ರೀಡೆಯಲ್ಲಿ, ಕೆಲವರು ದೈಹಿಕ ಸಾಮರ್ಥ್ಯದಲ್ಲಿ ಹೀಗೆ ಹೇಳುತ್ತಾ ಹೋದರೆ ಸಾಮರ್ಥ್ಯ ಆಧಾರಿತ ಶ್ರೀಮಂತರು ಈ ಭೂಮಿಯ ಮೇಲೆ ಇದ್ದಾರೆ. ಆದರೆ ಅವರು ಅವರ ಸಾಮರ್ಥ್ಯದಲ್ಲಿ ಶ್ರೀಮಂತರು. ಉಳಿದಂತೆ ಬಡವರೇ. 
        ಹಾಗಾದರೆ ನಾವು ಕೂಡ ಶ್ರೀಮಂತರಾಗಬಹುದು. ಯಾವುದು ಅಂದರೆ, ಪ್ರಕೃತಿ ನಮಗೆ ನೀಡಿರುವ ಸಾಮರ್ಥ್ಯದಲ್ಲಿ. ಈ ಭೂಮಿಯ ಮೇಲೆ ಯಾರೂ ನಿರುಪಯುಕ್ತರಲ್ಲ. ತನ್ನ ಸಾಮರ್ಥ್ಯ ತಿಳಿಯದವನು ನಿರುಪಯುಕ್ತ. ಪ್ರಕೃತಿ ಪ್ರತಿಯೊಬ್ಬರಲ್ಲೂ ಒಂದೇ ರೀತಿಯ ಆಸಕ್ತಿ , ಸಾಮರ್ಥ್ಯ ಇಟ್ಟಿರುವುದಿಲ್ಲ. ಅದು ವೈವಿಧ್ಯಮಯ ವಾಗಿರುತ್ತದೆ. ಆ ಸಾಮರ್ಥ್ಯ ನಮ್ಮಲ್ಲಿ ಆಸಕ್ತಿಯನ್ನು ಉಂಟುಮಾಡುತ್ತದೆ‌. ಆದ್ದರಿಂದ ನಮಗೆ ಆಸಕ್ತಿ ಇರುವ ವಿಷಯದಲ್ಲಿ ಜ್ಞಾನ ಸಂಪಾದಿಸಿಕೊಳ್ಳಲು, ಸತತ ಪ್ರಯತ್ನ , ಸತತ ಪರಿಶ್ರಮ, ನಿರಂತರ ಪ್ರೀತಿಯಿಂದ ಸಾಧನೆ ಮಾಡಿದರೆ , ಆ ಸಾಧನೆ ನಮಗೆ ತೃಪ್ತಿ ನೀಡುತ್ತದೆ , ಆನಂದವಾಗುತ್ತದೆ ಮತ್ತು ಜೀವನ ಸೊಗಸಾಗುತ್ತದೆ. ಆ ರೀತಿ ಆ ವಿಷಯದಲ್ಲಿ ಶ್ರೀಮಂತರಾಗಬಹುದು. ಹೀಗೆ ಶ್ರೀಮಂತಿಕೆಯೆನ್ನುವುದು ವೈವಿಧ್ಯಮಯವಾದುದು.
          ಶ್ರೀಮಂತರಾದ ಮಾತ್ರಕ್ಕೆ ಯಶಸ್ವಿಯಾಗುವುದಿಲ್ಲ. ನಾವು ಇಂದು ಬುದ್ಧ, ಗಾಂಧಿ , ಸ್ವಾಮಿ ವಿವೇಕಾನಂದ , ಬಸವಣ್ಣ , ಅಂಬೇಡ್ಕರ್ ಅವರನ್ನು ಯಶಸ್ವಿ ವ್ಯಕ್ತಿಗಳು ಎನ್ನುತ್ತೇವೆ. ಬುದ್ಧ ರಾಜನಾದರೂ ಅದನ್ನು ತೊರೆದು ಹೋದ. ಹಣ ಆಸ್ತಿ ಅರಮನೆ ತೊರೆದ ನಂತರ ಅವನ ಹತ್ತಿರ ಇದ್ದಿದ್ದು ಭಿಕ್ಷಾಪಾತ್ರೆ ಒಂದು. ಆದರೆ ಜ್ಞಾನದಲ್ಲಿ ಶ್ರೀಮಂತರಾಗಿದ್ದ. ಇವರೆಲ್ಲ ಜ್ಞಾನದಲ್ಲಿ ಶ್ರೀಮಂತರೆ ವಿನಹ ಹಣದಲ್ಲಿ ಶ್ರೀಮಂತರಾಗಿರಲಿಲ್ಲ. ಇಂದು ನಾವು ನಮ್ಮ ತಂದೆ , ತಾತನ ಹೆಸರನ್ನು ಬಿಟ್ಟು ಉಳಿದವರ ಹೆಸರು ನೆನಪಿಲ್ಲ. ಇವರಲ್ಲಿ ಅನೇಕರು ನಮ್ಮ ತಾತನಿಗಿಂತ ತುಂಬಾ ಹಳೆಯ ತಲೆಮಾರಿನವರು. ಆದರೂ ಇವರ ಹೆಸರು ನೆನಪಿದೆ. ಏಕೆಂದರೆ ಇವರು ಯಶಸ್ವಿ ಜೀವನ ನಡೆಸಿದವರು. ಇವರು ತಮ್ಮ ಸ್ವಾರ್ಥಕ್ಕಾಗಿ ಬದುಕಲಿಲ್ಲ. ಸಮಾಜದ ಇತರರಿಗಾಗಿ ಬದುಕಿದ್ದರು. ಆದ್ದರಿಂದ ಯಶಸ್ವಿ ವ್ಯಕ್ತಿಗಳಾದರು.
         ಮಕ್ಕಳೇ ನಾವು ಕೂಡ ಯಶಸ್ವಿ ಶ್ರೀಮಂತರಾಗಬಹುದು. ನಾವು ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರೀತಿಯಿಂದ ಸಾಧನೆ ಮಾಡಿ ಆ ಕ್ಷೇತ್ರದಲ್ಲಿ ಶ್ರೀಮಂತರಾಗಿ, ನಮ್ಮ ಸುತ್ತಮುತ್ತ ಇರುವ ಜನರಿಗೆ ನಮ್ಮ ಕೈಲಾದ ಸೇವೆ ಮಾಡಿ ಯಶಸ್ವಿ ವ್ಯಕ್ತಿಗಳಾಗಬಹುದು. ಮನಸ್ಸಿನಲ್ಲಿ , ಭಾವದಲ್ಲಿ , ಆನಂದದಲ್ಲಿ , ಪ್ರೇಮದಲ್ಲಿ , ಸಂತೋಷದಲ್ಲಿ , ಸಿರಿವಂತರಾಗಿರುವವರಿಗೆ ಜಗತ್ತಿನಲ್ಲಿ ಯಾವ ಸಿರಿವಂತರೂ ಸಾಮಾನರಲ್ಲ. ನಾವು ಶ್ರೀಮಂತರಾಗಬೇಕಾದಲ್ಲಿ ಕೊರತೆ ಇರುವ ಕಡೆ, ನಮ್ಮಲ್ಲಿ ಇಲ್ಲದ ಕಡೆ , ಗಮನ ಹರಿಸದೆ ಇರುವುದರ 
ಕಡೆ , ಗಮನಹರಿಸಿ ಆನಂದಿಸಬೇಕು. ಅನುಭವದಲ್ಲಿ ಶ್ರೀಮಂತರಾಗಬೇಕೇ ವಿನಹ ವಸ್ತುಗಳಲ್ಲಿ ಅಲ್ಲ , ಅಲ್ಲವೇ....?
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article