-->
ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 3

ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 3

 ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 3

ಮೇ -08 ರಂದು * ವಿಶ್ವ ತಾಯಂದಿರ ದಿನ * 
ಜಗಲಿಯ ಮಕ್ಕಳು - ತಮ್ಮ ಅಮ್ಮನನ್ನು ಖುಷಿ ಪಡಿಸಿದ ವಿಶೇಷ ಸಂದರ್ಭಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.... ತಮ್ಮ ಮುದ್ದಿನ ಅಮ್ಮನ ಪ್ರೀತಿಯ ಬಗ್ಗೆ ಮುದ್ದುಮುದ್ದಾದ ಮಾತುಗಳಲ್ಲಿ ಪ್ರಕಟವಾಗಿದೆ......

        ಎಲ್ಲರಿಗೂ ಆತ್ಮೀಯ ಶುಭ ನಮನಗಳು... ನನ್ನ ಹೆಸರು ಪ್ರಿಯ. ಮೊದಲನೆಯದಾಗಿ ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳನ್ನು ಹೇಳಲು ಇಚ್ಚಿಸುತ್ತೇನೆ. ಸುಲಭವಾಗಿ ಹೇಳುವುದಾದರೆ ಎಲ್ಲಾ ತಾಯಂದಿರಿಗೂ ತಮ್ಮ ಮಕ್ಕಳು ಯಾವುದೇ ರೀತಿಯ ಒಳ್ಳೆಯ ಕೆಲಸ ಮಾಡಿದರೆ ತುಂಬಾ ಸಂತೋಷವಾಗುತ್ತದೆ. ಇದೇ ರೀತಿ ನನ್ನ ಅಮ್ಮನಿಗೆ ನಾನು ಸಂತೋಷ ಪಡಿಸಿದ ಸಂದರ್ಭವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ, ಮೊದಲನೆಯದಾಗಿ ನಾನು ಮತ್ತು ತಂಗಿ ಹಿರಿಯರಿಗೆ ಗೌರವಿಸಿದಾಗ ಮತ್ತು ಅವರ ಸೇವೆ ಮಾಡಿದಾಗ ಅಮ್ಮನಿಗೆ ತುಂಬಾ ಸಂತೋಷವಾಗುತ್ತದೆ. ಅಮ್ಮ ಹೇಳಿದ ಕೆಲಸವನ್ನು ತಡ ಮಾಡದೆ ಮಾಡಿದಾಗ ಅಮ್ಮನಿಗೆ ಸಂತೋಷವಾಗುತ್ತದೆ. ಶಾಲೆಯಲ್ಲಿ ನಡೆಯುವ ಸಮಾರಂಭಗಳಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಮಗೆ ಬಹುಮಾನ ದೊರೆತ ಸಂದರ್ಭಗಳಲ್ಲಂತು ಅಮ್ಮ ನಮಗಿಂತ ಹೆಚ್ಚು ಖುಷಿ ಪಡುತ್ತಾರೆ. ನನಗನಿಸುವ ಪ್ರಕಾರ ನಮಗೆ ತಿಳಿದ ಒಳ್ಳೆಯ ವಿಷಯಗಳನ್ನು ಬೇರೆಯವರೊಂದಿಗೆ ಅಥವಾ ಸಣ್ಣ ಮಕ್ಕಳೊಂದಿಗೆ ಸಮಾಲೋಚನೆ ಮಾಡಿದಾಗ ಅಮ್ಮ ಬಹಳ ಖುಷಿ ಪಡುತ್ತಾರೆ. ನಮ್ಮ ಊರಿನ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಸ್ಫರ್ಧೆಗೆ ಭಾಗವಹಿಸಿ ಆ ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿದ ಸಂದರ್ಭ ಅಮ್ಮನಿಗೆ ಸಂತೋಷದ ಸುರಿಮಳೆ. ಆ ಸವಿ ನೆನಪು ಇನ್ನೂ ಇದೆ. ಅಮ್ಮ ನಮ್ಮ ಪುಟ್ಟ ನಗುವಿನಲ್ಲಿ ಸಂತೋಷ ಪಡೆಯುತ್ತಾರೆ. ಕೊನೆಯದಾಗಿ ನಮಗೆ ಇಂಥ ಅಮ್ಮ ದೊರೆತಿದ್ದು ನಮ್ಮ ಪುಣ್ಯ ಎಂದು ತಿಳಿಸಲು ಇಚ್ಚಿಸುತ್ತೇನೆ. ನನಗೆ ಈ ಖುಷಿಯ ವಿಚಾರ ಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಮಕ್ಕಳ ಜಗಲಿಗೆ ವಂದನೆಗಳನ್ನು ಅರ್ಪಿಸುತ್ತೇನೆ.
...................................................... ಪ್ರಿಯ 
10 ನೇ ತರಗತಿ .
ಸರಕಾರಿ ಪ್ರೌಢ ಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

     
     
      ನಾನು ಲಹರಿ ಜಿ.ಕೆ..... ಅಮ್ಮನನ್ನು ಖುಷಿ ಪಡಿಸಿದ ಸಂದರ್ಭ..... ನನ್ನ ಅಮ್ಮ ನನ್ನನ್ನು ಎಲ್ಲಾ ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಚೆನ್ನಾಗಿ ಭಾಗವಹಿಸಲು ಹುರಿದುಂಬಿಸುತ್ತಾರೆ..... ಸಣ್ಣಪುಟ್ಟ ಮನೆಯ ಕೆಲಸಗಳನ್ನು ಕಲಿಸಿಕೊಡುತ್ತಾಳೆ.... ಅನೇಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಸಹಾಯ ಮಾಡುತ್ತಾಳೆ.... ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನನಗೆ ಬಹುಮಾನ ಬಂದಾಗ ನನ್ನಮ್ಮ ತುಂಬಾ ಖುಷಿ ಪಡುತ್ತಾರೆ.... ನನಗೆ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳು ಸಿಕ್ಕಾಗ ಅಮ್ಮ ತುಂಬಾ ಖುಷಿ ಪಡುತ್ತಾರೆ.... ಈ ಸಲ ಏಳನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ನನಗೆ ಎಲ್ಲಾ ವಿಷಯಗಳಲ್ಲೂ A+ ಗ್ರೇಡ್ ಸಿಕ್ಕಿದಾಗ ಅಮ್ಮ ತುಂಬಾ ಖುಷಿ ಪಟ್ಟರು..... ಏನೇ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಎದುರಿಸಲು ಅಮ್ಮ ನನಗೆ ಕಲಿಸಿಕೊಟ್ಟಿದ್ದಾರೆ.... ನನಗೆ ಆತ್ಮಸ್ಥೈರ್ಯವನ್ನು ನೀಡಿದ ಅಮ್ಮನಿಗೆ ನಾನು ಸದಾ ಚಿರಋಣಿ.... "ಅಮ್ಮಂದಿರ ದಿನ"ದ ಈ ಸುದಿನದಂದು ನಾನು ಎಲ್ಲಾ ತಾಯಂದಿರಿಗೂ ಶುಭಾಶಯಗಳನ್ನು ಕೋರುತ್ತೇನೆ.
............................................... ಲಹರಿ ಜಿ.ಕೆ.
7ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್. ತುಂಬೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************

 
        ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು... ನಾನು ಶ್ರೇಯಾ ಆರ್ ನಾಯ್ಕ .
"ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ " ಈ ಮಾತು ಅಕ್ಷರಶಃ ಸತ್ಯ. ತಾಯಿ ಮಮತಾಮಯಿ. ಅವಳ ಪ್ರೀತಿಗೆ ಮಿತಿಯೇ ಇಲ್ಲ. ನನ್ನ ಅಮ್ಮನಿಗೆ ಸಂಗೀತವೆಂದರೆ ಬಹಳ ಪ್ರೀತಿ. ತಾನು ಸಂಗೀತ ಕಲಿಯಲಿಲ್ಲ ತನ್ನ ಮಗಳಾದರೂ ಕಲಿಯಲಿ ಅಂತ ನನ್ನನ್ನು ಸಂಗೀತ ತರಗತಿಗೆ ಹಾಕಿದ್ದಳು. ನಾನು ಶ್ರದ್ಧೆಯಿಂದ ನನ್ನ ಕೈಲಾದಷ್ಟು ಸಂಗೀತ ಪಾಠವನ್ನು ಕಲಿಯುತ್ತಿದ್ದೆ. ಶಾಲೆಯಲ್ಲಿ ಅನೇಕ ಹಾಡುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಪ್ರಥಮ ಬಹುಮಾನ ಪಡೆಯುವಲ್ಲಿ ವಿಫಲವಾಗುತ್ತಿದ್ದೆ. ಇದರಿಂದ ನನ್ನಮ್ಮನಿಗೆ ತುಂಬಾ ಬೇಸರವಾಗುತ್ತಿತ್ತು. ಹೇಗಾದರೂ ಮಾಡಿ ನನ್ನಮ್ಮನ ಕನಸನ್ನು ನನಸು ಮಾಡಬೇಕೆಂದು ಶ್ರದ್ಧೆಯಿಂದ ಸಂಗೀತವನ್ನು ಕಲಿಯತೊಡಗಿದೆ. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ "ಮರಾಠಿ ಕಂಠಪಾಠ"ದಲ್ಲಿ ಭಾಗವಹಿಸಿ "ಪ್ರಥಮ ಸ್ಥಾನ"ವನ್ನು ಪಡೆದುಕೊಂಡಿದ್ದು , ಆಗ ನನ್ನಮ್ಮನಿಗೆ ಆದ ಖುಷಿಗೆ ಪಾರವೇ ಇಲ್ಲ. ಅವಳು ಆ ದಿನವನ್ನು ತುಂಬಾ ಸಂಭ್ರಮಿಸಿದಳು. ಇದು ನಾನು ನನ್ನಮ್ಮನಿಗೆ ನೀಡಿದ ಸಂತೋಷದ ಗಳಿಗೆ ಆಗಿದೆ.
.....................................ಶ್ರೇಯಾ ಆರ್ ನಾಯ್ಕ 
ಏಳನೇ ತರಗತಿ  
ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಕಂಬದಕೋಣೆ 
ಬೈಂದೂರು ತಾಲೂಕು , ಉಡುಪಿ ಜಿಲ್ಲೆ          
**********************************************      ನಾನು ಪ್ರಣವ್ ದೇವ್ .... ಅಮ್ಮ. ಪ್ರೀತಿಯ ಸಂಕೇತ, ಗುರು, ದೇವತೆ, ಅಮ್ಮ ಎಲ್ಲಾ ವಿಷಯಗಳನ್ನು ಚೆನ್ನಾಗಿ ತಿಳಿಸಿ ಕೊಡುತ್ತಾರೆ, ಕಲ್ಲು, ಚಿಪ್ಪು , ಎಲೆ ತಂದು ಕೊಟ್ಟು ನನ್ನ ಕ್ರಿಯಾಶೀಲತೆ ಯನ್ನು ಹೆಚ್ಚಿಸುತ್ತಾರೆ, ಯಾವುದೇ ಕೆಲಸಗಳನ್ನು ಬಹಳ ಚೆನ್ನಾಗಿ ಮಾಡುತ್ತಾರೆ, ನನ್ನ ಅಮ್ಮ ನನ್ನ ಮುದ್ದು ಅಮ್ಮ.
...........................................ಪ್ರಣವ್ ದೇವ್
೨ನೇ ತರಗತಿ
ಲೇಡಿ ಹಿಲ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್ 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
********************************************


        ನಾನು ಅನ್ವಿ.ಸಿ.ಅಂಚನ್..... ಅಮ್ಮ........ ನಾನು ಮೊದಮೊದಲು ಪುಟ್ಟ ಹೆಜ್ಜೆ ಇಡುವಾಗ ಅಮ್ಮನ ಮುಖದಲ್ಲಿ ಖುಷಿ ಕಂಡೆ. ನನ್ನ ತೊದಲು ಮಾತುಗಳನ್ನು ಕೇಳಿ ಅಮ್ಮ ನಗುತ್ತಿದ್ದಳು. ನಾನು ಕಲಿತ ಮೊದಲ ಪದ ಅಮ್ಮ. ಅದನ್ನು ಕೇಳಿ ಅಮ್ಮ ತುಂಬಾ ಸಂತೋಷ ಪಟ್ಟಳು. ನಾನು ನನ್ನ ತರಗತಿಯಲ್ಲಿ ನಾನು ಒಳ್ಳೆ ಅಂಕ ಬಂದಾಗ ನಾನು ನನ್ನ ಅಮ್ಮನ ಕಣ್ಣಲ್ಲಿ ಸಂತೋಷದ ಕಣ್ಣೀರನ್ನು ನೋಡುತ್ತೇನೆ. ಉಸಿರು ಕೊಟ್ಟು ಜನ್ಮ ನೀಡಿ ಹೆಸರನಿಟ್ಟು ಜಗಕೆ ತೋರಿ ಮುತ್ತು ಕೊಟ್ಟು ತುತ್ತು ತಿನಿಸಿ ಸಾಕಿ ಸಲುಹಿದಳು ಅಮ್ಮ. ನನ್ನ ಪ್ರೀತಿಯ ಅಮ್ಮ.......
.........................................ಅನ್ವಿ.ಸಿ.ಅಂಚನ್
 4 ನೇ ತರಗತಿ 
ಯನ್.ಎಮ್.ಪಿ.ಟಿ. ಆಂಗ್ಲ ಮಾಧ್ಯಮ ಶಾಲೆ ಪಣಂಬೂರು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ    
**********************************************


 
      
       ನಮಸ್ತೆ ನಾನು ಧೀರಜ್. ಎಲ್ಲಾ ನನ್ನ ಪ್ರೀತಿಯ ಅಮ್ಮಂದಿರಿಗೆ "ತಾಯಂದಿರ ದಿನ" ದ ಶುಭಾಶಯಗಳು. ಪ್ರತಿ ಕ್ಷಣ ಬದಲಾಗೋ ಈ ಭೂಮಿಯಲ್ಲಿ..!! ಎಂದಿಗೂ ಉಳಿಯುವುದು ಅದು "ತಾಯಿಪ್ರೀತಿ" ಮಾತ್ರ. ಉಸಿರು ಕೊಟ್ಟು ಜನ್ಮ ನೀಡಿ ಮುತ್ತು ಕೊಟ್ಟು ತುತ್ತು ತಿನಿಸಿ ಸಾಕಿ ಸಲಹಿದ ಜನ್ಮದಾತೆಗೆ ಕೋಟಿ ಕೋಟಿ ನಮನ". ನನ್ನ ಅಮ್ಮನ ಬಗ್ಗೆ ಹೇಳೋದಾದ್ರೆ ಮಕ್ಕಳ ಬಗ್ಗೆ ತುಂಬಾ ಕಾಳಜಿ, ಜವಾಬ್ದಾರಿ, ನನ್ ಮಗ ಯಾವ್ದೆ ಕ್ಷೇತ್ರದಲ್ಲೂ ಏನಾದ್ರು ಒಂದು ಸಾಧನೆ ಮಾಡ್ಬೇಕಂತ ಪ್ರತಿ ದಿನ ಪ್ರತಿ ಕ್ಷಣ ಹಂಬಲಿಸ್ತಾ ಇರುತ್ತಾರೆ. ಶಾಲಾ ಶೈಕ್ಷಣಿಕ ವಿಷಯದಲ್ಲಿ ಮುಂದುವರಿಯಲು ತುಂಬಾ ಸಹಕರಿಸುತ್ತಾರೆ. ನನ್ನ ಅಮ್ಮ ನನ್ನ ಸಣ್ಣ ಪುಟ್ಟ ಗೆಲುವಲ್ಲಿಯೂ ಸಂತೋಷ ಕಾಣುವ ದೇವತೆ. ಅದೇ ನನಗೆ ಖುಷಿ. "ತನಗಾಗಿ ಏನನ್ನು ಬಯಸದವಳು , ಅವಳಿಗಾಗಿ ಏನನ್ನು ಕೂಡಿಡದವಳು , ತನಗಿಲ್ಲವೆಂದು ಕೊರಗದವಳು , ಸದಾ ಜೊತೆಯಾಗಿ ನಿಲ್ಲುವವಳು , ನನ್ನ ನಗುವಲ್ಲೇ ತನ್ನ ಖುಷಿಯ ಕಂಡವಳು , ತನ್ನ ಮಕ್ಕಳಿಗಾಗಿಯೇ ತನ್ನ ಇಡೀ ಜೀವನವನ್ನೇ ಮೀಸಲಿಡುವಳು....... ಅವಳೇ ನನ್ನ ಅಮ್ಮ ಅವಳಿಂದಲೇ ನನಗೆ ಈ ಜನ್ಮ".
ಲವ್ ಯು ಅಮ್ಮ ......ಧನ್ಯವಾದಗಳು... 
.......................................ಧೀರಜ್. ಕೆ ಆರ್ 
10ನೇ ತರಗತಿ  
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ. 
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************        ಜೈ ಶ್ರೀರಾಮ್ .....  ನಾನು ತೃಪ್ತಿ ವಗ್ಗ......
ತಮಗೆಲ್ಲರಿಗೂ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು. ಈ ನಮ್ಮ ಭೂಮಿಯನ್ನು ಅಮ್ಮನಿಗೆ ಹೋಲಿಸಿದ್ದಾರೆ. ನಮ್ಮ ದೇಶವನ್ನು ತಾಯಿಗೆ ಹೋಲಿಸಿದ್ದಾರೆ. ಏನೆಂದರೆ ಭಾರತ ಮಾತೆ. ನನ್ನ ಅಮ್ಮ ಎಂದರೆ ತುಂಬಾ ಇಷ್ಟ. ಏಕೆಂದರೆ ಅವರು ನನ್ನನ್ನು ತುಂಬಾ ತುಂಬಾ ಪ್ರೀತಿ ಮಾಡುತ್ತಾರೆ. ನನಗೆ ಬಿದ್ದು ನೋವಾದರೆ ಔಷಧಿ ಹಚ್ಚುತ್ತಾಳೆ. ಕಾಲು ನೋವಾದರೆ ಎಣ್ಣೆ ಹಚ್ಚುತ್ತಾಳೆ. ನನಗೆ ಬೇಕಾದ ಬಟ್ಟೆಗಳನ್ನು ತರುತ್ತಾಳೆ. ನನಗೆ ಬೇಕಾದ ತಿಂಡಿಗಳನ್ನೂ ಮಾಡುತ್ತಾಳೆ. ಶಾಲೆಗೆ ಬೇಕಾದ ವಸ್ತುಗಳನ್ನು ತರುತ್ತಾಳೆ. ಆದರೆ ಅವಳು ಕೆಟ್ಟದನ್ನು ಹೇಳಿ ಕೊಡುವುದಿಲ್ಲ. ಆದರೆ ಅವಳು ಹೇಳಿದ ಕೆಲಸ ಮರೆಯದೇ ಮಾಡಬೇಕು. ಆಗ ಮುದ್ದು ಮಾಡುವಾಗ ಖುಷಿಯಾಗುತ್ತದೆ. ಹಾಗೆಂದು ದೊಡ್ಡ ಕೆಲಸವೇನೂ ಹೇಳುವುದಿಲ್ಲ !.ಸಣ್ಣ ಸಣ್ಣ ಕೆಲಸ ಅಷ್ಟೇ. ನನ್ನ ಅಮ್ಮನೆ ನನಗೆ ಗುರು ಅನ್ನಿಸುತ್ತದೆ. ಅವಳು ಶ್ಲೋಕ , ಭಜನೆ , ದೇಶಭಕ್ತಿ ಗೀತೆಗಳನ್ನು ಹೇಳಿಕೊಡುತ್ತಾಳೆ. ಯಾರ ಬಗ್ಗೆಯಾದ್ರು ಕೆಟ್ಟದು ಮಾತಾಡಿದಿದ್ರೆ ಹಾಗೆಲ್ಲ ಹೇಳಬಾರದು ಅಂತಾಳೆ. ನನ್ನ ತಮ್ಮ ಹೇಳ್ತಾ ಇರ್ತಾನೆ , ಅಮ್ಮ ಅಂದರೆ ದೇವಿ ಅಂತೆ. ಅವನ ಮಾತಾಜೀ ಹೇಳಿದಂತೆ ಒಂದು ಹಾಡು ಕೂಡ ಹೇಳ್ತಾನೆ. ನನ್ನ ಅಮ್ಮ ಅಂದ್ರೆ ನಂಗಿಷ್ಟ. ಶುಭವಾಗಲಿ ಎಲ್ಲರಿಗೂ ರಾಮ್ ರಾಮ್.... 
..................................................ತೃಪ್ತಿ ವಗ್ಗ 
6ನೇ ತರಗತಿ 
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************

Ads on article

Advertise in articles 1

advertising articles 2

Advertise under the article