-->
ಪ್ರೀತಿಯ ಪುಸ್ತಕ : ಸಂಚಿಕೆ - 2

ಪ್ರೀತಿಯ ಪುಸ್ತಕ : ಸಂಚಿಕೆ - 2

ಪ್ರೀತಿಯ ಪುಸ್ತಕ
ಸಂಚಿಕೆ - 2

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ.  ಹೊಸ ಹೊಸ  ಅನುಭವ ಇಷ್ಟ.  ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 

         ಅಂಬೇಡ್ಕರ್ ಅನುಭವದ ಆರು ಕಥನಗಳು
         ಪ್ರೀತಿಯ ಮಕ್ಕಳೇ...... ಏಪ್ರಿಲ್ 14, ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನ್ಮದಿನ ಅಲ್ಲವೇ.... ಅವರ ನೆನಪಿಗಾಗಿ ಈ ಪುಸ್ತಕದ ಪರಿಚಯ ಮಾಡುತ್ತಿದ್ದೇನೆ. ಅಂಬೇಡ್ಕರ್ ಯಾರು ಅಂತ ಕೇಳಿದರೆ ನೀವು ಕೊಡುವ ಮೊದಲ ಉತ್ತರ – ನಮ್ಮ ದೇಶದ ಸಂವಿಧಾನ  ಬರೆದವರು – ಅಂತ. ಅದು ನಿಜ. ಆದರೆ ಅವರ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ತುಂಬಾ ತುಂಬಾ ಇದೆ. ಚಿಕ್ಕವರಿರುವಾಗ ಜಾತಿ ಕಾರಣಕ್ಕಾಗಿ ತಾರತಮ್ಯ ಅನುಭವಿಸಿದರು. ಹಾಗಂತ ಕುಗ್ಗಿ ಕೂರಲಿಲ್ಲ, ಯಾಕೆ ಹೀಗೆ ಅಂತ ಪ್ರಶ್ನೆ ಮಾಢಿದರು. ಓದಿ ಓದಿ ಓದಿ ಓದಿ ದೊಡ್ಡವರಾದರು. ಆಮೇಲೆ ಎಲ್ಲರ ಒಳಿತಿಗಾಗಿ ಕೆಲಸ ಮಾಡಿದರು. ನಿಮಗೆ ಗೊತ್ತಾ, ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಪಂಚದ 200 ಮಂದಿ ಜ್ಞಾನಿಗಳ ಪಟ್ಟಿಯಲ್ಲಿ ಬಾಬಾ ಸಾಹೇಬರ ಹೆಸರು ಮೊದಲ ಐದರಲ್ಲಿ ಬರುತ್ತದೆ. 
       ಈ ಪುಸ್ತಕದಲ್ಲಿ ಅವರ ಅನುಭವಗಳ ಆರು ಕಥನಗಳನ್ನು ಅವರೇ ಹೇಳುತ್ತಾರೆ. ಗುಜ್ಜಾರಪ್ಪ ಅವರು ಅದಕ್ಕೆ ತಕ್ಕ ಹಾಗೆ ಆಕರ್ಷಕ ಚಿತ್ರಗಳನ್ನು ಬಿಡಿಸಿದ್ದಾರೆ. ನೀವು ಈ ಚಿತ್ರಗಳ ಸೊಗಸನ್ನೂ ಗಮನಿಸುವಿರಿ ತಾನೇ? ಒಂಭತ್ತು ವರುಷದ ಹುಡುಗನಾಗಿದ್ದಾಗ ಜಾತಿ ಕಾರಣಕ್ಕಾಗಿ ಕುಡಿಯಲು ನೀರು ಸಿಗದ ಪರದಾಟ, ಪ್ರಯಾಣ ಮಾಡಲು ವಾಹನ ಸಿಗದ ಕಷ್ಟ, ವಸತಿಗೆ ತೊಂದರೆ, ಶಾಲೆಯಲ್ಲಿ ಮುಟ್ಟಿಸಿಕೊಳ್ಳದಂತೆ ದೂರ ಕೂರಿಸಿದ ಅನುಭವದಿಂದ ಶುರುಮಾಡುತ್ತಾರೆ. ಮತ್ತೆ ಬೇರೆ ಬೇರೆ ಸಂದರ್ಭಗಳಲ್ಲಿ ಆದ ತಾರತಮ್ಯಗಳ ಬಗ್ಗೆ ಹೇಳುತ್ತಾ ಅವುಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ. 
           ಮಕ್ಕಳೇ, ಒಂದಷ್ಟು ಪುಸ್ತಕ ಖುಷಿಗಾಗಿ ಓದಬೇಕು, ಮತ್ತೊಂದಷ್ಟು ಪುಸ್ತಕ ಸಮಾಜವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಓದಬೇಕು. ಇದು ಸಮಾಜದ ಅರಿವು ನೀಡುವ ಒಂದು ಪುಸ್ತಕ. 
ಓದಿ, ಯೋಚನೆ ಮಾಡಿ.... ನಿಮ್ಮ ಸುತ್ತಮುತ್ತಲೂ ಕೂಡಾ ನೋಡಿ..
ಮೂಲ: ಅಂಬೇಡ್ಕರ್ ಬರಹಗಳು
ಕನ್ನಡಕ್ಕೆ: ಪ್ರೊ.ಬಿ. ಗಂಗಾಧರ ಮೂರ್ತಿ
ಚಿತ್ರಗಳು: ಗುಜ್ಜಾರಪ್ಪ
ಪ್ರಕಾಶಕರು: ಲಡಾಯಿ ಪ್ರಕಾಶನ
ಬೆಲೆ: ರೂ.60/ 
ಪ್ರೌಢ ಶಾಲಾ ಮಕ್ಕಳು ಓದುವುದಕ್ಕೆ 
.................................... ವಾಣಿ ಪೆರಿಯೋಡಿ, 
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article