-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 41

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 41

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 41          
         
        ನೆಮ್ಮದಿಗಾಗಿ ಪಂಜರವೋ.... ಗೂಡೋ...!
     --------------------------------------------
      ಪಕ್ಷಿಧಾಮದಲ್ಲಿ ಪಕ್ಷಿಗಳ ಚಿಲಿಪಿಲಿ ನಿನಾದ ಕೇಳಿ ಪುಳಕಿತನಾದ ಶಿಷ್ಯನೊರ್ವ ಪಕ್ಕದಲ್ಲಿದ್ದ ಗುರುಗಳಲ್ಲಿ "ಪಕ್ಷಿಗಳ ಚಿಲಿಪಿಲಿ ನಿನಾದವನ್ನು ದಿನಾಲೂ ಕೇಳಬೇಕು ಅನಿಸುತ್ತಿದೆ. ಅದಕ್ಕಾಗಿ ಪಕ್ಷಿಗಾಗಿ ಪಂಜರವೊಂದನ್ನು ಕಟ್ಟಿದರೆ ಸಾಕೇ..?" ಎಂದು ಕೇಳಿದನು. ಅದಕ್ಕೆ ನಸುನಕ್ಕ ಗುರುಗಳು "ಪ್ರಿಯ ಶಿಷ್ಯನೇ ಪಕ್ಷಿಗಳ ಚಿಲಿಪಿಲಿ ಕೇಳುವ ನಿಜವಾದ ಮನಸ್ಸಿದ್ದರೆ ಪಂಜರ ಕಟ್ಟುವ ಬದಲು ಗೂಡು ಕಟ್ಟು. ಗೂಡು ಪ್ರಕೃತಿ. ಪಂಜರ ವಿಕೃತಿ. ಗೂಡಿಗಾಗಿ ಗಿಡ ಬೆಳೆಸು - ಮರಗಳ ಉಳಿಸು. ಆಗ ತನ್ನಿಂದ ತಾನಾಗಿ ಪ್ರೀತಿಯಿಂದ ಗೂಡಿನೊಳಗೆ ಪಕ್ಷಿಗಳು ಬಂದು ವಾಸಿಸುತ್ತದೆ. ಆಗ ಸಹಜ ಸೌಂದರ್ಯದ ಚಿಲಿಪಿಲಿ ನಿನಾದ ಕೇಳಬಹುದು. ಗೂಡಿನೊಳಗೆ ಖುಷಿಯಿಂದ ಚಿಲಿಪಿಲಿ ಗುಟ್ಟುವಂತೆ ಪಂಜರದೊಳಗೆ ಯಾವುದೇ ಪಕ್ಷಿಗಳು ಸಹಜವಾಗಿ ಚಿಲಿಪಿಲಿಗುಟ್ಟವು. ಬಂಗಾರದ ಪಂಜರ ಬೇಕಾದರೆ ಕಟ್ಟಬಹುದು. ಆದರೆ ಪಕ್ಷಿಗಳು ಚಿಲಿಪಿಲಿ ನಿನಾದಗೈಯುವಂತೆ ಮಾಡಲು ಖಂಡಿತಾ ಸಾಧ್ಯವಿಲ್ಲ. ಪ್ರಾಕೃತಿಕವಾಗಿದ್ದರೆ ಮಾತ್ರ ನೆಮ್ಮದಿ" ಎಂದರು. ಅವನಿಗೆ ಸ್ವಾಭಾವಿಕವಾಗಿ ಚಿಲಿಪಿಲಿ ಕೇಳುವ ಗುಟ್ಟು ಸಿಕ್ಕಿತು. ಪಂಜರ ಬಿಟ್ಟು ಗೂಡು ಕಟ್ಟಲು ಬೇಕಾದ ಮರ ಬೆಳೆಸಿದ. ಚಿಲಿಪಿಲಿ ನಿನಾದ ಆಲಿಸಿ ಸಂತೃಪ್ತನಾದ.
        ಹೌದಲ್ಲವೇ, ಎಲ್ಲರಿಗೂ ಬೇಕಾದ್ದು ನೆಮ್ಮದಿಯ ಚಿಲಿಪಿಲಿ ನಿನಾದ. ಆದರೆ ನಾವೆಲ್ಲರೂ ಪಂಜರ ಕಟ್ಟುತ್ತಿದ್ದೇವೆ ಹೊರತು ಗೂಡನ್ನಲ್ಲ. ವಾಸ್ತವ ಭೌತಿಕ ವಸ್ತುಗಳು, ಟಿ.ವಿ....ವಾಷಿಂಗ್ ಮೆಶಿನ್... ಸ್ಮಾರ್ಟ್ ಫೋನ್.... ದುಬಾರಿ ಬಟ್ಟೆ.... ದುಬಾರಿ ಕಾರು... ವಿಲಾಸಿ ಜೀವನ... ಆಸ್ತಿ... ಸಂಪತ್ತು.. ಅಧಿಕಾರ... ಒಣಪ್ರತಿಷ್ಠೆ ಹೀಗೆ ಹತ್ತು ಹಲವು ರೀತಿಯ ಪಂಜರಗಳು. ಆದರೆ ಆ ಪಂಜರದೊಳಗೆ ನೆಮ್ಮದಿಯ ಪಕ್ಷಿಯ ಚಿಲಿಪಿಲಿ ಕೇಳಿಸುತ್ತಿಲ್ಲ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ. ಅದರ ಬದಲು ನಮ್ಮೊಳಗೆ ಸದಾ ಇರುವವರ ಜತೆ ಪ್ರೀತಿ ಹಾಗೂ ಮಾನವೀಯತೆಯ ಗಿಡ ಬೆಳೆಸಿ ಉಳಿಸಿದರೆ ನೆಮ್ಮದಿಯ ಪಕ್ಷಿ ತನ್ನಿಂದ ತಾನಾಗಿ ಗೂಡು ಕಟ್ಟಿ ಖುಷಿಯ ನಿನಾದವನ್ನು ದಿನಾಲೂ ಕೇಳಬಹುದು. 
       ಅಹಂಕಾರ , ಸ್ವಾರ್ಥ ಹಾಗೂ ಇನ್ನೊಬ್ಬರ ಜೀವಕ್ಕೆ ಬೆಲೆ ಕೊಡದವನು ಮಾತ್ರ ಪ್ರೀತಿರಹಿತ ಪಂಜರ ಖರೀದಿಸುತ್ತಾನೆ. ನಿಸ್ವಾರ್ಥ ಹೃದಯ ಹಾಗೂ ಇನ್ನೊಬ್ಬರ ಜೀವಕ್ಕೂ ಬೆಲೆ ಕೊಡುವವ ಮಾತ್ರ ಪ್ರೀತಿಭರಿತ ಗಿಡ ನೆಡುತ್ತಾನೆ. ಪಂಜರ ದೊಳಗಿನ ಪಕ್ಷಿಯನ್ನು ಮುಕ್ತವನ್ನಾಗಿಸಿದರೆ ಪಕ್ಷಿಯು ಖುಷಿಯಿಂದ ಹಾರಾಡಿ ಸಹಜ ಚಿಲಿಪಿಲಿ ಸ್ವರ ಹೊಮ್ಮಿಸಬಹುದು. ಅದರಂತೆ ನಮ್ಮ ಮನಸ್ಸೆಂಬ ಪಂಜರದೊಳಗೆ ಬಂಧಿಸಿಲ್ಪಟ್ಟಿರುವ ಹಲವಾರು ವಿಷಯಗಳನ್ನು ಮುಕ್ತವನ್ನಾಗಿಸಿದರೆ ನೆಮ್ಮದಿಯ ಭಾವ ಬದುಕಿನಾದ್ಯಂತ ಮೂಡಬಹುದು. ಹಾಗಾಗಿ ನೆಮ್ಮದಿಗಾಗಿ ಪಂಜರ ಖರೀದಿಸುವುದೋ.... ಗಿಡನೆಡುವುದೋ.. ಎಂಬುದನ್ನು ನಾವು ನಿರ್ಧರಿಸೋಣ. ನೆಮ್ಮದಿಯ ಬದುಕಿಗಾಗಿ ಬನ್ನಿ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article