
ಜೀವನ ಸಂಭ್ರಮ : ಸಂಚಿಕೆ - 28
Sunday, March 20, 2022
Edit
ಜೀವನ ಸಂಭ್ರಮ : ಸಂಚಿಕೆ - 28
ಪಕ್ಷಿಗಳಿಂದ ಕಲಿಯಬೇಕಾದ ಪಾಠ
--------------------------------------
ಮಕ್ಕಳೇ, ನಾವು ಕಲಿಯಲು ಬೇಕಾದ ವ್ಯವಸ್ಥೆ ಪ್ರಕೃತಿಯಲ್ಲಿಯೇ ಸಾಕಷ್ಟು ಇವೆ. ಅದರಲ್ಲಿ ಇಂದು ನಾವು ಪಕ್ಷಿಗಳಿಂದ ನಮ್ಮ ಜೀವನಕ್ಕೆ ಬೆಳಕಾಗಬಹುದಾದ ಪಾಠದ ಬಗ್ಗೆ ತೆಗೆದು ಕೊಳ್ಳೋಣ.
ಮೊದಲಿಗೆ ಕಾಗೆ. ಕಾಗೆ ಎಂದಾಗ ನಮ್ಮಲ್ಲಿ ಬರುವ ಕಲ್ಪನೆ ಕೆಟ್ಟದ್ದು , ಶನಿ ದೇವರ ವಾಹನ, ಅಶುಭ ಎಂದು. ಅದು ಮನೆ ಹತ್ತಿರ ಕಾ ಕಾ ಎಂದು ಕೂಗಿದರೆ , ನಾವೆಲ್ಲ ಅಂದುಕೊಳ್ಳುವುದು ಇಂದು ಎಲ್ಲೋ ಏನೋ ಸಾವಾಗಿದೆ. ಇದು ಅಶುಭ ಚಿಹ್ನೆ ಎಂದು. ನಿಜ , ಸಾವಾಗಿರುವುದು ನಿಜ. ಕಾಗೆಗಳ ಆಹಾರವಾದ ಜೀವಿಗಳ ಶವ. ಕಾಗೆಗಳು ತಮ್ಮ ಆಹಾರ ಕಂಡಾಗ ತನ್ನ ಪರಿವಾರಕ್ಕೆ ಕೂಗಿ ಮಾಹಿತಿ ಒದಗಿಸುತ್ತದೆ. ಕಾ ಕಾ ಎಂದು ಕೂಗಿದಾಗ ಕಾಗೆಗಳೆಲ್ಲ ಓಹೋ ನನ್ನ ಸ್ನೇಹಿತನಿಗೆ ಆಹಾರ ಸಿಕ್ಕಿದೆ ಎಂದು ಸಂತೋಷದಿಂದ ಆ ಕರೆಗೆ ಓಗೊಟ್ಟು ಹಾರಿಕೊಂಡು ಸಂತೋಷದಿಂದ ಬರುತ್ತವೆ. ಎಲ್ಲಾ ಕಾಗೆಗಳು ಸೇರಿ , ಶವವಾಗಿ ಬಿದ್ದಿರುವ ಪ್ರಾಣಿಯ ಆಹಾರ ಸೇವಿಸಿ ಸಂಭ್ರಮ ಪಡುತ್ತವೆ. ಮಕ್ಕಳೇ, ನಾವು ಕಾಗೆಗಳಂತೆ ಆಹಾರ ಹಂಚಿಕೊಂಡು ತಿನ್ನುವುದನ್ನು ಕಲಿಯಬೇಕು. ಆದರೆ ದುರಾಸೆಯ ಮಾನವ ತನ್ನಲ್ಲಿರುವ ಆಹಾರ ಬೇರೆಯವರಿಗೆ ತೋರಿಸದೆ ಕದ್ದು ಮುಚ್ಚಿ ತಿನ್ನುತ್ತಾನೆ. ಹಸಿದವರು ಎದುರಿಗೆ ಇದ್ದರೂ, ಅವರ ಬಗ್ಗೆ ಕನಿಕರ ತೋರದೆ, ತನ್ನ ಹಸಿವಿನ ಕಡೆಗೆ ಮಾತ್ರ ಗಮನಹರಿಸುವ ವರನ್ನು ನೋಡಿದಾಗ, ನಾವು ಕಾಗೆಗಳಿಗಿಂತ ಕಡೆ ಅನಿಸುತ್ತದೆ....!!
ಎರಡನೆಯದು ಕೋಳಿ. ಮಕ್ಕಳೇ, ನಾವೆಲ್ಲಾ ಅಂದುಕೊಂಡಿರುವುದು ಕೋಳಿ ಕೊಳಕನ್ನು ತಿನ್ನುತ್ತದೆ ಎಂದು. ನೀವು ಸರಿಯಾಗಿ ಗಮನಿಸಿ ಕೋಳಿ ತಿನ್ನುವುದನ್ನು. ಎಚ್ಚರಿಕೆಯಿಂದ ಗಮನಿಸಿ ನೋಡಿ. ಅದು ಕೊಳಕಿನಲ್ಲಿ ತನಗೆ ಬೇಕಾದ ಕಾಳನ್ನು , ಹುಳುಗಳನ್ನು ಮಾತ್ರ ಗುರುತಿಸಿ ತಿನ್ನುತ್ತದೆಯೇ ವಿನಹ ಕೊಳಕನ್ನಲ್ಲ. ಅಂದರೆ ಕೋಳಿ ಕೂಡ ಕೊಳಕಿನಲ್ಲಿ ಇದ್ದರೂ, ಕೊಳಕನ್ನು ಬಿಟ್ಟು ತನಗೆ ಬೇಕಾದ ಒಳ್ಳೆಯ ಅಂಶವನ್ನು ಅದು ಸೇವಿಸುತ್ತದೆ. ಇದರಿಂದ ನಾವು ಕಲಿಯಬೇಕಾದ ಪಾಠವೇನು ಎಂದರೆ, ನಮ್ಮ ಮುಂದೆ ಸುತ್ತಮುತ್ತ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳು ಇರುತ್ತವೆ. ಅದರಲ್ಲಿ ನಾವು ಒಳ್ಳೆಯದನ್ನು ಮಾತ್ರ ಆಯ್ದು ದೇಹಗತ ಮಾಡಿಕೊಂಡರೆ ಜೀವನ ಅಮೃತವಾಗುತ್ತದೆ. ಕೆಟ್ಟದ್ದನ್ನು ಆಯ್ದು ದೇಹಗತ ಮಾಡಿಕೊಂಡರೆ ತನಗೊಬ್ಬನಿಗಲ್ಲದೆ ತನ್ನ ಪರಿವಾರದವರಿಗೂ ನರಕ ಉಂಟುಮಾಡುತ್ತದೆ.
ಮಕ್ಕಳೇ, ದೇವರು ನಮಗೆ ಎರಡು ಕಣ್ಣು , ಎರಡು ಕಿವಿ ಮತ್ತು ಎರಡು ಕೈ ನೀಡಿದ್ದಾನೆ . ಆದರೆ ಒಂದೇ ಬಾಯಿ ನೀಡಿದ್ದಾನೆ. ಕಣ್ಣು ಎರಡು ಇರುವುದು , ಒಳ್ಳೆಯದು ಹಾಗೂ ಕೆಟ್ಟದ್ದನ್ನು ಎರಡನ್ನು ನೋಡು, ಆದರೆ ಇರುವ ಒಂದೇ ಬಾಯಿಯಲ್ಲಿ ಒಳ್ಳೆಯದನ್ನು ಮಾತ್ರ ಹೇಳು. ಹಾಗೆಯೇ ಎರಡು ಕಿವಿಯಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದನ್ನು ಕೇಳು , ಆದರೆ ಮಾತನಾಡುವಾಗ ಇರುವ ಒಂದು ಬಾಯಲ್ಲಿ ಒಳ್ಳೆಯದನ್ನು ಮಾತ್ರ ಹೇಳು ಎಂದು. ಎರಡು ಕೈಯಲ್ಲಿ ದುಡಿದರೆ ಒಂದು ಬಾಯಿಗಿಂತ ಹೆಚ್ಚು ಸಂಪಾದನೆ ಆಗುತ್ತದೆ. ಹಾಗಾಗಿ ಒಂದು ಕೈ ದುಡಿಮೆಯನ್ನು ನಿನ್ನ ಬಾಯಿಗೆ ಮತ್ತೊಂದು ಕೈ ದುಡಿಮೆಯನ್ನು ಸಮಾಜಕ್ಕೆ ನೀಡು ಎಂಬುವುದು. ಬದುಕಿದ್ದನ್ನು ಸಾರ್ಥಕ ಪಡಿಸಿಕೊಳ್ಳಲು ಪರೋಪಕಾರಿ ಯಾಗಿರುವುದು ಒಳ್ಳೆಯದು. ದುಡಿಮೆಯ ಭಾಗದಲ್ಲಿ ಒಂದು ಜೀವ ಸಂತಸ ಪಡುವುದಾದರೆ ಅಲ್ಲಿ ಸಾರ್ಥಕ್ಯದ ಮನೋಭಾವವನ್ನು ಪಡೆಯುತ್ತೇವೆ. ಸಂಘ ಜೀವಿಗಳಾಗಿ ಬದುಕುತ್ತಾ ಇನ್ನೊಬ್ಬರಿಗೆ ಆಸರೆಯಾಗಿ ಬದುಕಿಗೆ ಬೆಳಕಾದರೆ ಎಲ್ಲರ ಜೀವನ ಸಂಭ್ರಮವಾಗುತ್ತದೆ.....!
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************