-->
ವಿಶ್ವ ಮಾನವರಾಗೋಣ........ ಲೇಖಕರು : ಶಿವಕುಮಾರ ಎಂ ಜಿ

ವಿಶ್ವ ಮಾನವರಾಗೋಣ........ ಲೇಖಕರು : ಶಿವಕುಮಾರ ಎಂ ಜಿ



             ವಿಶ್ವ ಮಾನವರಾಗೋಣ........
         ---------------------------------
        ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ವಿಶಿಷ್ಟ ಜೀವಿ ಎಂದರೆ ಮಾನವ ಮಾತ್ರ. ತನ್ನ ಮಾತುಗಾರಿಕೆ, ಬುದ್ಧಿಶಕ್ತಿ ಹಾಗೂ ಅನ್ವೇಷಣಾ ಪ್ರವೃತ್ತಿಯಿಂದ ಅಗಾಧವಾದುದೆಲ್ಲವನ್ನೂ ಸಾಧಿಸಿ ಅತಿ ಎತ್ತರದ ಸ್ಥಾನದಲ್ಲಿ ನಿಂತಿದ್ದಾನೆ. ಡಾ.ರಾಧಾಕೃಷ್ಣನ್ ಹೇಳುವಂತೆ "ಮಾನವ ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜ ಬಲ್ಲ ಆದರೆ ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ." ಮಾನವನಾಗಿ ಬಾಳಬೇಕಾದರೆ ಮಾನವೀಯ ಮೌಲ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಅಗತ್ಯ ಮತ್ತು ಅನಿವಾರ್ಯವೆನಿಸುತ್ತದೆ. ನಾವಿಂದು ವಿದ್ಯಾವಂತರಾದರೂ ವಿಚಾರವಂತರಾಗುತ್ತಿಲ್ಲ, ಸಂಸ್ಕೃತಿಯ ಅರಿವಿದ್ದರೂ ಸಂಸ್ಕಾರದ ಅರಿವಿಲ್ಲ, ನೈತಿಕತೆಯ ಬಗ್ಗೆ ಮಾತನಾಡಿದರೂ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಜ್ಞೆ ಇದ್ದರೂ ಪ್ರಜ್ಞಾವಂತರಾಗುತ್ತಿಲ್ಲ. ಕಾಣದ ಲೋಕದ ಬಗ್ಗೆ ಅನ್ವೇಷಿಸುತ್ತೇವೆಯೇ ಹೊರತು ನೆರೆಹೊರೆಯ ಅರಿವೇ ಇರುವುದಿಲ್ಲ. ಗುರು ಹಿರಿಯರೊಂದಿಗೆ, ತಂದೆ-ತಾಯಿಯೊಂದಿಗೆ, ಸಹಪಾಠಿಗಳೊಡನೆ ಕೆಲವೊಂದು ಸಮಯ ಮತ್ತು ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕೆಂಬ ಪರಿವೆಯಿಲ್ಲದೆ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಒದ್ದಾಡುತ್ತೇವೆ. ಇವೆಲ್ಲದಕ್ಕೂ ಮಾನವೀಯ ಮೌಲ್ಯಗಳ ಅರಿವಿನ ಕೊರತೆಯೆ ಮುಖ್ಯವೆನಿಸುತ್ತದೆ.  
      ಹಾಗಾದರೆ ಮಾನವೀಯ ಮೌಲ್ಯಗಳು ಎಂದರೇನು? ಮೌಲ್ಯವರ್ಧಿತ ಬದುಕನ್ನು ಕಟ್ಟಿಕೊಳ್ಳುವ ಬಗೆ ಹೇಗೆ? ಮೌಲ್ಯಯುತ ಸಮಾಜವನ್ನು ನಿರ್ಮಿಸುವಲ್ಲಿ ನಮ್ಮೆಲ್ಲರ ಪಾತ್ರವೇನು? ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗಿದೆ. ಸುಮಾರು ಏಳು ವರ್ಷದ ಹುಡುಗನೊಬ್ಬ ತನ್ನ ಕಿವಿಗೆ ಬಿದ್ದ ಮಾತಿನ ಕುರಿತು ತನ್ನ ಅಮ್ಮನನ್ನು ಪ್ರಶ್ನಿಸುತ್ತಿದ್ದಾನೆ. 'ಅಮ್ಮ ಮಾನವೀಯತೆ ಎಂದರೇನು? ಕ್ಷಣಕಾಲ ತಬ್ಬಿಬ್ಬಾದ ತಾಯಿ ಪ್ರಾಪಂಚಿಕ ಅರಿವಿರದ ಮುಗ್ಧ ಬಾಲಕನಿಗೆ ಅರ್ಥೈಸಲು ಸ್ವಲ್ಪ ಹೊತ್ತು ಯೋಚಿಸಿ "ಕಂದ ಈಗ ನೀನು ನನಗೆ ಒಂದೇಟು ಜೋರಾಗಿ ಹೊಡೆಯಬೇಕು" ಎಂದಳು. ಮಗು ಅಮ್ಮನಿಗೆ ಹೊಡೆಯಬೇಕೋ ಅಥವಾ ಬೇಡವೋ ಎಂಬ ಗೊಂದಲಕ್ಕೊಳಗಾಗುತ್ತದೆ. ಅಮ್ಮ ಮತ್ತೆ ಕೇಳುತ್ತಾಳೆ. "ನೀನೇಕೆ ನನಗೆ ಹೊಡೆಯುತ್ತಿಲ್ಲ."? "ನಿನಗೆ ನೋವಾಗುತ್ತದೆಯಲ್ಲ ಅದಕ್ಕೆ ಹೊಡೆಯಲ್ಲ" ಎಂದ ಬಾಲಕ. ಮಾನವೀಯತೆಯ ಅರ್ಥವನ್ನು ತಾನೀಗ ಸುಲಭವಾಗಿ ಅರ್ಥೈಸಬಹುದು ಎಂದು ಸಂತಸಪಟ್ಟ ತಾಯಿ "ನೋಡು ಮಗು ನನಗೆ ನೀನು ಹೊಡೆದರೆ ನೋವಾಗುತ್ತದೆ ಹೌದಲ್ವಾ, ನನಗೇ ನೋವಾಗುತ್ತದೆ ಅಂತ ನಿನಗೆ ಗೊತ್ತಿರೋದ್ರಿಂದ ನೀನು ನನಗೆ ಹೊಡೆಯಲಿಲ್ಲ" ಇದೇ ಮಾನವೀಯತೆ ಎಂದಳು. ಮಗು ಖುಷಿಯಿಂದ ಆಡಲು ಹೊರಟಿತು. ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ ನಿಯಮ ಆಚಾರ-ವಿಚಾರ ಶಿಸ್ತು ಸಂಯಮ ಸತ್ಯ ಸಹಕಾರ ಸಹಬಾಳ್ವೆ ಪರೋಪಕಾರ ತ್ಯಾಗ ಮುಂತಾದವೆಲ್ಲವೂ ಮಾನವೀಯ ಗುಣಗಳನೆಸಿಕೊಳ್ಳುತ್ತವೆ. ಮೌಲ್ಯಗಳು ಬದುಕಿನ ಆಧಾರಸ್ತಂಭಗಳು. ಸಂಸ್ಕೃತಿಯ ಪ್ರತೀಕಗಳು. ನಮ್ಮ ಸುಖದುಃಖಗಳನ್ನು ನಿರ್ಧರಿಸುವುದೇ ನಮ್ಮ ವೈಯಕ್ತಿಕ ಮೌಲ್ಯಗಳು ಇಂತಹ ಮೌಲ್ಯಗಳನ್ನು ನಾವೆಲ್ಲರೂ ರೂಡಿಸಿಕೊಂಡರೆ ಮಾತ್ರ ಬದುಕು ಸ್ವಚ್ಛಂದ ಮತ್ತು ಸುಂದರವೆನಿಸುತ್ತದೆ. ಆ ಮೂಲಕ ಸದೃಢ ನೆಲೆಯುಳ್ಳ ಬಲಿಷ್ಠ ಮಾನವೀಯ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಚಿಂತಿಸಬೇಕಿದೆ. 
          ಮೌಲ್ಯಗಳನ್ನು ಬೆಳೆಸುವ ವಿಧಾನಗಳು :       
 "ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು" ಎಂಬಂತೆ ಮನೆಯಿಂದಲೇ ತಂದೆ ತಾಯಿಗಳು ಅಥವಾ ಹಿರಿಯರು ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ರೂಢಿಸಬೇಕಿದೆ. 
 ಕೆರೆಯಂ ಕಟ್ಟಿಸು, ಬಾವಿಯಂ ಸವೆಸು,   ದೇವಾಗಾರಮಂ ಮಾಡಿಸ
 ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು,   ಮಿತ್ರರ್ಗಿಂಬುಕೆಯ್ ನಂಬಿದ
 ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ 
 ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು 
ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ
      ಇದರ ಅರ್ಥ ಹೀಗಿದೆ:
ಲಕ್ಷ್ಮೀಧರಮಾತ್ಯನ ತಾಯಿ ಹಾಲನ್ನು ಕುಡಿಸುತ್ತ ಅವನಿಗೆ ಕಿವಿಯಲ್ಲಿ ಹೇಳಿದ ಮಾತುಗಳಿವು:
      ‘ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು.’ ಇಂತಹ ಮೌಲ್ಯಗಳನ್ನು ಮನೆಗಳಲ್ಲಿ ಬಾಲ್ಯದಿಂದಲೇ ಬೆಳೆಸುತ್ತಾ ಹೋದಂತೆ‌ ಮೌಲ್ಯಗಳು ಮಕ್ಕಳಲ್ಲಿ ಚಿಗುರೊಡೆಯುತ್ತವೆ. ಶಿಕ್ಷಕನೆಂಬ ಶಿಲ್ಪಿಯ ಗುರಿ ವಿದ್ಯಾರ್ಥಿಗಳಲ್ಲಿ ಕೇವಲ ಜ್ಞಾನವನ್ನು ಮಾತ್ರ ತುಂಬುವುದಲ್ಲದೆ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದೆ.      
         ಗಾಂಧೀಜಿಯವರು "ಶೀಲ ಸಂವರ್ಧನೆ , ಸಚ್ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಕೇಂದ್ರಗಳು ಯಶಸ್ವಿಯಾದರೆ ಸಮಾಜವು ತನ್ನಿಂದ ತಾನೇ ಸುಧಾರಿಸುತ್ತದೆ." ಎಂದು ಭಾವಿಸುತ್ತೇನೆ ಎಂದು ಹೇಳುವುದರ ಮೂಲಕ ಮೌಲ್ಯಗಳ ಮಹತ್ವವನ್ನು ಸಾರಿದ್ದಾರೆ. ಶಿಕ್ಷಣ ಕೇಂದ್ರಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಂಡಾಗ ಮಾತ್ರ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. "ಸಜ್ಜನರ ಸಂಗವದು, ಹೆಜ್ಜೇನು ಸವಿದಂತೆ" ಎಂಬ ಮಾತಿನಂತೆ ಉತ್ತಮ ಸಹಪಾಠಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳುವುದರ ಮೂಲಕ ನಾವೆಲ್ಲರೂ ಮೌಲ್ಯಗಳನ್ನು ಅರಿತುಕೊಳ್ಳಬೇಕಾಗಿದೆ. 
          ಒಳ್ಳೆಯ ಪುಸ್ತಕಕ್ಕಿಂತ ಉತ್ತಮ ಸಂಗಾತಿಗಳಿಲ್ಲ. ಒಂದು ಉತ್ತಮ ಪುಸ್ತಕವು ನೂರು ಜನ ಮಿತ್ರರಿಗೆ ಸಮಾನ ಎಂಬ ಮಾತಿದೆ. ಬಿಡುವಿನ ವೇಳೆಯಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರ ಮೂಲಕ ಮೌಲ್ಯಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ವಿಷಯಗಳಾದ ಯೋಗ , ಧ್ಯಾನ , ಕ್ರೀಡೆ , ಸಂಗೀತ , ಚಿತ್ರಕಲೆ , ವ್ಯಾಯಾಮ , ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಮ್ಮ ಕನಸುಗಳನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸಬೇಕಿದೆ. ಭಾರತ ಸೇವಾದಳ , ಸ್ಕೌಟ್ ಮತ್ತು ಗೈಡ್ಸ್ , ಬುಲ್ ಬುಲ್ ಕಬ್ , NSS , NCC , ರೆಡ್ ಕ್ರಾಸ್ ಮುಂತಾದ ಸಂಸ್ಥೆಗಳ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಮೌಲ್ಯಗಳು ತನ್ನಿಂದ ತಾನೇ ವೃದ್ಧಿಗೊಳ್ಳುತ್ತವೆ. ನಕಾರಾತ್ಮಕ ಅಂಶಗಳನ್ನು ಬದಿಗೊತ್ತಿ ಸಕಾರಾತ್ಮಕ ಚಿಂತನೆಗಳನ್ನು ಮಾತ್ರ ಮೈಗೂಡಿಸಿಕೊಂಡರೆ ಬದುಕು ಹಸನಾಗುತ್ತದೆ. ನಾವೆಲ್ಲರೂ ಸಕಾರಾತ್ಮಕತೆ ಹೆಜ್ಜೆಯಿರಿಸಿದರೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. 
       "ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣಮಕ್ಕು ಸರ್ವಜ್ಞ" ಎಂಬ ಸರ್ವಜ್ಞನ ಮಾತಿನಂತೆ ನಮ್ಮನ್ನು ನಾವು ಗೌರವಿಸುವುದರ ಜೊತೆಗೆ ಇತರರನ್ನು ಗೌರವಿಸುವ ಮೂಲಕ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದೆ. ಜಾತಿ ಕುಲ ಮತ ಗಳೆಂಬ ಅಡ್ಡಗೋಡೆಗಳನ್ನು ಕಿತ್ತೆಸೆದು ಭಾವೈಕ್ಯತೆಯ ಮಂತ್ರವನ್ನು ಜಪಿಸುವುದರ ಮೂಲಕ ನಮ್ಮಲ್ಲಿನ ಮೂರ್ಛಾವಸ್ಥೆಯಲ್ಲಿರುವ ಮನುಷ್ಯತ್ವವನ್ನು ಜಾಗೃತಗೊಳಿಸಲು ಪಣತೊಡೋಣ.                   
           ರಾಜಕಾರಣಿಯಾಗು, ರಾಷ್ಟ್ರಭಕ್ತನೇ ಆಗು , ಕಲೆಗಾರ ವಿಜ್ಞಾನಿ, ವ್ಯಾಪಾರಿಯಾಗು 
ನೀ ಬಯಸಿದಂತಾಗು ಏನಾದರೂ ಸರಿಯೇ ಮೊದಲು ಮಾನವನಾಗು. ಕವಿವಾಣಿಯಂತೆ ನಾವೆಲ್ಲರೂ ಮಾನವೀಯ ಮನುಷ್ಯರಾಗೋಣ.!!  "ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು , ಮಾತಿನಲ್ಲಿ ಚೂಡಾಮಣಿಯಾಗು , ಜ್ಯೋತಿಯಾಗು ಜಗಕೆಲ್ಲ" ಎಂಬ ಮಾತು ನಮಗೆಲ್ಲ ದಾರಿದೀಪವಾಗಲಿ. ನೆಲ-ಜಲ ಭಾಷೆಯನ್ನು ಗೌರವಿಸಿ, ರಾಷ್ಟ್ರಾಭಿಮಾನವನ್ನು ಬೆಳೆಸಿಕೊಂಡು ಉತ್ತಮ ರಾಷ್ಟ್ರಭಕ್ತ ರಾಗುವುದರೊಂದಿಗೆ 'ವಿಶ್ವಮಾನವ ಸಂದೇಶ' ಸಾರಿದ ಕುವೆಂಪುರವರ ವಾಣಿಯನ್ನು ನಾವೆಲ್ಲರೂ ರೂಢಿಸಿಕೊಂಡು ವಿಶ್ವಮಾನವರಾಗಲು ಪಣತೊಡಬೇಕಾಗಿದೆ.                                   
.................................... ಶಿವಕುಮಾರ ಎಂ.ಜಿ
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************

Ads on article

Advertise in articles 1

advertising articles 2

Advertise under the article