-->
ನೀರು ಉಳಿಸದಿದ್ದರೆ.......? ಲೇಖನ : ದಿನೇಶ್ ಹೊಳ್ಳ

ನೀರು ಉಳಿಸದಿದ್ದರೆ.......? ಲೇಖನ : ದಿನೇಶ್ ಹೊಳ್ಳ                    ನೀರು ಉಳಿಸದಿದ್ದರೆ.......?
      ನೀರು.... ಈ ಭೂಮಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ... ಆದರೂ ನೀರಿನ ಬಗ್ಗೆ ಇಲ್ಲಿ ನಿರಾಸಕ್ತಿ....?! 
       ಆಹಾರ ಇಲ್ಲದೆ ಒಂದು ವಾರ ಬದುಕಬಹುದು, ಆದರೆ ನೀರಿಲ್ಲದೇ ಒಂದು ಗಂಟೆ ಇರಲು ಸಾಧ್ಯವಿಲ್ಲ. ಇಡೀ ವಿಶ್ವವೇ ಇಂದು ತಮ್ಮ ಭವಿಷ್ಯದ ಭದ್ರತೆಗೆ ಬಹಳಷ್ಟು ಯೋಚಿಸಬೇಕಾದ ಪ್ರಮುಖ ವಿಚಾರ ಏನೆಂದರೆ ಅದು ನೀರಿನ ಉಳಿತಾಯದ ಬಗ್ಗೆ. ಜಾಗತಿಕ ತಾಪಮಾನದ ಪರಿಣಾಮ  ಇಡೀ ವಿಶ್ವದಲ್ಲೇ ಇಂದು ಅಂತರ್ಜಲ ಕುಸಿಯುತ್ತಾ ಇದೆ, ತಾಪ ಹೆಚ್ಚಾಗುತ್ತಾ ಇದೆ.....! ಪರಿಹಾರ ಮತ್ತು ಪರ್ಯಾಯ... ಶೂನ್ಯ.....!! ಈ ಬಗ್ಗೆ ಮಾತು, ಚರ್ಚೆಗಳೇ ನಡೆಯುತ್ತಿವೆ ಹೊರತು ಕಾರ್ಯ ರೂಪ ವಿಳಂಬವಾಗುತ್ತಿದೆ. ನಮ್ಮ  ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯೇ 'ಅಭಿವೃದ್ಧಿ' ಎಂಬ ನೆಪದಲ್ಲಿ ಎಷ್ಟೊಂದು ನೀರಿನ ಸೆಲೆಗಳನ್ನು ನಾಶ ಮಾಡಿತು......? ಎಷ್ಟೊಂದು ಮಳೆ ಕಾಡುಗಳನ್ನು ಕತ್ತರಿಸಿ ಹಾಕಿತು.....? ಗಣಿಗಾರಿಕೆ ಎಂದು ಹೇಳಿ ಎಷ್ಟೊಂದು ಗಿರಿ, ಶಿಖರಗಳನ್ನು ಸಿಗಿದು ಹಾಕಿತು.....? ಎಷ್ಟೊಂದು ನದಿಗಳಿಗೆ ಅಣೆಕಟ್ಟು ಕಟ್ಟಿ ಬಂಧಿಸಿ ಬಿಟ್ಟಿತು....? ನಾಲಗೆ ಚಪಲಕ್ಕೆ ಎಷ್ಟೊಂದು ವನ್ಯ ಜೀವಿಗಳನ್ನು ತಿಂದು ತೇಗಿತು...? ಸುಧಾರಣೆ, ಬದಲಾವಣೆ ಎಂದು ನೆಲ, ಜಲ, ವಾಯು ನೆಲೆಗಳನ್ನು ಮಾಲಿನ್ಯ ಮಾಡಿ ಬಿಟ್ಟಿತು....? ಇದೆಲ್ಲದರ ಪರಿಣಾಮವಾಗಿ ಈಗ ಎಷ್ಟೊಂದು ಪ್ರಾಕೃತಿಕ ದುರಂತಗಳನ್ನು ಅನುಭವಿಸುತ್ತಾ ಇದ್ದೇವೆ ? ಸಾಲದೇ... ಇನ್ನೂ ಸಾಲದೇ....? ಇನ್ನೂ ಇದೆಯಾ ಅಭಿವೃದ್ಧಿ ಎಂಬ ಮೋಹದ ಜಾಲದ ವಿಸ್ತರಣೆ ....? 
        ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದ ಎಲ್ಲರೂ ಮೌನವಾಗಿ ತಮ್ಮ ಸ್ವಾರ್ಥ ಮತ್ತು ಸ್ವಂತ ಬದುಕಿನ ಕಡೆಗೆ ಮಾತ್ರ ಗಮನವಿಟ್ಟು ನಿಸರ್ಗ ಸಮಸ್ಯೆ ತಮಗೆ ಸಂಬಂಧಿಸಿದ್ದಲ್ಲ ಎಂದು ಎಲ್ಲೋ ಕಳೆದು ಹೋಗುತ್ತಿದೆ. ಪ್ರಕೃತಿಯ ಮೇಲೆ ನಾವೇ ಮಾಡಿರುವ ದೌರ್ಜನ್ಯ, ದಬ್ಬಾಳಿಕೆಯ ಪರಿಣಾಮವಾಗಿ ಭೂಕುಸಿತ, ಜಲಸ್ಪೋಟ, ಪ್ರವಾಹ, ಬರಗಾಲ, ಚಂಡ ಮಾರುತ ಮುಂತಾದ ಪ್ರಾಕೃತಿಕ ವಿಕೋಪಕ್ಕೆ ಬಲಿ ಆಗುತ್ತಲೇ ಇದ್ದೇವೆ. ಆದರೂ ಬುದ್ದಿವಂತ ಮಾನವ ಸಾಮ್ರಾಜ್ಯ ಇದೆಲ್ಲವನ್ನೂ ನೋಡುವ ಮೂಕ ಮತ್ತು ಮೂರ್ಖ ಪ್ರೇಕ್ಷಕರಾಗಿ ಇನ್ನೂ ತನ್ನ ಅಹಂಕಾರ ಬಿಡದೇ ತಾನೇ ಇಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಎಂದು ಬೀಗುತ್ತಲೇ ಇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿಯಲಿ ಪ್ರಕೃತಿಯ ಎದುರು ಎಲ್ಲವೂ ನಗಣ್ಯ ಎಂಬುದನ್ನು ಮಾನವ ಕೊರೊನ ದಂತಹ ಜಗತ್ತನ್ನೇ ನಡುಗಿಸಿ ಬಿಟ್ಟ ಸಾಂಕ್ರಾಮಿಕ ರೋಗದಿಂದಾದರೂ ಕಲಿಯಬೇಕಿತ್ತು. ವಿಶ್ವ ಜಲ ದಿನಾಚಾರಣೆ ಯಂದು ಮಾತ್ರ ನಾವು ನೀರಿನ ಸಂರಕ್ಷಣೆ ಬಗ್ಗೆ ಎಚ್ಚರ ಇರುವುದಲ್ಲ.... ವರ್ಷಪೂರ್ತಿ ನಾವು ಅರಣ್ಯ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಸದಾ ಜಾಗೃತರಾಗುವ ಅನಿವಾರ್ಯ ಸಂದಿಗ್ಧ ಕಾಲವಿದು. ಆದ ತಪ್ಪಿಗೆ ಯಾರ್ಯಾರದೋ ಮೇಲೆ ದೋಷಾರೋಪಣೆ ಮಾಡಿ ಕಾಲ ಹರಣ ಮಾಡುವುದಕ್ಕಿಂತ ನಾವೇ ಎಚ್ಚರ ಆಗೋಣ, ನಾವೇ ಜಾಗೃತರಾಗೋಣ, ನಮ್ಮಿಂದಲೇ ಆರಂಭ ಆಗಲಿ...... 
      ಕೋಟಿ ಹಣ ಸುರಿಯುತ್ತೇವೆ 
      ಅಣು ಬಾಂಬಿಗೆ... 
      ಉಳಿಸುತ್ತಿಲ್ಲ ನೀರನ್ನು 
      ದಿನಕ್ಕೊಂದು ತಂಬಿಗೆ... 
      ಯುದ್ಧಾಸ್ತ್ರಕ್ಕಿಂತ ಜಲವೇ 
      ಬದುಕಿಗೆ ನಂಬಿಗೆ...
ಮನೆ, ಮನೆಗಳ ಮನ, ಮನಗಳು ನೀರಿನ ಸಂರಕ್ಷಣೆ ಬಗ್ಗೆ ಜಾಗೃತರಾಗಲಿ. 
............................................... ದಿನೇಶ್ ಹೊಳ್ಳ.
ಕಲಾವಿದ , ಸಾಹಿತಿ , ಪರಿಸರ ಪ್ರೇಮಿ
ಮಂಗಳೂರು , ದಕ್ಷಿಣ - ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article