-->
ಸ್ಪೂರ್ತಿಯ ಮಾತುಗಳು : ಹರಿಣಾಕ್ಷಿ ಕಕ್ಯಪದವು

ಸ್ಪೂರ್ತಿಯ ಮಾತುಗಳು : ಹರಿಣಾಕ್ಷಿ ಕಕ್ಯಪದವು



              ಗುರಿಯೆಡೆಗೆ ಗುರುತರ ನಡೆಯಿರಲಿ
           ಪುಟ್ಟ ಹಾಗೂ ಕಿಟ್ಟು ಇಬ್ಬರೂ ಸಹಪಾಠಿಗಳಾಗಿ ಒಟ್ಟಿಗೆ ಓದಿದವರು. ಬಾಲ್ಯದ ದಿನಗಳನ್ನು ಒಟ್ಟಿಗೆ ಕಳೆದವರು. ಅವರೀರ್ವರು ಬೆಳೆಯುತ್ತಾ ಸಾಗಿದಂತೆ ಬಾಲ್ಯದ ಗೆಳೆತನ ವೃತ್ತಿರಂಗದಲ್ಲೂ ಮುಂದುವರಿದಿತ್ತು. ಇಬ್ಬರೂ ಚಲಪತಿ ಬೆಟ್ಟದ ಕೆಳಗಿನ ತಪ್ಪಲಿನಲ್ಲಿ ಒಂದೊಂದು ತಳ್ಳುಗಾಡಿಯನ್ನು ಹಿಡಿದುಕೊಂಡು ವ್ಯಾಪಾರ ಮಾಡುತ್ತಿದ್ದರು. ಆ ಬೆಟ್ಟದ ತುದಿಯಲ್ಲಿ ಹುಟ್ಟಿ ಕೆಳಗೆ ಧುಮುಕುವ ಮಂದಾರ ನದಿ ಸೃಷ್ಟಿಸಿದ ಝರಿ ನೂರಾರು ವೀಕ್ಷಕರನ್ನು ತನ್ನೆಡೆಗೆ ಸೆಳೆಯುತ್ತಿತ್ತು. ಝರಿಯ ಸೌಂದರ್ಯವನ್ನು ಆಸ್ವಾದಿಸಲು ಆಗಮಿಸುತ್ತಿದ್ದ ವೀಕ್ಷಕರು ಪುಟ್ಟ ಹಾಗೂ ಕಿಟ್ಟುವಿನ ಪಾಲಿಗೆ ಅನ್ನದ ಬಟ್ಟಲಾಗಿದ್ದರು. ಆರಂಭದ ದಿನಗಳಲ್ಲಿ ಇವರಿಬ್ಬರ ವ್ಯಾಪಾರ ಚೆನ್ನಾಗಿಯೇ ನಡೆಯುತಿತ್ತು. ಆದರೆ ಕಾಲಕ್ರಮೇಣ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ , ವ್ಯಾಪಾರಿಗಳ ಸಂಖ್ಯೆಯಲ್ಲಿ ಕೂಡ ಅಗಣಿತ ಪ್ರಮಾಣದಲ್ಲಿ ಹೆಚ್ಚಳವಾಯಿತು. ಪುಟ್ಟ ಹಾಗೂ ಕಿಟ್ಟುವಿಗೆ ಬರುತ್ತಿದ್ದ ಆದಾಯದಲ್ಲಿ ದಿನೇ ದಿನೇ ಕಡಿಮೆಯಾಗಲು ಆರಂಭವಾಯಿತು. ತತ್ಪರಿಣಾಮವಾಗಿ ಇಬ್ಬರೂ ಹೊಸ ಆದಾಯದ ಮೂಲಕ್ಕಾಗಿ ಹುಡುಕಾಟ ಆರಂಭಿಸಿದ್ದರು. ಪರಸ್ಪರ ಸಂವಾದ, ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು .
             ಒಂದು ದಿನ ಕಿಟ್ಟು ನೀರಿನ ಝರಿಯ ಮೂಲ ನೆಲೆಯನ್ನು ಕಂಡು ಹುಡುಕಿ , ವೀಕ್ಷಕರನ್ನು ಅತ್ತ ಕಡೆಗೆ ಸೆಳೆಯುವ ಯೋಚನೆಯನ್ನು ಪುಟ್ಟನ ಮುಂದಿಟ್ಟ. ಕಿಟ್ಟುವಿನ ಈ ಯೋಜನೆಯನ್ನು ಕೇಳಿ ಪುಟ್ಟುವಿಗೆ ತಡೆಯಲಾರದ ನಗು ಬಂತು. ಅಸಾಧ್ಯವಾದುದನ್ನು ಸಾಧಿಸಿ ತೋರಿಸುತ್ತೇನೆಂದು ಪಣತೊಟ್ಟ ಕಿಟ್ಟು ಪ್ರತಿನಿತ್ಯ ಪ್ರಯತ್ನದಲ್ಲಿ ನಿರತನಾದ. ನಿತ್ಯ ಪ್ರಯತ್ನದಲ್ಲಿ ಎದುರಾದ ಸವಾಲುಗಳನ್ನು ಎದುರಿಸುತ್ತ, ಬೆಟ್ಟದ ಮೇಲೇರಿ ಮುಂದೆ ಮುಂದಕ್ಕೆ ಸಾಗುತ್ತಿದ್ದ ಗೆಳೆಯನ ಪ್ರಯತ್ನವನ್ನು ಕಂಡು ಪುಟ್ಟುವಿಗೆ ಸಂತೋಷವಾದರೂ ಆತನ ಮೇಲೆ ಸಂಪೂರ್ಣವಾದ ನಂಬಿಕೆ ಇರಲಿಲ್ಲ. ಅಪನಂಬಿಕೆಯಿಂದ ತನ್ನ ಕೈಲಾದ ಸಹಾಯ ಮಾಡುವುದನ್ನು ಬಿಟ್ಟು ತನಗೆ ಸಿಕ್ಕಂತಹ ಅಲ್ಪ ಆದಾಯದಲ್ಲೇ ತೃಪ್ತಿಪಡಲಾರಂಭಿಸಿದ.
        ದಿನಗಳುರುಳಿದವು , ಕೊನೆಗೂ ಕಿಟ್ಟು ತನ್ನ ಶ್ರಮದಲ್ಲಿ ಯಶಸ್ಸನ್ನು ಗಳಿಸಿದ. ಬೆಟ್ಟದ ತುದಿಯನ್ನು ಏರಿ ನೀರಿನ ಮೂಲವನ್ನು ಹುಡುಕಿ ತೆಗೆದ. ತನ್ನ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿದ್ದ ವ್ಯಾಪಾರದೊಂದಿಗೆ ಪ್ರವಾಸಿಗರ ಮಾರ್ಗದರ್ಶಕನಾಗಿಯೂ ಕೆಲಸವನ್ನು ಆರಂಭಿಸಿದ. ಬೆಟ್ಟದ ಮೇಲೇರಿ ಸಾಗುವ ಪ್ರವಾಸಿಗರಿಗೆ ಆಕರ್ಷಕ ವ್ಯಕ್ತಿತ್ವವಾದ. ತನ್ನ ಶ್ರಮದ ಮೂಲಕ ತನ್ನ ಗಳಿಕೆಯಲ್ಲಿಯೂ ಕಿಟ್ಟು ಹೆಚ್ಚಳವನ್ನು ಮಾಡಿಕೊಂಡ.
          ಹೀಗೆ ಪ್ರತಿಯೊಬ್ಬರಲ್ಲೂ ಜೀವನದಲ್ಲಿ ಯಶಸ್ಸನ್ನು ಕಾಣುವ ಹಂಬಲವಿರುತ್ತದೆ. ಅವರವರ ಆಸಕ್ತಿ , ಅಭಿರುಚಿಗೆ ತಕ್ಕಂತೆ ವಿಭಿನ್ನ ಕ್ಷೇತ್ರದಲ್ಲಿ ಯಶಸ್ಸು ಸಂಪಾದನೆಯ ಆಸೆಯು ಮನದೊಳಗೆ ಅಂತರ್ಗತವಾಗಿ ಅಡಗಿಕೊಂಡಿರುತ್ತದೆ .
         ಇತರರನ್ನು ಕಂಡಾಗ ತಾನೂ ಅವರಂತಾಗಬೇಕು, ಅಮೂಲ್ಯವಾದ ವಸ್ತುಗಳನ್ನು ಕಂಡಾಗ ಅದರ ಒಡೆಯರು ತಾವಾಗಬೇಕು ಎಂಬ ಒಳ್ಳೆಯ ಕನಸು ಹೆಚ್ಚಿನವರಲ್ಲಿ ಮನೆಮಾಡಿರುತ್ತದೆ. ಕನಸು ಕಾಣುವುದು ತಪ್ಪಲ್ಲ. ಕಂಡ ಕನಸನ್ನು ನನಸು ಮಾಡಲು ಮನಸ್ಸು ಮಾಡುವುದು ಮುಖ್ಯ. ಇಲ್ಲಿ ಕನಸನ್ನು ಬೆಂಬತ್ತಿ ಸಾಗಿ ಗುರಿಯನ್ನು ತಲುಪುವುದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾಧಕರನ್ನು ಕಂಡ ಮನಸ್ಸು ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಹಿರಿಹಿರಿ ಹಿಗ್ಗಿದರೆ ಸಾಲದು. ಕಠಿಣ ಪ್ರಯತ್ನ, ಸೋಲುಗಳಿಗೆ ಅಂಜದೆ ಅಚಲ ನಿರ್ಧಾರದಿ ನಿಂತು, ಅವಿರತ ಪರಿಶ್ರಮದಿಂದ ಸತತ ನಿರತರಾದಾಗ ಗೆಲುವಿನ ನಗೆಯನ್ನು ಬೀರಬಹುದು.
          ಗುರಿ ಎಂಬುದು ನಿಶ್ಚಿತವಾಗಿದ್ದಾಗ, ಸ್ಪಷ್ಟವಾಗಿದ್ದಾಗ ಸಾಧಿಸಲೇಬೇಕೆಂಬ ತುಡಿತ ಹಾಗೂ ದೃಢತೆ ಒಡಮೂಡಿದಾಗ ಆರಂಭದಿಂದಲೇ ಕಠಿಣ ಅಭ್ಯಾಸದಲ್ಲಿ ನಿರತರಾಗಬೇಕು. ದಿನದಿಂದ ದಿನಕ್ಕೆ ಗುರಿಯ ಸಾಮೀಪ್ಯತೆಯನ್ನು ತಲುಪುವ ನಾನಾ ಮಾರ್ಗಗಳ ಶೋಧಕರಾಗಬೇಕು. ನಾನು ಏನನ್ನು ಗಳಿಸಬೇಕೆಂದು ಹೊರಟಿರುವೆನೋ ಅದರ ಕುರಿತ ಸಂಪೂರ್ಣ ಜ್ಞಾನವನ್ನು ವಿವಿಧ ಮೂಲಗಳಿಂದ ಸಂಪಾದಿಸಬೇಕು. ಗಳಿಸಿದ ಜ್ಞಾನವನ್ನು ಬಳಸಿಕೊಂಡು ಪ್ರಯೋಗಶೀಲರಾಗಬೇಕು. ಹಲವಾರು ವರ್ಷಗಳ ಶ್ರಮದ ಫಲವಾಗಿ ದಕ್ಕಿದ ಗುರಿ ಸಾಧನೆಯ ಹಿಂದೆ ನೂರಾರು ದಿನಗಳ ಅವಿರತ ಪ್ರಯತ್ನದ ಶ್ರಮವಿದೆ ಎಂಬ ಅರಿವನ್ನು ಬೆಳೆಸಿಕೊಂಡು ತಮ್ಮ ಮನಸ್ಸನ್ನು ಕಠಿಣ ಅಭ್ಯಾಸಕ್ಕೆ ತೆರೆದುಕೊಳ್ಳಬೇಕು. ಸಮಯವಿಲ್ಲವೆಂದು ಸಲ್ಲದ ಕಾರಣಗಳನ್ನು ಬದಿಗೊತ್ತಿ ಸಿಕ್ಕ ಸಮಯದ ಸದುಪಯೋಗದ ಕಲೆ ಕರಗತ ಮಾಡಿಕೊಂಡಾಗ ಅಸಾಧ್ಯತೆಯೂ ಕೈಗೆಟುಕೀತು. ಸಾಮಾನ್ಯನೂ ಅಸಾಮಾನ್ಯ ನಾಗಬಹುದು. ಗುರಿಯನ್ನು ಈಡೇರಿಸಿಕೊಳ್ಳಲು ಮುಂದಡಿ ಇಡುವ ವೇಳೆ ಅನ್ಯರಿಂದ ಟೀಕೆಗೊಳಗಾಗಬಹುದು, ಸವಾಲುಗಳು ಒಂದರ ಮೇಲೊಂದರಂತೆ ಎರಗಿ ಬರಬಹುದು. ನಮ್ಮೊಳಗಿನ ದೌರ್ಬಲ್ಯಗಳು ಎದ್ದು ಕುಣಿಯಬಹುದು. ಸೋಲೊಪ್ಪಿಕೊಂಡು ಹಿಂದಡಿ ಇಡಲು ಮನಸ್ಸೂ ಒಂದೊಮ್ಮೆ ಅಣಿಗೊಳ್ಳಬಹುದು....!!
        ಇಂತಹ ಸಂದರ್ಭದಲ್ಲಿ ನಕಾರಾತ್ಮಕ ಯೋಚನೆಗಳನ್ನು ಸಕಾರಾತ್ಮಕ ಚಿಂತನೆಗಳಿಂದ ದಮನಿಸಿ, ಸಾಧಕರ ಜೀವನ ಚರಿತ್ರೆಯ ಮೆಲಕು ಹಾಕುತ್ತಾ ಮನದ ಸಂಕಲ್ಪ ಶಕ್ತಿಯನ್ನು ಪ್ರಬಲಗೊಳಿಸುತ್ತಾ ಸಾಗೋಣ. ಇಳೆಯ ಮೇಲಿನ ಆಹಾರದೆಡೆಗೆ ಗುರಿಯಿಟ್ಟು ಸಾಗಿ ಬಂದು ಬಾಯಿ ಇಕ್ಕುವ ಹದ್ದಿನಂತೆ ಗುರಿಯೆಡೆಗಿನ ನಮ್ಮ ದೃಷ್ಟಿಯನ್ನು ಸೂಕ್ಷ್ಮಗೊಳಿಸೋಣ , ಪ್ರಖರಗೊಳಿಸೋಣ. ಜೊತೆಜೊತೆಗೆ ನಮ್ಮ ನಡೆಯ ವೇಗವನ್ನು ಹೆಚ್ಚಿಸೋಣ....!!
..............................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************




Ads on article

Advertise in articles 1

advertising articles 2

Advertise under the article