-->
ಓ ಮುದ್ದು ಮನಸೇ ...…...! ಸಂಚಿಕೆ -18

ಓ ಮುದ್ದು ಮನಸೇ ...…...! ಸಂಚಿಕೆ -18

ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589

     ಓ ಮುದ್ದು ಮನಸೇ ...…...! ಸಂಚಿಕೆ -18

                  
          ಮೊನ್ನೆ ನನ್ನನ್ನು ಭೇಟಿಮಾಡಲು ಬಂದಿದ್ದ ತಾಯಿಯೊಬ್ಬರು ಹತಾಶೆಯಿಂದ ಅಂದರು "ಮಗನಿಗೆ ಏನೇ ಅಡುಗೆ ಮಾಡಿದರೂ ಸಮಾಧಾನವಿಲ್ಲ, ಸಾಂಬಾರ್ ನಲ್ಲಿ ಬೇವಿನ ಸೊಪ್ಪು ಕಂಡ್ರೂ ಅಂತಾನೆ ’ಅದೇನೇನೋ ಸೊಪ್ಪುಗಳನ್ನೆಲ್ಲಾ ಹಾಕಿ ಸಾಂಬಾರ್ ಮಾಡ್ತೀಯ, ನಾವೇನು ಮನುಷ್ಯರೋ ಪ್ರಾಣಿಗಳೋ?’ ಬಿಸಿ ಬಿಸಿ ಇದ್ರೆ ತಿಂತಾನೆ ಅಂತ ಮಾಡಿದ ಅಡುಗೆಯನ್ನು ಮತ್ತೆ ಮತ್ತೆ ಬಿಸಿ ಮಾಡಿಟ್ಟು ಅದೆಷ್ಟು ಬಾರಿ ಊಟಕ್ಕೆ ಕರೆದ್ರೂ ಬರಲ್ಲ ಆಮೇಲೆ ಬಂದು ’ಇದೇನು ಇವತ್ತಿನದ್ದೋ ಇಲ್ಲಾ ನಿನ್ನೇದೋ?’ ಅಂತಾನೆ". "ಮುಂಗೋಪ ಜಾಸ್ತಿ, ಸಿಡುಕ! ತಾಳ್ಮೆನೇ ಇಲ್ಲಾ ಸರ್, ನೀವೊಮ್ಮೆ ಮಾತಾಡಿ ನೋಡಿ" ಅಂದರು.
        ಆ ತಾಯಿಯ ಮಾತುಗಳು ನನ್ನನ್ನು ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋದವು. ಸರಿಸುಮಾರು 18 ರಿಂದ 20 ವರ್ಷಗಳ ಹಿಂದೆ ನನಗಾಗ 10 ರಿಂದ 12 ವರ್ಷ ವಯ್ಯಸ್ಸಿರಬೇಕು. ನನ್ನ ಮನೆಯಲ್ಲಿ ನಾನು, ನನ್ನ ಅಮ್ಮ ಅಪ್ಪ, ಅಜ್ಜಿ ಮತ್ತು ತಂಗಿ. ಸೋಮವಾರ ನಮ್ಮ ಕುಟುಂಬಕ್ಕೆ ವಿಶೇಷ ದಿನ ಮತ್ತದು ನಮ್ಮಮ್ಮನ ಬ್ಯುಸಿ ದಿನ. ರವಿವಾರದಿಂದಲೇ ಅವರಿಗೆ ಇನ್ನಿಲ್ಲದಷ್ಟು ಕೆಲಸ. ಮನೆಯಲ್ಲಿ ಬಾವಿಯಿಲ್ಲ, ಸರಕಾರಿ ನೀರಿನ ಸವಲತ್ತೂ ಇಲ್ಲಾ. ಆ ದಿನ ಮುಂಜಾನೆ ಸುಮಾರು ನಾಲ್ಕು ಘಂಟೆಗೇ ಎದ್ದು ನಮ್ಮ ಮನೆಯಿಂದ ಸುಮಾರು 600 ಮೀಟರ್ ದೂರದ ಬಾವಿಯಿಂದ ಮನೆಯ ಸದಸ್ಯರೆಲ್ಲರಿಗೂ ಆಗುವಷ್ಟು ನೀರನ್ನು ತಂದು ಬಚ್ಚಲಿನ ಹಂಡೆಗೆ (ನೀರು ಕಾಯಿಸುವ ಪಾತ್ರೆ) ತುಂಬಿ, ಸರಿಯಾಗಿ ಉರಿಯದ ಬೆಂಕಿ, ಊದಿದಷ್ಟೂ ಹೊಗೆ ಕಾರುವ ಸೌದೆ ಅಂತು ಇಂತು ಅಪ್ಪ ಏಳುವುದರೊಳಗಾಗಿ ಸ್ನಾನಕ್ಕೆ ಬಿಸಿನೀರು ಸಿದ್ಧಗೊಳಿಸಬೇಕು. ಇಡೀ ಮನೆಯನ್ನು ವಿಶೇಷವಾಗಿ ಸ್ವಚ್ಚಗೊಳಿಸಿ, ಪಾತ್ರೆ- ಪಗಡೆಯನ್ನೆಲ್ಲಾ ತಿಕ್ಕಿ-ತೊಳೆದು, ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ, ಹಾಲು ಕರೆದು, ಆಕಳಿಗೆ ಪೂಜೆ ಮಾಡಿ ಒಂದೇ-ಎರಡೇ? ಹತ್ತಾರು ಕೆಲಸಗಳನ್ನು ಬಿಡುವಿಲ್ಲದೆ ಮಾಡಿ ಮುಗಿಸುವುದರಲ್ಲಿ ಘಂಟೆ ಹನ್ನೊಂದು ದಾಟುತ್ತಿತ್ತು. ಇಷ್ಟೊಂದು ಕೆಲಸಗಳ ನಡುವೆ ಅಪ್ಪನಿಗೆ ಮತ್ತು ಶಾಲೆಗೆ ಹೊರಡುವ ನನಗೂ ನನ್ನ ತಂಗಿಗೂ ತಿಂಡಿ ರೆಡಿ ಮಾಡಿ ಕೊಡಬೇಕು. "ನಾನು ಒಬ್ಳೆ, ನಂಗಿರೋದು ಎರೆಡೇ ಕೈಯಿ, ಎಲ್ಲಾ ಮಾಡು ಅಂದ್ರೆ ಹೆಂಗೆ ಮಾಡದು?" ಗೊಣಗುತ್ತಿದ್ದ ಅಮ್ಮ ಬಚ್ಚಲು ಮನೆಯಲ್ಲಿದ್ದ ನನ್ನನ್ನು ಕರೆದಳು "ಇನ್ನು ಆಗಿಲ್ವೆನೋ ನಿಂದು, ಸ್ನಾನಕ್ಕೆ ಹೋಗಿ ಒಂದ್ ತಾಸ್ ಆತು, ಬೇಗ ಸ್ನಾನ ಮಾಡಿ ಬಾ, ಅವ್ರು ಕೆಲ್ಸಕ್ಕೆ ಹೋಗಕ್ಕೆ ಟೈಮ್ ಆತು, ಎಲ್ಲಾ ರೆಡಿ ಮಾಡಿಟ್ಟೀನಿ ದೋಸೆ ಹೊಯ್ದು ಕೊಟ್ರೆ ಆತು ಅಷ್ಟೇ". 
      ತನ್ನ ಬ್ಯುಸಿ ಕೆಲಸಗಳ ನಡುವೆ ಎಲ್ಲರಿಗೂ ತಿಂಡಿ ಮಾಡಿಕೊಡಕ್ಕೆ ಸಮಯವಾದ್ರೂ ಎಲ್ಲಿದೆ? ಪ್ರತೀ ಸೋಮವಾರ ಮನೆಯಲ್ಲಿ ತಿಂಡಿಗೆ ದೋಸೆ..! ಹಿಂದಿನ ದಿನ ರಾತ್ರಿಯೇ ದೋಸೆಗೆ ಹಿಟ್ಟು ತಯಾರಿಸಿಟ್ಟಿರುತ್ತಿದ್ದ ಅಮ್ಮ ಮುಂಜಾನೆ ದೋಸೆ ಹೊಯ್ಯೋ ಕೆಲಸಕ್ಕೆ ನನ್ನನ್ನು ದುಂಬಾಲು ಬೀಳುತ್ತಿದ್ದಳು. "ಎಲ್ಲರಿಗೂ ದೋಸೆ ಹೊಯ್ಯದೇನು ಬೇಡ, ಅಪ್ಪಂಗೊಂದೆರೆಡು ದೋಸೆ ಮಾಡಿ ನಿಂಗೆ ನಿನ್ನ ತಂಗಿಗೆ ಹೆಂಗೆ ಬೇಕೋ ಹಂಗೆ ದೋಸೆ ಮಾಡ್ಕೊಳ್ಳಿ, ನಂಗೆ ನಾನೇ ದೋಸೆ ಮಾಡ್ಕೊಳ್ತೀನಿ, ಸಣ್ಣ ಸಣ್ಣ ದೋಸೆ ಬೇಕು ಅಂತಿದ್ದೆ ಮೊನ್ನೆ?" ಅಂತು ಇಂತು ಈ ದೋಸೆ ಹೊಯ್ಯುವ ಕಾಯಕದಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ಒಲೆಮುಂದೆ ಹೋಗುತ್ತಿದ್ದೆ.  
        ಮನೆಯಲ್ಲಿ ಗ್ಯಾಸ್ ಸ್ಟೋವ್ ಇಲ್ಲದ ಕಾಲವದು, ಅಡುಗೆಗೆ ಆಧಾರ ಬೆಂಕಿವಲೆ. ಎಷ್ಟೇ ಊದಿದರೂ ಸರಿಯಾಗಿ ಬೆಂಕಿ ಹಿಡಿಯದ ಸೌದೆ, ಬುಗಿಲೇಳುವ ಹೊಗೆ, ತಲೆಮೇಲೆಲ್ಲಾ ಬೂದಿ, ಒಂದರ್ಧ ಘಂಟೆಯಲ್ಲಿ ಬೆವರು ಮೈ ಒದ್ದೆ ಮಾಡುತ್ತಿತ್ತು. ಬೆಂಕಿ ಕೆಂಡ ತಾಗಿ ಅದೆಷ್ಟು ಸಾರಿ ಕೈ ಸುಟ್ಟುಕೊಂಡಿದ್ದೀನೋ ಗೊತ್ತಿಲ್ಲ. ಕೆಲವೊಮ್ಮೆ ನನ್ನ ನಿರ್ಲಕ್ಷಕ್ಕೆ ಹಂಚಿನ ಮೇಲಿದ್ದ ದೋಸೆ ಹೊತ್ತಿ ಕರಕಲಾಗಿಬಿಡುತ್ತಿತ್ತು. ದೋಸೆ ಚೆನ್ನಾಗಿರಬೇಕೆಂದರೆ ಬೆಂಕಿಯ ಶಾಖ ಹದವಾಗಿರಬೇಕು. ಬೆಂಕಿ ಹೆಚ್ಚಾದರೆ ದೋಸೆ ಕಮರಿ ಹೋಗುವುದು, ಕಡಿಮೆಯಾದರೆ ಮೇಲಾರುವುದು. ದೋಸೆ ತೆಳ್ಳಗಿದ್ದಷ್ಟೂ ರುಚಿಯಾಗಿರುತ್ತದೆ, ಆದರೆ ತೆಳ್ಳಗಿನ ದೋಸೆ ಮಾಡಲು ಹೆಚ್ಚು ಸಮಯಬೇಕು ಹಾಗಾಗಿ ನಾನು ಮಾಡುತ್ತಿದ್ದ ಒಂದು ದೋಸೆ ಅಮ್ಮನ ಎರಡು ದೋಸೆಗೆ ಸಮನಾಗಿರುತ್ತಿತ್ತು. ಅಂತು ಇಂತು ಅಪ್ಪನಿಗೆ ಬೇಕಾದಷ್ಟು ದೋಸೆಮಾಡಿಕೊಟ್ಟು ನಾನು ನನ್ನ ತಂಗಿ ದೋಸೆ ತಿಂದು ಶಾಲೆಗೆ ಹೊರಟು ಹೋಗುತ್ತಿದ್ದೆವು. 
      ಕೇವಲ ತಿಂಗಳಿನಲ್ಲಿ ನಾಲ್ಕು ದಿನ ಇಬ್ಬರಿಗೆ ಮುಂಜಾನೆಯ ದೋಸೆ ಮಾಡೋದ್ರಲ್ಲೇ ನಾನು ಇಷ್ಟು ಕಷ್ಟ ಪಟ್ಟೆ, ಇನ್ನು ವರ್ಷದ ಮುನ್ನೂರ ಅರವತ್ತೈದು ದಿನವೂ ದಿನದ ಮೂರೂ ಹೊತ್ತೂ ಮನೆಮಂದಿಗೆಲ್ಲಾ ತರ ತರದ ಅಡುಗೆ ಮಾಡಿ ಬಡಿಸುವ ನನ್ನಮ್ಮ ಅದೆಷ್ಟು ಕಷ್ಟ ಪಟ್ಟಿರಬೇಡಾ! ಅದೆಷ್ಟು ಬಾರಿ ಅವಳ ಕೈ ಸುಟ್ಟಿಲ್ಲ, ಅದೆಷ್ಟು ಬಾರಿ ಆ ಕೆಟ್ಟ ಹೊಗೆಯಲ್ಲಿ ಉಸಿರಾಡಿ ನಮ್ಮ ನಾಲಿಗೆಯ ರುಚಿ ತಣಿಸಿಲ್ಲ ಅವಳು! ನಾ ತಿನ್ನುತ್ತಿದ್ದ ಹಿಟ್ಟಿನ ಹಿಂದಿನ ಗುಟ್ಟನ್ನು ಕಣ್ಣಾರೆ ಕಂಡೆ, ಅನುಭವಿಸಿದೆ. ಅದೆಷ್ಟೇ ಹೊತ್ತಾದರೂ ಮನೆಮಂದಿಗೆಲ್ಲಾ ಊಟ ಬಡಿಸಿ ಅವರದ್ದೆಲ್ಲ ತಿಂದಾದ ಮೇಲೆಯೇ ಅವಳು ತಿನ್ನೋದು. ಗಡತ್ತಾಗಿ ತಿಂದು ಅದೇ ತಟ್ಟೆಯಲ್ಲಿ ಕೈ ತೊಳೆದು ಮೆಲೆದ್ದು ಹೋಗುತ್ತಿದ್ದ ನನಗೆ ಹಸಿದ ಹೊಟ್ಟೆಯಲ್ಲಿ ಅನ್ನ ಮಾಡಿ ಬಡಿಸುವ ನನ್ನಮ್ಮನ ತಾಳ್ಮೆ, ಪಡುವ ಕಷ್ಟ ಕಣ್ಮುಂದೆ ಬಂತು. 
      ನನ್ನ ಗೆಳೆಯನೊಬ್ಬ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ. ಇಬ್ಬರೂ ಒಂದೇ ಬಾಡಿಗೆ ಮನೆಯಲ್ಲಿ ವಾಸವಿದ್ದೆವು. ಪ್ರತಿ ಬಾರಿ ಊರಿಗೆ ಹೋಗುವ ದಿನಾಂಕ ನಿಗದಿಯಾದಾಗಿಂದ ತಿಂಗಳು ಕಳೆದರೂ ಅವನು ಪ್ರತಿನಿತ್ಯ ಬಳಸುವ ಬಟ್ಟೆ ತೊಳೆಯುತ್ತಿರಲಿಲ್ಲ! ನಾನಂದೆ "ಬಟ್ಟೆಯ ರಾಶಿ ಜಾಸ್ತಿಯಾಗಿದೆ, ವಾಶ್ ಮಾಡಲ್ವಾ?"
"ಹೇಗಿದ್ರೂ ಮುಂದಿನ ತಿಂಗ್ಳು ಊರಿಗೆ ಹೋಗ್ತಿದ್ದೀನಲ್ಲ ಅಮ್ಮನ ಹತ್ರ ವಾಶ್ ಮಾಡಿಸ್ಕೊಂಡು ಬರ್ತೀನಿ" ಅಂದ. ನನಗಿನ್ನೂ ನೆನಪಿದೆ ಮನೆಮಂದಿಯ ಬಟ್ಟೆಯನ್ನೆಲ್ಲಾ ತೊಳೆಯುತ್ತಿದ್ದ ಅಮ್ಮ ಕೆಲವೊಮ್ಮೆ ಅವುಗಳನ್ನು ಒಣಗಿ ಹಾಕೋದಕ್ಕೆ ನನ್ನ ಸಹಾಯ ಕೇಳುತ್ತಿದ್ದಳು. ನಮಗರಿವಿಲ್ಲದೆ ನಮ್ಮ ಬಹುಪಾಲು ಕೆಲಸಗಳಿಗೆ ಅಮ್ಮನನ್ನೇ ಪಾಲುಕೇಳುವ ನಾವು ಯಾವತ್ತೂ ಅವಳ ಕೆಲಸಗಳಲ್ಲಿ ಪಾಲುಪಡೆಯುವ ಗೋಜಿಗೆ ಹೋಗುವುದೇ ಇಲ್ಲ! ಇವತ್ತಿಗೂ ನಾನು ಮನೆಗೆ ಹೋದಾಗ ಊಟದ ನಂತರ ನನ್ನ ತಟ್ಟೆಯನ್ನು ನಾನೇ ವಾಶ್ ಮಾಡ್ತೀನಿ, ನನ್ನ ಬಟ್ಟೆ ನಾನೇ ತೊಳೆದುಕೊಳ್ತೀನಿ. ಅಮ್ಮ ಅಂತಾರೆ "ವರ್ಷವಿಡೀ ಮನೆಯಿಂದ ಹೊರಗೆ ಇರ್ತೀಯ, ಮನೆಗೆ ಬಂದಾಗಾದ್ರೂ ನಂಗೆ ನಿನ್ನ ಬಟ್ಟೆ ತೊಳೇಯೋಕೆ ಬಿಡು" ನಾನಂದೆ "ಅಮ್ಮ, ವರ್ಷವಿಡೀ ಮನೆಯಿಂದ ಹೊರಗೆ ಇರ್ತೀನಿ, ಮನೆಗೆ ಬಂದಾಗಾದ್ರೂ ನಿನ್ನ ಸೇವೆ ಮಾಡೋಕೆ ಬಿಡು!" 
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************Ads on article

Advertise in articles 1

advertising articles 2

Advertise under the article