-->
ಸಸ್ಯಗಳ ಸಂವಹನ ಮತ್ತು ಪರಿಣಾಮ

ಸಸ್ಯಗಳ ಸಂವಹನ ಮತ್ತು ಪರಿಣಾಮ

ನಾಗೆಂದ್ರ ಬಂಜಗೆರೆ.
ಶಿಕ್ಷಕರು.
ಸ ಹಿ ಪ್ರಾ ಶಾಲೆ, ತುಮಟಿ 
ಸಂಡೂರು ತಾಲೂಕು , ಬಳ್ಳಾರಿ

          ಸಸ್ಯಗಳ ಸಂವಹನ ಮತ್ತು ಪರಿಣಾಮ
         ಸಸ್ಯಗಳಿಗೆ ಅತ್ಯುತ್ತಮವಾದ ಸಂವಹನ ಮತ್ತು ಶತ್ರುಗಳ ದಾಳಿಯಾದಾಗ ಅವು ಹೇಗೆ ತಮ್ಮೊಳಗೆ ಪ್ರತಿಕ್ರಿಯಸಲ್ಪಡುವವು ಎಂಬುದನ್ನು ನಾ ಕಂಡಂತೆ ತಿಳಿಸಲು ಪ್ರಯತ್ನಿಸುವೆ.


           
             ಪ್ರಕರಣ-1 : ನಾನು ಬಾಲ್ಯದಲ್ಲಿ ದನಗಳ ಮೇಯಿಸಲು ಹೋಗುತ್ತಿದ್ದೆ. ಏಪ್ರಿಲ್, ಮೇ ತಿಂಗಳುಗಳಲ್ಲಿ ನಮ್ಮ ದನಗಳಿಗೆ ತಿನ್ನಲು ಏನೂ ಸಿಗದೆ ಕೆಲವೇ ದಿನಗಳ ಹಿಂದೆ ಆಗತಾನೇ ಚಿಗುರಿದ ಹೊಂಗೆಯ ಎಲೆಗಳನ್ನು ತರಿದು ತಂದು ಹಾಕುತ್ತಿದ್ದೆವು. ಅವು ಪ್ರಾರಂಭದಲ್ಲಿ ಸ್ವಲ್ಪಮಟ್ಟಿಗೆ ಖುಷಿಯಿಂದಲೇ ತಿಂದು ಆಮೇಲೆ ನಿರುತ್ಸಾಹದಿಂದ ಬೇರೆ ಐಟಂ ತಂದು ಹಾಕುವರೋ ಎಂದು ಎದುರು ನೋಡುತ್ತಿದ್ದವು. ಹುಲ್ಲಿನ ಬುಡದಲ್ಲಿ ಅಳಿದುಳಿದ ಹಲ್ಲಲ್ಲಿ ಸಿಕ್ಕಿಸಲು ಬಳಸುವ ಕಡ್ಡಿಯಂತಹವುಗಳನ್ನೂ ಬಿಡದೇ ತಿನ್ನುತ್ತಿದ್ದವು. ಮುಂಗಾರು ಹಿಂದೆ ಮುಂದೆ ಸ್ವಲ್ಪಮಟ್ಟಿಗೆ ಮಳೆ ಆದರೆ ಚಿಗುರಿದ ಹಸಿ ಹುಲ್ಲನ್ನು ಒಂದೇ ವಾರದಲ್ಲಿ ಮಿಡತೆಗಳು ಮತ್ತು ಪಶುಗಳು ಸ್ಪರ್ಧೆಗೆ ಇಳಿದವರಂತೆ ತಿಂದು ಖಾಲಿ ಮಾಡುತ್ತಿದ್ದವು. ಮಳೆ ನಿರಂತರ ಇದ್ದರೆ ಹುಲ್ಲೂ ಸಿಗುತ್ತಿತ್ತು. ಇಲ್ಲವಾದರೆ ಆಗಲೂ ಹೊಟ್ಟೆ ತುಂಬಾ ಹುಲ್ಲು ಇಲ್ಲ. ಬಹಳ ವರ್ಷಗಳ ಕಾಲ ನಾವು ಕುಂಟೆ ಕಟ್ಟಿ ಚಿಗುರಿದ ಹುಲ್ಲನ್ನು ಹರಗಿಕೊಂಡು ಬಂದು ಮೇಯಿಸಿರುವ ಉದಾಹರಣೆ ಕೂಡಾ ಇದೆ. ಆದರೆ ಆಗತಾನೇ ಹರಗಿಕೊಂಡು ತಂದು ಹಾಕಿದ ಹುಲ್ಲನ್ನು ಅವು ಬಹಳ ಹೊತ್ತು ಇಷ್ಟಪಟ್ಟು ತಿನ್ನುತ್ತಲಿರಲಿಲ್ಲ....
            ಪ್ರಕರಣ-2 : ಆಗಸ್ಟ್ , ಸೆಪ್ಟೆಂಬರ್ , ಆಕ್ಟೋಬರ್ ತಿಂಗಳುಗಳಲ್ಲಿ ನಮ್ಮ ಭಾಗದಲ್ಲಿ ದಟ್ಟವಾಗಿ ಬೆಳೆದಿರುವ ಹಸಿರುಹುಲ್ಲು. ಇದು ನಮ್ಮ ಬಯಲು ಸೀಮೆಯ ಪಶುಗಳ ಪಾಲಿಗೆ ಸುವರ್ಣಕಾಲ. ನಮ್ಮದು ಒಂದು ಹಸು ಇತ್ತು. ಅದು ಪ್ರತೀ ಬಾರಿಯೂ ಜೂನ್ - ಜುಲೈನಲ್ಲಿ ಕರು ಹಾಕುತಿತ್ತು. ಅದರ ವಿಶೇಷ ಏನು ಅಂದರೆ ಯಾವಾಗ ಬೇಕಾದರೂ ನಾನು ಅದರ ಕೆಚ್ಚಲಿಗೆ ಬಾಯಿಹಾಕಿ ಹಾಲೂ ಚೀಪಿದರೂ ಅದು ನೂರೈವತ್ತು ಇನ್ನೂರು ಮಿಲಿಲೀಟರ್ ನಷ್ಟು ಹಾಲು ಕೊಡುತ್ತಿತ್ತು. ಮದ್ಯಾಹ್ನದ ವೇಳೆಯಲ್ಲಿ ನನಗೆ ಈ ಹಾಲೇ ನೀರಿನಂತೆ ಕುಡಿಯುತ್ತಿದ್ದೆ. ಇದು ನನಗೆ ಅಚ್ಚುಮೆಚ್ಚಿನ ದನವಾದ್ದರಿಂದ ಎಲ್ಲೆಲ್ಲಿ ತುಂಬಾ ಚೆನ್ನಾಗಿ ಹುಲ್ಲು ಬೆಳೆದಿರುವುದೋ ಅಲ್ಲಿಗೆ ಅದನ್ನು ವಿಶೇಷವಾಗಿ ಹಿಡಿದುಕೊಂಡು ಹೋಗಿ ಮೇಯಿಸುತ್ತಿದ್ದೆ. ಹುಲ್ಲು ಎಷ್ಟೇ ಚೆನ್ನಾಗಿದ್ದರೂ ಇದು ಎರಡ್ಮೂರು ನಿಮಿಷಗಳು ಮೇಯ್ದು ಆಮೇಲೆ ಆ ಹುಲ್ಲು ರುಚಿ ಇಲ್ಲವೇನೋ ಎಂಬಂತೆ ಮುಂದೆ ಹೋಗುತ್ತಿತ್ತು. ಅದೊಂದೇ ಹಸು ಅಲ್ಲ ಎಲ್ಲಾ ದನಕರುಗಳೂ ಹಾಗೆನೇ.. ಬೇಸಿಗೆಯಲ್ಲಿ ಒಣಗಿದ ಕಡ್ಡಿ ನೆಕ್ಕಿ ಹೆಕ್ಕಿ ತಿನ್ನುವ ಇವುಗಳು ಈಗ ಇಂಥಾ ಸೊಂಪಾಗಿ ಬೆಳೆದ ಹುಲ್ಲು ಮೇಯಲು ಏನು ಸೊಕ್ಕು ಬಂದಿತೋ ಇವಗಳಿಗೆ ಇಂಥ ಹುಲ್ಲು ಮೇಯೋ ಹಾಗೆ ಇಲ್ಲ ನೋಡು ಎಂದು ಅನಿಸುತ್ತಿತ್ತು ಸಹಜವಾಗಿ..
        ಪ್ರಕರಣ-3 : ಕಳೆದ ನವೆಂಬರ್ , ಡಿಸೆಂಬರ್ ತಿಂಗಳಿನಲ್ಲಿ ಬಳ್ಳಾರಿಯ ನಮ್ಮ ಮನೆಯ ಟೆರಾಸ್ ಮೇಲೆ ತರಕಾರಿಗಳನ್ನು ಬೆಳೆಸಿದ್ದೆ. ಅದರಲ್ಲಿ ಎಂಟತ್ತು ಬದನೆಗಿಡಗಳೂ ಕೂಡ ಹಾಕಿದ್ದೆ. ರಾಸಾಯನಿಕ ಇಲ್ಲದೇ ಸಾವಯವ‌ ಹಾಕಿ ಬೆಳೆಸಿದ ತರಕಾರಿ ಅದು. ನಾನು ಅವುಗಳ ಹೂವು, ಹೀಚು , ಕಾಯಿ ಹೀಗೆ ಅವುಗಳ ದಿನದಿನದ ಬೆಳವಣಿಯನ್ನು ನಾನು ನೀರು ಹಾಕುತ್ತಾ ಪ್ರತಿದಿನವೂ ನೋಡುತ್ತಿದ್ದೆ. ಆದರೆ ಸಾರು ಪಲ್ಯಮಾಡಲು ಅವುಗಳ ಬಿಡಿಸಲು ಹೋದರೆ ಅವು ಹೇಗೆ ಕಣ್ಣಿಗೆ ಕಾಣದ ಹಾಗೆ ಬಚ್ಚಿಟ್ಟುಕೊಳ್ಳುತ್ತಿದ್ದವೋ ಗೊತ್ತಿಲ್ಲ. ಆಮೇಲೆ ಯಾವಾಗಲೋ ಅವು ಕಾಣಿಸುತ್ತಿದ್ದವು. ಅಷ್ಟೊತ್ತಿಗಾಗಲೇ ಅವು ಬಲಿತು ಹೋಗಿರುತ್ತಿದ್ದವು. ನೀವು ಟೆರೇಸ್ ಗಾರ್ಡನ್ ನಲ್ಲಿ ಬಂದು ನೋಡಿದರೂ ಇವರೇನಪ್ಪಾ ಬದನೆಕಾಯಿ ಟೊಮ್ಯಾಟೊ ಸರಿಯಾಗಿ ಬಿಡಿಸಿಲ್ಲ ಅಕ್ಕಪಕ್ಕದವರಿಗೆ ಯಾರಿಗಾದರೂ ಕೊಟ್ಟಿದ್ದರೂ ತಿನ್ನುತಿದ್ದರು. ಎಷ್ಟೊಂದು ಹಾಗೆ ಬಿಟ್ಟು ಹಣ್ಣಾಗಿದ್ದಾವೆ ನೋಡು ಎನ್ನುವಿರಿ. ಆದರೆ ಇವೆಲ್ಲಾ ತಿನ್ನಲೂ ಹೆಚ್ಚಾಗಿ ಬಿಟ್ಟವುಗಳಲ್ಲ. ಅವೆಲ್ಲವೂ ಬಿಡಿಸುವಾಗ ತಪ್ಪಿಸಿಕೊಂಡು ಉಳಿದವುಗಳು. ಬೇರೆ ಹೊಲಗಳಲ್ಲಿ ನಾನು ಬೀಕಲು ಬದನೆಗಿಡಗಳು ನೋಡಿದಾಗ ಹಾಗೇ ಎನಿಸುತ್ತಿತ್ತು. ಸರಿಯಾಗಿ ಬಿಡಿಸದೇ ಎಷ್ಟೊಂದು ಹಂಗೆ ಬಿಟ್ಟಾರೆ ಅಲ್ಲ ಎಂದು ನಾವು ಅವುಗಳಿಂದ ಆಗ ತೆಂಗಿನ ಮಟ್ಟೆಯಲ್ಲಿ ಬ್ಯಾಟ್ ಮಾಡಿಕೊಂಡು ಬದನೆಕಾಯಿ ಚಂಡು ಮಾಡಿಕೊಂಡು ಆಡುತ್ತಿದ್ದೆವು. ಹಣ್ಣಾಗಿರುವ ಬದನೆಕಾಯಿಯ ಕಿತ್ತುತಂದು ದನಗಳ ಗೊದಲಿಗೆ ಹಾಕಿ ಮೇಯಿಸುತ್ತಿದ್ದೆವು. ಆ ಬದನೆಕಾಯಿ ಎಲ್ಲವೂ ಉದ್ದೇಶಪೂರ್ವಕವಾಗಿ ಶತ್ರುಗಳಿಂದ ತಪ್ಪಿಸಿಕೊಂಡು ಉಳಿದವುಗಳು.
        ಇಷ್ಟೆಲ್ಲಾ ಏಕೆ ಹೇಳಿದೆ ಅಂದರೆ ಸಸ್ಯಗಳಿಗೂ ನಾವು ಶಾಲೆಯಲ್ಲಿ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಸಂವಹನಾ ಪ್ರತಿಕ್ರಿಯೆಯ ಗುಣ ಇದೆ ಎಂದು ನನ್ನ ಅನುಭವದ ವ್ಯಾಪ್ತಿಯಲ್ಲಿ ಹೇಳಬಯಸುವೆ.
       ಪ್ರಕರಣ ಒಂದರಲ್ಲಿ ಅಂದು ನಮ್ಮ ದನಗಳು ಹೊಂಗೆಯ ಸೊಪ್ಪು ತಿನ್ನಲು ತೋರಿದ ಆರಂಭದ ಉತ್ಸಾಹ ತೋರಿಸದೇ ಇರಲು ಕಾರಣ ತಿನ್ನುತ್ತಾ ತಿನ್ನುತ್ತಾ ಅದು ರಾಸಾಯನಿಕ ಪ್ರಕ್ರಿಯೆಗೆ ಒಳಪಟ್ಟು ಅದು ವಿಷ/ತಿನ್ನಲಾರದ ರುಚಿಯ ಪಡೆಯುವವು. ಆ ಎಲೆ ಗಿಡದಿಂದ ಬೇರ್ಪಡಿಸಿದರೂ ಅದು ಚೇತನವಾಗಿದ್ದು ಅದಕ್ಕೆ ಈ ದನ ಶತ್ರುವೇ ಆಗಿರುವುದರಿಂದ ತಮ್ಮೊಳಗೆ ತಾವೇ ಬಹುಶಃ ಸಂವಹನ ಮಾಡಿ ವಿಷಕಾರಕ ರಾಸಾಯನಿಕ ಬಿಡುಗಡೆ ಮಾಡಿದ್ದಾವೆ.
       ಆ ಸಂವಹನ ಆ ಜಾತಿಯ ಸಸ್ಯವ್ಯಾಪ್ತಿಯಲ್ಲಿ ಅತ್ಯಂತ ವೇಗವಾಗಿ ಸಂವಹನ ಆಗಿ ಬೇರೆ ಎಲೆಗಳಿಗೆ ಶತ್ರುವಿನ ದಾಳಿಯಬಗ್ಗೆ ಮಾಹಿತಿ ನೀಡಿದ್ದರಿಂದಲೇ ಅದು ವಿಷಕಾರಕವಾಗುತ್ತದೆ. ನಿಮಗೆ ನೆನಪಿರಬಹುದು ನಾವು ಹಾಗಲಕಾಯಿ ಸಾರು ಅಥವಾ ಪಲ್ಯ ಮಾಡಿದಾಗ ಕೆಲವೊಮ್ಮೆ ಅತೀ ವಿಷ ವಿಷ ಅನಿಸಿ ಒಲ್ಲದ ಮನಸಿನಿಂದ ತಿನ್ನುತ್ತೇವಲ್ಲ? ಹಾಗೆ ದನಗಳು ಕೂಡ ಪೇಚಾಡಿಕೊಂಡು ತಿನ್ನುತ್ತಿರುತ್ತಾವೆ. ಅದೇ ಎಲೆಯು ಒಣಗಿದ ನಂತರ ಚೆನ್ನಾಗಿ ತಿನ್ನಬಲ್ಲವು. ಒಣಗಿದ ನಂತರ ವಿಷದ ಅಂಶ ಕಡಿಮೆಯಾಗಿ ಅಷ್ಟೋಂದು ಪರಿಣಾಮಕಾರಿಯಾಗದೇ ಇರಬಹುದು.
         ಪ್ರಕರಣ ಎರಡರಲ್ಲಿ ತಿಳಿಸಿದಂತೆ ಎಷ್ಟೊಂದು ಸೊಂಪಾಗಿ ಹುಲ್ಲು ಬೆಳೆದಿದ್ದರೂ ದನಗಳು ಕೆಲವೇ ನಿಮಿಷಗಳಲ್ಲೇ ಬೇರೊಂದು ಪ್ರಕಾರದ ಹುಲ್ಲು ಹುಡುಕುವವು. ಕಾರಣ ಮೇಲೆ ಹೇಳಿದಂತೆ ಶತ್ರುಗಳ ದಾಳಿಯಾದ ಮೇಲೆ ಅವು ತಮ್ಮ ಕುಟುಂಬದ ಇತರರಿಗೆ ಸಂದೇಶ ನೀಡುವುದರಿಂದ ಕೆಲವು ಸೆಕೆಂಡ್ ಗಳಲ್ಲಿ ಈ ಪಶುಗಳು ಮುಟ್ಟದೇ ಇದ್ದರೂ ಆ ಹುಲ್ಲು ರಾಸಾಯನಿಕ ಕ್ರಿಯೆಯಿಂದ ವಿಷಮಯವಾಗಿರತ್ತೆ. ಅದುವೇ ಕಾರಣ ಪಶುಗಳು ಒಂದೇ ಪ್ರಕಾರದ ಹುಲ್ಲು ದೀರ್ಘ ಕಾಲದವರೆಗೆ ತಿನ್ನುವುದಿಲ್ಲ. ಇದು ಕೇವಲ ದನಗಳಿಗಷ್ಟೇ ಸೀಮಿತ ಅಲ್ಲ ಜೀಬ್ರಾ , ಜಿರಾಫೆ , ಆನೆಗಳು ಕೂಡ ಹೀಗೆಯೇ.... ಇಂತಹದ್ದೇ ಅನುಭವ ಮತ್ತು ಸಸ್ಯಗಳ ಪ್ರತಿರೋಧವನ್ನು ಎದುರಿಸುತ್ತಾವೆ. ಹಾಗೆಯೇ ಮಳೆಗಾಲದಲ್ಲಿ ಹಸಿ ಹುಲ್ಲು ಕೊಯ್ದು ಹಾಕಿದಾಗ ಹಾಗೇಯೇ ಇವು ಮಾಡುವುದು.
ಆದರೆ ನಾಲ್ಕಾರು ಗಂಟೆಗಳ ನಂತರದಲ್ಲಿ ಅದೇ ಪಶುಗಳು ಕೊಯ್ದ ಹುಲ್ಲನ್ನು ಉತ್ಸಾಹ ಮತ್ತು ಖುಷಿಯಿಂದನೇ ಮೇಯುವವು. ಆಗ ಆ ಹುಲ್ಲಿನಚೇತನ ಕಳೆಗುಂದಿ ನಿರ್ಜೀವವಾಗಿರುವುದರಿಂದ ಆ ಹುಲ್ಲು ರಾಸಾಯನಿಕ ಪ್ರತಿರೋಧ ತೋರಿಸುವುದಿಲ್ಲ.
          ಮೂರನೇ ಪ್ರಕರಣದಲ್ಲಿ ಅಷ್ಟೊಂದು ಬದನೆಕಾಯಿ ಹೇಗೆ ಉಳಿದುಕೊಂಡವು. ಮಾರಲೆಂದೇ ಬೆಳದವರು ಉಳಿಸಿರಲು ಅಸಾಧ್ಯ. ಬೀಜಕ್ಕೆಂದು ಹತ್ತಿಪ್ಪತ್ತು ಕಾಯಿ ಬಿಟ್ಟು ಇರಬಹುದು ಅದರೆ ತುಂಬಾ ಕಾಯಿಗಳನ್ನು ಬಿಟ್ಟಿರಲ್ಲ. ಯಾವಾಗ ಬದನೆ ಕೀಳಲು/ಕೊಯ್ಯಲು ಹೊಲದೊಳಗೆ ಇಳಿಯುವವರೋ ಆಗ ಶತ್ರುಗಳ ದಾಳಿಗೆ ಒಳಗಾದ ಸಸ್ಯಗಳು ತಮ್ಮ ಕುಟುಂಬದ ಸಸ್ಯಗಳಿಗೆ ಶತ್ರುಗಳ ದಾಳಿಯಿಂದ ಪಾರಾಗಲು ಸಂದೇಶವನ್ನು ಕೊಡುವವು ಆಗ ಅವು ಎಲೆಗಳ ಹಿಂದೆ ಅಡಗಿರಬಹುದು ಎನ್ನುವುದು ನನ್ನ ಅನುಭವದ ನಂಬಿಕೆ ಮತ್ತು ನನ್ನ ವಾದ.
      ಈ ಸಿದ್ದಾಂತವನ್ನು ಪುಷ್ಠೀಕರಿಸಲು ಒಂದೆರಡು ಉದಾಹರಣೆ ನೋಡುವುದಾದರೆ ಸೌತೇಕಾಯಿ, ಕರಬೂಜ, ಕಲ್ಲಂಗಡಿ ಹಣ್ಣುಗಳನ್ನು ಗಿಡದಿಂದ ಕಿತ್ತ ನಂತರ ಕೊಯ್ದರೆ ವಿಷವಾಗುವುದು ಅಂತ ಹೇಳುವರು. ಅದಕ್ಕೆ ತುಂಬು ಮಾತ್ರ ಕೊಯ್ದು ತುಂಬಿನಿಂದ ಆ ಹಣ್ಣು ವಿಸರ್ಜಿಸುವ ಹಾಲಿನ ರೂಪದ ದ್ರವವನ್ನು ಉಜ್ಜುವುದನ್ನು ನೀವು ನೋಡಿರಬಹುದು. ಆ ರಾಸಯನಿಕವೇ ವಿಷ. ಅದ್ದರಿಂದ ಈಗಲೂ ಹಣ್ಣು ತರಕಾರಿ ಕೊಯ್ದು ಸ್ವಲ್ಪ ಸಮಯದ ನಂತರ ಬಳಸುವುದು.
       ಕುಂಬಳಕಾಯಿ ನೀವು ನೋಡಿದ್ದೀರಿ ಮತ್ತು ತಿಂದಿದ್ದೀರಿ ಅದರೆ ಕುಂಬಳಕಾಯಿ ಕೀಳುವ ಪ್ರಕ್ರಿಯೆ ಒಂದು ಶಾಸ್ತ್ರವೇ ಆಗಿತ್ತು. ಅದು ತುಂಬಾ ಜನಕ್ಕೆ ಗೊತ್ತಿಲ್ಲದೇ ಇರಬಹುದು. ಅದನ್ನು ಕೀಳುವ ಮುನ್ನ ಅದಕ್ಕೆ ಮುಳ್ಳು ಮುರಿದು/ಚುಚ್ಚಿ, ಬಳ್ಳಿಯಿಂದ ಕಾಯಿಯಿನ್ನು ಬೇರೆ ಮಾಡಿ ಒಂದೆರಡು ಬಾರಿ ಅದನ್ನು ಒಡೆದು ಹೋಗದ ಹಾಗೆ ಕನಿಷ್ಠ ಎತ್ತರದಿಂದ ಎತ್ತಿಹಾಕಿ ಹತ್ತು ಹದಿನೈದು ನಿಮಿಷ ಕಾದು ಆಮೇಲೇ ಹೊತ್ತು ತರುತ್ತಿದ್ದರು ಮಕ್ಕಳು, ಗರ್ಬಿಣಿಯರು, ಗರ್ಭಿಣಿ ಹೆಂಡತಿ ಇರುವ ಪುರುಷರು ಕುಂಬಳಕಾಯಿಯನ್ನು ಕೀಳುವ ಹಾಗೆ ಇರಲಿಲ್ಲ. ಎಲ್ಲಾ ಹಣ್ಣು ಮತ್ತು ತರಕಾರಿಗೆ ಹೋಲಿಸಿದರೆ ಕುಂಬಳಕಾಯಿಯಲ್ಲಿ ಶೇ90% ಗೂ ಅಧಿಕ ಚೇತನಾ ಶಕ್ತಿ ಇರುವುದರಿಂದ ಅದನ್ನು ಕೀಳುವ ಮುನ್ನ ಈ ಶಾಸ್ತ್ರ ಮಾಡದೇ ಅವಸರ ಅವಸರವಾಗಿ ಕಿತ್ತುಕೊಂಡು ಹೊತ್ತುಕೊಂಡು ಹೋದರೆ ಅದರ ರಾಸಾಯನಿಕ ಪ್ರತಿಕ್ರಿಯೆಗೆ ಕೆಲವೊಮ್ಮೆ ದೈಹಿಕ ನಿಶ್ಯಕ್ತಿ ಇರುವವರು ಪ್ರಜ್ಞೆ ತಪ್ಪಿ ಬಿದ್ದಿರಬಹುದು. ಇದು ರಾವು ಎಂದು ಇದು ಗಾಳಿ ಶಕ್ತಿ( ಅತಿಮಾನುಷ ಶಕ್ತಿ) ಇರುವುದೆಂದು ಕೆಲವರು ನಂಬಿದ್ದಾರೆ. ಇದು ಮೂಢನಂಬಿಕೆ. ನನ್ನ ಪ್ರಕಾರ ಅತಿಮಾನುಷ ಶಕ್ತಿ ಯಾವುದೂ ಇಲ್ಲವಾದರೂ ಅದನ್ನು ಸಸ್ಯದಿಂದ ಬೇರ್ಪಡಿಸಿದಾಗ ಅದರ ಚೇತನದ ಪ್ರತಿಕ್ರಿಯೆಯು ಇದಕ್ಕೆ ಕಾರಣ. ಆದ್ದರಿಂದಲೇ ಅದಕ್ಕೆ ಇಷ್ಟೆಲ್ಲಾ ಶಾಸ್ತ್ರದ ರೀತಿಯಲ್ಲಿ ಮಾಡುತ್ತಿದ್ದರು. ಮುಳ್ಳು ಚುಚ್ಚುವುದರಿಂದ ಉತ್ಪತ್ತಿ ಆಗುವ ರಾಸಾಯನಿಕ ಹೊರಹೋಗಲೆಂದು ಹಳ್ಳಿಕಡೆ ಇದನ್ನೂ ಈಗಲೂ ಕೆಲವರು ಪಾಲನೆ ಮಾಡುತ್ತಿದ್ದಾರೆ.
         ಇನ್ನೂ ಒಂದು ಸಂಗತಿಯೆಂದರೆ ಕೆಲವು ಮರಗಳ ಕಡಿದರೆ ಶಾಪ ತಗಲಿ ಮಕ್ಕಳಾಗದೇ ಇರುವುದು ಮತ್ತು ಮನುಷ್ಯರಿಗೆ ಕೇಡಾಗುವುದು ಎಂಬುವ ನಂಬಿಕೆ ನಮ್ಮಲ್ಲಿ ಇದೆ. ಫಲಕ್ಕೆ ಬಂದಿರುವ ತೆಂಗಿನಮರ, ಮಾವು, ಅತ್ತಿ, ಬನ್ನಿ ಮರ, ಅರಳಿಮರ ಇವುಗಳನ್ನು ಕಡಿದರೆ ಒಳಿತಾಗುವುದಿಲ್ಲ ಎಂಬ ನಂಬಿಕೆಯು ನಮ್ಮಲ್ಲಿ ಆಳವಾಗಿ ಇದೆ. ಇವುಗಳು ಅತ್ಯಂತ ಉಪಕಾರಿಯಾದ ಸಸ್ಯಗಳು ಎಂಬುದು ಒಂದುಕಡೆಯಾದರೆ ಅದರಲ್ಲೂ ಫಲಕ್ಕೆ ಬಂದಿರುವ ಸಸ್ಯಗಳ ಕಡಿದರೆ ರಾಸಾಯನಿಕ ಪ್ರಕ್ರಿಯೆ ಎರಡುಪಟ್ಟು ಆಗಿ ನಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು. ಅದಕ್ಕೇ ಹಿರಿಯರು ಹೇಳುವುದು ಫಲಕೊಡಲು ಸಿದ್ದವಾದ ಮರ/ಪ್ರಾಣಿಯ ಹತ್ಯೆ ನಿಷಿದ್ಧ ಎಂದು.
        ಅಬ್ಬಾ! ಸಸ್ಯಗಳಿಗೂ ಎಷ್ಟೊಂದು ಶಕ್ತಿ ಇದೆ ಅಲ್ಲವಾ....? ಅವುಗಳ ರಾಸಾಯನಿಕ ಪ್ರತಿಕ್ರಿಯೆಯು ಎಷ್ಟೊಂದು ಪ್ರಬಲವಾಗಿದೆ ಎಂಬುದು ನಾನು ನಮ್ಮ ವಿಶ್ವವಿದ್ಯಾಲಯಗಳ ಯಾವ ಪುಸ್ತಕದಲ್ಲೂ ಓದಿದಲ್ಲ. (ಇರಬಹುದು) ಬದಲಾಗಿ ನನ್ನ ಸ್ವ ಅನುಭವವನ್ನು ಈ ರೀತಿಯಾಗಿ ಅರ್ಥ ಮಾಡಿಕೊಂಡಿದ್ದೇನೆ. ಈ ಅನುಭವದ ಹಿಂದಿನ ವಿಜ್ಞಾನವನ್ನು ನಾನು ಅರ್ಥೈಸಿಕೊಂಡಿದ್ದು ಹೀಗೆ.
(ಚರ್ಚೆ ಮತ್ತು ಹಿಮ್ಮಾಹಿತಿಗೆ ವೈಯಕ್ತಿಕವಾಗಿ ಅವಕಾಶ ಇದೆ)
........................................ನಾಗೆಂದ್ರ ಬಂಜಗೆರೆ.
ಶಿಕ್ಷಕರು.
ಸ ಹಿ ಪ್ರಾ ಶಾಲೆ, ತುಮಟಿ 
ಸಂಡೂರು ತಾಲೂಕು , ಬಳ್ಳಾರಿ
9902912684.
*********************************************


Ads on article

Advertise in articles 1

advertising articles 2

Advertise under the article