-->
ಹಕ್ಕಿ ಕಥೆ : ಸಂಚಿಕೆ - 40

ಹಕ್ಕಿ ಕಥೆ : ಸಂಚಿಕೆ - 40

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


                   
                 ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಮಾರ್ಚ್ ತಿಂಗಳು ಬಂತೆಂದರೆ ಪರೀಕ್ಷೆಗಳ ಕಾಲ. ಮಕ್ಕಳಿಗೆ ಪರೀಕ್ಷೆ ಪ್ರಾರಂಭವಾದರೆ ಶಾಲೆಯಲ್ಲಿ ಒಂಥರಾ ಮೌನ ಆವರಿಸಿಕೊಂಡು ಬಿಡುತ್ತದೆ. ಪರೀಕ್ಷೆಯ ಪತ್ರಿಕೆ ಕೊಟ್ಟು ಸ್ವಲ್ಪ ಹೊತ್ತಿನವರೆಗಂತೂ ಒಬ್ಬರದ್ದೂ ಸದ್ದಿಲ್ಲ. ಹೀಗೆ ತರಗತಿಯಲ್ಲಿ ಪರೀಕ್ಷೆ ನಡೆಯುವಾಗ ಇರುತ್ತಿದ್ದ ಮೌನದಲ್ಲಿ ಯಾವುದೋ ಹಕ್ಕಿ ಕೂಗಿದ ಶಬ್ದ ಕೇಳುತ್ತಿತ್ತು. ಹೆಚ್ಚಾಗಿ ಬೆಳಗ್ಗಿನ ಹೊತ್ತು ಮತ್ತು ಸಾಯಂಕಾಲದ ಹೊತ್ತಿನಲ್ಲಿ ಮಾತ್ರ ಈ ಸದ್ದನ್ನು ಕೇಳಬಹುದಾಗಿತ್ತು. ಒಂದು ದಿನ ಶಾಲೆಯ ಲೈಬ್ರೆರಿಯಲ್ಲಿ ಬಿಡುವಾಗಿ ಕುಳಿತಿದ್ದೆ. ಯಾವ ಸದ್ದುಗದ್ದಲ ಇರಲಿಲ್ಲ. ಲೈಬ್ರೆರಿಯ ಹಿಂದುಗಡೆ ಯಾವುದೋ ಹಕ್ಕಿ ನಡೆದಾಡಿದ ಶಬ್ದ ಕೇಳಿಸಿತು. ಸ್ವಲ್ಪವೂ ಮಿಸುಕಾಡದೆ ಹೊರಗಡೆಗೆ ನೋಡಲಾರಂಭಿಸಿದೆ. ಹೇಂಟೆಯೊಂದು ಅಲ್ಲೇ ಸುತ್ತಾಡುತ್ತಾ ನಿಧಾನವಾಗಿ ಶಾಲೆಯ ಹಿಂದಿನ ಗುಡ್ಡವನ್ನು ಹತ್ತಿಕೊಂಡು ಹೋಗುತ್ತಿತ್ತು. ಅರೆ ಇದೇನೋ ಮಾಮೂಲಿ ಕೋಳಿ ಇರಬೇಕು ಎಂದುಕೊಂಡು ಸುಮ್ಮನಾದೆ. ಸ್ವಲ್ಪಹೊತ್ತಿನಲ್ಲೇ ಹುಂಜವೊಂದು ಅದೇ ದಾರಿಯಾಗಿ ನಡೆಯುತ್ತಾ ಹೋಯಿತು. ಗುಡ್ಡದ ಮೇಲೆ ಹೋದ ಹುಂಜ ತನ್ನ ಸಂಗಾತಿಯನ್ನು ಜೋರಾಗಿ ಕೂಗಿ ಕರೆಯಿತು. ತೆಕ್ ತೆಕೋ - ತೆಕೋ ತೆಕ್ ಎಂಬ ಅದರ ಕೂಗು ಕೇಳಿದಾಗ ಅರೆ ಇದೇನಿದು ಹುಂಜ ಹೀಗೆ ವಿಚಿತ್ರವಾಗಿ ಕೂಗುತ್ತಿದೆಯಲ್ಲಾ ಎಂದು ಆಷ್ಚರ್ಯವಾಯಿತು. 
          ಕೆಲವು ದಿನಗಳ ನಂತರ ನಮ್ಮ ಪಕ್ಷಿ ವೀಕ್ಷಕರ ಗುಂಪಿನಲ್ಲಿ ಯಾರೋ ಈ ಹಕ್ಕಿಯ ಚಿತ್ರ ಹಾಕಿ ಅದರ ಕೆಳಗೆ ಕಾಡು ಕೋಳಿ ಎಂದು ಹೆಸರು ಹಾಕಿದ್ದರು. ಆಗಲೇ ನನಗೆ ತಿಳಿದದ್ದು ನಾನು ಅಂದು ನೋಡಿದ್ದು ಊರಕೋಳಿ ಅಥವಾ ನಾಟಿಕೋಳಿ ಅಲ್ಲ ಕಾಡುಕೋಳಿ ಎಂದು. ಆ ನಂತರ ಅನೇಕ ಬಾರಿ ತೆಕ್ ತೆಕೋ-ತೆಕೋ ತೆಕ್ ಎಂಬ ಕೂಗನ್ನು ಕೇಳಿದಾಗಲೆಲ್ಲ ಕಿವಿ ನೆಟ್ಟಗಾಗುತ್ತದೆ. ಖಂಡಿತವಾಗಿ ಅಲ್ಲೆಲ್ಲೋ ಕಾಡುಕೋಳಿ ಓಡಾಡುವುದು ತಿಳಿಯುತ್ತದೆ ಆದರೆ ಕಾಣಲು ಸಿಗುವುದು ಅಪರೂಪ. 
         ಒಂದು ಬಾರಿ ಶೃಂಗೇರಿಯ ಪಕ್ಕದ ಹಳ್ಳಿಗೆ, ನಮ್ಮ ನೆಂಟರ ಮನೆಗೆ ಹೋಗಿದ್ದೆ. ನನ್ನ ಪಕ್ಷಿವೀಕ್ಷಣೆಯ ಹವ್ಯಾಸದ ಬಗ್ಗೆ ತಿಳಿದಿದ್ದ ಮನೆಯ ಹುಡುಗ ಅಭಿಜಿತ್, ಅಣ್ಣಾ ವಾಕಿಂಗ್ ಹೋಗೋಣ ಬರ್ತೀರಾ. ಕ್ಯಾಮರಾನೂ ಹಿಡಿದುಕೊಳ್ಳಿ ಯಾವುದಾದರೂ ಹಕ್ಕಿ ನೋಡಲಿಕ್ಕೆ ಸಿಗಬಹುದು ಎಂದು ಕರೆದ. ಮಲೆನಾಡಿನ ತಂಪಾದ ವಾತಾವರಣದಲ್ಲಿ ಬೆಳಗ್ಗೆ ಅಥವಾ ಸಾಯಂಕಾಲ ವಾಕಿಂಗ್ ಹೋಗುವುದೆಂದರೆ ಸ್ವರ್ಗಕ್ಕೆ ಮೂರೇ ಗೇಣು. ಬರೋದಿಲ್ಲ ಅನ್ನಲು ಸಾದ್ಯವೇ ಇಲ್ಲ. ನಾನು ಮತ್ತು ಅಭಿ ಅವರ ತೋಟದ ಮೂಲಕ ಹೊರಟು ಕಾಡುದಾರಿಯಾಗಿ ವಾಕಿಂಗ್ ಹೋಗುತ್ತಿದ್ದವು. ಅಣ್ಣಾ ಅದ್ಯಾವ ಹಕ್ಕಿ ಎಂದು ತೋರಿಸಿ ಹಕ್ಕಿಗಳ ಪರಿಚಯ ಮಾಡಿಕೊಳ್ಳುತ್ತಿದ್ದ ಅಭಿ ಒಮ್ಮೆಗೇ ಅಲ್ಲಿ ನೋಡಿ ಗದ್ದೆಯ ಬದಿಯಲ್ಲಿ ಕೋಳಿಗಳು ಓಡಾಡುತ್ತಾ ಇದ್ದಾವೆ ಎಂದ. ಅವನು ಹೇಳಿದ ಬೆನ್ನಲ್ಲೇ ತೆಕ್ ತೆಕೋ-ತೆಕೋ ತೆಕ್ ಎಂಬ ಕೂಗು ಸಹಾ ಕೇಳಿಸಿತು. ಆ ಕಡೆ ತಿರುಗಿ ನೋಡಿದರೆ ಕಾಡು ಕೋಳಿಗಳು ಗದ್ದೆಯ ಅಂಚಿನಲ್ಲಿ ಕಾಣಿಸಿದವು. ಬಾಯಿ ತುಂಬಾ ಮಾತನಾಡುತ್ತಿದ್ದ ಅಭಿಗೆ ಸ್ವಲ್ಪ ಹೊತ್ತು ಮೌನವಾಗಿರಲು ಹೇಳಿ ನಿಧಾನವಾಗಿ ಅವುಗಳಿಗೆ ತಿಳಿಯದಂತೆ ಅಡಗುತ್ತಾ ಫೋಟೋ ತೆಗೆಯಲು ಸಾಧ್ಯವಾಗುವಷ್ಟು ಹತ್ತಿರ ಹೋದೆ. ನಿಧಾನಕ್ಕೆ ನಾಲ್ಕಾರು ಫೋಟೋ ತೆಗೆಯುವಷ್ಟರಲ್ಲಿ ನಾಯಿಯೊಂದು ಬಂದುಬಿಟ್ಟಿತು. ಯಾರದ್ದೋ ಗದ್ದೆಯ ಒಳಗೆ ಫೋಟೋ ತೆಗೆಯಲು ಹೋಗಿದ್ದ ನನಗೆ ಜೋರುಮಾಡಲು ಬಂದ ನಾಯಿ ಬೊಗಳಿದ ಸದ್ದು ಕೇಳಿ ಕಾಡುಕೋಳಿಗಳು ಪಕ್ಕದ ಮರದ ಮೇಲೆ ಹೋಗಿ ಅಡಗಿಕೊಂಡವು. ಮತ್ತೆ ಕೆಳಗೆ ಬರಲೇ ಇಲ್ಲ. ನಾಯಿಯಿಂದ ನನ್ನನ್ನು ಕಾಪಾಡಲು ಅಭಿ ಬಾರದೇ ಇದ್ದರೆ ನಾನು ಹೊಟ್ಟೆಯ ಸುತ್ತ ಇಂಜೆಕ್ಷನ್ ಪಡೆಯಬೇಕಾಗಿತ್ತು. ಮುಂದೆ ಅನೇಕಬಾರಿ ಕಾಡುದಾರಿಯಲ್ಲಿ, ಹಳ್ಳಿ ದಾರಿಯಲ್ಲಿ ಈ ಕಾಡುಕೋಳಿ ಹಾದು ಹೋಗುವುದನ್ನು ನೋಡಿದ್ದೇನೆ.
       ಶಾಲೆಗೆ ಬೇಸಿಗೆ ರಜೆ ಸಿಗುವುದಕ್ಕೂ ಈ ಹಕ್ಕಿಗೂ ಒಂದು ಅವಿನಾಭಾವ ಸಂಬಂಧ. ಬೇಸಗೆಯ ಮಾರ್ಚ್ ನಿಂದ ಮೇ ತಿಂಗಳವರೆಗೆ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ. ಆಗ ಈ ಹಕ್ಕಿಯ ಕೂಗನ್ನು ಸುಲಭವಾಗಿ ಕೇಳಿಸಿಕೊಳ್ಳಬಹುದು. ನಮ್ಮ ಊರಿನ ಕೋಳಿಗಿಂತ ಸ್ವಲ್ಪ ಗಿಡ್ಡವಾದ ಕಾಲುಗಳು, ಫೋಟೋದಲ್ಲಿ ಕಾಣುವ ಅದೇ ಬೂದು ಬಣ್ಣ, ಬಾಲದಲ್ಲಿ ಕಾಣುವ ಎರಡರಿಂದ ಮೂರು ಉದ್ದನೆಯ ಗರಿಗಳು, ತುಂಬ ನಾಚಿಕೆ ಸ್ವಭಾವ, ಅಪಾಯ ಅನಿಸಿದರೆ ಎತ್ತರವಾದ ಮರದಮೇಲೆ ಹಾರಿ ಕುಳಿತುಕೊಳ್ಳುವಷ್ಟು ಚುರುಕಾದ ಹಾರಾಟ , ಇವುಗಳು ಕಾಡುಕೋಳಿಯ ಮುಖ್ಯ ಲಕ್ಷಣಗಳು. ಇದೇ ತರಹದ ಆದರೆ ಕೆಂಪು ಬಣ್ಣದ ಎದೆ ಇರುವ ಕಾಡುಕೋಳಿ ಉತ್ತರ ಭಾರತದಲ್ಲಿ ನೋಡಲು ಸಿಗುತ್ತದೆಯಂತೆ. ಕೆಲವೊಮ್ಮೆ ಹಳ್ಳಿಗಳಲ್ಲಿ ಕಟ್ಟಿಗೆ ತರಲೆಂದು ಕಾಡಿಗೆ ಹೋದವರು, ಕಾಡುಕೋಳಿಯ ಮೊಟ್ಟೆ ತಂದು ಊರಿನ ಕೋಳಿಯ ಗೂಡಿನಲ್ಲಿ ಇಟ್ಟು ಮರಿ ಮಾಡಿ ಸಾಕುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇನೆ. ನಾವೀಗ ಸಾಕುವ ಊರಿನ ಕೋಳಿಗಳ ಮೂಲ ಇವೇ ಕಾಡುಕೋಳಿಗಳು ಇರಬಹುದು. ಬೇಸಿಗೆ ರಜೆ ಸಿಕ್ಕಾಗ ಹಳ್ಳಿಯಲ್ಲಿರುವ ಅಜ್ಜಿಮನೆಗೆ ಅಥವಾ ನೆಂಟರ ಮನೆಗೆ ಹೋದರೆ ಕಾಡುಕೋಳಿ ನೋಡಲು ಮರೆಯಬೇಡಿ. 
ಕನ್ನಡದ ಹೆಸರು: ಕಾಡುಕೋಳಿ 
ಇಂಗ್ಲೀಷ್ ಹೆಸರು: Grey Junglefowl
ವೈಜ್ಞಾನಿಕ ಹೆಸರು: Gallus sonneratii
ಛಾಯಾಚಿತ್ರ : ಅರವಿಂದ ಕುಡ್ಲ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article