-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 43

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 43

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 43 
         
      
                   ಅದೊಂದು ಸಾವಿರಾರು ಜನ ಭೇಟಿ ಮಾಡುವ ಜನಪ್ರಿಯ ಸಮುದ್ರತೀರ. ಅಲ್ಲೊಂದು ಬೃಹತ್ತಾದ ಹಡಗು. ಸಕಲ ಐಷರಾಮಿ ಸೌಲಭ್ಯಗಳು, ಕಣ್ಣು ಕುಕ್ಕಿಸುವ ಬಣ್ಣ , ಜಗಮಗಿಸುವ ಬೆಳಕಿನ ವ್ಯವಸ್ಥೆ , ನೂರಾರು ಅಡಿ ಎತ್ತರದ ಅದ್ಭುತ ನೋಟದ ಹಡಗು. ಅದರ ಆಕರ್ಷಣೀಯ ನೋಟವನ್ನು ನೋಡುವುದೇ ಚಂದ.
         ನೋಡಿದವರೆಲ್ಲ ವಿಸ್ಮಯ ಪಟ್ಟು "ವಾವ್ ... ಅದ್ಭುತ ಹಡಗು" ಎನ್ನುತ್ತಿದ್ದರು. ನಾನು ಕೂಡಾ "ವಾವ್..!" ಅನ್ನುವಷ್ಟರಲ್ಲಿ ನನ್ನ ಕಿರಿಯ ಮಗ "ಈ ಹಡಗು ಇಲ್ಲಿಯೇ ಏಕೆ ನಿಂತಿದೆ ?. ಇದು ಸಮುದ್ರದ ನೀರಿನ ಮೇಲೆ ಚಲಿಸುವುದಿಲ್ಲವೇ ಅಪ್ಪಾ ?" ಎಂದನು. ನಾನು "ಇಲ್ಲ ಮಗು, ಇದು ಪ್ರದರ್ಶನಕ್ಕೆ ಮಾತ್ರ ಪ್ರಯಾಣಕ್ಕಲ್ಲ" ಎಂದು ಹೇಳಿದೆ. ಆಗ ಅವನು "ಹಾಗಾದರೆ ಇದು ವ್ಯರ್ಥ ಹಡಗು. ಇದು ನೋಡಲು ಸುಂದರವಾಗಿದೆ ಆದರೆ ಅಷ್ಟೊಂದು ಖರ್ಚು ಮಾಡಿ ತಯಾರಿಸಿದ ಅದರ ನಿಜವಾದ ಉದ್ದೇಶ ಸಮುದ್ರದಲ್ಲಿ ಚಲಿಸುವುದಲ್ಲವೇ....? . ಇದು ಊಟಕ್ಕಿಲ್ಲದ ಉಪ್ಪಿನಕಾಯಿ" ಎಂದು ನಕ್ಕನು. ಅವನ ನಗುವಿನ ಉತ್ತರಕ್ಕೆ ಮರು ಉತ್ತರ ಕೊಡಲು ಅಸಮರ್ಥನಾದೆ.
        ಹೌದಲ್ಲವೇ... ಕೆಲವರ ಜೀವನ ಕೂಡಾ ಈ ಹಡಗಿನಂತೆ ಪ್ರದರ್ಶನಕ್ಕೆ ಮಾತ್ರ ಇರುತ್ತದೆ. ಒಣಪ್ರತಿಷ್ಠೆ , ಸ್ಥಾನಮಾನ (ಸ್ಟೇಟಸ್) , ಸ್ವಾರ್ಥ ಭಾವ, ಸಿರಿವಂತಿಕೆ ಪ್ರದರ್ಶನ , ನಾನೇ ಹೀರೋ ಎಂಬ ಗುಂಗಿನಲ್ಲಿ ಎಲ್ಲರನ್ನು ಮೆಚ್ಚಿಸುವ ಭ್ರಮೆಯಲ್ಲಿ ಕೇವಲ ಶೋಫೀಸ್ (ಪ್ರದರ್ಶನ ಗೊಂಬೆ) ಆಗಿ ತನ್ನ ಬದುಕಿನ ನಿಜವಾದ ಉದ್ದೇಶ ಹಾಗೂ ಗುರಿ ಮರೆತು ಉಪಯೋಗ ರಹಿತ ಜೀವನ ನಡೆಸುತ್ತಿದ್ದಾರೆ. ಇದನ್ನು ನೆನೆದಾಗ ಕಬೀರದಾಸರ ದೋಹೆಯೊಂದು ನೆನಪಿಗೆ ಬರುತ್ತದೆ.
      ದೊಡ್ಡವರಾದರೆ ಏನು ಫಲ
      ಖರ್ಜೂರದ ಮರದಂತೆ
     ದಾರಿಗನಿಗೆ ನೆರಳಂತೂ ಇಲ್ಲ
     ಹಣ್ಣೂ ಬಲು ದೂರ... ಕಬೀರಾ |
           ಕೆಲವೊಮ್ಮೆ ಜ್ಞಾನದಲ್ಲಿ , ದುಡ್ಡಿನಲ್ಲಿ, ಪ್ರತಿಭೆಗಳಲ್ಲಿ , ಸೌಲಭ್ಯಗಳಲ್ಲಿ , ಕೆಲಸಗಳಲ್ಲಿ , ಆಸ್ತಿಗಳಲ್ಲಿ , ಸೇವೆಗಳಲ್ಲಿ ನಾವೇ ದೊಡ್ಡವರು ಎಂಬ ಭ್ರಮೆ ಉಂಟಾಗುತ್ತದೆ. ನನಗಿಂತ ಮೇಲೆ ಯಾರೂ ಇಲ್ಲ. ನಾನೇ ದೊಡ್ಡವ ಎಂಬ ಭ್ರಾಂತಿ ಉಂಟಾಗುತ್ತದೆ. ಆದರೆ ಕೇವಲ ಪ್ರದರ್ಶನದಲ್ಲಿ ಮಾತ್ರ ದೊಡ್ಡವರಾದರೆ ಪ್ರಯೋಜನವಿಲ್ಲ. ಗುಣದಲ್ಲೂ, ಅನುಷ್ಠಾನದಲ್ಲೂ ದೊಡ್ಡವರಾಗಬೇಕಾಗಿದೆ. ಖರ್ಜೂರದ ಮರವು ಏರಲಾಗದ ಎತ್ತರಕ್ಕೇರಿದರೂ ನೆರಳ ಬಯಸಿ ಬರುವ ದಾರಿಗನಿಗೆ ಒಂದಿನಿತೂ ನೆರಳು ಕೊಡುವುದಿಲ್ಲ. ಅಗತ್ಯವಿರುವವನಿಗೆ ಅದರ ಹಣ್ಣು ನೋಡಲಷ್ಟೇ ಕಾಣುತ್ತದೆ ಹೊರತು ತಿನ್ನಲು ಕೈಗೆಟಕುವುದಿಲ್ಲ. ಹಾಗಾಗಿ ಕೇವಲ ಪ್ರದರ್ಶನಕ್ಕೆ ಮಾತ್ರ ದೊಡ್ಡವರಾಗುವ ನಾವು ನಮ್ಮಲ್ಲಿರುವ ದೊಡ್ಡತನವನ್ನು ಅಗತ್ಯ ಸಂದರ್ಭದಲ್ಲಿ ಅಗತ್ಯವಿರುವವರಿಗೆ ತೋರಿಸಲೇಬೇಕು. ದೊಡ್ಡತನ ಎಂಬುದು ಮಾನವೀಯ ಗುಣವಾಗಿ ಇರಬೇಕೇ ಹೊರತು ಅವಮಾನವೀಯವಾಗಿ ಇರಬಾರದು. ನಮ್ಮಲ್ಲಿನ ದೊಡ್ಡತನ ಪ್ರದರ್ಶನಕ್ಕೆ ಮಾತ್ರ ಇರದೇ ಪ್ರಾಯೋಗಿಕತೆಗೂ ಇರಬೇಕು. ಅದು ಮಾತಿನ ಕೊಚ್ಚುವಿಕೆಯಲ್ಲಿ (ಜಂಭ ಕೊಚ್ಚು ಕೊಳ್ಳುವಿಕೆ) ಮಾತ್ರ ಇರದೆ ಕೃತಿಯಲ್ಲೂ ಕಂಡು ಬರಬೇಕು. ಊಟಕ್ಕಿಲ್ಲದ ಉಪ್ಪಿನಕಾಯಿ ಆಗಬಾರದು. ದೊಡ್ಡತನವು ಅದರ ನಿಜವಾದ ಉದ್ದೇಶವನ್ನು ಈಡೇರಿಸುವಂತಿರಬೇಕು. ನಮ್ಮಲ್ಲಿನ ದೊಡ್ಡತನ ನಮ್ಮೊಂದಿಗೆ ಸಾಯಬಾರದು. ಅದು ಅವಶ್ಯಕವಾಗಿರುವ ಹತ್ತಾರು ಜನರಿಗೆ ಹಂಚಿ ಹೋದರೆ ಮಾತ್ರ ಸಾರ್ಥಕತೆ ಪಡೆಯುತ್ತದೆ. ಬನ್ನಿ ನಮ್ಮಲ್ಲಿರುವ ಯಾವುದೇ ರೂಪದ ದೊಡ್ಡತನವನ್ನು ಪ್ರದರ್ಶನಕ್ಕೆ ಮಾತ್ರ ಬಳಸದೆ ಪ್ರಯೋಗಕ್ಕೂ ಬಳಸೋಣ. ಜ್ಞಾನವನ್ನು ಹಂಚೋಣ. ಸೌಲಭ್ಯಗಳನ್ನು ನೀಡೋಣ. ಸಂಪತ್ತನ್ನು ಸದ್ವಿನಿಯೋಗಿಸೋಣ. ಜನರನ್ನೇ ಆಸ್ತಿಯನ್ನಾಗಿಸೋಣ. ಪ್ರತಿಭೆಗಳನ್ನು ಬೆಳಗಿಸೋಣ. ಹೀಗೆ ಹಲವಾರು ದೊಡ್ಡತನದ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article