-->
ಸ್ಪೂರ್ತಿಯ ಮಾತುಗಳು : ಹರಿಣಾಕ್ಷಿ ಕಕ್ಯಪದವು

ಸ್ಪೂರ್ತಿಯ ಮಾತುಗಳು : ಹರಿಣಾಕ್ಷಿ ಕಕ್ಯಪದವು

  


              ನಿರಹಂಕಾರಿಯ ಕರ್ತವ್ಯ ನಿಷ್ಠೆ 
         -----------------------------------
        ಆತನೊಬ್ಬ ಯೋಗಿ. ಧ್ಯಾನ , ಯೋಗವನ್ನು ಮಾಡಿಯೋ ಅಥವಾ ತಪಸ್ಸನ್ನಾಚರಿಸಿಯೋ ಭಗವಂತನನ್ನು ಒಲಿಸಿಕೊಳ್ಳುವುದು ಆತನ ಜೀವನದ ಮುಖ್ಯ ಗುರಿಯಾಗಿತ್ತು. ಹೀಗೆ ಒಮ್ಮೆ ಆತ ಒಂದು ಮರವೊಂದರ ಕೆಳಗೆ ಕುಳಿತು ತಪಸ್ಸು ಮಾಡುತ್ತಿದ್ದ. ಆತ ತಪಸ್ಸು ಮಾಡುತ್ತಿದ್ದ ಮಾರ್ಗವಾಗಿ ಸಂಜೆ ಹೊತ್ತು ರೈತರು ಹೊಲ ಗದ್ದೆಗಳಲ್ಲಿ ಕಾಯಕವನ್ನು ಮುಗಿಸಿ ತಮ್ಮ ತಮ್ಮ ಮನೆ ಕಡೆಗೆ ಹೋಗುತ್ತಿದ್ದರು.
          ಒಂದು ದಿನ…... ಸಂಜೆಯ ವೇಳೆ ರೈತರು ತಮ್ಮ ಮನೆ ಕಡೆಗೆ ಹಿಂದಿರುಗುತ್ತಿದ್ದಾಗ ದುಡಿದು ಆಯಾಸಗೊಂಡಿದ್ದ ಒಬ್ಬ ರೈತನ ಕಾಲು ಆಕಸ್ಮಿಕವಾಗಿ ಯೋಗಿಗೆ ತಾಗಿತು…!! ತತ್ಪರಿಣಾಮ ತಪಸ್ಸಿಗೆ ಭಂಗ ಉಂಟಾಯಿತು. ಆತ ನೋವನ್ನು ತಾಳಲಾರದೆ ಕೂಡಲೇ ಕಣ್ಣು ತೆರೆದ. ಕಣ್ಣು ತೆರೆಯುತ್ತಿದ್ದಂತೆ ಎದುರಿಗೆ ಕಂಡ ರೈತನ ಮೇಲೆ ಕೆಂಡಾಮಂಡಲನಾದ. ತನ್ನ ತಪಸ್ಸಿಗೆ ವಿಘ್ನವನ್ನು ಒಡ್ಡಿದಂತಹ ರೈತನನ್ನು ಶಪಿಸಲು ಮುಂದಾದ ಯೋಗಿ, "ನನ್ನ ದೇಹ ನೋಯುವಂತೆ ಮಾಡಿದ ನಿನ್ನ ಈ ಕಾಲುಗಳು ನಡೆಯಲು ಬಾರದಂತಾಗಲಿ" ಎಂದು ಶಪಿಸಿ ಬಿಟ್ಟ.
       ಮೊದಲೇ ಋಷಿಮುನಿಗಳೆಂದರೆ ಅಪಾರ ಭಯ ಭಕ್ತಿ . ಅಂತಹ ಋಷಿಮುನಿಗಳಿಂದ ತನಗೆ ಶಾಪ ದೊರಕಿತಲ್ಲ…!! ಎಂದು ರೈತ ಕಂಗಾಲಾದ. ದುಃಖಿಸಿದ: ವ್ಯಥೆಪಟ್ಟ; ಅಂಗಲಾಚಿ ಬೇಡಿಕೊಂಡ. ಶಾಪವನ್ನು ಹಿಂದಕ್ಕೆ ಪಡೆಯುವಂತೆ ಪರಿಪರಿಯಾಗಿ ವಿನಂತಿಸಿಕೊಂಡರೂ ಯೋಗಿಯ ಕೋಪ ತಣಿಯಲಿಲ್ಲ. ಮನಸ್ಸು ಕರಗಲಿಲ್ಲ. ಥರಥರ ನಡುಗುತ್ತಾ ಕ್ಷಮೆ ಯಾಚನೆ ಮಾಡಿದ ರೈತನ ಬಗ್ಗೆ ಯೋಗಿಗೆ ಕರುಣೆಯೇ ಹುಟ್ಟಲಿಲ್ಲ. ಆತ ಮತ್ತೆ ತನ್ನ ಕಣ್ಣನ್ನು ಮುಚ್ಚಿ ಧ್ಯಾನಸ್ಥನಾದ. ತನ್ನ ವಿನಮ್ರ ನುಡಿಗೆ ಬೆಲೆಯೇ ದೊರೆಯದಾದಾಗ ರೈತ ಅನಿವಾರ್ಯತೆಯಿಂದ ತನ್ನ ಕಾಲನ್ನು ಮುಂದಕ್ಕೆ ಇಟ್ಟ. ಏನಾಶ್ಚರ್ಯ..!? ಒಂದೊಂದೇ ಅಡಿ ಮುಂದಕ್ಕೆ ಹೆಜ್ಜೆ ಇಡುತ್ತಿದ್ದಂತೆ ಆತನಿಗೆ ನಡೆಯಲು ಸಾಧ್ಯವಾಯಿತು…!!
ತಪೋನಿರತ ಯೋಗಿಯ ಶಾಪ ಕರ್ಮಯೋಗಿಯನ್ನು ತಟ್ಟಿರಲಿಲ್ಲ..!! ಕೋಪ ಆತನನ್ನು ಸೋಕಿರಲಿಲ್ಲ. ರೈತನ ಕಾಯಕ ನಿಷ್ಠೆಗೆ ಶಾಪದ ತಾಪವೂ ತಣ್ಣಗಾಗಿ ಹೋಗಿತ್ತು.ಆತ ಬಹಳ ಸಮಾಧಾನದ ನಿಟ್ಟುಸಿರು ಬಿಡುತ್ತಾ ಸರಾಗವಾಗಿ ನಡೆಯುತ್ತಾ ಮನೆಯತ್ತ ನಡೆದ.
        ಇತ್ತ ತಪಸ್ವಿ ತೀವ್ರವಾದ ತಪಸ್ಸನ್ನಾಚರಿಸಿದ. ಆತನ ತಪಸ್ಸಿಗೆ ಮೆಚ್ಚಿ ದೇವರು ಒಂದು ದಿನ ಪ್ರತ್ಯಕ್ಷನಾದ. ತಪಸ್ವಿ ಕಣ್ತೆರೆದು ಎದುರಿಗೆ ನಿಂತ ಪರಮಾತ್ಮನನ್ನು ಭಕ್ತಿಯಿಂದ ನಮಸ್ಕರಿಸಿ, ತನಗೆ ವರವನ್ನು ನೀಡುವಂತೆ ಬೇಡಿಕೊಂಡ. ಸರ್ವಪರಿಪಾಲಕನಾದ ಭಗವಂತ ಮುನಿಗೆ ವರವನ್ನು ನೀಡುವ ಬದಲು ರೈತನೊಂದಿಗೆ ನಿರ್ದಯದಿಂದ ವರ್ತಿಸಿದ ರೀತಿಯನ್ನು ಜ್ಞಾಪಿಸಿ, ಸ್ವವಿಮರ್ಶೆಗೈಯುವಂತೆ ತಿಳಿಸಿಕೊಟ್ಟ. ಜೊತೆಗೆ ರೈತ ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಕರ್ಮಯೋಗವೂ ಮುಕ್ತಿಗೊಂದು ದಾರಿಯೆಂದು ಅರ್ಥೈಸಿ , ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಂಡು ರೈತನಂತೆ ಅರ್ಥಪೂರ್ಣ ಬದುಕನ್ನು ಕಳೆಯಲು ಸೂಚಿಸಿದ. ಯೋಗಿಗೆ ತನ್ನ ತಪ್ಪಿನ ಅರಿವಾಯಿತು. ಅಂದಿನಿಂದ ಕೋಪವನ್ನು ತ್ಯಜಿಸಿ ತಾಳ್ಮೆಯನ್ನು, ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವ ದೃಢ ಸಂಕಲ್ಪ ತೊಟ್ಟ. ಸತ್ಯಶೀಲನಾದ. ಪ್ರಾಮಾಣಿಕನಾದ.
        ಪ್ರೀತಿಯ ಮಕ್ಕಳೇ, ಅಹಂಕಾರ ಹಾಗೂ ಕೋಪ ಮನುಷ್ಯನನ್ನು ಅಧಃ ಪತನದೆಡೆಗೆ ಕೊಂಡೊಯ್ಯುತ್ತದೆ. ಮಾತ್ರವಲ್ಲ ನಿಶ್ಚಿತ ಗುರಿಯೆಡೆಗಿನ ಆತನ ನಡೆಗೆ ತಡೆಯನ್ನುಂಟು ಮಾಡುತ್ತದೆ. ಅಹಂಕಾರಿಯಾದವನಿಗೆ ತನ್ನ ಶ್ರೇಷ್ಠತೆಯ ಕುರಿತು ಗರ್ವವಿರುವುದೇ ವಿನಃ ಇತರರ ವ್ಯಕ್ತಿತ್ವದ ಬಗ್ಗೆ ಗೌರವವಿರುವುದಿಲ್ಲ. ಅಹಂಕಾರಿಯಾದವನ ಜ್ಞಾನವು ಕೋಪದ ಮುಸುಕಿನೊಳಗೆ ಅವಿತು ಮಬ್ಬಾಗಲಾರಂಭಿಸುತ್ತದೆ. ಇಂತಹ ಜ್ಞಾನದಿಂದ ಲೋಕಹಿತವು ಲಭಿಸದು. ಸ್ವಾರ್ಥತೆಯ ಪಂಜರದಿ ಬಂಧಿಯಾಗಿ ಮನಸ್ಸಿನಲ್ಲಿ ತಾಳ್ಮೆ , ಸಹನೆಗಳು ಮರೆಯಾಗಿ ಬಿಡುತ್ತವೆ. ನಾವು ಪ್ರತಿದಿನ ಹಲವಾರು ಸಜ್ಜನರನ್ನು ಭೇಟಿಯಾಗುತ್ತಿರುತ್ತೇವೆ. ನಮ್ಮೆದುರಿನ ವ್ಯಕ್ತಿಯನ್ನಾಗಲೀ, ಆತನ ವ್ಯಕ್ತಿತ್ವವನ್ನಾಗಲೀ ಸಾಮಾಜಿಕ ಸ್ತರ, ಆರ್ಥಿಕ ಸ್ಥಾನಮಾನದ ಅಳತೆಗೋಲಿನಲ್ಲಿ ಅಳೆಯದೆ ಗುಣವನ್ನು ಮಾನದಂಡವಾಗಿಸಿ ತೀರ್ಮಾನಿಸಬೇಕಾಗಿದೆ. ಮಕ್ಕಳಲ್ಲಿ , ವಯಸ್ಕರಲ್ಲಿ ಸದ್ಗುಣಗಳು ಮೊಸರಿನೊಳಗಣ ನವನೀತದಂತೆ ಅವಿತಿರುತ್ತದೆ. ಸೂಕ್ತವಾದ ಕಡೆಗೋಲನ್ನು ಬಳಸಿ ಈ ನವನೀತವನ್ನು ಹೊರತೆಗೆದು ಸಮಾಜೋಪಯೋಗಿಯಾಗಿಸುವುದು ನಿಜವಾದ ಜ್ಞಾನಿಯ ಲಕ್ಷಣ. ಅಂಗುಲಿಮಾಲನಂತಹ ಕ್ರೂರ ವ್ಯಕ್ತಿಯನ್ನು ಬುದ್ಧ ಪರಿವರ್ತನೆಗೊಳಿಸಿರುವುದು ಪ್ರತಿಯೊಬ್ಬ ವ್ಯಕ್ತಿಯೊಳಗೂ ಉತ್ತಮತೆ ಅವಿತುಕೊಂಡಿದೆ ಎಂಬುದಕ್ಕೆ ಉತ್ತಮ ನಿದರ್ಶನ .
         'ನಾನೆಲ್ಲಾ ತಿಳಿದಿರುವೆ' ಎಂಬ ಅಹಂಭಾವ ವ್ಯಕ್ತಿಯನ್ನು ಇತರರಿಂದ ವಿಮುಖರನ್ನಾಗಿಸುತ್ತದೆ. ಆಲಿಸುವ ಕೌಶಲವನ್ನು ಕಡಿಮೆಗೊಳಿಸುತ್ತದೆ. ಹೊಸ ವಿಚಾರಗಳನ್ನು ಅರಗಿಸಿಕೊಂಡು ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಮನಃಸ್ಥಿತಿ ಇಲ್ಲವಾಗುತ್ತದೆ. ಅಹಮಿಕೆಯನ್ನು ತೊಡೆದಾಗ ಸುತ್ತಣ ಜಗವೆಲ್ಲಾ ಸುಂದರವೆನಿಸುತ್ತದೆ. ಎದುರಿರೋ ವ್ಯಕ್ತಿಯ ಮಾತುಗಳು ವಿಮರ್ಶಾತ್ಮಕ ಚಿಂತನೆಗೆ ಎಡೆಮಾಡಿಕೊಡುತ್ತದೆ. ಇತರರ ತಪ್ಪುಗಳು ಕ್ಷುಲ್ಲಕವೆನಿಸುತ್ತವೆ. ಹಾಗಾಗಿ ಅಹಂಕಾರದ ಮುಖವಾಡದಿ ಬದುಕುತ್ತಾ ಜೀವನವನ್ನು ಅರ್ಥಹೀನವೆನಿಸಿಕೊಳ್ಳದಿರೋಣ. ಪ್ರತಿಷ್ಠೆಗಾಗಿ ಬದುಕುವುದೇ ಜೀವನ ಎಂದುಕೊಳ್ಳದಿರೋಣ.
       ಈ ಕತೆಯಿಂದ ನಾವು ಕಂಡುಕೊಳ್ಳಬಹುದಾದ ಇನ್ನೊಂದು ಅಂಶವೆಂದರೆ ಕರ್ತವ್ಯ ನಿಷ್ಠೆ. ನಾವು ನಮ್ಮ ಪಾಲಿಗೊದಗಿ ಬಂದ ಕೆಲಸ ಎಷ್ಟೇ ಚಿಕ್ಕದಿರಲಿ ಇಲ್ಲವೇ ದೊಡ್ಡದಿರಲಿ ಅವುಗಳನ್ನು ಶ್ರದ್ಧೆಯಿಂದ ಮಾಡಿದಲ್ಲಿ ಭಗವಂತನ ಕೃಪಾಕಟಾಕ್ಷ ಖಂಡಿತ ಇದ್ದೇ ಇರುತ್ತದೆ. ನಿರಹಂಕಾರಿಯ ಕರ್ತವ್ಯನಿಷ್ಠೆ ಆತನ ಬಾಳನ್ನು ಬೆಳಗಿಸುವುದು. ಕಷ್ಟದಲ್ಲಿ ಕಾಯುವುದು. ಮನುಕುಲಕೆ ಉದಾಹರಣೆಯಾಗಿ ನಿಲ್ಲುವುದು.. ಆದ್ದರಿಂದಲೇ ಕೆಸರ ಮೆತ್ತಿಕೊಂಡು ಹೊಲದಲ್ಲಿ ದುಡಿಯೋ ರೈತ ಸಾರ್ವಕಾಲಿಕ ಮನ್ನಣೆಗೆ ಪಾತ್ರನಾಗಿದ್ದಾನೆ. ದೇಶ ಕಾಯೋ ಯೋಧ ಪ್ರತೀ ದೇಶಭಕ್ತನ ಹೃದಯದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಸ್ಪೂರ್ತಿಯ ಸೆಲೆ ಸ್ವಾಮಿ ವಿವೇಕಾನಂದರ, "ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ. ಇಡೀ ಪ್ರಪಂಚ ನಿನ್ನೆದುರು ಅಯುಧವನ್ನು ಕೆಳಗಿಡುತ್ತದೆ" ಎಂಬ ವಿವೇಕವಾಣಿಯನ್ನು ಅಳವಡಿಸಿಕೊಂಡು ಬಾಳನ್ನು ಆದರ್ಶವಾಗಿಸಿಕೊಳ್ಳೋಣ.
..............................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************


Ads on article

Advertise in articles 1

advertising articles 2

Advertise under the article