
ಪ್ರೀತಿಯ ಪುಸ್ತಕ : ಸಂಚಿಕೆ - 1
Friday, April 8, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 1
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಹೆಸರೇ ಚೆನ್ನಾಗಿದೆಯಲ್ಲಾ, ಯಾರಿರಬಹುದು ಈ ಛೂಮಂತ್ರಯ್ಯ, ಇವರು ಏನು ಮ್ಯಾಜಿಕ್ ಮಾಡಬಹುದು ಅಂತ ನಿಮ್ಮ ಮನಸ್ಸಿಗೆ ಬರಬಹುದು. ಇವರು ಒಬ್ಬರಲ್ಲ.. ಹಲವರು.. ಮನುಷ್ಯನೂ ಇರಬಹುದು ಪ್ರಾಣಿ, ಪಕ್ಷಿ, ಕ್ರಿಮಿ ಕೀಟ , ಗಿಡ ಮರ ಬಳ್ಳಿ.....ಯೂ ಆಗಿರಬಹುದು. ಇವರ ಮ್ಯಾಜಿಕ್ ಏನು ಗೊತ್ತಾ, ಕೃಷಿಲೋಕದ ವಿಸ್ಮಯಗಳನ್ನು ಹೇಳುವುದು. ಈ ಪುಸ್ತಕ ತುಂಬಾ ಛೂಮಂತ್ರಯ್ಯ ನಿಮಗೆ ಮಣ್ಣು, ಗಿಡ, ಮರ, ಬಳ್ಳಿ, ಹುಳ, ನೀರು ಬಗ್ಗೆ ಚಿಕ್ಕ ಚಿಕ್ಕ ಕಥೆ ಹೇಳುತ್ತಾರೆ. ಕಿಂದರಿ ಜೋಗಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾನಲ್ಲಾ, ಏನೇನೋ ಅದ್ಭುತಗಳನ್ನು ತೋರಿಸುತ್ತಾನಲ್ಲಾ.. ಹಾಗೆಯೇ ಈ ಪುಟಗಳ ತೆರೆಯುತ್ತಾ ಹೋದರೆ, ನಿಮಗೆ ಕೃಷಿ ಲೋಕದ ಅದ್ಭುತಗಳು ಕಣ್ಣೆದರು ಬರುತ್ತವೆ. ಹೊಸ ಕನಸುಗಳು ಕಣ್ಣೆದುರು ಬರುತ್ತವೆ. ಛೂಮಂತ್ರಯ್ಯ ಇಲಿಗಳ ಕೈಯಲ್ಲಿ ಉಳುಮೆ ಮಾಡಿಸುತ್ತಾರೆ; ಹಾವುಗಳಿಗೆ ತೋಟದಲ್ಲಿ ಜಾಗ ಕೊಡುತ್ತಾರೆ; ಕತ್ತಲಲ್ಲಿ ದೇವತೆಗಳನ್ನು ಕಾಣಿಸುತ್ತಾರೆ; ಮಕ್ಕಳ ಜೊತೆಗೆ ಮಳೆ ಹಬ್ಬ ಮಾಡುತ್ತಾರೆ; ದೇಶ ವಿದೇಶಗಳ ಕೃಷಿಲೋಕದ ಕಥೆ ಹೇಳುತ್ತಾರೆ; ಅಮೆಜಾನ್ ಕಾಡಿಗೆ ಬೆಂಕಿ ಮತ್ತು ಒಂದು ಜೇನುಕುಟುಂಬದ ಅನುಭವ ಹೇಳುತ್ತಾರೆ; ಎಂತೆಂತಹ ತರಕಾರಿ ಬೆಳೆಸುವ ಪರಿ ತೋರಿಸುತ್ತಾರೆ; ಗೂಬೆಗಳನ್ನು ಪ್ರೀತಿಸುತ್ತಾರೆ; ಪ್ರಾಣಿ ಪಕ್ಷಿಗಳ ಮೇಲೆ ಮಂತ್ರ ಹಾಕುತ್ತಾರೆ.. ಮತ್ತೆ ರಾಶಿ ರಾಶಿ ಪ್ರಶ್ನೆಗಳನ್ನು ಕೇಳುತ್ತಾರೆ.. ಮತ್ತೆ ಛೂಮಂತ್ರಯ್ಯ ಏನು ಹೇಳುತ್ತಾರೆ ಗೊತ್ತಾ, “ಇದು ನಾನು ಮಾಡಿದ ತೋಟ ಅಲ್ಲ, ನಾವು ಮಾಡಿದ ತೋಟ ಅನ್ನುತ್ತಾರೆ..” ಈ ‘ನಾವು’ ಅಂದರೆ ಯಾರ್ಯಾರು ಇರಬಹುದು ನೀವೇ ಯೋಚನೆ ಮಾಡಿ.
ಇಷ್ಟೇ ಅಲ್ಲ, ಇನ್ನೂ ಏನೇನೋ ಇವೆ. ಓದಿದರೆ ನಿಮಗೇ ಗೊತ್ತಾಗುತ್ತದೆ.
ಪುಸ್ತಕ ಬರೆದವರು: ಕೃಷ್ಣಮೂರ್ತಿ ಬಿಳಿಗೆರೆ, ಸ್ವತಃ ಕೃಷಿ ಅನುಭವ ಇರುವವರು
ಚಿತ್ರ ಬಿಡಿಸಿದವರು: ಸೃಜನ್
ಪ್ರಕಾಶಕರು: ಬಹುರೂಪಿ
ಬೆಲೆ: ರೂ.140/-
ಹದಿಹರೆಯದ ವಯಸ್ಸಿನವರಿಗೆ ಸೂಕ್ತವಾಗಿದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************