-->
ವಿಶ್ವ ರಂಗಭೂಮಿ ದಿನ : ನಾದ ಮಣಿನಾಲ್ಕೂರು

ವಿಶ್ವ ರಂಗಭೂಮಿ ದಿನ : ನಾದ ಮಣಿನಾಲ್ಕೂರು



                    ವಿಶ್ವ ರಂಗಭೂಮಿ ದಿನ
      ಇಂದು ಮಾರ್ಚ್ 27, ಅಂತರ್ರಾಷ್ಟ್ರೀಯ ರಂಗಭೂಮಿ ದಿನಾಚರಣೆ. ಸದಾ ನಾಟಕವಾಡುತ್ತಾ, ನಾಟಕ ಆಡಿಸುತ್ತಾ, ನಾಟಕ ನೋಡುತ್ತಾ ಬದುಕುತ್ತಿರುವ ಮಕ್ಕಳ ಜಗಲಿಯ ಎಲ್ಲರಿಗೂ ಶುಭಾಶಯಗಳು.
       ರಂಗಭೂಮಿ ಎಂದರೆ ಅನುಭವಗಳನ್ನು ಹಂಚಿಕೊಳ್ಳುವ ಮಾಧ್ಯಮ. ಬಹಳ ಸರಳವಾಗಿ ನೋಡಿಕೊಳ್ಳೋಣ. ಹಿಂದಿನ ದಿನ ಶಾಲೆಗೆ ರಜೆ ಮಾಡಿರುತ್ತೇವೆ, ಮರುದಿನ ರಜಾ ಅರ್ಜಿಯೊಂದಿಗೆ ಟೀಚರ್ ಅಥವಾ ಮೇಷ್ಟ್ರ ಮುಂದೆ ನಿಲ್ಲುವಾಗ ನಮ್ಮ ಮುಖದಲ್ಲಿ ಒಂತರಾ ಕಳೆ, ದೇಹದಲ್ಲಿ ಹುಷಾರಿಲ್ಲದ ಬಳಲಿಕೆ, ಹೆಜ್ಜೆ ಹೆಜ್ಜೆಯಲ್ಲಿ ಅಯ್ಯೋ ಪಾಪ ಅನಿಸುವಂತಹ ನಡೆಯುವಿಕೆ... ಇದೆಲ್ಲವೂ ನಾಟಕವೇ. ಸ್ಟಾಫ್ ರೂಮಿನಿಂದ ಹೊರಗೆ ಬಂದಾಗ ನಮ್ಮ ಅಷ್ಟೂ ನಟನೆ ಬದಲಾಗಿರುತ್ತದೆ. ಒಳಗೆ ಟೀಚರ್ ಮೇಷ್ಟ್ರುಗಳು ಕೂಡ ನಮ್ಮೊಡನೆ ಮಾತನಾಡುವಾಗ ಗಂಭೀರವಾಗಿ ಪ್ರಶ್ನಿಸಿದರೂ, ನಾವು ಹೊರಬಂದಾಗ ಅಯ್ಯೋ ಪಾಪ ಅನ್ನುವ ಹಾಗೆ ಇರುತ್ತಾರೆ. ಮನೆಯಲ್ಲಿ ಅಮ್ಮನೊಂದಿಗೆ ಒಂದು ತರ, ಅಪ್ಪನಲ್ಲಿ ಒಂದು ತರ, ಇಷ್ಟದವರ ಜೊತೆ ಒಂದು ತರ, ಇಷ್ಟವಾಗದವರ ಜೊತೆ ಒಂದು ತರ... ಹಾದಿಯಲ್ಲಿ ಬೀದಿಯಲ್ಲಿ, ಮದುವೆಯಲ್ಲಿ ಮಸಣದಲ್ಲಿ, ಸಂತೆಯಲ್ಲಿ ಹಬ್ಬದಲ್ಲಿ,... ಹೀಗೆ ಎಲ್ಲಾ ಕಡೆಯೂ ವಿವಿಧ ರೀತಿಯ ನಾಟಕಗಳು ನಡೆಯುತ್ತಿರುತ್ತವೆ. ಇವೆಲ್ಲವೂ ನಮ್ಮ ಸಂಬಂಧಗಳನ್ನು ಕಟ್ಟುವ ಮತ್ತು ನಿರಂತರ ಲವಲವಿಕೆಯನ್ನು ಇಟ್ಟುಕೊಳ್ಳುವ ಅಂಶಗಳೇ. ಹಾಗಾಗಿ ನಾವೆಲ್ಲರೂ ನಾಟಕದವರೇ.
       ಹವ್ಯಾಸಿಗಳಾಗಿ, ವೃತ್ತಿಪರರಾಗಿ, ವಿವಿಧ ಉದ್ದೇಶಗಳಿಗಾಗಿಯೂ ರಂಗಭೂಮಿ ಸಕ್ರಿಯವಾಗಿದೆ. ದೊಡ್ಡವರ, ಮಕ್ಕಳ, ಮಹಿಳೆಯರ ಹಾಗೂ ಈ ನೆಲದ ವಿವಿಧ ವಿಶಿಷ್ಟ ಬಳಗಗಳ ರಂಗ ತಂಡಗಳಿವೆ. ಎಲ್ಲವೂ ಮನುಷ್ಯರಿಗೆ ಮನಸ್ಸಿಗೆ ಸ್ಪಂದಿಸುವ, ರಂಜಿಸುವ, ಮನಸ್ಸನ್ನು ವಿಕಸಿಸುವ ಕೆಲಸಗಳನ್ನು ಮಾಡುತ್ತಿವೆ. ಹಾಗಾಗಿ ರಂಗಭೂಮಿ ಕೇವಲ ಜೀವನೋಪಾಯದ ದಾರಿ ಮಾತ್ರವಲ್ಲದೇ ಎಲ್ಲರನ್ನೂ ಬೆಸೆಯುವ ದಾರಿಯೂ ಹೌದು.
            ಈ ವರ್ಷದ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಅಮೆರಿಕಾದ ರಂಗ ವಿದ್ವಾಂಸ ಪೀಟರ್ ಸೆಲ್ಲಾರ್ಸ್ 2022 ರ ರಂಗ ಸಂದೇಶವನ್ನೂ ಹೀಗೇ ನೀಡಿದ್ದಾರೆ, "ನಾವಿಂದು ಮನೋಲ್ಲಾಸಕ್ಕಾಗಿ ರಂಗಭೂಮಿಯ ಕೆಲಸ ಮಾಡಬೇಕಾಗಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಸಮಾನ ಅವಕಾಶಗಳನ್ನು (space) ಹಂಚಿಕೊಳ್ಳಬೇಕಾಗಿದೆ. ಸಸ್ಯಗಳು ,ಪ್ರಾಣಿಗಳು, ಮಳೆಹನಿಗಳು, ಕಣ್ಣೀರು ಮತ್ತು ಪುನರುತ್ಪಾದನೆಯ ನಡುವಣ ಸಮಾನತೆಯ ಜಾಗದ ಈ ಭೂಮಿಯಲ್ಲಿ 'ರಂಗಭೂಮಿ' ಸೃಷ್ಟಿಯಾಗಿದೆ.
        ನಮಗೆ ಬೇಕಾಗಿರುವುದು ಸುರಕ್ಷಿತವಾದ ಅವಕಾಶಗಳಲ್ಲಿ ಆಳವಾದ ಆಲಿಸುವಿಕೆಯ ಗಾಢ ರಂಗಭೂಮಿ ಮತ್ತು ಸಮಾನತೆಯ ಬಾಳುವಿಕೆ. ಗೌತಮಬುದ್ದ ಮಾನವ ಜೀವನದಲ್ಲಿ ಗುರುತಿಸಿರುವ ಹತ್ತು ಬಗೆಯ ತಾಳ್ಮೆಯನ್ನು ಪಟ್ಟಿ ಮಾಡುತ್ತಾನೆ. ಬದುಕು ಬಾಳಾಗುವ ಎಲ್ಲವನ್ನೂ 'ಮರೀಚಿಕೆ 'ಎಂದು ಗ್ರಹಿಸಿಕೊಂಡಾಗ ಮಾತ್ರ ತಾಳ್ಮೆ ಎನ್ನುವುದು ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿ ರೂಪುಗೊಳ್ಳುತ್ತದೆ.
ನಮ್ಮ ಭವಿಷ್ಯದ ಬಗ್ಗೆ ಏಕಾಂಗಿಯಾಗಿ ಒಂಟಿಯಾಗಿ ಕೆಲಸ ಮಾಡುವ ಜನರಿಂದ ಈ ಕೆಲಸ ಸಾಧ್ಯವಿಲ್ಲ. ಇದೆಲ್ಲವೂ ನಾವು ಒಟ್ಟಾಗಿ ಮಾಡಬೇಕಾದ ಕೆಲಸ. ಈ ಕೆಲಸವನ್ನು ಒಟ್ಟಾಗಿ ನಿರ್ಮಿಸಲು ರಂಗಭೂಮಿಯೇ ನಮಗೆ ನೀಡಿರುವ ಪ್ರೀತಿಯ ಆಹ್ವಾನವಿದು ಎಂದು ತಿಳಿಯಬೇಕು".
          ಹಾಗಾಗಿ ಬನ್ನಿ ಒಟ್ಟಾಗುವ, ಒಗ್ಗಟ್ಟಾಗುವ, ನಮ್ಮ ಮಧ್ಯೆಯ ಅಂತರಗಳ ಮೀರೋಣ, ಗಡಿ ಬೇಲಿಗಳ ಹಾರೋಣ, ಜೀವಸಂಕುಲಗಳ ಉಳಿವು ಮತ್ತು ಸ್ಪಂದನೆಗಾಗಿ ಸೇರೋಣ, ರಂಗಭೂಮಿ ನಮ್ಮನ್ನು ಇನ್ನಷ್ಟು ಜೀವಸಂವೇದನೆ ಉಳ್ಳವರನ್ನಾಗಿ ಬೆಳೆಸುತ್ತದೆ. ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು.
................................ ನಾದ ಮಣಿನಾಲ್ಕೂರು
ತೆಕ್ಕೂರು , ಚಿಕ್ಕಮಗಳೂರು
+91 99014 10127
*******************************************

Ads on article

Advertise in articles 1

advertising articles 2

Advertise under the article