-->
ಪರೀಕ್ಷಾ ಹಬ್ಬಕ್ಕೆ ದಿನಗಣನೆ....

ಪರೀಕ್ಷಾ ಹಬ್ಬಕ್ಕೆ ದಿನಗಣನೆ....


                 ಪರೀಕ್ಷಾ ಹಬ್ಬಕ್ಕೆ ದಿನಗಣನೆ....
             ಮಾರ್ಚ್-ಏಪ್ರಿಲ್ ಬಂತೆಂದರೆ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯ. ಅದರಲ್ಲೂ ವಿಶೇಷವಾಗಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆಚ್ಚಿನ ಪ್ರಾಶಸ್ತ್ಯವಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಪರೀಕ್ಷಾ ದಿನ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಏನೋ ಒಂದು ಗೊಂದಲ, ತಳಮಳ. ಓದಿದ್ದು ಮರೆತು ಹೋಗುವುದು, ಸರಿಯಾಗಿ ನಿದ್ರೆ ಬಾರದಿರುವುದು, ಆರೋಗ್ಯ ಹದಗೆಡುವುದು, ಪರೀಕ್ಷಾ ಕೊಠಡಿಯಲ್ಲಿ ಭಯದಿಂದ ಕಲಿತದ್ದು ಮರೆತುಹೋಗುವುದು ಮುಂತಾದ ಸಾಮಾನ್ಯ ಸಮಸ್ಯೆಗಳನ್ನು ಓದಿದ ಹೆಚ್ಚಿನ ವಿದ್ಯಾರ್ಥಿಗಳು ನಮ್ಮ ಮುಂದೆ ಹಂಚಿಕೊಳ್ಳುವ ಅನುಭವವನ್ನು ನಾವೆಲ್ಲರೂ ಸಾಮಾನ್ಯವಾಗಿ ನೋಡಿದ್ದೇವೆ, ಕೇಳಿದ್ದೇವೆ ಮತ್ತು ಅನುಭವಿಸಿದ್ದೇವೆ.                ವರ್ಷವಿಡೀ ಕಲಿತ ವಿಷಯಾಂಶಗಳನ್ನು ಗ್ರಹಿಸಿ ಮೂರು ಗಂಟೆಗಳಲ್ಲಿ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅತ್ಯಂತ ಸವಾಲಿನ ಸಂಗತಿಯೇ ಸರಿ. ಮಕ್ಕಳನ್ನು ಪರೀಕ್ಷೆಗೆ ಹೇಗೆ ಸಿದ್ಧಗೊಳಿಸಬೇಕೆಂಬ ಒತ್ತಡ ಶಿಕ್ಷಕರು ಮತ್ತು ಪೋಷಕರಲ್ಲಿದ್ದರೆ ಓದಿದ್ದನ್ನು ಹೇಗೆ ಬರೆಯಬೇಕೆಂಬ ಒತ್ತಡ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಇಡೀ ವರ್ಷದ ಕಲಿಕಾ ಪ್ರಕ್ರಿಯೆಯ ಗ್ರಹಿಕೆಯನ್ನು ಅರಿಯುವ ಒಂದು ಕ್ರಮವೇ ಪರೀಕ್ಷೆಗಳು. ಕಲಿಕೆಯನ್ನು ಅಂಕಗಳ ಆಧಾರದಲ್ಲಿ ಅಳೆಯುವ ಒಂದು ಮಾನದಂಡ ಎಂದರೆ ತಪ್ಪಾಗಲಾರದು. ಪರೀಕ್ಷೆಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳ ಜ್ಞಾನ , ಗ್ರಹಿಕೆ , ಅಭಿವ್ಯಕ್ತಿ ಮತ್ತು ಕೌಶಲಗಳನ್ನು ಒರೆ ಹಚ್ಚುತ್ತವೆ. ಎಷ್ಟೇ ಓದಿ ತಯಾರಾಗಿದ್ದರೂ , ಎಂತಹ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರೂ , ಪರೀಕ್ಷೆ ಯ ಸಮಯದಲ್ಲಿ ಒಂದಲ್ಲ ಒಂದು ರೀತಿಯ ಭಯ ಮತ್ತು ಆತಂಕ ಸುಳಿಯುತ್ತಿರುತ್ತದೆ.     
             ಪರೀಕ್ಷೆಯಲ್ಲಿನ ಯಶಸ್ಸಿಗೆ ನಿರಂತರವಾಗಿ ನಡೆಸಿರುವ ಅಧ್ಯಯನ ಕ್ರಮ ಅತಿ ಮುಖ್ಯವಾಗುತ್ತದೆ ಎಂದರೆ ತಪ್ಪಾಗಲಾರದು. ಜ್ಞಾನ ಸಂಪಾದನೆಗಾಗಿ ಓದುವುದು ಎಷ್ಟು ಮುಖ್ಯವೋ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಅವಿರತ ಮತ್ತು ಏಕಾಗ್ರತೆಯಿಂದ ಓದುವುದು ಅಷ್ಟೇ ಪ್ರಮುಖವಾದ ವಿಚಾರವಾಗಿದೆ. ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಕೆಲವೊಂದು ಸರಳ ತಂತ್ರಗಳು ಅಥವಾ ಕ್ರಮಗಳನ್ನು ನಾವು ಚಾಚುತಪ್ಪದೆ ಪಾಲಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. 
      ಪರೀಕ್ಷಾ ಸಮಯದಲ್ಲಿ ನಾವು ಪಾಲಿಸುವ ಕ್ರಮಗಳು ಹೀಗಿದ್ದರೆ ಪರೀಕ್ಷೆಗಳು ಅದೆಷ್ಟು ಸುಲಭವಲ್ಲವೇ......? :
    ◾ ಪರೀಕ್ಷಾ ಸಮಯದಲ್ಲಿ ಎದ್ದು-ಬಿದ್ದು ಆತಂಕದಲ್ಲಿ ಎಲ್ಲವನ್ನು ಓದುವ ಬದಲು ಈಗಾಗಲೇ ಸಿದ್ದ ಮಾಡಿಟ್ಟುಕೊಂಡ ಪ್ರಮುಖಾಂಶಗಳ ಟಿಪ್ಪಣಿಯನ್ನು ಹೆಚ್ಚು ಓದಬೇಕು ಹಾಗೂ ಪಠ್ಯ ಪುಸ್ತಕದಲ್ಲಿ ಗುರುತು ಮಾಡಿರುವ ಅಂಶಗಳಿಗೆ ವಿಶೇಷ ಒತ್ತು ನೀಡುತ್ತಾ ಓದಬೇಕು. 
    ◾ ಓದುವ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಮೊಬೈಲ್ , ಟಿವಿ , ಲ್ಯಾಪ್ಟಾಪ್ ಮುಂತಾದ ವಿದ್ಯುನ್ಮಾನ ಸಾಧನಗಳಿಂದ ದೂರವಿದ್ದರೆ ಒಳಿತು. 
     ◾ನಾವು ಎಷ್ಟು ಓದಿದ್ದೇವೆ ಅಥವಾ ಎಷ್ಟು ಓದುತ್ತೇವೆ ಎನ್ನುವುದಕ್ಕಿಂತ ಎಷ್ಟು ನೆನಪಿನಲ್ಲಿ ಉಳಿದಿದೆ ಹಾಗೂ ಎಷ್ಟು ಬರೆಯುತ್ತೇನೆ ಎಂಬುದು ಮುಖ್ಯ. ಹಾಗಾಗಿ ಈ ಹಿಂದೆ ಕಲಿತದ್ದನ್ನು ಪುನರ್ ಮನನ ಮಾಡುತ್ತಾ ಕಲಿಕೆಯನ್ನು ದೃಢಪಡಿಸಿಕೊಳ್ಳಬೇಕು.      
    ◾ದಿನದ ಒಂದಿಷ್ಟು ಹೊತ್ತು ಧ್ಯಾನ, ಯೋಗ, ಪ್ರಾಣಾಯಾಮ, ಕ್ರೀಡೆ , ಸಂಗೀತ ಆಲಿಸುವುದು ಮುಂತಾದ  ಯಾವುದಾದರೂ ಒಂದು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. 
     ◾ಹಗಲು ರಾತ್ರಿ ಓದಿ ಆತಂಕಕ್ಕೆ ಒಳಗಾಗದೆ ನಿಯಮಿತ ನಿದ್ರೆ, ಲಘು-ಮಿತ ಆಹಾರ, ಸಾಕಷ್ಟು ದ್ರವ ಆಹಾರದ ಸೇವನೆ, ವಿಶ್ರಾಂತಿ ನೀಡಿ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. 
       ◾ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡದೆ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಪರೀಕ್ಷೆ ಬರೆಯಲು ಉತ್ತೇಜನ ಹಾಗೂ ಪ್ರೋತ್ಸಾಹ ನೀಡಬೇಕು.  
     ◾ಸಾಕಷ್ಟು ಸಿದ್ಧತೆ ಹಾಗೂ ಸಕಲ ಪರಿಕರಗಳೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬಲ್ಲೆ ಎಂಬ ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದೊಂದಿಗೆ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಿದರೆ ಪರೀಕ್ಷೆ ಅರ್ಧ ಸಲೀಸಾದಂತೆಯೇ ಸರಿ. 
     ◾ಪರೀಕ್ಷೆ ಆರಂಭಕ್ಕೆ ಮೊದಲು ಒಂದೆರಡು ನಿಮಿಷ ಕಣ್ಮುಚ್ಚಿ ದೀರ್ಘ ಉಸಿರನ್ನು ತೆಗೆದುಕೊಂಡು ಸಮಾಧಾನಚಿತ್ತದಿಂದ ಪ್ರಶ್ನೆಪತ್ರಿಕೆಯನ್ನು ತೆರೆದು ಸೂಚನೆಗಳನ್ನು ಓದಿಕೊಳ್ಳಬೇಕು. 
      ◾ಪ್ರಶ್ನೆಪತ್ರಿಕೆ ಸಿಕ್ಕ ಕೂಡಲೇ ಉತ್ತರ ಬರೆಯದೆ ಮೊದಲು ಎಲ್ಲಾ ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿ ಅರ್ಥ ಮಾಡಿಕೊಂಡ ಬಳಿಕ ಉತ್ತರ ಬರೆಯಲು ಆರಂಭಿಸಬೇಕು. 
     ◾ಅಂಕಗಳ ಹಂಚಿಕೆಗನುಗುಣವಾಗಿ ನಿಗದಿಪಡಿಸಿದಷ್ಟು ಉತ್ತರವನ್ನು ಮಾತ್ರ ಬರೆಯಬೇಕು.        ◾ಬರವಣಿಗೆಯು ಅಂದವಾಗಿದ್ದು , ಉತ್ತರಗಳು ನೇರ ಹಾಗೂ ಸ್ಪಷ್ಟವಾಗಿರಬೇಕು. 
      ◾ಪ್ರಶ್ನೆಗಳ ಕ್ರಮ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಎಲ್ಲಾ ಪ್ರಶ್ನೆಗಳಿಗೂ ತಪ್ಪದೇ ಉತ್ತರಿಸಬೇಕು. 
      ◾ನಿಗದಿತ ಸಮಯಕ್ಕೆ ಮೊದಲೇ ಉತ್ತರ ಬರೆದು ಪೂರ್ಣಗೊಳಿಸಿ, ಯಾವುದಾದರೂ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟುಹೋಗಿದ್ದರೆ ಕೂಡಲೆ ಬರೆದು ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದಿರುವುದನ್ನು ದೃಢಪಡಿಸಿಕೊಳ್ಳಿ.   
      ◾ಪರೀಕ್ಷೆ ಮುಗಿದ ನಂತರ ಬರೆದು ಬಂದ ವಿಷಯದ ಬಗ್ಗೆ ಚರ್ಚಿಸಿ ಸಮಯ ವ್ಯರ್ಥ ಮಾಡುವ ಬದಲು ಮುಂದಿನ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಿ.   
        ವರ್ಷಕ್ಕೊಮ್ಮೆ ಪ್ರಕೃತಿಯಲ್ಲಿನ ಗಿಡಮರಗಳು 
ಎಲೆ , ಹೂ , ಕಾಯಿ , ಹಣ್ಣುಗಳನ್ನು ಬಿಟ್ಟು ಸಂಭ್ರಮಿಸುವಂತೆ, ವರ್ಷಕ್ಕೊಮ್ಮೆ ಬರುವ ಜಾತ್ರೆ - ಉತ್ಸವ ಹಬ್ಬ-ಹರಿದಿನಗಳನ್ನು ನಾವೆಲ್ಲರೂ ಸಂಭ್ರಮಿಸುವಂತೆ, ವರ್ಷಕ್ಕೊಮ್ಮೆ ಬರುವ ಪರೀಕ್ಷೆಗಳನ್ನು ಕೂಡ ನಾವೆಲ್ಲರೂ ಸಂಭ್ರಮದಲ್ಲಿ ಹಬ್ಬದಂತೆ ಆಚರಿಸೋಣ.                            
           ಡಿವಿಜಿಯವರ ಮಂಕುತಿಮ್ಮನ ಕಗ್ಗದ ರಸಧಾರೆಯಲ್ಲಿ ಉಲ್ಲೇಖವಾಗಿರುವ :                           
     ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು ।
     ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ।।
     ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ ।
     ಅವಿರತದ ಚೈತನ್ಯ – ಮಂಕುತಿಮ್ಮ ।। (ದಿನ , ವರುಷ , ಯುಗಗಳು ಕಳೆದಂತೆ ಮನುಷ್ಯನ ಮನಸ್ಸಿನಲ್ಲಿ ಹೊಸ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಅವನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ. ಹೀಗೆ ಆತ್ಮಹಿತವನ್ನು ವೃದ್ಧಿಗೊಳಿಸಿ ಕೊಳ್ಳಲು, ಆ ಪರತತ್ವದ ಚೈತನ್ಯ ನಿರಂತರ ಕೃಷಿ ಮಾಡುತ್ತಲೇ ಇರುತ್ತದೆ ಎನ್ನುವಂತೆ) ನಾವೆಲ್ಲರೂ ಇಂತಹ ಪರೀಕ್ಷೆಗಳನ್ನು ಎದುರಿಸುವುದರ ಮೂಲಕ ನಮ್ಮಲ್ಲಿ ನಾವು ಆತ್ಮ ಹಿತವನ್ನು ಜಾಗೃತಗೊಳಿಸಲು ಸಂತಸದಿಂದ ಸಿದ್ಧರಾಗೋಣ.
        ವಿದ್ಯಾರ್ಥಿಗಳೇ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ. ಪರೀಕ್ಷೆಯನ್ನು ನಾವು ಎದುರಿಸುತ್ತೇವೆಯೇ ಹೊರತು ಪರೀಕ್ಷೆ ನಮ್ಮನ್ನು ಎದುರಿಸುವುದಿಲ್ಲ ಎಂಬುದು ಸದಾಕಾಲ ನೆನಪಿನಲ್ಲಿರಲಿ. ಭಯ, ಆತಂಕಗಳನ್ನು ಬಿಟ್ಟು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದೊಂದಿಗೆ ಪ್ರಾಮಾಣಿಕತೆಯಿಂದ ಧೈರ್ಯವಾಗಿ ಮುನ್ನುಗ್ಗಿ ಜಯ ಕಟ್ಟಿಟ್ಟ ಬುತ್ತಿ. ನಿರೀಕ್ಷೆಗೆ ತಕ್ಕಂತೆ ಅಂಕಗಳು ಲಭಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಉಜ್ವಲ ಭವಿಷ್ಯವು ನಿಮ್ಮದಾಗಲಿ. "ಆತನು/ ಆಕೆಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದನು/ಳು: ಬುದ್ದಿವಂತರಾದ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ.?" ಎಂಬ ಅಲಂಕಾರಿಕ ಮಾತು ನಿಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಸಮಸ್ತ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್.. ಶುಭವಾಗಲಿ...!!!
................................... ಶಿವಕುಮಾರ್ ಎಂ.ಜಿ
ಕನ್ನಡ ಭಾಷಾ ಅಧ್ಯಾಪಕರು
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article