-->
ಭಾರತ ಪ್ರಕಾಶಿಸಲು... ಲೇ: ರಮೇಶ ಎಂ. ಬಾಯಾರು

ಭಾರತ ಪ್ರಕಾಶಿಸಲು... ಲೇ: ರಮೇಶ ಎಂ. ಬಾಯಾರು



                “ಭಾರತ” ಇದರಲ್ಲಿರುವ ಅಕ್ಷರಗಳನ್ನು ವಿಮರ್ಶೆ ಮಾಡಿದರೆ “ ಭಾ” ಎಂದರೆ ಜ್ಞಾನ. “ರತ” ಎಂದರೆ ರತಿಸು ಅಥವಾ ಅನುಭವಿಸು ಎಂದರ್ಥ. ಜ್ಞಾನವನ್ನು ಯಾವಾತ ಅನುಭವಿಸಿ ಆನಂದಿಸುವನೋ ಅವನೇ ಭಾರತೀಯ. ನಮ್ಮ ಪ್ರಮಾಣ ಪತ್ರಗಳಲ್ಲಿ ರಾಷ್ಟ್ರೀಯತೆಯನ್ನು ಭಾರತೀಯ ಎಂದೇ ದಾಖಲಿಸುತ್ತಾರೆ. ಯಾರನ್ನೇ ಆಗಲಿ, ಭಾರತೀಯ ಎನ್ನ ಬೇಕಾದರೆ ಆತನು ಇಲ್ಲಿನ ಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಅನುಸರಣೆ ಮಾಡಿರಬೇಕು. ಭಾರತೀಯ ಸಿದ್ಧಾಂತಗಳು ಮತ್ತು ಆಚರಣೆಗಳನ್ನು ಬದುಕಿನೊಂದಿಗೆ ಸಮನ್ವಯ ಮಾಡದವರು ಭಾರತೀಯರಾಗಲು ಸಾಧ್ಯವಿಲ್ಲ. ಭಾರತೀಯ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದುದು ಗೌರವ, ಪ್ರೀತಿ ಮತ್ತು ಸಹಬಾಳ್ವೆ. ಈ ಮೂರೂ ಅಂಶಗಳನ್ನು ಚಾಚೂ ತಪ್ಪದೆ ತನ್ನೊಳಗೆ ಅಂತರ್ಗತ ಗೊಳಿಸಿಕೊಂಡವನು ನಿಜವಾದ ಭಾರತೀಯ. ಶಾಲಾ ಎಸ್ಸೆಂಬ್ಲಿಯಲ್ಲಿ ನಾವು ದಿನಾ ಹೇಳುವ ಪ್ರತಿಜ್ಞೆಯೊಂದಿದೆ- “ನನ್ನ ದೇಶ ಭಾರತ. ನಾನು ಭಾರತೀಯ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು......”ಹೀಗೆ ಸಾಗುವ ಪ್ರತಿಜ್ಞೆಯಲ್ಲೂ ಗೌರವ, ಪ್ರೀತಿ ಮತ್ತು ಸಹಬಾಳ್ವೆಯನ್ನು ಒತ್ತಿ ಹೇಳಲಾಗಿದೆ. ಶಪಥವನ್ನು ಮಾಡುವ ರೂಢಿ ಇಂದು ನಿನ್ನೆ ಆರಂಭಗೊಂಡಿರುವುದಲ್ಲ. ದಶಕಗಳಾಚೆಗೂ ನಮ್ಮ ಹೆತ್ತವರೂ ಸೇರಿದಂತೆ ಎಲ್ಲರೂ ಪ್ರತಿಜ್ಞಾ ಮಾತುಗಳನ್ನು ಎದೆ ಮಟ್ಟಕ್ಕೆ ಕೈ ಚಾಚಿ ಆತ್ಮ ಸಾಕ್ಷಿಯಾಗಿ ಉಲಿಯುತ್ತಲೇ ಬಂದಿದ್ದಾರೆ. ಆದರೆ ಪ್ರತಿಜ್ಞೆ ಅಂತರಾಳದೊಳಗೆ ದಾಖಲಾಗಲಿಲ್ಲ. ಅದು ತುಟಿಗಳಿಗಷ್ಟೇ ಮೀಸಲಾಯಿತು. ಭಾರತೀಯರನ್ನು ಸೋದರ ಸೋದರಿಯರೆಂದು ತಿಳಿಯುತ್ತೇನೆ ಎನ್ನುವ ನಾವು ನಮ್ಮ ಹೆತ್ತವರ ಉದರದ ಮೂಲಕವೇ ಜನಿಸಿ ಬಂದ ಸಹೋದರ ಸಹೋದರಿಯರನ್ನಾದರೂ ಪ್ರೀತಿಸುತ್ತೇವೆಯೇ? ಗೌರವಿಸುತ್ತೇವೆಯೇ? ಎಂಬ ಪ್ರಶ್ನೆಗಳಿಗೆ ಬಹ್ವಂಶ ನಕಾರವೇ ಉತ್ತರವಾಗಿರುತ್ತದೆ. ಆದುದರಿಂದಲೇ ಕೌಟುಂಬಿಕ ಸಾಮರಸ್ಯ, ಸಾಮಾಜಿಕ ಸಾಮರಸ್ಯ ನಮ್ಮಲ್ಲಿ ಬೆಳೆದಿಲ್ಲ. ಇಂದಿನ ಮಕ್ಕಳು ಮುಂದಿನ ಜನಾಂಗ. ನೀವು ಎಲ್ಲರನ್ನೂ ಪ್ರೀತಿಸುವ, ಸಹಿಸುವ ಮತ್ತು ಗೌರವಿಸುವ ಪ್ರಾಜ್ಞರಾಗಬೇಕೆಂಬುದೇ ನನ್ನ ಹಿರಿಯಾಸೆ.
             ಸಭೆಯಲ್ಲಿ ಭಾಗವಹಿಸುವರನ್ನು ಸಭಾಸದ ಎನ್ನುತ್ತೇವೆ. ಸಭ್ಯ ಎಂಬ ಪದವೂ ಸಭೆ ಎಂಬ ಪದದಿಂದಲೇ ಜನಿಸಿದೆ. ಸಭಾಸದರು ಸಭ್ಯರಾಗಿದ್ದರೆ ಅದು ಸಭೆ. ಇಂದಿನ ಬಹುತೇಕ ಸಭೆಗಳು ಸಭ್ಯರ ಸಮಾವೇಶದಂತೆ ಕಾಣುವುದೇ? ಅಲ್ಲಿ ಸಭಾಸದರಿಂದ ಆಲಿಸುವ, ಗಮನಿಸುವ, ಶಿಸ್ತಿನಿಂದ ಕುಳಿತುಕೊಳ್ಳುವ ಗುಣ ಪ್ರತಿಫಲನವಾಗುವುದೇ? ಇಲ್ಲ ಅಂತಾದರೆ ಅಂತಹವರು ಸಭ್ಯರೆನ್ನಿಸಿಕೊಳ್ಳಲು ಲಾಯಕ್ಕಲ್ಲ.      
        ಮಕ್ಕಳೇ ನೀವು ಎಲ್ಲ ಸಭೆ ಸಮಾರಂಭಗಳಲ್ಲಿ ಸಭ್ಯತನವನ್ನು ಕಾಪಾಡಿದರೆ ಬೆಳಗುತ್ತೀರಿ. ನಮಗೆ ಪೂರೈಕೆದಾರರು ಬಹಳಷ್ಟು ಮಂದಿಯಿದ್ದಾರೆ. ಆದರೆ ಉತ್ಪಾದಕರು ಬಹಳ ಕಡಿಮೆಯೇ ಸರಿ. ಉತ್ತಾದನೆಯಾದುದನ್ನು ಜನರಿಗೆ ಪೂರೈಸುವವರು ಮಧ್ಯವರ್ತಿಗಳು. ಅವರಿಗೆ ಪರಿಶ್ರಮ ಬಹಳ ಕಡಿಮೆ. ಆದರೆ ಉತ್ಪಾದಕರಿಗೆ ಪರಿಶ್ರಮ ಅಧಿಕ. ಗಳಿಕೆ ತುಂಬಾ ಕಡಿಮೆ. ರೈತರು, ಕೃಷಿಕರು, ಮೀನುಗಾರರು, ಹೈನೋದ್ಯಮಿಗಳು, ಕರಕುಶಲಿಗಳು ಪರಿಸರ ಮತ್ತು ಭೂ ಆಧಾರಿತರು. ಅವರ ಪರಿಶ್ರಮ ಮತ್ತು ವ್ಯಯಗಳು ಉತ್ಪಾದಿತ ವಸ್ತುಗಳ ಮಾರಾಟದಿಂದ ತೃಪ್ತಿಕರವಾಗಿ ಸರಿದೂಗಲ್ಪಟ್ಟರೆ ಅವರ ಬದುಕು ನಿರಾಳ. ಆದರೆ ಮಧ್ಯವರ್ತಿಗಳಿಂದಾಗಿ ಉತ್ಪಾದಕರು ಬವಣೆಗಳಿಗೊಳಗಾಗುತ್ತಿದ್ದಾರೆ. ಕಮಿಷನ್ ಆಧಾರಿತ ಪೂರೈಕೆಯ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ಭಾರತ ಪ್ರಕಾಶಿಸಲು ಉತ್ಪಾದಕನೇ ಗರಿಷ್ಠ ಫಲವನ್ನು ಪಡೆಯುವಂತಾಗಬೇಕು. ಮಧ್ಯವರ್ತಿಗಳ ವಿಕೃತಿಯನ್ನು ಅಂತ್ಯಗೊಳಿಸಿ, ಕೃಷಿಕರ ಸಮಸ್ಯೆಗೆ ಪರಿಹಾರ ಮತ್ತು ನ್ಯಾಯ ಒದಗಿಸುವ ಸಾಧ್ಯತೆಯ ಬಗ್ಗೆ ಇಂದಿನ ಮಕ್ಕಳು ಚಿಂತನೆ ಮಾಡಬೇಕಾಗಿದೆ.
          ಹಾಲಿನ ಆಯುಷ್ಯ ಕಡಿಮೆ. ಅದೇ ಹಾಲಿನೊಳಗೆ ದೀರ್ಘಾಯುಷಿಯಾದ ತುಪ್ಪವೂ ಇದೆ. ಹಾಲು ಪ್ರಕೃತಿ. ಇದಕ್ಕೆ ಸಂಸ್ಕಾರ ನೀಡಿದಾಗ ಅದು ವಿಕೃತವಾಗದೆ ಪ್ರಕೃತಿಯಾಗಿಯೇ ಉಳಿಯುವುದು. ತುಪ್ಪದ ರೂಪದಲ್ಲಿ ದೀರ್ಘಾಯುಷಿಯೂ ಆಗುವುದು. ಅದೇ ರೀತಿ ವಿಕೃತಿಗೊಳಗಾಗುವ ಪ್ರತಿಯೊಂದನ್ನೂ ಪ್ರಕೃತಿ ಸ್ವರೂಪದಲ್ಲಿಯೇ ಉಳಿಸಲು ಸಂಸ್ಕರಣೆಗೊಳಿಸುತ್ತಲೇ ಇರಬೇಕಾಗುತ್ತದೆ. ಕತ್ತಿಯು ನಿರಂತರ ಹರಿತವಾಗುಳಿಯಲು ಅದನ್ನು ಹರಿತಗೊಳಿಸುವ ಪ್ರಕ್ರಿಯೆ ನಿರಂತರ ವಾಗಿರಬೇಕು. ಅದೇ ರೀತಿ ಪ್ರತಿಯೊಬ್ಬ ಭಾರತೀಯನೂ ನಿರಂತರ ಜ್ಞಾನ, ಧ್ಯಾನಗಳ ಮೂಲಕ ಧರ್ಮಬೀರುವಾಗಿರುವಂತೆ ಕಾಪಿಡುವ ಹೊಣೆ ನಮ್ಮೆಲ್ಲರದು. ಭಾರತ ಪ್ರಕಾಶಿಸಲು ಎಲ್ಲ ರಂಗಗಳಲ್ಲೂ ಧನಾತ್ಮಕ ಅಂಶಗಳೇ ಹೊಳೆಯಾಗಿ ಹರಿಯಬೇಕು ಎಂಬ ಸೂತ್ರದ ಅನುಪಾಲನೆ ಯಾಗುತ್ತಿರಲಿ. ನಮಸ್ಕಾರ.
  .............................ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article