-->
ಯುದ್ಧ (ಕಥೆ)

ಯುದ್ಧ (ಕಥೆ)                   
                      ಒಂದಾನೊಂದು ಕಾಲದಲ್ಲಿ ಗಿರಿದುರ್ಗ ಎನ್ನುವಂತಹ ಒಂದು ರಾಜ್ಯವಿತ್ತು. ಅಲ್ಲಿನ ರಾಜ  ರವಿವರ್ಮ. ಮಹಾನ್ ಪರಾಕ್ರಮಿ, ಧೈರ್ಯವಂತ, ಹಾಗೆಯೇ ಸಾಧುವೂ ಕೂಡ. ಆತನ ಸಾಮ್ರಾಜ್ಯ ಎಲ್ಲೆಡೆ ವಿಸ್ತಾರ ಹೊಂದಿ ಸಂಪತ್ಭರಿತವಾದಂತಹ ಸಾಮ್ರಾಜ್ಯವಾಗಿ ಕಂಗೊಳಿಸುತ್ತಿತ್ತು. ರಾಜ ರವಿವರ್ಮನು  ದಾನ ಧರ್ಮಗಳನ್ನು ಮಾಡುತ್ತಾ, ತನ್ನ ಪ್ರಜೆಗಳ ಯೋಗ - ಕ್ಷೇಮವನ್ನು ವಿಚಾರಿಸುತ್ತಾ ರಾಜ್ಯವನ್ನು ,  ರಾಜ್ಯದ ಜನರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು.
        ಎಲ್ಲರೂ ಹೇಳುವ ಹಾಗೆ ಮನುಷ್ಯರು ಒಬ್ಬರ ಏಳಿಗೆಯನ್ನು ಕಂಡರೆ ಅವರಿಗೆ ಒಳಿತು ಮಾಡುವ ಬದಲು ಅವರನ್ನು ತುಳಿದು ಹಾಕಲು ಬಯಸುವವರೇ ಹೆಚ್ಚು. ಹಾಗೇಯೇ ಇಲ್ಲಾಗಿದ್ದು.  ರಾಜಾ ರವಿವರ್ಮನ ಏಳಿಗೆಯನ್ನು ಕಂಡು ಅದೆಷ್ಟೋ ರಾಜರುಗಳು ಹೊಟ್ಟೆಕಿಚ್ಚು ಪಟ್ಟರು. ಹಾಗೆಯೇ ಆ ಸಂಸ್ಥಾನದ ಮೇಲೆ ಯುದ್ಧ ಸಾರಬೇಕೆಂದುಕೊಂಡವರಲ್ಲಿ ನೆರೆಯ ದೇಶದ ರಾಜ ಮಿತ್ರವರ್ಮನೂ ಒಬ್ಬನು. ಅವನು ಗಿರಿ ದುರ್ಗದ ಮೇಲೆ ಆಕ್ರಮಣ ಮಾಡಲು ಷಡ್ಯಂತ್ರವನ್ನು ರೂಪಿಸಿಕೊಳ್ಳುತ್ತಿದ್ದನು. ಈತ ರಾಜ ರವಿವರ್ಮ ನಿಗಿಂತ ಕಡಿಮೆಯೇನಲ್ಲ  ಮಹಾನ್ ಪರಾಕ್ರಮಿ.
         ಹೀಗೆಯೇ ದಿನಗಳು ಉರುಳಿದಂತೆ
ಮಿತ್ರವರ್ಮನು , ರಾಜ ರವಿವರ್ಮನಿಗೆ ಯುದ್ಧವನ್ನು ಸಾರುವ ಬಗೆಗೆ ಓಲೆಯೊಂದನ್ನು ಕಳುಹಿಸಿದನು. ಅದನ್ನು ಓದಿದಂತಹ ರವಿವರ್ಮನಿಗೆ ಕೋಪವೇನೋ ಬಂದಿತ್ತು. ಆದರೂ ಅವನು ಶಾಂತಿಯನ್ನು ಅರಸುತ್ತಿದ್ದನು. ಯುದ್ಧ ಹೊಡೆದಾಟ-ಬಡಿದಾಟ ಇದೆಲ್ಲಾ ರಾಜ ರವಿವರ್ಮನಿಗೆ ಹಿಡಿಸುತ್ತಿರಲಿಲ್ಲ. ಯುದ್ಧದಿಂದ ಬರಿ ನಾಶವೇ ಹೊರತು ಏಳಿಗೆ ಇರುವುದಿಲ್ಲ. ಯುದ್ಧವನ್ನು ಮಾಡದೆ ಮಿತ್ರ ರಾಜ್ಯಗಳಾಗಿ ಉಳಿದುಬಿಡುವ ಎಂದು ರಾಜ ರವಿವರ್ಮನು ಮಿತ್ರವರ್ಮ ಬರೆದು ಕೊಟ್ಟಂತಹ ಪತ್ರಕ್ಕೆ ಪ್ರತ್ಯುತ್ತರವನ್ನು ನೀಡಿ ಕಳುಹಿಸಿದನು.
       ಆದರೆ ಮಿತ್ರವರ್ಮನಿಗೆ ಅಷ್ಟೇನು ತಾಳ್ಮೆ ಇರಲಿಲ್ಲ, ಅವನಿಗೆ ಒಟ್ಟಾರೆಯಾಗಿ ಗಿರಿದುರ್ಗವನ್ನು ವಶಪಡಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಅವನು ರಾಜಾ ರವಿವರ್ಮನ ಪತ್ರವನ್ನು ಓದಿ ಅವನನ್ನು ಹೇಡಿಯೆಂದು ಅಣಕಿಸಿ ರಾಜ ರವಿವರ್ಮನ ರಾಜ್ಯದ ಮೇಲೆ
ಆಕ್ರಮಣವನ್ನು ಮಾಡಿದನು. ರಾಜಾ ರವಿವರ್ಮನು ಕೂಡ ತನ್ನ ರಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ತನಗೆ ಸಮ್ಮತವಿಲ್ಲದಿದ್ದರೂ ಕೂಡ ಮಿತ್ರ ವರ್ಮನ ಜೊತೆಗೆ ಯುದ್ಧವನ್ನು ಮಾಡಲೇಬೇಕಾಯಿತು 
ಅವರಿಬ್ಬರೂ ಪರಾಕ್ರಮಿಗಳೇ ಅವರ ಜೊತೆಗೆ ಅವರ ಲಕ್ಷೋಪಲಕ್ಷ ಸೈನ್ಯಗಳು ಭಾಗಿಯಾಗಿ  ಭೀಕರ ಯುದ್ಧ ಪ್ರಾರಂಭವಾಯಿತು. ಎಲ್ಲಾ ಕಡೆ ರಕ್ತದೋಕುಳಿ, ಅಲ್ಲಲ್ಲಿ ಸತ್ತ ಹೆಣಗಳ ರಾಶಿ, ಆದರೂ ಯುದ್ಧ ನಿಂತಿರಲಿಲ್ಲ. ಸೈನಿಕರು ಒಬ್ಬರನ್ನೊಬ್ಬರು ಬಡಿದುಕೊಂಡು.. ಒಬ್ಬರ ಜೀವವನ್ನೊಬ್ಬರು ತೆತ್ತು ಬರುತ್ತಿದರು. ಕೊನೆಗೆ ಸೈನ್ಯವೆಲ್ಲ ಚದುರಿ ಒಬ್ಬನೇ ಒಬ್ಬ ಸೈನಿಕ ಕೂಡ ಉಳಿಯಲಿಲ್ಲ, ಆದರೂ ರಾಜ ರವಿವರ್ಮ ಮತ್ತು  ಮಿತ್ರ ವರ್ಮನ ಯುದ್ಧ ನಿಂತಿರಲಿಲ್ಲ. ರಾಜ ರವಿವರ್ಮ ಸಂಧಾನ ಮಾಡಿಕೊಳ್ಳುವ ಎಂದನು. ಮಿತ್ರವರ್ಮಾ ರವಿವರ್ಮನನ್ನು ಹೇಡಿ ಎಂದು ಅಣಕಿಸುತ್ತಾ ರವಿವರ್ಮ ಕೋಪಗೊಳ್ಳುವಂತೆ ಮಾಡುತ್ತಿದ್ದ.
        ಹೀಗೆಯೇ ಅವರಿಬ್ಬರ ಯುದ್ಧ ಮುಂದುವರೆಯುತ್ತಿತ್ತು.. ಇಬ್ಬರೂ ಪರಾಕ್ರಮಿಗಳೇ ಆಗಿರುವುದರಿಂದ ಯುದ್ಧವು ಅಷ್ಟು ಬೇಗ ಮುಗಿಯುವ ಹಂತ ತಲುಪಿರಲಿಲ್ಲ. ಅವರಿಬ್ಬರೂ ಹೊಡೆದಾಡಿಕೊಂಡು ಬಡಿದಾಡಿಕೊಂಡು ಕೊನೆಗೆ ಅನೇಕ ಗಾಯಗಳನ್ನು ಮಾಡಿಕೊಂಡು ನಿಸ್ಸಹಾಯಕವಾಗಿ ಯುದ್ಧಭೂಮಿಯಲ್ಲಿ ಬಿದ್ದರು. ಬಾಯಾರಿಕೆ ಯಾಗಿದ್ದರೂ ಕೂಡ ಒಂದು ತೊಟ್ಟು ನೀರು ಕೂಡ ಅಲ್ಲಿರಲಿಲ್ಲ. ಸುತ್ತಲೂ ಅದೆಷ್ಟೋ ಸೈನಿಕರ ಹೆಣಗಳು ಅನಾಥವಾಗಿ ಬಿದ್ದಿದ್ದವು.
ರಾಜ ರವಿವರ್ಮ ತನ್ನ ಸೈನಿಕರ ಮೃತ ದೇಹವನ್ನು ಕಂಡು ವಿಪರೀತವಾಗಿ ನೊಂದುಕೊಂಡನು, ಹಾಗೆಯೇ ಮಿತ್ರ ವರ್ಮನು ಕೂಡ.
         ನೀರಿಗಾಗಿ ಸುತ್ತಮುತ್ತಲು ಹುಡುಕಾಡಿದರು. ಅವರ ಪುಣ್ಯ ವೆಂಬಂತೆ ಒಂದು ಪುಟ್ಟ ನೀರಿನ ಬಾಟಲಿಯೊಂದು ಇತ್ತು. ಅದನ್ನು ಪಡೆದುಕೊಳ್ಳಲು ಇಬ್ಬರು ವೇಗವಾಗಿ ಧಾವಿಸಿದರು. ಕೊನೆಗೂ ನೀರಿನ ಬಾಟಲಿ ರವಿವರ್ಮನ ಕೈಸೇರಿತ್ತು. ಮಿತ್ರವರ್ಮ ನಿಗೆ  ವಿಪರೀತ ಬಾಯಾರಿಕೆಯಾಗಿತ್ತು ಹಾಗಾಗಿ ನೀರಿಗಾಗಿ ರವಿವರ್ಮನ ಜೊತೆ ಯುದ್ಧ ಮಾಡಲು ಅವನ ಬಳಿ ಶಕ್ತಿ ಇರಲಿಲ್ಲ. ಸುಮ್ಮನೆ ರವಿವರ್ಮನ ಮೊಗವನ್ನು ನೋಡಿಕೊಂಡು ನಿಸ್ಸಹಾಯಕವಾಗಿ ಯುದ್ಧಭೂಮಿಯಲ್ಲಿ ಬಿದ್ದನು.
         ಆಗ ರವಿವರ್ಮನೇ ತನಗೆ ದೊರೆತಂತಹ ನೀರನ್ನು ಒಂದಿಷ್ಟು ಕೂಡ ಕುಡಿಯದೆ ಮಿತ್ರವರ್ಮ ನಿಗೆ ತನ್ನ ಕೈಯಾರೆ ಕುಡಿಸಿ ಅವನು ಸಾಕೆಂದು ಹೇಳಿದ ನಂತರ ರವಿವರ್ಮನು ತನ್ನ ದಾಹವನ್ನು ನೀಗಿಸಿಕೊಂಡನು. ಇದರಿಂದ ವಿಸ್ಮಯಗೊಂಡ ಮಿತ್ರ ವರ್ಮನು ರವಿವರ್ಮನನ್ನು ಕಂಡು , "ನಾನು ನಿನ್ನ ಮೇಲೆ ಯುದ್ಧ ಸಾರಿದವನು. ವಾಸ್ತವವಾಗಿ ನಾನು ನಿನಗೆ ಶತ್ರುವಾಗಬೇಕು, ಆದರೂ ನೀನು ನನ್ನ ದಾಹವನ್ನು ತೀರಿಸಿ ನನಗೆ ಮರುಜೀವ ನೀಡಿದೆಯಲ್ಲ ಏತಕ್ಕಾಗಿ.....? ಒಂದು ವೇಳೆ ನೀನು ನನಗೆ ದಾಹವನ್ನು ತೀರಿಸಲು ನೀರನ್ನು ನೀಡದಿದ್ದರೆ ನಾನು ಇಲ್ಲೇ ಕೊನೆಯುಸಿರೆಳೆಯುತ್ತಿದ್ದೆ. ಆಗ ನನ್ನ ರಾಜ್ಯ ನಿನ್ನದಾಗಿರುತ್ತಿತ್ತು ಅಲ್ಲವೇ?" ಎಂದು ರವಿವರ್ಮನಿಗೆ ಪ್ರಶ್ನಿಸಿದಾಗ.
        ರವಿವರ್ಮ ನಿಧಾನವಾಗಿ ಉಸಿರನ್ನು ಎಳೆದುಕೊಂಡು.. ವಾಸ್ತವವಾಗಿ ನೀನು ನನ್ನ ಶತ್ರುವೇ ಇರಬಹುದು, ಆದರೆ ಬಾಯಾರಿದವರಿಗೆ ನೀರನ್ನು ನೀಡುವುದು ಮಾನವ ಧರ್ಮ, ಯುದ್ಧದಿಂದ ಆಗುವುದು ವಿನಾಶವೇ ಎಂದು ಹೇಳಿದರೂ.. ನೀನು ಅದನ್ನು ಕೇಳಲಿಲ್ಲ ಬದಲಾಗಿ ನನ್ನ ಮೇಲೆ ಯುದ್ಧ ಸಾರಿದೆ. ಈಗ ನೋಡು ಅಲ್ಲಿ..... ಅದೆಷ್ಟೋ ಸೈನಿಕರ ಸತ್ತ ಶವಗಳು, ಆ ಸೈನಿಕರಿಗೂ ಕೂಡ ಕುಟುಂಬವಿಲ್ಲವೇ, ಅವರಿಗೂ ಕೂಡ ಜೀವಿಸುವ ಹಕ್ಕಿಲ್ಲವೇ....? ನಿನ್ನ ನನ್ನ ಪರವಾಗಿ ಹೋರಾಡಿ ಅವರ ಪ್ರಾಣವನ್ನೇ ಸಮರ್ಪಿಸಿದರಲ್ಲಾ....!! ಅದರ ಬದಲಾಗಿ ನೀನು ನನ್ನೊಂದಿಗೆ ಯುದ್ಧ ಮಾಡದೆ ಸ್ನೇಹದಿಂದ ಇದ್ದಿದ್ದರೆ ಇಲ್ಲಿ ಶವವಾಗಿ ಬಿದ್ದಿರುವ ಅದೆಷ್ಟೋ ಸೈನಿಕರು ಸಂತೃಪ್ತಿಯಾಗಿ ಜೀವನ ನಡೆಸುತ್ತಿದ್ದರು.
ನೀನು ನನ್ನ ರಾಜ್ಯದ ಮೇಲಿನ ಮೋಹಕ್ಕಾಗಿ ಯುದ್ಧ ಸಾರಿದೆ. ಆದರೆ ಏನು ಪ್ರಯೋಜನ....? ಒಂದು ತೊಟ್ಟು ನೀರಿಗಾಗಿ ಪರದಾಡಬೇಕಾಗಿ ಬಂತು.....!! ಆ ವೀರ ಅಲೆಕ್ಸಾಂಡರ್ ನಂತೆಯೇ.. ಇನ್ನಾದರೂ ಬದಲಾಗಿ ಸ್ನೇಹದಿಂದ ಇರೋಣ ಎಂದು ರಾಜ ರವಿವರ್ಮನು ಮಿತ್ರವರ್ಮನ ಹತ್ತಿರ ತನ್ನ ಹಸ್ತವನ್ನು ಚಾಚಿದನು....
       ಮರುಮಾತಾಡದೇ ಮಿತ್ರವರ್ಮನು ಕೂಡ ತನ್ನ ತಪ್ಪನ್ನು ಅರಿತುಕೊಂಡು, ಸ್ನೇಹದಿಂದ ಬಾಳಲು ರಾಜ ರವಿವರ್ಮನ ಹಸ್ತದೊಂದಿಗೆ ತನ್ನ ಹಸ್ತವನ್ನು ಸೇರಿಸಿದನು. ಯುದ್ಧ, ಜಗಳ, ಕೋಪ-ತಾಪ, ವೈರತ್ವ ಇವೆಲ್ಲಕ್ಕಿಂತ ಮಾನವೀಯತೆ ಅನ್ನೋದು ತುಂಬಾ ಮುಖ್ಯ. ಯುದ್ಧ ವಿನಾಶವನ್ನು ತರುತ್ತದೆಯೇ ಹೊರತು ಶಾಂತಿಯನ್ನಲ್ಲ.....!!
.................................................... ಲಾವಣ್ಯ 
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ , ಕೊಳ್ನಾಡು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article