-->
ವಿಶ್ವಕಲಾ ದಿನದ ಮಹತ್ವ

ವಿಶ್ವಕಲಾ ದಿನದ ಮಹತ್ವ

ಡಾ.ಉಪಾಧ್ಯಾಯ ಮೂಡುಬೆಳ್ಳೆ 
ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು 
ಸರಕಾರಿ ಪದವಿ ಪೂರ್ವ ಕಾಲೇಜು
ಕೋಟೇಶ್ವರ - 576222.  
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ.  

                         
 
                            ಅಕ್ಷರ ಭಾಷೆಗಿಂತಲೂ ಮೊದಲು ತನ್ನ ಅನಿಸಿಕೆಗಳನ್ನು ಹೊರಹಾಕಲು ಮಾನವ ಬಳಸಿಕೊಂಡದ್ದು ಚಿತ್ರಕಲೆಯನ್ನೇ. ಮಾನವನ ಉಗಮದೊಂದಿಗೇ ಬೆಳೆದು ಬಂದ ಈ ಚಿತ್ರಕಲೆಯ ಇತಿಹಾಸವನ್ನು ತಿಳಿಯಲು ನಾವು ಸಹಸ್ರ ಸಹಸ್ರ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಅದನ್ನು ಸ್ಮರಿಸಲೋಸುಗ ಪ್ರತಿವರ್ಷ ಎಪ್ರಿಲ್‌ 15 ನೇ ತಾರೀಖಿನಂದು ವಿಶ್ವಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವವನ್ನು ತಿಳಿದು ಆಚರಿಸಿದಾಗ ವಿಶ್ವದ ಕಲಾಸಂಸ್ಕೃತಿ ಪುನಶ್ಚೇತನಗೊಂಡು ಕಲೆ-ಕಲಾವಿದರ ಬದುಕು ಸುಂದರಗೊಳ್ಳಬಹುದು. 
           ಕಲೆಯು ವಿಶ್ವವ್ಯಾಪಿಯಾದ ಒಂದು ಚಟುವಟಿಕೆಯಾಗಿದೆ. ವಿಶ್ವಕಲಾದಿನವನ್ನು ನಾವು ಐದು ವಿಧಗಳಲ್ಲಿ ಆಚರಿಸಬಹುದು. ಮೊದಲನೆಯದಾಗಿ ವಿಶ್ವದ ಪ್ರಸಿದ್ಧ ಕಲಾತಾಣಗಳನ್ನು ಸಂದರ್ಶಿಸುವುದು ಮತ್ತು ಅವುಗಳ ಸಂರಕ್ಷಣೆಯ ಪ್ರತಿಜ್ಞೆ ಕೈಗೊಳ್ಳುವುದು. ಎರಡನೆಯದಾಗಿ ವಿಶ್ವದ ಪ್ರಸಿದ್ಧ ಕಲಾವಿದರ ಜೀವನ ಮತ್ತು ಅವರ ಕಲಾಕೃತಿಗಳ ಬಗ್ಗೆ ಅಭ್ಯಸಿಸುವುದು. ಮೂರನೆಯದಾಗಿ ವಿವಿಧ ಕಲಾಶೈಲಿಗಳ ಬಗ್ಗೆ ತಿಳಿದುಕೊಳ್ಳುವುದು. ನಾಲ್ಕನೆಯದಾಗಿ ಸಮಕಾಲೀನ ಕಲೆ ಮತ್ತು ಕಲಾವಿದರ ಬಗ್ಗೆ ತಿಳಿದುಕೊಳ್ಳುವುದು. ಐದನೆಯದಾಗಿ ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಗೌರವಿಸುವುದು.
       ವಿಶ್ವದ ಪ್ರಸಿದ್ಧ ಆದಿಮ ಕಲಾತಾಣಗಳಾದ ಸ್ಪೇನಿನ ಆಲ್ತಾಮಿರಾ, ಲಾಸ್ಕಾಕ್ಸ್‌, ಫ್ರಾನ್ಸಿನ ಲಾಗ್ರಿಜ್‌, ಇಟಾಲಿಯ ಲೆವಾಂಜೊ, ಆಫ್ರಿಕಾದ ಡ್ರೇಕನ್ಸ್‌ ಬರ್ಗ್ ಗುಹೆಯ ಚಿತ್ರಗಳು, ಬಾರತದ ಹರಪ್ಪಾ ಮೊಹೆಂಜೆದಾರೊ, ಮಿರ್ಜಾಪುರ, ರಾಯಘಡ ಬೆಟ್ಟ, ಕೈಮೂರ ಬೆಟ್ಟ, ಬೋಪಾಲ್‌, ಕರ್ನಾಟಕದ ಬಳ್ಳಾರಿಯಲ್ಲಿ ಕಂಡುಬರುವ ಪ್ರಾಚೀನ ಚಿತ್ರಗಳು ಅದೇ ರೀತಿ ಸುಮೇರಿಯನ್‌, ಬ್ಯಾಬಿಲೋನಿಯನ್‌, ಅಸ್ಸೀರಿಯನ್‌, ಗ್ರೀಕ್‌, ಪರ್ಷಿಯನ್‌, ಈಜಿಪ್ತಿಯನ್‌, ರೋಮನ್‌ ಸಂಸ್ಕೃತಿಯಲ್ಲಿ ರಚನೆಯಾದ ಕಲಾಕೃತಿಗಳು, ಗಾಂಧಾರ ಕಲೆ, ಗುಪ್ತರ ಕಲೆ, ರಜಪೂತ ಕಲೆ, ಮೊಗಲ್‌ ಕಲೆ, ದಕ್ಖನಿ ಕಲೆ, ಅಜಂತಾ, ಎಲ್ಲೋರಾ, ಬದಾಮಿ, ಬಾಗ್‌, ಸಿತ್ತನಿವಾಸಲ್‌, ಲೇಪಾಕ್ಷಿ, ಹಂಪೆ ಮುಂತಾದ ಕಲಾಗಣಿಗಳ ಬಗ್ಗೆ ನಾವು ತಿಳಿದುಕೊಂಡಾಗ ನಮಗೆ ನಮ್ಮ ಪೂರ್ವಜರು ಆ ಕಾಲದಲ್ಲಿ ಈಗಿನಂತೆ ಯಾವುದೇ ಆಧುನಿಕ ಸೌಕರ್ಯಗಳಿಲ್ಲದೆಯೂ ಎಷ್ಟು ಕಷ್ಟಪಟ್ಟು ಕಲಾಕೃತಿಗಳನ್ನು ರಚಿಸಿದ್ದಾರೆ, ಎಂತಹ ಅಲೌಕಿಕ ಸೌಂದರ್ಯವನ್ನು ಅದರೊಳಗೆ ಹೆಣೆದಿದ್ದಾರೆ ಎಂಬ ಅರಿವು ಮೂಡುತ್ತದೆ. 
         ರಾಜರುಗಳ ಕಾಲದ ಶಿಲ್ಪಕಲಾಕುಸುರಿಯ ಭವ್ಯ ವಿಗ್ರಹಗಳು, ದೇವಾಲಯಗಳು, ಅರಮನೆಗಳು, ಸ್ತೂಪಗಳು, ಸ್ತಂಭಗಳು ಶಾಸನಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅವುಗಳನ್ನು ಸದಾ ನೋಡುವ ತವಕ ನಮ್ಮಲ್ಲಿ ಹೆಚ್ಚುತ್ತದೆ. ಅಂತಹ ಕಲಾಕೃತಿಗಳನ್ನು-ಕಲಾತಾಣಗಳನ್ನು ಸಂರಕ್ಷಿಸಬೇಕೆಂಬ ಅರಿವು ಮೂಡುತ್ತದೆ. 
        ಕಲೆಯ ಪಂಥಗಳಾದ ಎಕ್ಸ್‌ಪ್ರೆಶನಿಸಂ, ರಿಯಲಿಸಂ, ಇಂಪ್ರೆಶನಿಸಂ, ಸರ್ರಿಯಲಿಸಂ, ಕ್ಯೂಬಿಸಂ, ಫಾವಿಸಂ, ಫ್ಯೂಚರಿಸಂ, ಅಬ್‌ ಸ್ಟ್ರಾಕ್ಟ್‌, ಬೈಜಾಂಟಿನ್‌, ಗೋಥಿಕ್‌ ಮುಂತಾದ ಶೈಲೀಕೃತ ಕಲಾಕೃತಿಗಳ ವೈಶಿಷ್ಠ್ಯಗಳನ್ನು ನಾವು ತಿಳಿದುಕೊಂಡಾಗ ವಿಶ್ವಕಲಾದಿನದ ಆಚರಣೆ ಪ್ರಾಮುಖ್ಯತೆ ಪಡೆಯುತ್ತದೆ. ಅದೇರೀತಿ ಭಾರತೀಯ ಕಲೆಯ ಸೂಕ್ಷ್ಮ ಕಲಾಶೈಲಿಗಳಾದ ಕಾಂಗ್ರಾಶೈಲಿ, ತಂಜಾವೂರು ಶೈಲಿ, ಮೈಸೂರು ಶೈಲಿಯ ಉತ್ಕೃಷ್ಠ ಚಿತ್ರಗಳು, ಗ್ರಾಮೀಣ ಜನಪದರ ಶೈಲಿಗಳಾದ ಮಧುಬನಿ, ಪಟ್ಟಾ, ವಾರ್ಲಿ, ಕಾವಿಕಲೆ ಮುಂತಾದ ಚಿತ್ರಗಳ ಸೊಗಸನ್ನು ಕಾಣುವ ಮೂಲಕ ನಾವು ವಿಶ್ವಕಲಾ ದಿನವನ್ನು ಸಂಭ್ರಮಿಸಬಹುದು.  
        ಪ್ರಸಿದ್ಧ ಕಲಾವಿದರಾದ ಜಿಯಾತ್ತೊ, ಮೈಕೆಲ್‌ ಏಂಜಲೊ, ಲಿಯೋನಾರ್ಡೊ ಡಾವಿಂಚಿ, ರಾಫೆಲ್‌, ಟರ್ನರ್‌, ಸಾಲ್ವಡರ್‌ ಡಾಲಿ, ವಿನ್ಸೆಂಟ್‌ ವ್ಯಾನಗೋ, ಪಾಲ್ ಕ್ಲೆ, ಪಾಬ್ಲೊ ಪಿಕಾಸೊ, ಸೆಜಾನ್‌, ಭಾರತದ ರಾಜಾ ರವಿವರ್ಮ, ನಂದಾಲಾಲ್‌ ಬೋಸ್‌, ಅಮೃತ ಶೇರ್ಗಿಲ್, ಜಾಮಿನಿರಾಯ್‌, ಕ್ಷಿತೀದ್ರನಾಥ್‌, ಎಸ್.ಎಂ.ಪಂಡಿತ್‌, ಕೆ.ವೆಂಕಟಪ್ಪ, ಕೆ.ಕೆ.ಹೆಬ್ಬಾರ್‌, ಎಂ.ಎಫ್.ಹುಸೇನ್‌, ಫನಿಕ್ಕರ್‌, ಬೇಂದ್ರೆ, ಗುಜ್ರಾಲ್‌, ಆರಾ, ಮಜುಂದಾರ್‌, ರಾಝಾ, ಆರ್.ಕೆ.ಲಕ್ಷ್ಮಣ್‌, ನಾಡಿಗ್‌, ಹುಬ್ಳೀಕರ್‌, ಎಸ್.‌ ಜಿ.ವಾಸುದೇವ್‌, ಜಿ.ಎಸ್.ಶೆಣೈ, ಬಿ.ಪಿ.ಬಾಯರಿ, ಪಾವಂಜೆ, ಬಿಜಿಎಂ, ಶೇವಗೂರ್‌, ಟಿ.ಪಿ.ಅಕ್ಕಿ, ಕಾವಾ ಆಚಾರ್ಯ, ಮರಿಶಾಮಾಚಾರ್‌, ವಿ.ಜಿ.ಅಂದಾನಿ, ವಿ.ಟಿ.ಕಾಳೆ, ತಿಪ್ಪೇಸ್ವಾಮಿ, ಪಿ.ಪಿ.ಕಾರಂತ್‌, ಕೆ.ಎಲ್.ಭಟ್ ಮುಂತಾಗಿ ಅನೇಕ ಕಲಾವಿದರ ಬಗ್ಗೆ ಮತ್ತು ಅವರ ಕಲಾಕೃತಿಗಳ ಬಗ್ಗೆ ನಾವು ಅಧ್ಯಯನಮಾಡಿಕೊಂಡಾಗ, ಅದಕ್ಕಾಗಿ ಗ್ಯಾಲರಿಗಳನ್ನು ತೆರೆದಾಗ ವಿಶ್ವಕಲೆಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ. 
      ಸಮಕಾಲೀನ ಕಲಾವಿದರಾದ ಖಂಡೇರಾವ್‌, ಹಿರೇಗೌಡರ್‌, ಎಸ್.ಜಿ.ವಾಸುದೇವ್‌, ಹಡಪದ್‌, ಪೀಟರ್‌ ಲೂಯಿಸ್‌, ವಿಜಯ ಹಾಗರಗುಂಡಿಗಿ, ಮಕಾನ್ದಾರ್‌, ಎಸ್.ಸಿ.ಪಾಟೀಲ್‌, ಬಿ.ಕೆ.ಎಸ್.ವರ್ಮ, ಚಂದ್ರನಾಥ ಆಚಾರ್ಯ, ಪಿ.ಎಸ್.ಪುಂಚಿತ್ತಾಯ, ಭಾಸ್ಕರ ರಾವ್‌, ರಮೇಶ್‌ ರಾವ್‌, ಗಂಜಿಫ ರಘುಪತಿ ಭಟ್‌, ಪಿ.ಎನ್ ಆಚಾರ್ಯ, ವಾಸುದೇವ ಕಾಮತ್‌, ಗಣೇಶ ಸೋಮಯಾಜಿ, ಸೈಯದ್ ಆಸಿಫ್ ಆಲಿ , ಎನ್. ಎಸ್. ಪತ್ತಾರ್ , ದಿನೇಶ್ ಹೊಳ್ಳ ,  ಶರತ್‌, ಗೋಪಾಡ್ಕರ್‌, ಕಂದನ್‌, ಅಡ್ವೆ, ವಿಲ್ಸನ್ ಕೈಯಾರ್ , ಸಂತೋಷ್ ಅಂದ್ರಾದೆ , ವೆಂಕಿ ಪಲಿಮಾರು, ವಿಶ್ವೇಶ್ವರ, ಲಿಯಾಕತ್‌, ಶ್ರೀನಾಥ್‌, ಜಯವಂತ್‌, ಮೋಹನ್‌ ಪೆರ್ಮುದೆ, ಸುಲೋಚನಾ ವೇಣುಗೋಪಾಲ್‌, ಪ್ರವೀಣಾ ಮೋಹನ್‌, ವೀಣಾ ಶ್ರೀನಿವಾಸ್‌, ವಿಲಾಸ್‌ ನಾಯಕ್‌, ಪವನ್‌ ಕುಮಾರಿ ಹೀಗೆ ಅನೇಕ ಸೃಜನಶೀಲ ಕಲಾವಿದರು ಕಲಾಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇವರನ್ನು ಪ್ರೋತ್ಸಾಹಿಸಿದಾಗ ವಿಶ್ವಕಲಾ ದಿನಕ್ಕೆ ವಿಶೇಷ ಮೆರುಗು ಬರುತ್ತದೆ. 
          ಎಲೆ ಮರೆಯ ಕಾಯಿಯಂತೆ ಪ್ರಚಾರ ಬಯಸದೆ ತೆರೆಮರೆಯಲ್ಲಿ ದುಡಿಯುತ್ತಿರುವ ಅನೇಕ ಸೃಜನಶೀಲ ಕಲಾವಿದರು ನಮ್ಮ ನಡುವೆ ಇದ್ದಾರೆ. ಅವರನ್ನು ಗುರುತಿಸಿ ಗೌರವಿಸಿದಾಗ, ಅವರ ಕಲಾಕೃತಿಗಳ ಪ್ರದರ್ಶನ ನಡೆಸಿದಾಗ ಅವರ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಕಲಾಶಿಬಿರ, ಕಲಾಸ್ಫರ್ಧೆಗಳನ್ನು ನಡೆಸಿ ಬಹುಮಾನಿಸಿದಾಗ ಸ್ಥಳೀಯವಾಗಿ ನಾವು ವಿಶ್ವಕಲಾ ದಿನಾಚರಣೆ ಮಾಡಿದಂತಾಗುತ್ತದೆ. ಕಲಾಕೃತಿಗಳನ್ನು ಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ನಾವು ಸಾಗೋಣ. 
---------------- ಡಾ.ಉಪಾಧ್ಯಾಯ ಮೂಡುಬೆಳ್ಳೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು 
ಸರಕಾರಿ ಪದವಿ ಪೂರ್ವ ಕಾಲೇಜು
ಕೋಟೇಶ್ವರ - 576222.  
ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ.  
PH: +91 97416 57041
******************************************

 




Ads on article

Advertise in articles 1

advertising articles 2

Advertise under the article