-->
ಪ್ರೀತಿಯ ಪುಸ್ತಕ : ಸಂಚಿಕೆ - 3

ಪ್ರೀತಿಯ ಪುಸ್ತಕ : ಸಂಚಿಕೆ - 3

ಪ್ರೀತಿಯ ಪುಸ್ತಕ
ಸಂಚಿಕೆ - 3

   ಏಪ್ರಿಲ್ 23 - ವಿಶ್ವ ಪುಸ್ತಕ ದಿನದ ಶುಭಾಶಯಗಳು
       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 



                      ಪಂಜೆ ಮಂಗೇಶರಾಯರ 
                            ಮಕ್ಕಳ ಕಥೆಗಳು
                 ಪ್ರೀತಿಯ ಮಕ್ಕಳೇ, ಶಾಲೆಗೆ ಹೋಗುವ ನೀವು ಪಂಜೆ ಮಂಗೇಶರಾಯರ ಹೆಸರು ಕೇಳಿಸಿಕೊಂಡಿರಬಹುದು. ಕೇಳಿಸಿಕೊಂಡಿಲ್ಲದೇ ಹೋಗಿದ್ದರೆ ಕೇಳಿಸಿಕೊಳ್ಳಲೇ ಬೇಕು. ಸರಿಸುಮಾರು ನೂರು ವರುಷಗಳ ಹಿಂದೆ ಅವರು ಮಕ್ಕಳಿಗಾಗಿ ಚಂದ ಚಂದ ಕಥೆಗಳನ್ನು, ಹಾಡುಗಳನ್ನು ಬರೆದವರು ಅವರು. ಈ ಕಾಲದ ಮಕ್ಕಳು ಅವರನ್ನು ಮರೆಯಬಾರದಲ್ಲಾ ಅಂತ ಈ ಸಂಗ್ರಹ ಹೊರತಂದಿದ್ದಾರೆ.  ಸುಂದರವಾದ 16 ಹಳೆಯ ಕಥೆಗಳು ಈ ಪುಸ್ತಕದಲ್ಲಿ ನಿಮಗೆ ಸಿಗುತ್ತವೆ. ಮುರಳೀಧರ ಅವರು ಕತೆಗೆ ತಕ್ಕಂತೆ ಚಿತ್ರ ಮಾಡಿದ್ದಾರೆ. ಈ ಕತೆಗಳನ್ನು ನಾನು ಚಿಕ್ಕವಳಿದ್ದಾಗ ಕೇಳಿಸಿಕೊಂಡಿದ್ದೆ. ಮತ್ತೆ ಮತ್ತೆ ಕೇಳಿಸಿಕೊಳ್ಳುತ್ತಿದ್ದೆ. ಆಮೇಲೆ ನಾನೇ ಓದಿಕೊಳ್ಳಲು ಶುರುಮಾಡಿದೆ. ಈಗ ಮತ್ತೆ ನಿಮಗೆ ಪರಿಚಯಿಸುವುದಕ್ಕಾಗಿ ಓದಿಕೊಂಡೆ. ಕಥೆಗಳು ಹಳತಾಗುವುದಿಲ್ಲ. ಇದರಲ್ಲಿ ಎಲ್ಲಾ ಕಥೆಗಳು ನಿಮಗೆ ಇಷ್ಟವಾಗುತ್ತವೋ ಗೊತ್ತಿಲ್ಲ. ಆದರೆ ಬೇರೆ ಬೇರೆ ಕಥೆಗಳ ಚಂದವನ್ನು ನೀವು ಕಾಣಬಹುದು. ತಮಾಷೆಯ ಕಥೆಗಳಿವೆ, ಕುತೂಹಲ ಹುಟ್ಟಿಸುವ ಕಥೆಗಳು ಇವೆ, ಬೇಸರದ ಕಥೆಗಳು ಇವೆ.  
           ಈ ಪುಸ್ತಕದಲ್ಲಿ ಇರುವ ‘ಗುಡು ಗುಡು ಗುಮ್ಮಟ ದೇವರು’ ಮತ್ತು ‘ಮೂರು ಕರಡಿಗಳು’ ಕಥೆಯನ್ನು ನಾನು ಎಷ್ಟೋ ಮಕ್ಕಳಿಗೆ ಹೇಳಿದ್ದೇನೆ. ಆಡುತ್ತಾ ಆಡುತ್ತಾ ಈ ಕಥೆಗಳನ್ನು ನಾಟಕ ಮಾಡಿಕೊಂಡು ಆನಂದಿಸಿದ್ದೇವೆ. ಕಥೆ ಓದಿ ಆನಂದಿಸುವುದು ಒಂದಾದರೆ, ಅದನ್ನು ಗೆಳತಿ/ಗೆಳೆಯರ ಜೊತೆಗೆ ಹೇಳಿಕೊಳ್ಳುತ್ತಾ ಸಂಭಾಷಣೆ ಮಾಡುವುದು, ಅಭಿನಯ ಮಾಡುವುದು ಇನ್ನೊಂದೇ ರೀತಿಯ ಖುಶಿ ಕೊಡುತ್ತದೆ. ನಾನು ನನ್ನ ಪುಟ್ಟ ಗೆಳತಿ ಜಾಜಿಗೆ ಮೂರು ಕರಡಿ ಕಥೆಯನ್ನು ಚಿತ್ರಗಳನ್ನು ತೋರಿಸುತ್ತಾ ಹೇಳಿದ್ದೆ. ಅವಳು ಪುನಃ ಈ ಕತೆ ಹೇಳುವಾಗ ತನ್ನ ಕಿಸೆಯಿಂದಲೂ ಒಂದಷ್ಟು ಸೇರಿಸಿ ಹೇಳಿದಳು. ಮಜವಾಗಿ ಇತ್ತು. 
           ನೀವೂ ಓದಿ, ಆನಂದಿಸಿ, ಬೇರೆಯವರಿಗೆ ಕಥೆ ಹೇಳಿ, ನಿಮ್ಮ ಕಿಸೆಯಿಂದಲೂ ಸ್ವಲ್ಪ ಹಾಕಿ..
ಲೇಖಕರು: ಪಂಜೆ ಮಂಗೇಶರಾಯರು
ಚಿತ್ರಗಳು: ಮುರಳೀಧರ
ಪ್ರಕಾಶಕರು: ಅಂಕಿತ ಪ್ರಕಾಶನ
ಬೆಲೆ: ರೂ.90/-
ಐದನೇ ಆರನೇ ತರಗತಿಯ ಮಕ್ಕಳು ಓದಬಹುದು, ಚಿಕ್ಕ ಮಕ್ಕಳಿಗೆ ದೊಡ್ಡವರು ಓದಿ ಹೇಳಬಹುದು
...................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article