
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ - 20
Saturday, March 26, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 20
ನಮಸ್ತೆ ಮಕ್ಕಳೇ....... ಹೇಗಿದ್ದೀರಿ?
ಪರೀಕ್ಷೆ, ಅಂಕಗಳ ಲೆಕ್ಕಾಚಾರಗಳ ನಡುವೆ ಆರೋಗ್ಯ ಜೋಪಾನ.
ಓದಿನ ನಡುವೆ ಒಂದು ಕಥೆ...
ರಾಜನೊಬ್ಬನ ಆಸ್ಥಾನಕ್ಕೆ ಪಂಡಿತರೊಬ್ಬರು ಆಗಮಿಸುತ್ತಾರೆ. ರಾಜನ ಗುಣ ಗಾನವನ್ನು ಮಾಡುತ್ತಾ, "ರಾಜ್ಯವು ಸುಖ , ನೆಮ್ಮದಿ , ಶಾಂತಿಗಳಿಂದ ಸುಭಿಕ್ಷವಾಗಿದೆ. ಎಲ್ಲವೂ ಉತ್ತಮವಾಗಿರುವ ಈ ರಾಜ್ಯದಲ್ಲಿ ನ್ಯಾಯ ನಿರ್ಣಯ ವ್ಯವಸ್ಥೆ ಮಾತ್ರ ಸರಿಯಾಗಿಲ್ಲ. ಇದು ಜಾತಿಮತ ಆಧಾರಿತವಾಗಿರಬೇಕು" ಎಂದು ಹೇಳುತ್ತಾರೆ. ಇದರಿಂದ ಸಿಟ್ಟುಗೊಂಡ ಮಂತ್ರಿಗಳು ಮತ್ತು ರಾಜನ ಆಸ್ಥಾನ ಪಂಡಿತರು ರಾಜನಲ್ಲಿ, ಈ ಪಂಡಿತರನ್ನು ಬಂಧಿಸಿ ಶಿಕ್ಷೆ ನೀಡಲು ಅನುಮತಿ ಕೇಳುತ್ತಾರೆ.
ಆಗ ರಾಜನು ಪಂಡಿತರ ಕಣ್ಣಿಗೆ ಬಟ್ಟೆ ಕಟ್ಟಿ ಕರೆತರಲು ಆದೇಶ ಮಾಡುತ್ತಾನೆ. ಬಳಿಕ ಪಂಡಿತರ ಎದುರು ಆನೆ, ಕುರಿ, ನಾಯಿ, ಬೆಕ್ಕು ಮತ್ತು ಮನುಷ್ಯರನ್ನು ತಂದು ನಿಲ್ಲಿಸುತ್ತಾರೆ. ನಂತರ, ಒಂದೊಂದಾಗಿ ಮುಟ್ಟಿ ನೋಡಿ ಗುರುತಿಸಲು ಹೇಳುತ್ತಾನೆ. ಆಗ ಪಂಡಿತರು ಎಲ್ಲವನ್ನೂ ಮುಟ್ಟುತ್ತಾ....... ಆನೆ, ಕುರಿ, ನಾಯಿ, ಬೆಕ್ಕು , ಮನುಷ್ಯ.. ಮನುಷ್ಯ.... ಎಂದು ಗುರುತಿಸಿ ಗೆಲುವಿನ ನಗೆ ಬೀರಿದರು. ಆಗ ರಾಜನು ಮನುಷ್ಯನ ಜಾತಿಯನ್ನೂ ಗುರುತಿಸಲು ಹೇಳುತ್ತಾನೆ. ಪಂಡಿತ ಕಣ್ಣಿನ ಪಟ್ಟಿಯನ್ನು ಬಿಚ್ಚಿ ಸೋಲನ್ನು ಒಪ್ಪಿಕೊಳ್ಳುತ್ತಾನೆ.
ಬಳಿಕ ರಾಜನು, ಪಂಡಿತರೇ.... ಭಿನ್ನತೆಗಳು ಪ್ರಕೃತಿ ಸಹಜ... ಆದರೆ, ಜಾತಿ ಭೇದ ಮಾನವನಿರ್ಮಿತ... ನ್ಯಾಯ ನಿರ್ಣಯವು ಮಾನವೀಯತೆ ಆಧಾರವಾಗಿರಬೇಕೇ ಹೊರತು ಜಾತಿ ಮತ ಆಧಾರಿತವಲ್ಲ ಎಂದನು. ಪಂಡಿತರ ಅರಿವಿನ ಕಣ್ಣು ತೆರೆಯಿತು. ಕ್ಷಮೆ ಕೇಳಿದ ಪಂಡಿತರಿಗೆ , ರಾಜನು ಕಾಣಿಕೆಗಳನ್ನಿತ್ತು ಗೌರವಿಸಿದ.
ಮಕ್ಕಳೇ, ಇದು ನ್ಯಾಯ ನಿರ್ಣಯದ ವಿಚಾರವಾದರೆ, ಬದುಕಿನಲ್ಲಿ ತೀರ್ಮಾನ ನೀಡುವಾಗ ನಮ್ಮ ದೃಷ್ಟಿಕೋನವನ್ನು ವಿಶಾಲವಾಗಿ ವಿಸ್ತರಿಸುವ ಅನಿವಾರ್ಯತೆ ಇಂದಿನದು. ಸಮಾಜದಲ್ಲಿ ಮನೆಮಾಡಿರುವ ಇಂತಹ ಗೊಂದಲಗಳಿಗೆ ಕಿವಿಯಾಗದೆ, ಮಾನವತೆಯನ್ನು ಬೆಳಗಿಸಬೇಕಿದೆ. ಹೊಸ ಆಲೋಚನೆಗಳ ಕಡೆಗೆ ಮನಸ್ಸನ್ನು ವಿಸ್ತಾರಗೊಳಿಸಿದಾಗ, ಸಮಾನತೆಯ ಕಣ್ಣಿನಲ್ಲಿ ಎಲ್ಲವನ್ನೂ ವೀಕ್ಷಿಸಿದಾಗ... ಸ್ವಸ್ಥ ಸಮಾಜ ನಮ್ಮದಾಗುತ್ತದೆ. ಅಂಕಗಳು ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಜ್ಞಾನವೂ ಅಲ್ಲ.... ನಮ್ಮ ವಿವೇಕ ಜಾಗೃತಗೊಳ್ಳಬೇಕು. ಸದುದ್ದೇಶದ ಯಾವುದೇ ಕೆಲಸ ಕೀಳಲ್ಲ... ಅದನ್ನು ಮಾಡುವ ಕೆಲಸಗಾರರು ಕೂಡಾ. ಆದರೆ ಕನಸುಗಳು ಮಾತ್ರ ಉತ್ಕೃಷ್ಟವಾಗಿರಬೇಕು. ಅದನ್ನು ಸಾಧ್ಯವಾಗಿಸುವ ಕಡೆಗೆ ಪ್ರಯತ್ನದ ಛಲವಿರಬೇಕು.
ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ಪುಸ್ತಕದ ಪುಟಗಳು ಮರೆತು ಹೋಗಬಹುದು. ಆದರೆ, ಬದುಕಿನ ಪಾಠಗಳನ್ನು ಆಗಾಗ ಪುನರ್ಮನನ ಮಾಡಿಕೊಳ್ಳುವ ಅನಿವಾರ್ಯತೆ ಯಿದೆ. ಪಂಡಿತನಲ್ಲಿದ್ದ ಸಂಕುಚಿತ ಮನೋಭಾವ ಅವನನ್ನು ಸಣ್ಣವನನ್ನಾಗಿಸಿತು. ಈ ನಿಟ್ಟಿನಲ್ಲಿ ಪಡೆದ ವಿದ್ಯೆ ಮೌಲ್ಯದ ಬೆಳಕಿನಲ್ಲಿ, ಮಾನವತೆಯ ತಿಳಿವಿನಲ್ಲಿ ಬದುಕಿನ ಸಾರ್ಥಕತೆಯನ್ನು ಎತ್ತಿಹಿಡಿಯಲಿ.
ಸೋಲನ್ನು ಒಪ್ಪಿಕೊಂಡು, ಮತ್ತೆ ಗೆಲ್ಲುವ ಛಲ, ಗಟ್ಟಿ ಮನಸ್ಸು, ಉತ್ಸಾಹ, ಆಸಕ್ತಿ ನಿತ್ಯ ಕಲಿಕೆಯೆಡೆಗೆ ಮುನ್ನಡೆಸಲಿ.
ಪರೀಕ್ಷೆಯ ಓದಿನ ಜೊತೆಗೆ ಪತ್ರವೂ ಕೈಸೇರಿದೆ. ಬಿಡುವಿನಲ್ಲಿ ಉತ್ತರಿಸಿ.
ನಿಮ್ಮ ಪತ್ರದ ಪ್ರತಿಯೊಂದು ಸಾಲು ಗಳಲ್ಲಿಯೂ ಪ್ರೀತಿ.. ಆಪ್ತತೆ.. ಭರವಸೆ... ಕಾಳಜಿಗಳು... ಮಾತನಾಡುತ್ತವೆ. ಮುಕ್ತ ಅನಿಸಿಕೆಯೊಳಗಿನ ಮುಗ್ಧ ಲೋಕದಲ್ಲಿ ಪಯಣಿಸಿವುದೊಂದು ಸುಖ. ನಿಮಗಾಗಿ ಕಾಯುತ್ತಿದ್ದೇನೆ.
ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************