ಹಕ್ಕಿ ಕಥೆ : ಸಂಚಿಕೆ - 41
Tuesday, April 5, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ : ಸಂಚಿಕೆ - 41
------------------------------
ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ........ ಪ್ರತಿದಿನ ಸಂಜೆ ಒಂದಿಷ್ಟು ದೂರ ನಡೆಯೋದು ಅಂದರೆ ವಾಕಿಂಗ್ ಮಾಡೋದು ನನ್ನ ಬಹಳ ಇಷ್ಟದ ಕೆಲಸ. ಮನೆಯಿಂದ ಒಂದೆರಡು ಕೆಲೋಮೀಟರ್ ದೂರ ನಡೆದು ನಂತರ ಅದೇದಾರಿಯಲ್ಲಿ ಅಥವಾ ಬೇರೆದಾರಿಯಾಗಿ ಮನೆಗೆ ಹಿಂದೆ ಬರುವುದು ನನ್ನ ರೂಢಿ. ನಮ್ಮ ಮನೆಯಿಂದ ಮುಖ್ಯ ರಸ್ತೆಗೆ ಬರುವಷ್ಟು ದೂರ ಗೇರಿನ ಮರಗಳು ಇರುವ ತೋಟ ಇದೆ. ಜೊತೆಗೆ ಸ್ವಲ್ಪ ಮರಗಳು ಕೂಡಾ ಇವೆ. ಅಂಕುಡೊಂಕು ದಾರಿ ಮುಗಿಸಿ. ಸ್ವಲ್ಪ ನೇರವಾಗ ದಾರಿ ಸಿಗುವಲ್ಲಿ ನಾನು ಸ್ವಲ್ಪ ನಿಧಾನವಾಗಿ ಹೆಜ್ಜೆ ಹಾಕುತ್ತೇನೆ. ನೇರದಾರಿಯಲ್ಲಿ ಬೇಗಬೇಗನೇ ಹೆಜ್ಜೆಹಾಕುವುದಲ್ಲವೇ ಎಂದು ನೀವು ಕೇಳಬಹುದು. ಆದರೆ ಆ ನೇರದಾರಿಯ ಎರಡೂ ಕಡೆ ಎರಡು ಪುಟ್ಟ ಗುಡ್ಡಗಳು ಇವೆ. ಆ ಕಡೆಯಿಂದ ಈ ಕಡೆ ಹಾರುವ ಹಕ್ಕಿಗಳು ಖಂಡಿತಾ ಇದ್ದೇ ಇರುತ್ತವೆ. ಅವುಗಳ ಕಾರಣಕ್ಕಾಗಿಯೇ ನಾನು ಅಲ್ಲಿ ನಿಧಾನ ನಡೆಯೋದು. ರಸ್ತೆಯ ಅಂಚಿನ ಪೊದೆಗಳಲ್ಲಿ, ಒಣಗಿದ ತರಗೆಲೆಗಳಲ್ಲಿ ಹುಳುಹುಪ್ಪಟೆಗಳನ್ನು ಹುಡುಕುವ ಕಡುಕಂದು ಬಣ್ಣದ ಹಕ್ಕಿಯೊಂದು ಅಲ್ಲಿರುತ್ತದೆ. ನಾನೇನಾದ್ರೂ ವೇಗವಾಗಿ ನಡೆದರೆ ಹೆದರಿ ಪೊದೆಯ ಒಳಗೋ ಅಥವಾ ರಸ್ತೆಯ ಇನ್ನೊಂದು ಕಡೆಗೋ ಓಡಿ ಮರೆಯಾಗುತ್ತದೆ.
ತನ್ನ ಕಡುಕಂದು ಬಣ್ಣದ ಇಡೀ ದೇಹದಿಂದಾಗಿ ಇದನ್ನು ತಕ್ಷಣ ಗುರುತಿಸುವುದು ಸ್ವಲ್ಪ ಕಷ್ಟಸಾಧ್ಯ. ತರಗೆಲೆಗಳ ನಡುವೆ, ಪೊದೆಗಳ ನಡುವೆ ಈ ಹಕ್ಕಿಯನ್ನು ಗುರುತು ಹಿಡಿಯಬೇಕಾದರೆ ಬಹಳ ತಾಳ್ಮೆ ಬೇಕು. ಸುಮಾರು ಕಾಡುಕೋಳಿಯ ಗಾತ್ರದ ಈ ಹಕ್ಕಿ ನಮ್ಮೂರಿನ ಹಳ್ಳಿದಾರಿಗಳಲ್ಲಿ ರಸ್ತೆಯ ಅಂಚು ಅಥವಾ ರಸ್ತೆಯ ಈ ಕಡೆಯಿಂದ ಆ ಕಡೆ ಚುರುಕಾಗಿ ಓಡಿ ಅಥವಾ ಹಾರಿ ಮರೆಯಾಗುವುದನ್ನು ನೋಡುವುದೇ ಚಂದ. ನಮ್ಮ ಊರಿನ ಮಕ್ಕಳು ಇದನ್ನೇ ಕಾಡುಕೋಳಿ ಎಂದು ಕರೆಯುತ್ತಾರೆ. ಆದರೆ ಇದು ನಿಜವಾಗಿಯೂ ಕಾಡುಕೋಳಿ ಅಲ್ಲ. ಈ ಕೋಳಿಗೆ ಒಂದು ವಿಶೇಷವಾದ ಗುರುತು ಇದೆ. ಅದೇ ಇದರ ಕಣ್ಣಿನ ಸುತ್ತಲೂ ಇರುವ ಕೆಂಪು ಬಣ್ಣದ ಅಲಂಕಾರ. ಈ ಅಲಂಕಾರದ ಕಾರಣಕ್ಕೇ ಈ ಹಕ್ಕಿಯನ್ನು ತುಳು ಭಾಷೆಯಲ್ಲಿ ಕೇಂಕಣ್ಣ್ ಅಂದರೆ ಕೆಂಪುಕಣ್ಣು ಎಂದೇ ಕರೆಯುತ್ತಾರೆ. ಈ ಹಕ್ಕಿಯ ಕನ್ನಡ ಹೆಸರು ಚಿಟ್ಟುಕೋಳಿ. ಚಿಟ್ಟು ಕೋಳಿ ಎಂಬ ಹೆಸರು ಏಕೆ ಬಂತು ಎಂದು ನನಗೂ ತಿಳಿದಿಲ್ಲ.
ಜನವರಿಯಿಂದ ಜೂನ್ ತಿಂಗಳ ನಡುವೆ ತರಗೆಲೆಗಳನ್ನು ಜೋಡಿಸಿ ನೆಲದಲ್ಲೇ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ ಎಂದು ಹೇಳುತ್ತಾರೆ. ಕಳೆದ ವರ್ಷ ನಮ್ಮ ಶಾಲೆಯ ಗುಡ್ಡದಲ್ಲಿ ಗೇರುಹಣ್ಣು ಕೊಯ್ದು ತಿನ್ನಲೆಂದು ನಾವು ದಿನವೂ ಗುಡ್ಡಕ್ಕೆ ಹೋಗುತ್ತಿದ್ದೆವು. ಒಂದು ದಿನ ಸೂಕ್ಷ್ಮ ದೃಷಿಯ ನಮ್ಮ ಮಕ್ಕಳಿಗೆ ಅಲ್ಲೊಂದು ಗೇರು ಮರದ ಬುಡದಲ್ಲಿ ಈ ಕೇಂಕಣ್ ಅಲ್ಲಾಡದೇ ಕುಳಿತಿರುವುದು ಕಾಣಿಸಿತು. ಹಿಂದಿರುಗಿ ಬಂದವರೇ ಸಾರ್ ಗುಡ್ಡದಲ್ಲಿ ಕೇಂಕಣ್ ಮೊಟ್ಟೆ ಇಟ್ಟು ಕಾವು ಕೊಡುತ್ತಿದೆ ನೋಡಿ ಬನ್ನಿ ಸಾರ್ ಎಂದು ದುಂಬಾಲು ಬಿದ್ದರು. ಆಗಲಿ ಎಂದು ಅವರು ತೋರಿಸಿದ ಮರದ ಬುಡದ ಹತ್ತಿರ ಹೋಗಿ ನೋಡಿದರೆ ಕೇಂಕಣ್ ತನ್ನ ಮೊಟ್ಟೆಗಳಿಗೆ ಕಾವು ಕೊಡುತ್ತಾ ಅಲುಗಾಡದೇ ಕುಳಿತಿತ್ತು. ಗುಡ್ಡದ ಇಳಿಜಾರಿನ ಮರದ ಬುಡದಲ್ಲಿ ಹಕ್ಕಿಯು ತನ್ನ ಅಗೋಚರ ಎನ್ನಬಹುದಾದ ಗೂಡಿನ ಜಾಗ ಹುಡುಕಿ, ತಾನೂ ತನ್ನ ಪರಿಸರದ ಬಣ್ಣದ ಜೊತೆ ಬೆರೆತು ತಕ್ಷಣಕ್ಕೆ ಕಾಣಿಸಿಕೊಳ್ಳಲೂ ಇಲ್ಲ. ಆದರೆ ತನ್ನ ದೇಹದ ಬಣ್ಣದ್ದೇ ತರಗೆಲೆಗಳು ಇರುವ ಜಾಗವನ್ನೇ ಹುಡುಕಿ ಗೂಡುಮಾಡುವ ಜ್ಞಾನ ಈ ಹಕ್ಕಿಗಳಿಗೆ ಹೇಗೆ ಬಂತು ಎನ್ನುವುದು ಸೋಜಿಗ ನನಗೆ. ಮೇ ತಿಂಗಳ ಅಂತ್ಯದಲ್ಲಿ ಒಮ್ಮೆ ಪುಟ್ಟ ಪುಟ್ಟ ಮರಿಗಳ ಜೊತೆ ಪುಟಪುಟನೆ ಓಡುತ್ತಾ ಅಡಗಿಕೊಳ್ಳುವ ಪುಟಾಣಿ ಮರಿಗಳನ್ನು ತಂದೆತಾಯಿಯ ಜೊತೆ ನೋಡಿದ್ದೇನೆ. ಆದರೆ ಇಂದಿಗೂ ಅವುಗಳ ಉತ್ತಮ ಫೋಟೋ ನನ್ನ ಬಳಿ ಇಲ್ಲ. ಅಷ್ಟು ಚುರುಕಾಗಿ ಮನುಷ್ಯರನ್ನು ಕಂಡರೆ ತಪ್ಪಿಸಿಕೊಳ್ಳುತ್ತವೆ ಈ ಹಕ್ಕಿ. ನಿಮ್ಮ ಮನೆ ಹಳ್ಳಿಯ ಆಸುಪಾಸಿನಲ್ಲಿದ್ದರೆ, ರಜೆಗೆ ಅಜ್ಜಿಮನೆ ಕಡೆ ಹೋದರೆ ಈ ಹಕ್ಕಿ ಕಾಣ್ತದೆಯೇ ಹುಡುಕಲು ಮರೆಯಬೇಡಿ.
ಕನ್ನಡಹೆಸರು: ಚಿಟ್ಟು ಕೋಳಿ,
ತುಳುವಿನಲ್ಲಿ: ಕೇಂಕಣ್ಣ್
ಇಂಗ್ಲೀಷ್ ಹೆಸರು: Red spurfowl
ವೈಜ್ಞಾನಿಕ ಹೆಸರು: Glloperdix spadicea
ಚಿತ್ರ : ಅಂತರ್ಜಾಲ ಕೃಪೆ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************