-->
ಅಕ್ಕನ ಪತ್ರ - 22ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 22ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 22ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


       ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ...... 
   


        ನಮಸ್ತೇ ಅಕ್ಕಾ , ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಓದಿದೆನು. ಹೌದು ಅಕ್ಕಾ ನೀವು ಹೇಳಿದಂತೆ ವಸ್ತು, ವ್ಯಕ್ತಿ, ಸಂಧರ್ಭ, ಅವಕಾಶಗಳು ಬಳಿಯಲ್ಲಿರುವಾಗ ಅವುಗಳ ಮಹತ್ವ ಗೊತ್ತಾಗುವುದಿಲ್ಲ. ಕಳೆದುಕೊಂಡಗಲೇ ಅರಿವಾಗುವುದು. ಆದರೆ ಇದು ಗೊತ್ತಾಗದವರೂ ನಮ್ಮ ಮಧ್ಯೆ ಇರುತ್ತಾರೆ ಅಲ್ಲವೇ...? ಇಲ್ಲದ್ದಿದ್ದರೆ ದೊಡ್ಡವರಾದ ಮೇಲೆ ಅನಾಥಾಶ್ರಮದಲ್ಲಿ ತಂದೆ ತಾಯಿಯವರನ್ನು ಬಿಡುತ್ತಿರಲಿಲ್ಲ. ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ ತಾಯಿಯವರು. ನಮ್ಮನ್ನು ಬೆಳೆಸಲು ಅವರು ಕಷ್ಟ ಪಟ್ಟು ದುಡಿಯುತ್ತಾರೆ. ಅಮ್ಮಂದಿರು ಎಷ್ಟೇ ಕೆಲಸವಿರಲಿ ತಮ್ಮ ಮಕ್ಕಳಿಗೆ ಹಾಗೂ ಹಿರಿಯರಿಗೆ ಬೇಕು ಬೇಕಾದ ಹಾಗೆ ಎಲ್ಲವನ್ನೂ ಮಾಡಿಕೊಡುತ್ತಾರೆ. ಅವರ ಆಯಾಸವನ್ನು ತೋರಿಸದೆ ಮಕ್ಕಳಿಗೆ ಬೇಕಾದ ಹಾಗೇ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬುತ್ತಿ ಎಲ್ಲವನ್ನೂ ಮಾಡಿಕೊಡುತ್ತಾರೆ. ಅದನ್ನು ತಿಂದ ನೆನಪು ಇಲ್ಲದಂತೆ ಸರಿಯಾಗಿ ನೋಡಿಕೊಳ್ಳದೆ ಊಟ ಹಾಕದೆ ವೃದ್ಧಾಶ್ರಮಕ್ಕೆ ತಳ್ಳುವ ಮಕ್ಕಳ ಅವಸ್ಥೆ ಯಾಕಾದರೂ ಹೀಗಾಯ್ತೋ, ಇನ್ನಾದರೂ ತಂದೆ ತಾಯಿ ಯವರನ್ನು ಚೆನ್ನಾಗಿ ನೋಡಿಕೊಳ್ಳುವ ಮಕ್ಕಳು ಜನಿಸಲಿ ಎಂಬುದೇ ನನ್ನ ಪ್ರಾರ್ಥನೆ. ಅವರ ಜೀವನ ಮಕ್ಕಳೊಂದಿಗೆ ಸಂತೋಷದಿಂದ ಕಳೆಯುವಂತಾಗಲಿ. ತಾಯಿ , ತಂದೆಯವರನ್ನು ಆಶ್ರಮಕ್ಕೆ ಬಿಟ್ಟು ದೊಡ್ಡ ಮನೆಯಲ್ಲಿ ವಾಸಿಸುವುದಕ್ಕಿಂತ ಚಿಕ್ಕ ಗುಡಿಸಲಲ್ಲಿ ತಂದೆ ತಾಯಿಯವರನ್ನು ಚೆನ್ನಾಗಿ ನೋಡಿಕೊಂಡು ವಾಸಿಸುವುದೇ ಒಳ್ಳೆಯದು. ಒಳ್ಳೆಯ ವಿಷಯವನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಿ ಕೊಡುವುದಕ್ಕೆ ಧನ್ಯವಾದಗಳು ಅಕ್ಕ.
......................................... ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
       ನಮಸ್ತೆ ಅಕ್ಕಾ ಹೇಗಿದ್ದೀರಿ... ನಾನು ನಿಭಾ. ನೀವು ಬರೆದ ಪತ್ರ ಓದಿದೆ. ತುಂಬಾ ಚೆನ್ನಾಗಿದೆ. ಹೌದು ಇತ್ತೀಚಿನ ದಿನಗಳಲ್ಲಿ ಆಶ್ರಮಗಳೇ ಹೆಚ್ಚಾಗಿದೆ. ಯಾಕೆಂದರೆ ಮಕ್ಕಳಿಗೆ ಚಿಕ್ಕ ವಯಸಿನಲ್ಲಿ ಮಾತ್ರ ತಮ್ಮ ತಂದೆ ತಾಯಿಯವರ ಆಶ್ರಯಬೇಕು. ದೊಡ್ಡದಾದ ಮೇಲೆ ಅವರಿಗೆ ಕೆಲಸ, ಮದುವೆ, ಮಕ್ಕಳು ಆದ ಮೇಲೆ ಅವರು ತಮ್ಮ ತಂದೆ-ತಾಯಿಯವರನ್ನು ಬೇರೆಯೇ ಇಡುತ್ತಾರೆ. ಅಕ್ಕಾ ನನಗೂ ಅಜ್ಜ ಇಲ್ಲ. ಅಜ್ಜಿ ಇದ್ದಾರೆ. ನನಗೆ ಅವರೇ ಸ್ಫೂರ್ತಿ ಯಾಕೆಂದ್ರೆ ನನಗೆ ಅಪ್ಪ ಅಮ್ಮನಿಗಿಂತ ಅಜ್ಜಿಯೇ ಎಲ್ಲಾ. ನನಗೆ ಅಜ್ಜಿ ಅವರ ಬಾಲ್ಯದ ಜೀವನ ಎಲ್ಲವನ್ನು ರಾತ್ರಿ ಮಲಗುವಾಗ ಮೆಲುಕು ಹಾಕುತ್ತಾರೆ. ಮತ್ತೆ ಕಥೆಗಳನ್ನು ಹೇಳುತ್ತಾರೆ. ನನಗೆ ಅಜ್ಜಿಎಂದರೆ ತುಂಬಾ ಪ್ರೀತಿ. ಇತ್ತೀಚಿನ ದಿನಗಳಲ್ಲಿ ಅಜ್ಜ ಅಜ್ಜಿಯವರನ್ನು ಕಂಡಾಗ ಹಿರಿಯರನ್ನು ಕಂಡಾಗ ಗೌರವ ಕೊಡುವುದೇ ಕಡಿಮೆ. ಯಾಕೆಂದರೆ ಮಕ್ಕಳಿಗೆ ಮನೆಯಲ್ಲಿರುವ ಸಂಸ್ಕಾರ. ನೀವು ಬರೆದ ಲೇಖನ ತುಂಬಾ ಅರ್ಥಪೂರ್ಣ ವಾಗಿದೆ ಅಕ್ಕಾ. ಈ ಪತ್ರವನ್ನು ಓದಿದ ಮಕ್ಕಳಿಗೆ ಅಜ್ಜ ಅಜ್ಜಿ ಅಪ್ಪ ಅಮ್ಮನ ಮಹತ್ವ ತಿಳಿಯಲಿ, ಎಂದು ಹೇಳುತ್ತಾ ನನ್ನ ಬರವಣಿಗೆಗೆ ಪೂರ್ಣವಿರಾಮ ಹಾಕುತ್ತೇನೆ ಅಕ್ಕಾ.
...................................................... ನಿಭಾ 
9ನೇ ತರಗತಿ 
ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು, 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************ಪ್ರೀತಿಯ ಅಕ್ಕನಿಗೆ ನನ್ನ ನಮನಗಳು
ನಿಮ್ಮ ಪತ್ರ ತುಂಬಾ ಚೆನ್ನಾಗಿತ್ತು. ನನ್ನ ಮನೆಯಲ್ಲಿ  ಅಜ್ಜಿ  ಇದ್ದಾರೆ ಅಜ್ಜ ಇಲ್ಲ . ನನಗೆ   ಅಜ್ಜನನ್ನು  ನೋಡಬೇಕೆಂದು  ತುಂಬಾ ಆಸೆ ಇತ್ತು.  ಆದರೆ ಅವರು ಈಗ ಇಲ್ಲ. ನನಗೆ  ಒಬ್ಬರು ಅನಾಥಾಶ್ರಮದ ಬಗ್ಗೆ ಕಥೆ ಹೇಳಿದ್ದರು. ಅದನ್ನು ಕೇಳಿದಾಗ ತುಂಬಾ  ಬೇಸರವಾಯಿತು. ನಮ್ಮ ಕುಟುಂಬದಲ್ಲಿ ಯಾರೂ ಹೀಗೆ ಮಾಡಲಿಲ್ಲ. ನನ್ನ ಅಪ್ಪ ಅನಾಥಾಶ್ರಮಕ್ಕೆ ಹೋಗಿ ಚಿತ್ರ ಮಾಡಿದ್ದನ್ನು ನನ್ನತ್ರ ಹೇಳಿದ್ದಾರೆ. ನಿಮ್ಮ ಮುಂದಿನ ಪತ್ರಕ್ಕಾಗಿ  ಕಾಯುತ್ತೇನೆ. ಧನ್ಯವಾದಗಳು ಅಕ್ಕಾ...

......................................... ನಿನಾದ್  ಕೈರಂಗಳ
5 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
***************************************ಮಕ್ಕಳ ಜಗಲಿ... ಅಕ್ಕನ ಪತ್ರ---22
ಪ್ರೀತಿಯ ಅಕ್ಕ...... ನಾನು ಲಹರಿ..... ರಜೆಯಲ್ಲಿ ಅಜ್ಜಿ-ಅಜ್ಜರೊಂದಿಗೆ ನೆಂಟರ ಮನೆಗೆ ಹೋಗಿದ್ದೆ.... ಅಜ್ಜನೊಂದಿಗೆ ಸುತ್ತಾಡುವುದು ನನಗೆ ತುಂಬಾ ಇಷ್ಟ.... ಅಪ್ಪ-ಅಮ್ಮ ನಿಗಿಂತ ನಾನು ಹೆಚ್ಚು ಅಜ್ಜ-ಅಜ್ಜಿಯ ರನ್ನು ಇಷ್ಟಪಡುತ್ತೇನೆ.... ನಿಮ್ಮ ಪತ್ರ ಓದುವಾಗ ಹೀಗೂ ಇದೆಯಾ ಎಂದು ನನಗೆ ತುಂಬಾ ಬೇಸರವೆನಿಸಿತು..... ಮನುಷ್ಯತ್ವ ಎಲ್ಲಿ ಕಳೆದು ಹೋಯಿತು ಎನ್ನುವ ಚಿಂತೆಯಾಯಿತು.... ಶಿಕ್ಷಣ ಮುಂದುವರೆದಷ್ಟು ಅನಾಗರಿಕತೆಯೂ ಹೆಚ್ಚಾಗುತ್ತಿದೆಯೇನೋ ಎಂದೆನಿಸಿತು..... ದೇವರು ಅವರೆಲ್ಲರಿಗೂ ಆಯುರಾರೋಗ್ಯವನ್ನು  ಕೊಟ್ಟು ಕಾಪಾಡಲಿ ಎಂದು ಬೇಡುವೆನು... ಭವಿಷ್ಯದಲ್ಲಿ ಅಂತಹ ಎಲ್ಲಾ ಅಜ್ಜ-ಅಜ್ಜಿಯರಿಗೆ ನೆರವಾಗುವಂತಹ ಮನಸ್ಸು, ಶಕ್ತಿ ನನ್ನನ್ನು ಸೇರಿಸಿ ಮುಂದಿನ ಪೀಳಿಗೆಯ ಮಕ್ಕಳಿಗೆ ದೇವರು ಕೊಡಲಿ ಎಂದು ಬೇಡುವೆನು. ನಿಮ್ಮ ಪತ್ರ ಓದಿ .... ಈ ಪತ್ರಕ್ಕೆ ಉತ್ತರ ಬರೆಯಲೇಬೇಕೆಂಬ ಆಸೆಯಿಂದ ಬರೆದಿರುವೆನು.... ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುವೆನು.. ಇಂತಿ ನಿಮ್ಮ ಪ್ರೀತಿಯ

................................................ ಲಹರಿ ಜಿ.ಕೆ.
7ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************          ಪ್ರೀತಿಯ ಅಕ್ಕನಿಗೆ ಸಿಂಚನಾ ಶೆಟ್ಟಿ ಮಾಡುವ ನಮಸ್ಕಾರಗಳು.... ನೀವು ಬರೆದ ಪತ್ರ ಓದಿದ ನಂತರ ನನಗೆ ತುಂಬಾ ಇಷ್ಟವಾಯಿತು. ನಾನು ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನಾವು ತಾಯಿಯನ್ನು ಮರೆಯಬಾರದು. ಅವರ ಕಷ್ಟಗಳನ್ನು ತಿಳಿದು ಪ್ರೀತಿ ತೋರಿಸಬೇಕು. ತಾಯಿಯ ಪ್ರೀತಿಯನ್ನು ಮರೆಯಬಾರದು. ಅವಳನ್ನು ದೂರ ಮಾಡಬಾರದು. ನನ್ನ ತಂದೆ- ತಾಯಿಯನ್ನು ನಾನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ.. ಧನ್ಯವಾದಗಳು ಅಕ್ಕಾ....
................... ಸಿಂಚನಾ ಶೆಟ್ಟಿ 
4ನೇ ತರಗತಿ ದ.ಕ.ಜಿ.ಪ. ಪ್ರಾಥಮಿಕ ಶಾಲೆ, ಸೇಡಿಗುಳಿ ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article