-->
ಚಿತ್ರಸಂತೆ : ಸಚಿತ್ರ ವರದಿ

ಚಿತ್ರಸಂತೆ : ಸಚಿತ್ರ ವರದಿ

ಬೆಂಗಳೂರಿನ ಕುಮಾರಕೃಪಾ ರಸ್ತೆ ಬದಿಯಲ್ಲಿ ಮಾರ್ಚ್ 27 , 2022 ರಂದು  ನಡೆದ 19ನೇ ಚಿತ್ರಸಂತೆಯ  ಸಚಿತ್ರ ವರದಿ.

                              ಚಿತ್ರಸಂತೆ
        ಎಲ್ಲಿ ನೋಡಿದರೂ ಚಿತ್ರಗಳು. ಇದರ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಬೆಂಗಳೂರಿನ ಪ್ರಮುಖ ಕುಮಾರಕೃಪಾ ರಸ್ತೆ ದಿನವಿಡೀ ಬಂದ್, ಲಕ್ಷಾಂತರ ಜನ ವೀಕ್ಷಕರು, ನೂರಾರು ಕಲಾವಿದರ ಕೃತಿಗಳು........ ಇದು 19ನೇ ಚಿತ್ರಸಂತೆಯ ನೋಟ.‌
            ಹೊಸವರ್ಷದ ಸಂಭ್ರಮದೊಂದಿಗೆ ಜನವರಿಯ ಮೊದಲನೆಯ ಭಾನುವಾರ ಪ್ರತಿ ವರ್ಷ ನಡೆಸುತ್ತಿದ್ದ ಈ ಬೃಹತ್ ಚಿತ್ರಸಂತೆ ಕಳೆದ ವರ್ಷ ಕೊರೋನಾ ಅಲೆಯಿಂದ ಆನ್‌ಲೈನ್ ಮುಖಾಂತರ ನಡೆದರೆ ಈ ವರ್ಷ 2 ತಿಂಗಳು ತಡವಾಗಿಯಾದರೂ ಮಾರ್ಚ್ 27ರಂದು ಭೌತಿಕವಾಗಿಯೇ ನಡೆಯಿತು. ಚಿತ್ರಕಲಾಪ್ರಿಯರಿಗೆ ಚಿತ್ರಸಂತೆ ದೊಡ್ಡ ಹಬ್ಬವೇ ಸರಿ. 
           ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನ ಬಹುದೊಡ್ಡ ಚಿತ್ರ ಮೇಳ - ಚಿತ್ರಸಂತೆ. ಈ ವರ್ಷದ 19ನೆಯ ಚಿತ್ರಸಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸಮರ್ಪಿತವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರಸಂತೆಯನ್ನು ಉದ್ಘಾಟಿಸಿ ಕಲಾವಿದರಿಗೆ ಪ್ರೋತ್ಸಾಹ ದ ಮಾತುಗಳನ್ನು ಆಡಿದ್ದಲ್ಲದೇ, ಚಿತ್ರಕಲಾ ಪರಿಷತ್ತಿಗೆ ಸ್ವಾಯತ್ತ ವಿಶ್ವವಿದ್ಯಾನಿಲಯ ಮಾನ್ಯತೆ ನೀಡುವ ಪ್ರಮುಖ ಘೋಷಣೆಯನ್ನೂ ಮಾಡಿದ್ದು ವಿಶೇಷ.
         ವಿವಿಧ ಪ್ರಕಾರಗಳ ಚಿತ್ರಗಳನ್ನು ನೋಡುವ ಹಂಬಲ, ಚಿತ್ರ ಕಲಾವಿದರನ್ನು ಭೇಟಿಯಾಗುವ ಸಂಭ್ರಮ ಹೀಗೆ ಹಲವು ಸಂತಸಗಳು ಚಿತ್ರಸಂತೆಯಲ್ಲಿ ಸಿಗುತ್ತದೆ. ಕರ್ನಾಟಕ ರಾಜ್ಯದಿಂದ ಮಾತ್ರವಲ್ಲದೆ ಇತರ ರಾಜ್ಯಗಳಿಂದಲೂ ಕಲಾವಿದರು ಬಂದು ಇಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಾರೆ. ಈ ವರ್ಷ 1000ಕ್ಕಿಂತಲೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿರುವುದು ವಿಶೇಷ. ಸುಮಾರು 4 ಲಕ್ಷ ಜನರು ಚಿತ್ರಸಂತೆಗೆ ಭೇಟಿ ನೀಡಿರುವ ಅಂದಾಜು. 
       ಚಿತ್ರಸಂತೆಯಲ್ಲಿ 100 ರೂ.ಗಳ ಪುಟ್ಟ ಕಲಾಕೃತಿಗಳಿಂದ ಹಿಡಿದು ಲಕ್ಷಾಂತರ ರೂ. ವರೆಗಿನ ಕಲಾಕೃತಿಗಳನ್ನು ಇಲ್ಲಿ ಪಡೆಯಬಹುದು, ನೋಡಿ ಆನಂದಿಸಬಹುದು. ಇಲ್ಲಿ ನಾನು ನೋಡಿದ ಕಲಾಕೃತಿಗಳಲ್ಲಿ ಮೂರುವರೆ ಲಕ್ಷ ಮೌಲ್ಯದ ವೆಂಕಟೇಶ್ವರ ದೇವರ ತಂಜಾವೂರು ಪೇಂಟಿಂಗ್, ಎರಡುವರೆ ಲಕ್ಷದ ಪುನೀತ್ ರಾಜಕುಮಾರ್ ರವರ ಪ್ರತಿಮೆ, ಒಂದು ಲಕ್ಷ ಬೆಲೆಬಾಳುವ ಮಕ್ಕಳು ಆಟವಾಡುತ್ತಿರುವ ಆಯಿಲ್ ಪೇಯಿಂಟಿಂಗ್ ಆಕರ್ಷಣೀಯವಾಗಿತ್ತು. 
        ಕೃಷಿ, ಹಳ್ಳಿ ಬದುಕು, ದೇವರು, ಪ್ರಾಣಿಗಳು, ನೀರಿನ ಮಹತ್ವ, ಕಲಾವಿದರ ಚಿತ್ರಗಳು ಸೇರಿದಂತೆ ವಿವಿಧ ಬಗೆಯ ಚಿತ್ರಗಳು ಚಿತ್ರಸಂತೆಯಲ್ಲಿ ಈ ಬಾರಿ ಪ್ರದರ್ಶಿತವಾಗಿದ್ದವು. ಚಿತ್ರಸಂತೆಯಲ್ಲಿ ವಿವಿಧ ಶೈಲಿಗಳ ಕಲಾಕೃತಿಗಳು, ಮೈಸೂರು ಸಾಂಪ್ರದಾಯಿಕ ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿ, ತೈಲ , ಜಲವರ್ಣ, ಅಕ್ರಿಲಿಕ್ ಮಾಧ್ಯಮದ ಚಿತ್ರಗಳು ,ವ್ಯಂಗ್ಯ ಚಿತ್ರಗಳು ಕಾಣುತ್ತಿದ್ದವು.‌ ಹಾಗೆಯೇ ಸ್ಥಳದಲ್ಲಿಯೇ ನಮ್ಮ ಭಾವಚಿತ್ರ (portrait) ಮಾಡಿಕೊಡುವ ಕಲಾವಿದರ ಕಲಾಕೌಶಲ್ಯವೂ ಕಡಿಮೆಯೇನಲ್ಲ...!!  
       ಇದರ ಜೊತೆಗೆ ಬಂದ ಪುಟ್ಟ ಮಕ್ಕಳು ಒಂದು ಕೈಯಲ್ಲಿ balloon ಇತರೆ ಆಟಿಕೆಗಳನ್ನು, ಇನ್ನೊಂದು ಕೈಯಲ್ಲಿ ಐಸ್ಕ್ರೀಮ್ ತಿನ್ನುತ್ತ ಸಮಯ ಕಳೆಯುತ್ತಿದ್ದುದು ಸಾಮಾನ್ಯ ನೋಟವಾಗಿತ್ತು. ಕಣ್ಣು ಹಾಯಿಸಿದ ಕಡೆಯೆಲ್ಲಾ ಎಲ್ಲೆಲ್ಲೂ ಬಣ್ಣ ಬಣ್ಣದ ಚಿತ್ತಾರ. ಒಂದೊಂದು ಚಿತ್ರ ಒಂದಕ್ಕಿಂತ ಒಂದು ಚಂದ. 
       ಕಳೆದ ವರ್ಷದ ಚಿತ್ರಸಂತೆ ಆನ್ಲೈನ್ನಲ್ಲಿ ನಡೆದ ಕಾರಣ ಕಲಾವಿದರು ಬಹಳಷ್ಟು ಕಷ್ಟ ಎದುರಿಸಬೇಕಾಯಿತು. ಈ ವರ್ಷ ಕಲಾವಿದರ ಮುಖದಲ್ಲಿ ಸ್ವಲ್ಪಮಟ್ಟಿನ ಸಂತಸವಿತ್ತು. "ಕಲೆ ನನಗೆ ಬದುಕನ್ನು ಕೊಟ್ಟಿದೆ. ಅದರ ಜೊತೆಗೆ ಖುಷಿ, ನೆಮ್ಮದಿಯೂ ಇದೆ. ನಾನು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಚಿತ್ರಕಲೆ" ಎನ್ನುತ್ತಾರೆ ಕಳೆದ 10 ವರ್ಷಗಳಿಂದಲೂ ಚಿತ್ರಸಂತೆಯಲ್ಲಿ‌ ಭಾಗವಹಿಸುತ್ತಿರುವ ಕಲಬುರಗಿಯ ಕಲಾವಿದ ಶ್ರೀಶೈಲ್ ಪಾಟೀಲ್‌. 
      ಚಿತ್ರಕಲಾ ಪರಿಷತ್ತಿನ ಆವರಣದಲ್ಲಿದ್ದ ಫುಡ್ ಕೋರ್ಟ್ ಎಲ್ಲರನ್ನೂ ಸೆಳೆಯುತ್ತಿತ್ತು. ಅದರೊಂದಿಗೆ ನೃತ್ಯಪ್ರದರ್ಶನ , ನಾಟಕ , ಸಂಗೀತ , ಯಕ್ಷಗಾನ ಮತ್ತು ಹಲವಾರು ಮನೋರಂಜನಾ ಕಾರ್ಯಕ್ರಮಗಳು ಇದ್ದವು. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಚಿತ್ರಕಲಾ ಪರಿಷತ್ತಿನ ಮುಖ್ಯದ್ವಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಸರಮಾಲೆ ವೀಕ್ಷಕರ ಗಮನ ಸೆಳೆಯುತ್ತಿತ್ತು. ಆರ್ಟ್ ಮೆಟೀರಿಯಲ್‌ಗಳನ್ನು ಖರೀದಿಸುವ ಭರಾಟೆ ಜೋರಾಗಿಯೇ ಇತ್ತು. 
          ಚಿತ್ರಸಂತೆಯಲ್ಲಿ ಇಡೀ ದಿನ ನೋಡಿದರೂ ಮುಗಿಯದಷ್ಟು ಕಲಾಕೃತಿಗಳು ಇದ್ದವು. ಇನ್ನೊಂದೆರಡು ದಿನ ಇರಬಾರದೆ ಎನಿಸಿತು. ಮುಂದಿನ ಚಿತ್ರಸಂತೆಗೆ ಇನ್ನು ಒಂದು ವರ್ಷ ಕಾಯಬೇಕು.
..................................... ಪ್ರತೀಕ್ಷಾ ಮರಕಿಣಿ 
ದ್ವಿತೀಯ ಪಿಯುಸಿ 
ಶೇಷಾದ್ರಿಪುರಂ ಕಾಂಪೋಸಿಟ್ 
ಪಿಯು ಕಾಲೇಜು
ಶೇಷಾದ್ರಿಪುರಂ , ಬೆಂಗಳೂರು
******************************************

Ads on article

Advertise in articles 1

advertising articles 2

Advertise under the article