
ಪ್ರತಿಭಾನ್ವಿತ ಬಾಲಕ : ವಿಶೃತ್ ಅಳವಂಡಿ
Friday, April 29, 2022
Edit
ಹುಟ್ಟಿದ ಪ್ರತೀ ಮಗುವಿನಲ್ಲೂ ಅದಮ್ಯ ಶಕ್ತಿ ಅಡಗಿದೆ. ಕಣ್ಣಿಗೆ ಕಾಣುವ ಪ್ರತಿಯೊಂದನ್ನು ಗ್ರಹಿಸಿ ಪ್ರಕಟಿಸುವ ಸಾಮರ್ಥ್ಯವೂ ಮಗುವಿಗಿರುತ್ತದೆ. ಮಾತು ಆಡುವ ಮುಂಚೆ ಚಿತ್ರದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತದೆ.. ಗೋಡೆ - ನೆಲ - ಸಿಕ್ಕಿದಲ್ಲಿ ತನಗೆ ತೋಚಿದನ್ನು ಗೀಚಿ ಚಿತ್ರಿಸುತ್ತದೆ... ಇದು ಹೃದಯದ ಭಾಷೆ.... ಚಿತ್ರ ಭಾಷೆಯೂ ಹೌದು...
ಗೀಚಿ - ಗೀಚಿ ಬೆಳೆವ ಮಗು ಮನೋಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತದೆ. ಹೀಗೆ ಬೆಳೆದು ಬಾಲ್ಯದಿಂದಲೇ ತಾಳ್ಮೆ , ಸಹನೆಯನ್ನು ಮೈಗೂಡಿಸಿ ಚಿತ್ರರಚನೆಯತ್ತ ಮುಖ ಮಾಡುವ ತುಂಬಾ ಮಕ್ಕಳನ್ನು ಕಾಣುತ್ತೇವೆ. ಅಂತಹ ಮಕ್ಕಳಲ್ಲಿ ವಿಶೃತ್ ಅಳವಂಡಿ ಒಬ್ಬರು. ಪ್ರಸ್ತುತ ಬೆಂಗಳೂರಿನ ಹೆಬ್ಬಾಳದಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಇಲ್ಲಿ 10ನೇ ತರಗತಿಯ ವಿದ್ಯಾರ್ಥಿ.
ವಿಶೃತ್ ನಿಗೆ ಚಿತ್ರಕಲೆಯಲ್ಲಿ ಬಾಲ್ಯದಿಂದಲೇ ವಿಶೇಷವಾದ ಆಸಕ್ತಿ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ವಾಸ್ತವ್ಯವಿದ್ದಾಗ ಚಿತ್ರಕಲಾ ಆಸಕ್ತಿಯ ಪರಿಚಯವಾಯಿತು. 3ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ ಸಿಂಧನೂರಿನ ಚಿತ್ರಕಲಾ ಶಿಕ್ಷಕರಾದ ಶ್ರೀನಿವಾಸ ಬಂಡಿ ಇವರ ಮಾರ್ಗದರ್ಶನ ದೊರೆಯಿತು. ಪ್ರಾಥಮಿಕ ಹಂತದ ಕಲಾಭ್ಯಾಸ ಇನ್ನೂ ಹೆಚ್ಚಿನ ಆಸಕ್ತಿಯನ್ನು ಕೆರಳಿಸುವಲ್ಲಿ ಪೂರಕವಾಯಿತು.
ವಿಶೃತ್ ನ ತಂದೆ ವಿಶ್ವನಾಥ ಅಳವಂಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿದ್ದಾರೆ. ತಾಯಿ ಕವಿತಾ ವಿಶ್ವನಾಥ ಇವರು ಭರತನಾಟ್ಯ ಕಲಾವಿದೆ. ಕಲೆಯ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದ ಕುಟುಂಬ ಸಂಸ್ಥೆಯಲ್ಲಿ ನಿರ್ವಹಿಸುವ ಉನ್ನತ ಹುದ್ದೆಯ ಕಾರಣ ವಿವಿಧ ಭಾಗದಲ್ಲಿ ವರ್ಗವಾಗಿ ಹೋಗುವ ಅವಕಾಶ ಅನಿವಾರ್ಯವಾಗಿತ್ತು. ಆದರೂ ವಿಶೃತ್ ನ ಕಲಾ ಪಯಣಕ್ಕೆ ಏನೂ ತೊಂದರೆಯಾಗಲಿಲ್ಲ. ನಿರ್ದಿಷ್ಟ ಗುರುಗಳನ್ನು , ಕಲಾ ತರಗತಿಯನ್ನು ಕಾಣದೆ ಸ್ವ- ಆಸಕ್ತಿ , ಸ್ವ - ನಿಷ್ಠೆಯಿಂದ ಚಿತ್ರಕಲಾ ಅಭ್ಯಾಸದಲ್ಲಿ ತೊಡಗಿಕೊಳ್ಳುವ ಅವಕಾಶ ಸೃಷ್ಟಿಯಾಯಿತು.
ದೇಶದ ವಿವಿಧ ರಾಜ್ಯ - ವಿವಿಧ ಜಿಲ್ಲೆಗಳ ಜನರ ಸಂಸ್ಕೃತಿ - ಸಂಸ್ಕಾರಗಳು , ಕಲೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಪ್ರಭಾವವನ್ನು ಬೀರಿತು. ತಂದೆ ಮತ್ತು ತಾಯಿಯ ವಿಶೇಷ ಪ್ರೋತ್ಸಾಹ ತನ್ನ ಬಿಡುವಿನ ವೇಳೆಯನ್ನು ಕಲಾಕೃತಿಗಳ ರಚನೆಯತ್ತ ಗಮನಹರಿಸಲು ಸಹಕಾರಿಯಾಯಿತು.
ಪೆನ್ಸಿಲ್ ಶೇಡಿಂಗ್ , ಚಾರ್ಕೋಲ್ ಶೇಡಿಂಗ್ , ವಾಟರ್ ಕಲರ್ , ಅಕ್ರ್ಯಾಲಿಕ್ ಕಲರ್ ಮೂಲಕ ಕಲಾಕೃತಿಗಳನ್ನು ರಚಿಸುವುದು ಮೆಚ್ಚಿನ ಹವ್ಯಾಸವಾಯಿತು. ಅಂತರ್ಜಾಲದ ಕೆಲವೊಂದು ತಾಂತ್ರಿಕತೆ , ಶೈಲಿ , ಕೌಶಲ್ಯವನ್ನು ಅಳವಡಿಸಿಕೊಂಡು ನಿರಂತರ ಅಭ್ಯಾಸವು ಚಿತ್ರಕಲೆಯಲ್ಲಿ ಹಿಡಿತ ಸಾಧಿಸಲು ಕಾರಣವಾಯಿತು.
ತಾಳ್ಮೆ , ಏಕಾಗ್ರತೆ , ಆಸಕ್ತಿ , ಕಲೆಯ ಬಗೆಗಿರುವ ತುಡಿತ ತನ್ನಲ್ಲಿ ಅದಮ್ಯ ಶಕ್ತಿಯನ್ನು ತುಂಬಿಕೊಟ್ಟಿತು. ಬೆಳೆಯುವ ಮಕ್ಕಳಿಗೆ ಗುರಿತಲುಪುವ ಸಾಧಕರಿಗೆ ಇದಕ್ಕಿಂತ ಬೇರೆ ಏನು ಬೇಕು....? ಮೂಲ ಕೌಶಲ್ಯವನ್ನು ಬಲಪಡಿಸಲು ಸ್ವ- ಕಲಿಕೆ ಸಹಕಾರಿಯಾಯಿತು.
ಛಾಯಾ ಪ್ರಧಾನವಾದ ಭಾವಚಿತ್ರಗಳು , ಭಾವನೆಗಳಿಗೆ ಒತ್ತುಕೊಟ್ಟು ರಚಿತವಾದ ಚಿತ್ರಗಳು ತುಂಬಾ ಸೊಗಸಾಗಿದೆ. ಪೆನ್ನಿನ ಮೂಲಕ ರಚಿತವಾದ ಚಿತ್ರವು ತುಂಬಾ ಸುಂದರವಾಗಿದೆ. ಜಲವರ್ಣದಲ್ಲಿ ರಚಿತವಾದ ಬುದ್ಧನ ಚಿತ್ರ , ಕಥಕಳಿಯ ವರ್ಣ ಚಿತ್ರವು ನೋಡುಗರನ್ನು ತುಂಬಾ ಆಕರ್ಷಿಸುತ್ತದೆ. ಟ್ರಾನ್ಸ್ಪರೆಂಟ್ ಮೆಥಡ್ ಮತ್ತು ಅಪೆಕ್ ಮೆಥಡ್ ಎರಡರಲ್ಲೂ ಹಿಡಿತ ಹೊಂದಿರುವ ವಿಶ್ರುತನಿಗೆ ಬೆಳೆಯುವ ಸಾಗುವ ದಾರಿ ಸುಗಮವಾಗಿದೆ.
ಈಗಷ್ಟೇ ಹತ್ತನೇ ತರಗತಿಯನ್ನು ಪೂರೈಸುತ್ತಿರುವ ವಿಶೃತ್ ಭವಿಷ್ಯದ ಯಾವುದೇ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಮನಸ್ಥಿತಿಯವರು. ತಾನು ಬಯಸುವ ಯಾವುದೇ ಕ್ಷೇತ್ರಗಳಲ್ಲಿ ಕಲಾತ್ಮಕ ಪ್ರೇರಣೆಯನ್ನುಂಟುಮಾಡಿ ವಿಭಿನ್ನತೆಯನ್ನು ಉಂಟುಮಾಡುವಲ್ಲಿ ಯಾವುದೇ ಸಂದೇಹಗಳಿಲ್ಲ. ಇಂತಹ ಪ್ರತಿಭೆಗಳಲ್ಲಿ ಸೃಜನಾತ್ಮಕ ಮನೋಭಾವನೆ ಕ್ರಿಯಾಶೀಲವಾಗಿರುತ್ತದೆ.
ಶೈಕ್ಷಣಿಕ ವ್ಯವಸ್ಥೆಯೊಳಗೆ ಮಕ್ಕಳು - ಕಲೆ ,
ಸಾಹಿತ್ಯ , ಸಂಗೀತ , ನೃತ್ಯ , ನಾಟಕಗಳಲ್ಲಿ ತೊಡಗಿಸಿಕೊಳ್ಳುವಂತಾದರೆ ಪ್ರತಿ ವಿದ್ಯಾರ್ಥಿಗಳೂ ಸೃಜನಶೀಲರಾಗಿ ಬೆಳೆಯುತ್ತಾರೆ. ನಾಳೆ ನಾಡಿಗೆ ದೊಡ್ಡ ಕೊಡುಗೆಯಾಗುತ್ತಾರೆ. ವಿಶೃತ್ ನಿಗೆ ಹಾಗೂ ಇಲ್ಲಿಂದ ಸ್ಫೂರ್ತಿ ಪಡೆದುಕೊಳ್ಳುವ ಎಲ್ಲಾ ಮಕ್ಕಳಿಗೂ ಮಕ್ಕಳ ಜಗಲಿಯ ಪರವಾಗಿ ಶುಭ ಹಾರೈಕೆಗಳು.
................................ ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣ ಕನ್ನಡ ಜಿಲ್ಲೆ
*******************************************