-->
ಜೀವನ ಸಂಭ್ರಮ : ಸಂಚಿಕೆ - 29

ಜೀವನ ಸಂಭ್ರಮ : ಸಂಚಿಕೆ - 29

ಜೀವನ ಸಂಭ್ರಮ : ಸಂಚಿಕೆ - 29


              ಉತ್ತಮನಾಗು, ಉಪಕಾರಿಯಾಗು.
           --------------------------------------
      ಮಕ್ಕಳೇ , ನಾವು ಜೀವನದಲ್ಲಿ ಸಂಭ್ರಮದಿಂದ ಇರಬೇಕಾದರೆ ಉತ್ತಮ ನಾಗಬೇಕು ಜೊತೆಗೆ ಉಪಕಾರಿ ಆಗಬೇಕು. ಉತ್ತಮನಾಗು ಎಂದರೇನು.....? ಉತ್ತಮನಾಗು ಎಂದರೆ, ಯಾವುದನ್ನೂ ಕೆಡಿಸಬಾರದು. ದೇಹವಾಗಲೀ, ಆರೋಗ್ಯವಾಗಲಿ, ಮನೆಯಾಗಲಿ, ಮನಸ್ಸಾಗಲಿ, ಊರುಕೇರಿಯಾಗಲಿ ಮತ್ತು ಪರಿಸರವೇ ಆಗಲಿ. ಯಾವುದನ್ನು ಕೆಡಿಸಬಾರದು. ಅದೇ ರೀತಿ ಊಟ ವಾಗಲಿ , ಚಿಂತನೆಯಾಗಲಿ , ಆಲೋಚನೆ ಯಾಗಲಿ, ಸಂತೋಷ , ಸಂಭ್ರಮ ಯಾವುದೇ ಆದರೂ ಕೂಡಾ ಕೆಡಿಸಬಾರದು.
         ನಾವು ಭೂಮಿಯನ್ನು ಕ್ಷಮಯಾಧರಿತ್ರಿ ಎನ್ನುತ್ತೇವೆ. ಅಂದರೆ ಎಲ್ಲವನ್ನು ಧರಿಸಿದ್ದು, ಕ್ಷಮಿಸುವವಳು ಎಂದರ್ಥ. ಭೂಮಿ ನಮಗೆ ವಾಸಿಸಲು, ಜೀವಿಸಲು ಬೇಕಾದ ವ್ಯವಸ್ಥೆ ಮಾಡುತ್ತದೆ. ನಾವು ಬದುಕಿರಲು ಆಹಾರ ಒದಗಿಸುವುದು ಭೂಮಿ. ಆಹಾರ ಬೆಳೆಯಲು ಭೂಮಿ ಅಗತ್ಯ ಆದರೂ, ನಾವು ಭೂಮಿಯನ್ನು ಮಲ-ಮೂತ್ರ , ಪ್ಯಾಸ್ಟಿಕ್ - ಕಸ , ಮತ್ತು ಕೈಗಾರಿಕಾತ್ಯಾಜ್ಯ ಬೇಕೆಂದಲ್ಲಿ ಬಿಸಾಡಿ , ಭೂಮಿಯನ್ನು ಕೆಡಿಸುತ್ತಿದ್ದೇವೆ, ಅದೂ ಅಲ್ಲದೆ ಭೂರಚನೆಗೆ ತೊಂದರೆಯಾಗುವಂತೆ ಅಭಿವೃದ್ಧಿ ಚಟುವಟಿಕೆಗಳಾದ ರಸ್ತೆ, ರೈಲು ಮಾರ್ಗ, ಅಣೆಕಟ್ಟು ಮತ್ತು ಗಣಿಗಾರಿಕೆ ಮಾಡಿ ,ಅದರ ಮೂಲ ರಚನೆಗೆ ತೊಂದರೆ ಮಾಡುತ್ತಿದ್ದೇವೆ. ಭೂಮಿ ಇದನ್ನೆಲ್ಲಾ ಸಹಿಸಿಕೊಂಡು ನಮಗೆ ಬೇಕಾದ ಆಹಾರ , ಹಣ್ಣುಗಳನ್ನು ನೀಡಿ ಸಲಹುತ್ತಿದೆ. ಹಾಗಾಗಿ ನಾವು ಅದನ್ನು ಮಲಿನಗೊಳಿಸದೆ, ಮೂಲ ರಚನೆಗೆ ತೊಂದರೆ ಮಾಡದೆ, ಇರುವ ಭೂಮಿಯನ್ನು ವಿವಿಧ ಗಿಡಗಳನ್ನು ನೆಡುವ ಮೂಲಕ ಅಲಂಕಾರ ಮಾಡಿ ಆನಂದಪಡಬೇಕು. 
        ಗಾಳಿಯನ್ನು ಇಂದು ನಾವು ಮಲಿನ ಮಾಡುತ್ತಿದ್ದೇವೆ. ವಾಹನಗಳು ಬಿಡುವ ಹೊಗೆ , ಕೈಗಾರಿಕೆಗಳು ಬಿಡುವ ಕಾರ್ಬನ್, ನೈಟ್ರೋಜನ್ ಮತ್ತು ಗಂಧಕದ ಸಂಯುಕ್ತಗಳು ಗಾಳಿಯನ್ನು ಮಲಿನ ಮಾಡುತ್ತಿವೆ. ಜೀವಿಗಳು ಬದುಕಿರುವುದು ಗಾಳಿಯಿಂದ. ಗಾಳಿಯಿಂದ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ದೊರಕದೇ ಹೋದರೆ ಜೀವಿಗಳು ಬದುಕುವುದು ಅಸಾಧ್ಯ. ಹೆಚ್ಚುವರಿ ಆಮ್ಲಜನಕ ಓಝೋನ್ ಆಗಿ, ಸೂರ್ಯನಿಂದ ಭೂಮಿಯನ್ನು ರಕ್ಷಿಸಿ ರಕ್ಷಾಕವಚದಂತೆ ಕೆಲಸ ಮಾಡುತ್ತಿದೆ. ನಾವು ಬಳಸುವ ಶೀತಕಾರಿ ಫ್ರಿಡ್ಜ್ ಗಳಿಂದ ಬಿಡುಗಡೆಯಾಗುವ cfc ಗಳು ಓಜೋನ್ ಪದರವನ್ನು ತೆಳು ಮಾಡಿ, ರಂದ್ರ ಮಾಡಿ , ಮುಂದೆ ಚರ್ಮದ ಕ್ಯಾನ್ಸರ್ ನಂಥ ಕಾಯಿಲೆಗಳು ಬರಲು ಕಾರಣವಾಗುತ್ತದೆ. ಹಾಗಾಗಿ ನಾವು ಗಾಳಿಯನ್ನು ಮಲಿನ ಮಾಡದಂತೆ ನೋಡಿಕೊಳ್ಳಬೇಕು.
        ನೀರು..... ಪ್ರತಿ ಜೀವಿಯ ಶೇಕಡ 70ರಷ್ಟು ನೀರಿನಿಂದಾಗಿದೆ. ಯಾವುದೇ ಜೀವಿ ಬದುಕಲು ನೀರಿಲ್ಲದೆ ಸಾಧ್ಯವಿಲ್ಲ. ಆದರೆ ಇಂದು ನಾವು ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆ ಮಾಡಿ , ಕೈಗಾರಿಕಾ ತ್ಯಾಜ್ಯ ನೀರಿಗೆ ಬಿಡುವುದರಿಂದ ನೀರು ಮಲಿನವಾಗುತ್ತಿದೆ. ಭೂಮಿಯ ನೀರಿನಲ್ಲಿ ಕರಗುವ ಫ್ಲೋರೈಡ್ ನಂತಹ ಲವಣಗಳಿಂದ ನೀರು ಮನುಷ್ಯನ ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ನೀರು ಮಲಿನಗೊಂಡಲ್ಲಿ ಅನೇಕ ಸಾಂಕ್ರಾಮಿಕ ರೋಗಗಳನ್ನು ಹರಡುತ್ತದೆ. ಸ್ವಚ್ಛ ಶುದ್ಧ ನೀರಿನಿಂದ ಬಹುತೇಕ ರೋಗಗಳನ್ನು ತಡೆಗಟ್ಟಬಹುದು.
          ಮಕ್ಕಳೇ, ಯಾವುದು ನಮಗೆ ರಕ್ಷಣೆ ಮತ್ತು ಪೋಷಣೆ ಮಾಡುತ್ತದೆಯೋ ಅದನ್ನು ದೇವರು ಎಂದು ಕರೆಯುತ್ತೇವೆ. ತಂದೆ-ತಾಯಿಗಳಂತೆ ಭೂಮಿ , ನೀರು ಮತ್ತು ಗಾಳಿ ನಮಗೆ ರಕ್ಷಣೆ ಮತ್ತು ಪೋಷಣೆ ಮಾಡುವುದರಿಂದ , ಇವುಗಳನ್ನು ನಾವು ದೇವರೆಂದು ಕಾಣುತ್ತೇವೆ. ಆದುದರಿಂದ ಯಾವುದೇ ಸಂದರ್ಭ ಸನ್ನಿವೇಶ ಬಂದರೂ ಗಾಳಿ , ನೀರು ಮತ್ತು ಭೂಮಿಯನ್ನು ಕೆಡದಂತೆ ನೋಡಿಕೊಳ್ಳಬೇಕು. ಈ ಸಂಪನ್ಮೂಲಗಳನ್ನು ನಾವು ಸಂಭ್ರಮದಲ್ಲಿ ಬಳಸಿ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕು. ಯಾವುದನ್ನು ಕೆಡಿಸಬಾರದು ಎಂದರೆ ಇವುಗಳನ್ನು ನಮ್ಮ ಜೀವನದಷ್ಟೇ ಪ್ರೀತಿಸಬೇಕು. ಪ್ರೀತಿಯೊಂದೇ ಇದನ್ನು ಕಾಪಾಡಲು ಸಾಧ್ಯ. ಇವು ಎಂದೂ ನಮಗೆ ತಾರತಮ್ಯ ಮಾಡಿಲ್ಲ. ಸೂರ್ಯನ ಬೆಳಕಾಗಲಿ , ಭೂಮಿಯಾಗಲಿ , ಗಾಳಿಯಾಗಲಿ ಮತ್ತು ನೀರಾಗಲಿ....... ಇವುಗಳು ಶ್ರೀಮಂತರಿಗೆ ಮತ್ತು ಒಳ್ಳೆಯವರಿಗೆ ಮಾತ್ರ ದೊರಕಬೇಕೆಂದು ಭಾವಿಸಿಲ್ಲ. ದುಷ್ಟರಿಗೆ ದೊರಕಬಾರದು ಎನಿಸಿಲ್ಲ. ನಾವು ಮಾಡುವ ತಪ್ಪನ್ನು ಕ್ಷಮಿಸಿ ಪ್ರತಿಯೊಬ್ಬರಿಗೂ ಸಮಾನವಾಗಿ ಎಲ್ಲವನ್ನೂ ನೀಡುತ್ತದೆ. ಅವುಗಳೇನಾದರೂ ಮನುಷ್ಯನಂತೆ ತಾರತಮ್ಯ ಮಾಡಿದ್ದಾದರೆ ಇಷ್ಟೊಂದು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳು ಇರಲು ಸಾಧ್ಯವಿರುತ್ತಿರಲಿಲ್ಲ. ಇವುಗಳಲ್ಲಿ ಯಾವುದಾದರೊಂದು ವ್ಯತ್ಯಾಸ ಮಾಡಿದರೂ ನಾವು ಯಾರೂ ಇರುವುದಿಲ್ಲ. ಆದ್ದರಿಂದ ಇವುಗಳನ್ನು ದೇವರೆಂದು ಭಾವಿಸಿ, ಪೂಜ್ಯನೀಯ ಎಂದು ಭಾವಿಸಿ, ಕೆಡದಂತೆ ನೋಡಿಕೊಳ್ಳಬೇಕು. ಈ ಭಾವನೆ ಬರಬೇಕಾದರೆ , ನಮ್ಮ ಚಿಂತನೆ, ಆಲೋಚನೆ , ಸಂತೋಷ ಕೆಡಬಾರದು. ಇದಕ್ಕಾಗಿ ಧನಾತ್ಮಕವಾದ ಆಲೋಚನೆ, ಚಿಂತನೆ , ಸಂತೋಷ , ಪ್ರೀತಿ ಮತ್ತು ಪ್ರೇಮ ಅಗತ್ಯ. ನಮ್ಮ ದುಃಖಕ್ಕೆ , ದುರಾಲೋಚನೆಗೆ , ದ್ವೇಷಕ್ಕೆ ಕಾರಣವಾದ ಅಂಶಗಳು ಘಟನೆಗಳು ಜರುಗುತ್ತದೆ. ಅವುಗಳನ್ನು ದ್ವೇಷಿಸದೆ ಉಪೇಕ್ಷೆ ಮಾಡಬೇಕು. ಉಪೇಕ್ಷೆ ಎಂದರೆ ಅವುಗಳ ಕಡೆ ನೋಡದೆ , ಕೇಳದೆ , ಮಾತನಾಡದೆ ಇರುವುದು ಬಹಳ ಮುಖ್ಯ. ದ್ವೇಷಿಸಿದರೆ ಇದು ನಮ್ಮ ಚಿಂತನೆ ಮೇಲೆ ಪ್ರಭಾವ ಬೀರುತ್ತದೆ. ಯಾವುದು ನಮ್ಮಲ್ಲಿ ನಕಾರಾತ್ಮಕ ಚಿಂತನೆ ಉಂಟು ಮಾಡುತ್ತದೆಯೋ ಅದನ್ನು ಉಪೇಕ್ಷೆ ಮಾಡಬೇಕು.
       ಉಪಕಾರಿಯಾಗು ಎಂದರೆ ನಮ್ಮಲ್ಲಿ ಇರುವುದನ್ನು ಹಂಚಿಕೊಂಡು ಸಂತೋಷದಿಂದ ಬಾಳಬೇಕು. ನಮ್ಮಲ್ಲಿ ಹಣ ಇರಬಹುದು. ದಿನಸಿ ಇರಬಹುದು. ತರಕಾರಿ ಇರಬಹುದು. ಜ್ಞಾನ ಇರಬಹುದು. ನಮ್ಮಲ್ಲಿ ಯಾವುದು ಇದೆಯೋ ಅದನ್ನು ಹಂಚಿಕೊಂಡು ನಾವು ಮತ್ತು ಸಮಾಜ ಸಂಭ್ರಮದಿಂದ ಬದುಕುವಂತೆ ನೋಡಿಕೊಳ್ಳಬೇಕು. ಇದು ಅಸಾಧ್ಯವಾದಾಗ ಕನಿಷ್ಠ.... ಕಷ್ಟ ಹೇಳಿಕೊಳ್ಳುವವರಿಗೆ ಸಮಯ ನೀಡಿ ಸಮಾಧಾನವನ್ನಾದರೂ ಹೇಳಬಹುದು. ಕಡೇಪಕ್ಷ ಅವರ ಕಣ್ಣೀರನ್ನಾದರೂ ಒರೆಸುವ ಪ್ರೀತಿ ಇರಬೇಕು. 
     ಬದುಕನ್ನು ಪ್ರೀತಿಸುವ , ಜೀವನವನ್ನು ಸಂಭ್ರಮಿಸುವ ಚಿತ್ತ ನಮ್ಮೆಲ್ಲರದಾಗಿರಲಿ......
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article