-->
ಪರೀಕ್ಷೆಗಳು ಮತ್ತು ಮಕ್ಕಳು

ಪರೀಕ್ಷೆಗಳು ಮತ್ತು ಮಕ್ಕಳು

           

             ಇದು ಪರೀಕ್ಷಾ ಕಾಲ. ಎಲ್.ಕೆ.ಜಿ ಯಿಂದ ಮೊದಲ್ಗೊಂಡು ವೃತ್ತಿಪರ ಕೋರ್ಸುಗಳ ತನಕ ಎಲ್ಲೆಲ್ಲೂ ವಿವಿಧ ರೀತಿಯ ಪರೀಕ್ಷೆಗಳ ಕಾಲವಿದು. ಸಹಜವಾಗಿಯೇ ವಿದ್ಯಾರ್ಥಿಗಳಲ್ಲಿ ಒಂದಷ್ಟು ಗೊಂದಲ, ಭಯ ಇದ್ದದ್ದೇ. ಪರೀಕ್ಷೆಗಳೇ ಬೇಡ, ಕಲಿಕೆಗೂ ಪರೀಕ್ಷೆಗೂ ಸಂಬಂಧವಿಲ್ಲ, ಲಿಖಿತ ಪರೀಕ್ಷೆಗಳು ಕಲಿಕೆಯ ಮಾನದಂಡವಲ್ಲ, ಪರೀಕ್ಷೆಗಾಗಿ ಕಲಿಯುವುದರಲ್ಲಿ ಅರ್ಥವಿಲ್ಲ, ಇಂತಹ ಹಲವು ಮಾತುಗಳನ್ನು ನೀವು ಕೇಳಿರಬಹುದು. ಪರೀಕ್ಷೆ ಇಲ್ಲದಿದ್ದರೆ ಕಲಿಕೆ ಆಗುತ್ತದೆಯೇ....? ಈ ಪ್ರಶ್ನೆಗೆ ಕೊರೋನಾದ ಲಾಕ್ ಡೌನ್ ಸೃಷ್ಟಿಸಿದ ಪರೀಕ್ಷಾ ರಹಿತ ವರ್ಷ ಉತ್ತರ ನೀಡಿದೆ. ಆನ್ ಲೈನ್ ಕ್ಲಾಸ್, ವಠಾರ ಶಾಲೆ ಇಂತಹ ಹಲವು ಪ್ರಯತ್ನಗಳ ನಡುವೆಯೂ ಮಕ್ಕಳ ಕಲಿಕೆ ಹಿಂದೆಯೇ ಉಳಿಯಿತು. ಬಹುತೇಕ ಮಕ್ಕಳು ಕಲಿತದ್ದನ್ನು ಪಠ್ಯದ ವಿಷಯ ಮರೆತೇ ಬಿಟ್ಟರು. ಶಾಲಾ ಕಲಿಕೆಯಲ್ಲಿ ಹಿಮ್ಮುಖ ಚಲನೆ ಈ ಸಂದರ್ಭದಲ್ಲಿ ಉಂಟಾಗಿದೆ ಎನ್ನಬಹುದು. ತಾವಿರುವ ತರಗತಿಗಿಂತ ಒಂದೆರಡು ತರಗತಿ ಹಿಂದಿನ ಸಾಮರ್ಥ್ಯದಲ್ಲಿ ಮಕ್ಕಳು ಇದ್ದಾರೆ. 
        ಮಕ್ಕಳ ಕಲಿಕೆಯನ್ನು ಒರೆಹಚ್ಚಲು ಪರೀಕ್ಷೆಗಳು ಬೇಕೇಬೇಕು. ನಮ್ಮ ಗುರುಕುಲ ಪದ್ಧತಿಯಲ್ಲಿ ಕೂಡಾ ಪರೀಕ್ಷೆಗಳಿದ್ದವು. ಆ ಪರೀಕ್ಷೆಗಳ ಸ್ವರೂಪ ಬೇರೆಯಾಗಿದ್ದವು ಅಷ್ಟೇ. ಒಮ್ಮೆ ಒಂದು ಗುರುಕುಲದಲ್ಲಿ ಹಲವು ವರ್ಷ ಕಲಿತು ಎಲ್ಲಾ ವಿದ್ಯೆಗಳನ್ನೂ ಕರಗತ ಮಾಡಿಕೊಂಡ ಶಿಷ್ಯರು ಗುರುಗಳಿಂದ ಬೀಳ್ಕೊಂಡು ಹೊರಟರು. ದಾರಿಗೆ ಅಡ್ಡಲಾಗಿ ಒಂದು ಕಡೆ ಮುಳ್ಳಿನ ರಾಶಿ ಬಿದ್ದಿತ್ತು. ಶಿಷ್ಯರು ಒಬ್ಬೊಬ್ಬರಾಗಿ ಅದರ ಬದಿಯಿಂದ ಹೇಗೋ ದಾರಿ ಮಾಡಿಕೊಂಡು ಮುಂದೆ ಹೋದರು. ಆದರೆ ಒಬ್ಬ ಶಿಷ್ಯ ನಿಧಾನವಾಗಿ ಮುಳ್ಳುಗಳನ್ನು ಸರಿಸಿ ದಾರಿಯ ಅಡಚಣೆ ನಿವಾರಿಸಿಕೊಂಡು ಮುಂದೆ ಸಾಗಿದ. ಎದುರಿಗೆ ಗುರು ನಿಂತಿದ್ದರು. ಮುಳ್ಳು ಸರಿಸಿದ ಶಿಷ್ಯನನ್ನು ಮನೆಗೆ ಕಳುಹಿಸಿದ ಅವರು ಉಳಿದವರನ್ನು ಕರೆದು ಹೇಳಿದರು. "ಈ ಮುಳ್ಳಿನ ರಾಶಿಯನ್ನು ದಾರಿ ಮಧ್ಯೆ ಇರಿಸಿದವನು ನಾನೇ. ಆದರೆ ನಾನು ಒಡ್ಡಿದ ಪರೀಕ್ಷೆಯಲ್ಲಿ ತೇರ್ಗಡೆಯಾದವನು ಅವನೊಬ್ಬನೇ. ನೀವು ಕಲಿತದ್ದು ಕೆಲವು ವಿಷಯಗಳ ಜ್ಞಾನ ಮಾತ್ರ. ನಿಜವಾದ ವಿದ್ಯೆ ನಿಮ್ಮಲ್ಲಿಲ್ಲ. ಅದನ್ನು ಕಲಿಯುವ ತನಕ ಗುರುಕುಲದಲ್ಲೇ ಇರಿ." ಎಂದರು.
       ವಿದ್ಯೆಯ ಮಹತ್ವ ಏನು? ವಿದ್ಯೆಯನ್ನು ಪರೀಕ್ಷಿಸಬೇಕಾದ ಅಗತ್ಯವೇನು ಎಂಬುದನ್ನು ತಿಳಿಸುವ ಕತೆಯಿದು. ಶಿಕ್ಷಣದ ಉದ್ದೇಶ ಮಗುವಿನ ಸರ್ವತೋಮುಖ ಬೆಳವಣಿಗೆ. ಬಹುಶಃ ನಮ್ಮ ಪರೀಕ್ಷೆಗಳು ಈ ಉದ್ದೇಶವನ್ನು ಸಮರ್ಪಕವಾಗಿ ನಿರ್ವಹಿಸುವಷ್ಟು ಸೂಕ್ತವಾಗಿಲ್ಲ. ಜ್ಞಾನ, ತಿಳುವಳಿಕೆ, ನೆನಪು ಶಕ್ತಿ ಇತ್ಯಾದಿ ಬೌದ್ಧಿಕ ಅಂಶಗಳನ್ನಷ್ಟೇ ಅದು ಪರೀಕ್ಷಿಸುತ್ತದೆ. ಇದೊಂದು ಉತ್ತಮ ಪರೀಕ್ಷಾ ಪದ್ಧತಿಯಂತೂ ಅಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಬೇರೆ ಪರೀಕ್ಷಾ ವಿಧಾನ ಸಾಧ್ಯವಿಲ್ಲ. ಅಥವಾ ಅದನ್ನು ಯಾರೂ ಅನ್ವೇಷಿಸಿಲ್ಲ. ಅನ್ವೇಷಿಸಿದರೂ ಅದು ಬೃಹತ್ ಸಂಖ್ಯೆಯಿರುವ ತರಗತಿಗಳಲ್ಲಿ ಪ್ರಾಯೋಗಿಕವೂ ಅಲ್ಲ. ಆದಕಾರಣ ಪ್ರಸ್ತುತ ಪರೀಕ್ಷಾ ಪದ್ಧತಿ ನಮ್ಮ ಅನಿವಾರ್ಯ ಅಗತ್ಯ.
        ಮಗುವು ಪ್ರತಿ ಹಂತಗಳಲ್ಲಿ ಕಲಿಯಬೇಕಾದ ಕನಿಷ್ಠ ಸಾಮರ್ಥ್ಯಗಳನ್ನು ಗಳಿಸಿದೆಯೇ? ಅವನು ಮುಂದಿನ ಸಾಮರ್ಥ್ಯ ಕಲಿಯಲು ಅರ್ಹನೇ? ಎಂಬುದನ್ನು ನಿರ್ಧರಿಸಲು ಪರೀಕ್ಷೆಗಳು ಬೇಕೇ ಬೇಕು. ವಿದ್ಯಾರ್ಥಿಗಳು ಆಟವಾಡಲು, ಟಿ.ವಿ ನೋಡಲು, ಇತರ ಮನರಂಜನೆಗಳಲ್ಲಿ ತೊಡಗಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ. ಪರೀಕ್ಷೆ ಇದೆಯೆಂದರೆ ಆ ಕಾರಣಕ್ಕಾಗಿಯಾದರೂ ಒಂದಷ್ಟು ವಿಷಯಗಳನ್ನು ಇಷ್ಟಪಟ್ಟು ಕಲಿಯುತ್ತಾರೆ. 
       ಪ್ರೀತಿಯ ಮಕ್ಕಳೇ ಪರೀಕ್ಷೆಗಳು ಕಲಿಕೆಯನ್ನು ಅಳೆಯುವ ಮಾನದಂಡಗಳು ಹೌದು. ಪರೀಕ್ಷೆಗಳ ಬಗ್ಗೆ ಭಯ ಬೇಡ. ಆದರೆ ಪರೀಕ್ಷೆಗಳ ಕುರಿತು ತೀರಾ ನಿರ್ಲಕ್ಷ್ಯವೂ ಒಳ್ಳೆಯದಲ್ಲ. ಪರೀಕ್ಷೆಗಳು ನಿಮ್ಮ ಕಲಿಕೆಯನ್ನು ಗಟ್ಟಿಗೊಳಿಸುವ ಸಾಧನಗಳಾಗಿವೆ. ನಿಮ್ಮ ಕಲಿಕೆಯ ಹಾದಿಯನ್ನು ತಿಳಿಸಿಕೊಡುವ ಮಾರ್ಗಸೂಚಿಗಳಾಗಿವೆ. ನಿಮ್ಮ ಸಾಮರ್ಥ್ಯವನ್ನು ನಿಮಗೇ ತೋರಿಸಿಕೊಡುವ ಕನ್ನಡಿಗಳಾಗಿವೆ. ಹಾಗಾಗಿ ಪರೀಕ್ಷೆಯಲ್ಲಿ ಸಾಕಷ್ಟು ಪೂರ್ವಸಿದ್ಧತೆ ಅಂದರೆ ಓದಿನ ತಯಾರಿ ಅಗತ್ಯವಿದೆ. ಒಮ್ಮೆ ಕಲಿತದ್ದು ಸದಾ ನಮ್ಮ ಮನದಲ್ಲಿ ಉಳಿಯಬೇಕು. ಹಾಗೆ ಉಳಿಯಬೇಕಾದರೆ ಕಲಿಕೆಯಲ್ಲಿ ಶ್ರದ್ಧೆ , ಆಸಕ್ತಿ ಬೇಕು. ಕಲಿಯುವ ವಿಷಯದ ಕುರಿತ ಪ್ರೀತಿ ಬೇಕು. ಕಲಿಯುವುದರ ಉದ್ದೇಶದ ಅರಿವಿರಬೇಕು. ಆದುದರಿಂದ ಮುದ್ದು ಮಕ್ಕಳೇ ಪರೀಕ್ಷೆಗಾಗಿ ಕಲಿಯಬೇಡಿ. ಜ್ಞಾನ ಗಳಿಸಲು ಕಲಿಯಿರಿ. ವಿಷಯಗಳನ್ನು ತಿಳಿದುಕೊಳ್ಳಲು ಕಲಿಯಿರಿ. ಕುತೂಹಲ ತಣಿಸಲು ಕಲಿಯಿರಿ. ಸಾಧನೆ ಮಾಡಲಿಕ್ಕಾಗಿ ಕಲಿಯಿರಿ. ಭಾಷಾ ಸಾಮರ್ಥ್ಯ ಹೆಚ್ಚಿಸಲು , ಗಣಿತದ ಸಾಮರ್ಥ್ಯ ಹೆಚ್ಚಿಸಲು ಕಲಿಯಿರಿ. ಜೀವನದಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಅನ್ವಯ ಮಾಡಿಕೊಳ್ಳಲು ಕಲಿಯಿರಿ. ಕಲಿತದ್ದರ ಮೌಲ್ಯಮಾಪನಕ್ಕಾಗಿ ನಡೆಯುವ ಪರೀಕ್ಷೆಗಳನ್ನು ಪ್ರೀತಿಯಿಂದ, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಎದುರಿಸಿ. ಕಲಿತು ಮಾನಸಿಕ, ಬೌದ್ಧಿಕ ಹಾಗೂ ಸಾಮಾಜಿಕವಾಗಿ ಬೆಳೆಯಿರಿ. ಸರ್ವತೋಮುಖ ವ್ಯಕ್ತಿತ್ವದ ಅಭಿವೃದ್ಧಿಗಾಗಿ ಕಲಿಯಿರಿ. ಕಲಿಕೆಯ ವಿವಿಧ ವಿಷಯಗಳಲ್ಲಿ ಅಡಗಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ. ಶುಭ ಹಾರೈಕೆಗಳೊಂದಿಗೆ.....
..................................................ಜೆಸ್ಸಿ ಪಿ.ವಿ
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article