-->
ಯುಗಾದಿಯ ವಿಶೇಷ : ಮಕ್ಕಳ ಲೇಖನಗಳು

ಯುಗಾದಿಯ ವಿಶೇಷ : ಮಕ್ಕಳ ಲೇಖನಗಳು

ಮಕ್ಕಳ ಜಗಲಿಯಲ್ಲಿ 
ಮಕ್ಕಳ ಲೇಖನಗಳು
ಯುಗಾದಿಯ ವಿಶೇಷ ದಿನದಲ್ಲಿ 
ಜಗಲಿಯ ಮಕ್ಕಳು ಬರೆದ ಬರಹಗಳು

              
       ಯುಗಾದಿಯೆಂದರೆ ಹಿಂದುಗಳ ಸಂಭ್ರಮದ ಹಬ್ಬ. ಯುಗ ಎಂದರೆ ವರ್ಷ. ಆದಿ ಎಂದರೆ ಮೊದಲು. ವರ್ಷದಲ್ಲಿ ಮೊದಲು ಆಚರಿಸುವ ಹಬ್ಬವೇ ಯುಗಾದಿ. ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಆಚರಿಸುತ್ತಾರೆ. ಜನವರಿ 1 ಕ್ಯಾಲೆಂಡರ್ ವರ್ಷ. ಇದು ಇಂಗ್ಲೀಷರಿಂದ ಬಂದ ಪದ್ಧತಿ. ಹಿಂದೂಗಳಿಗೆ ಹೊಸವರ್ಷ ಶುರುವಾಗುವುದು ಯುಗಾದಿಯಿಂದ. ಯುಗಾದಿ ಹಬ್ಬ ಚಾಂದ್ರಮಾನದ ಚೈತ್ರಮಾಸ ಶುಕ್ಲಪಕ್ಷ ಪಾಡ್ಯದಂದು ಆಚರಿಸಲಾಗುತ್ತಿದೆ. ಈ ದಿನ ಎಲ್ಲರೂ ಬೇವು ಬೆಲ್ಲ ತಿನ್ನುತ್ತಾರೆ. ಇದನ್ನು ಕಷ್ಟ ಸುಖಗಳಿಗೆ ಹೋಲಿಸಲಾಗಿದೆ. ಬೇವು ಕಹಿಯಾದುದರಿಂದ ಅದನ್ನು ಕಷ್ಟಕ್ಕೂ, ಬೆಲ್ಲ ಸಿಹಿಯಾದುದರಿಂದ ಅದನ್ನು ಸುಖಕ್ಕೂ ಹೋಲಿಸಲಾಗಿದೆ. ಈ ದಿನದಂದು ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿ ಮೂಗುತಿ ಹಾಕುತ್ತಾರೆ. 
                ನಮ್ಮ ಮನೆಯಲ್ಲಿ ಯುಗಾದಿ ಹಬ್ಬ ಆಚರಿಸುವ ಕ್ರಮ ಹೀಗಿದೆ.... ನಾವು ಬೆಳಗ್ಗೆ ಬೇಗ ಎದ್ದು ನಿತ್ಯವಿಧಿಗಳನ್ನು ಮುಗಿಸಿ, ಹೂವು ಕೊಯಿದು, ಚಂದದ ಬಟ್ಟೆ ಧರಿಸುತ್ತೇವೆ. ಅಕ್ಕಿ, ತೆಂಗಿನಕಾಯಿ, ಎಲೆ ಅಡಿಕೆ ಮತ್ತು ದೇವರಿಗೆ ಆಭರಣ ಇಡುತ್ತೇವೆ. ನಂತರ ದೇವರಿಗೆ ಹಾಗೂ ಹಿರಿಯರಿಗೆ ನಮಸ್ಕರಿಸುತ್ತೇವೆ. ನಾವು ಮಕ್ಕಳೆಲ್ಲರೂ ಸೇರಿ ರಂಗೋಲಿ ಹಾಕುತ್ತೇವೆ. ಈ ದಿನದ ವಿಶೇಷ ತಿಂಡಿ ಉದ್ದಿನ ಇಡ್ಲಿ. ದೇವರಿಗೆ ಅನ್ನ, ಪಾಯಸ ನೈವೇದ್ಯ ಅರ್ಪಿಸುತ್ತೇವೆ. ಆಮೇಲೆ ಎಲ್ಲರೂ ಸೇರಿ ಹಬ್ಬದೂಟವನ್ನು ಸವಿಯುತ್ತೇವೆ.
 ....................................... ಸಾನ್ವಿ ಸಿ.ಎಸ್
ನಾಲ್ಕನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ  
********************************************


ನಮಸ್ತೇ.......                                                         
              ನಾನು ನಮ್ಮ ಹಬ್ಬ ಅಂದರೆ ಯುಗಾದಿ ಯ ಬಗ್ಗೆ ನನಗೆ ಗೊತ್ತಿದಷ್ಟು ನಿಮ್ಮ ಜೊತೆ ಹಂಚಲು ಇಷ್ಟ ಪಡುತ್ತೇನೆ. ಏಪ್ರಿಲ್ 2ರಂದು ಯುಗಾದಿ ಹಬ್ಬ ವನ್ನು ನಮ್ಮೆಲ್ಲರ ಮನೆಯಲ್ಲಿ ಆಚರಿಸುತ್ತೇವೆ. ಯುಗಾದಿಯಂದು ಬೇವು ಬೆಲ್ಲ ತಿಂದು ಒಳ್ಳೆಯದನ್ನು ಮಾತನಾಡಬೇಕು ಎಂದು ಹಿರಿಯರು ಹೇಳುವುದನ್ನು ನಾನು ಕೇಳಿದ್ದೇನೆ. ಹೌದು ಯುಗಾದಿಯಲ್ಲಿ ನಾವು ಬೇವು, ಬೆಲ್ಲ ತಿನ್ನುವುದು ಏಕೆ ಅಂದರೆ ಅದರ ಅರ್ಥ ನಮ್ಮ ಜೀವನದಲ್ಲಿ ಸುಖ ಬಂದರೆ ಅದಕ್ಕೆ ಹಿಗ್ಗದೆ, ಕಷ್ಟ ಬಂದರೆ ಅದಕ್ಕೆ ಕುಗ್ಗದೆ ನಮ್ಮ ಜೀವನವನ್ನು ನಡೆಸಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಒಳ್ಳೆಯ ಮಾರ್ಗದಲ್ಲಿ ಹೆಜ್ಜೆ ಇಟ್ಟು ನಡೆಯಬೇಕು. ಎಂಬ ಅರ್ಥವನ್ನು ಕೊಡುತ್ತದೆ. ಹಿಂದೂಗಳಿಗೆ ಹೊಸ ವರ್ಷ ಅಂದರೆ ಅದು ಯುಗಾದಿ ಎಂದು ಹೇಳುತ್ತಾರೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 
.......................................... ಕೆ. ಬಿಂದುಶ್ರೀ
ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


          " ಯುಗಾದಿ" ಈ ಶುಭದಿನವು ಬ್ರಹ್ಮದೇವನು ಸೃಷ್ಟಿಸಲು ಶುರುಮಾಡಿದರಂತೆ! ಇರಬಹುದು. ಅಲ್ಲವೇ ಪ್ರಕೃತಿ ಮಾತೆಯು ಇನ್ನಷ್ಟು ಕಂಗೊಳಿಸಲು ಪ್ರಾರಂಭಿಸುವುದು. ವಸಂತ ಋತು ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಚಾಂದ್ರಮಾನ ಅಕ್ಷಯವಾಗುತ್ತಾ ಹೋಗುತ್ತಾನೆ. ಗಿಡಮರಗಳು ಚಿಗುರಿಕೊಂಡು ಕೈತುಂಬ ಹಸಿರು ತುಂಬಿಕೊಳ್ಳುವ ಕಾಲ. ನಮ್ಮ ಮನೆಯ ಹಿಂದೆ ಸಣ್ಣದೊಂದು ಕಾಡಿದೆ. ಅಲ್ಲಿಂದ ವಿವಿಧ ಬಗೆಯ ಹೂವಿನ ಪರಿಮಳ , ಹಣ್ಣುಗಳ ಪರಿಮಳ ಬರುತ್ತಾ ಇರುತ್ತವೆ. 
      ಹೌದು ಯುಗಾದಿಯೆಂದರೆ ಯುಗದ ಆದಿಯೇ ಇರಬಹುದು. ನಮ್ಮ ಮನೆಯಲ್ಲಿ ಯುಗಾದಿಯನ್ನೇ ಹೊಸ ವರ್ಷವನ್ನಾಗಿ ಆಚರಿಸುತ್ತೇವೆ. ನಂತರ ಬರುವ ಸೌರಮಾನ ಯುಗಾದಿ (ಬಿಸು) ನಮಗೆ ತುಂಬಾ ಖುಷಿ ಕೊಡುವ ದಿನ. ದೇವಸ್ಥಾನದವರೆಗೆ ಭಜನೆಯಲ್ಲಿ ಸಾಗಿ ರಥೋತ್ಸವದಲ್ಲಿ ಭಾಗಿಯಾಗುತ್ತೇವೆ. ಆ ದಿನ ದೇವಸ್ಥಾನದಲ್ಲಿ ಒಂಭತ್ತು ಬಗೆಯ ಫಲಾಹಾರ ಇರುತ್ತದೆ.
         ಈ ವರ್ಷದ ಯುಗಾದಿಯು ಎಲ್ಲರಿಗೂ ಶುಭ ತರಲಿ ಎಂದು ಹಾರೈಸುವೆ...... ಇತೀ ನಿಮ್ಮ ಪ್ರೀತಿಯ
............................................... ತೃಪ್ತಿ ವಗ್ಗ
5ನೇ ಭರತ ತರಗತಿ
ಶ್ರೀ ರಾಮ ವಿದ್ಯಾ ಕೇಂದ್ರ 
ಹನುಮಾನ್ ನಗರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


         ಬೇವು ಬೆಲ್ಲವ ತಿಂದು ಒಳ್ಳೆಯ ಮಾತಾಡು, ಸದಾ ಖುಷಿಯಾಗಿರು ಎಂಬ ನುಡಿಯೊಂದಿದೆ. ಬೆಲ್ಲವನ್ನು ಸುಖ - ಸಂತೋಷದ ಸಂಕೇತವಾಗಿಯೂ, ಬೇವನ್ನು ಕಷ್ಟ-ದುಖದ ಸಂಕೇತವಾಗಿಯೂ ಇಲ್ಲಿ ಉಲ್ಲೇಖಿಸಲಾಗಿದೆ. ಇವೆರಡೂ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಎರಡನ್ನೂ ಸಮಾನವಾಗಿ ಜೀವನದಲ್ಲಿ ಸ್ವೀಕರಿಸಿ, ೨೦೨೨ ರ ಶುಭಕ್ರತ ಸಂವತ್ಸರವು ಎಲ್ಲರ ಬಾಳಿನಲ್ಲೂ ಸುಖ ಶಾಂತಿ ನೆಮ್ಮದಿಯನ್ನು ಆ ದೇವರು ಕರುಣಿಸಲಿ. ಎಲ್ಲರಿಗೂ ಶುಭ ವಾಗಲಿ. ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಬಯಸುವ ನಿಮ್ಮ ಪ್ರೀತಿಯ,
.......................... ಧನ್ವಿ ರೈ ಕೋಟೆ ಪಾಣಾಜೆ
೬ ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ, 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


        ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ಹಿಂದುಗಳ ಹೊಸ ವರ್ಷವೆಂದು ಆಚರಣೆ ಮಾಡಲಾಗುತ್ತದೆ. ಯುಗಾದಿಯಂದು ಮಾಡಲೇ ಬೇಕಾದ ಆಚರಣೆಯೆಂದರೆ ಎಣ್ಣೆ ಸ್ನಾನ. ನಾವು ದೀಪಾವಳಿಗೆ ಹೀಗೆ ಮಾಡುತ್ತೇವೆ. ಆದರೆ ಯುಗಾದಿಯಂದು ಕೂಡ ಎಣ್ಣೆ ಹಚ್ಕೊಂಡು ಸ್ನಾನ ಮಾಡಬೇಕು. ಯುಗಾದಿಯಂದು ಬೇವು ಬೆಲ್ಲ ಸವಿಯುವ , ಯುಗಾದಿ ಹಬ್ಬದ ವೈಶಿಷ್ಟ್ಯತೆ. ಯುಗಾದಿಯನ್ನು ಚೈತ್ರಮಾಸದ ಮೊದಲ ದಿನವನ್ನು ಯುಗಾದಿಯೆಂದು ಆಚರಿಸಲು ಆಗುತ್ತದೆ.
........................................... ಹಿತಾಶ್ರೀ ಪಿ.
ಆರನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ 
ಪಕಳಕುಂಜ, ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


          ಯುಗಾದಿ ಎಂದರೆ ಹೊಸ ವರ್ಷ.
 ಹಬ್ಬಗಳಲ್ಲಿ ಪ್ರಸಿದ್ಧವಾದ ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ. ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದು ನಂಬಿಕೆ ಇದೆ.
       ಯುಗಾದಿ ಹಬ್ಬವು ಎಲ್ಲರಲ್ಲೂ ಪ್ರೀತಿ ವಿಶ್ವಾಸ ಸಾಮರಸ್ಯ ಬೆಳೆಸಿ ವಿಶ್ವದಲ್ಲಿ ಸೌಹಾರ್ದತೆಯು ನೆಲೆ ನಿಲ್ಲಲೆಂದು ಬಯಸುತ್ತೇನೆ.
.................................................. ಕೌಶೀಲ 
9ನೇ ತರಗತಿ 
ಸರಕಾರಿ ಪ್ರೌಢ ಶಾಲೆ ನಾರ್ಶ ಮೈದಾನ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************

        ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠವಾಗಿದೆ. ಹಬ್ಬಗಳಲ್ಲಿ ಶ್ರೇಷ್ಠವಾದ ಮತ್ತು ಪ್ರಸಿದ್ಧವಾದ ಯುಗಾದಿ ಹಬ್ಬ ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನವಾಗಿದೆ.
       ಯುಗಾದಿಯ ಅರ್ಥ 'ಯುಗದ ಆದಿ'. 'ಯುಗಾದಿ' ಎಂಬ ಶಬ್ದ ಸಂಸ್ಕೃತದ 'ಯುಗ' ಮತ್ತು 'ಆದಿ' ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಅಂದರೆ ಹೊಸ ವರ್ಷ.  
      ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದದ್ದು ಯುಗಾದಿಯಲ್ಲಿ. ಯುಗಾದಿ ಹಬ್ಬದಂದು ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುತ್ತೇವೆ. 
           ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
...................... ಸಪ್ತಮಿ ಅಶೋಕ್ ದೇವಾಡಿಗ
7ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ , ಕಿರಿಮಂಜೇಶ್ವರ
ಬೈಂದೂರು ತಾಲೂಕು , ಉಡುಪಿ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article