-->
ಇವರು ಎಲ್ಲದಕ್ಕೂ ಸೈ.. ಹೇಳಿ ಇವರಿಗೆ ಜೈ ಜೈ... : ವಿಶ್ವ ಮಹಿಳಾ ದಿನದ ವಿಶೇಷ ಲೇಖನ

ಇವರು ಎಲ್ಲದಕ್ಕೂ ಸೈ.. ಹೇಳಿ ಇವರಿಗೆ ಜೈ ಜೈ... : ವಿಶ್ವ ಮಹಿಳಾ ದಿನದ ವಿಶೇಷ ಲೇಖನ

ವಿಶ್ವ ಮಹಿಳಾ ದಿನಾಚರಣೆ
ಮಾರ್ಚ್ - 08
ಈ ದಿನದ
ವಿಶೇಷ ಲೇಖನ                  ಇವರು ಎಲ್ಲದಕ್ಕೂ ಸೈ..
                   ಹೇಳಿ ಇವರಿಗೆ ಜೈ ಜೈ...
         -------------------------------------
          ಒಮ್ಮೆ ನಾವು ಕುಟುಂಬ ಸಮೇತ ಬೆಂಗಳೂರಿಗೆ ಪ್ರವಾಸ ಹೋಗಿದ್ದೆವು. ಕೆಲವು ತಿಂಗಳುಗಳ ಹಿಂದೆಯಷ್ಟೇ ಆರಂಭವಾದ ಮೆಟ್ರೋ ಟ್ರೈನ್ ನಲ್ಲಿ ಹತ್ತಲಿಕ್ಕಾಗಿಯೇ ಮೆಟ್ರೋ ಸ್ಟೇಷನ್ ಒಂದಕ್ಕೆ ಹೋಗಿ ಅಲ್ಲಿಂದ ಮುಂದಿನ ಸ್ಟೇಷನ್ ಗೆ ಟಿಕೆಟ್ ಕೊಂಡು ಒಳಗೆ ಹೋಗಿ ಟ್ರೈನ್ ಬರುವುದನ್ನು ಕಾಯುತ್ತಾ ನಿಂತೆವು. ಅಷ್ಟರಲ್ಲಿ ಆಚೆ ಕಡೆಯಿಂದ ವೇಗವಾಗಿ ಒಂದು ಟ್ರೈನ್ ಬಂತು. ಅದರ ಡ್ರೈವರ್ ಯಾರೆಂದು ನೋಡಿದಾಗ ತಿಳಿನೀಲಿ ಷರ್ಟ್ ಹಾಗೂ ಕಡುನೀಲಿ ಪ್ಯಾಂಟ್ ಧರಿಸಿದ ಆ ಲೋಕೋಪೈಲೆಟ್ ಒಂದು ಮಹಿಳೆ ಎಂದು ತಿಳಿಯಿತು. ಒಮ್ಮೆ ನಮ್ಮ ಪುತ್ತೂರಿನಲ್ಲಿ ಅಡ್ಡ ರಸ್ತೆಯೊಂದರಿಂದ ಮುಖ್ಯರಸ್ತೆಗೆ ದೊಡ್ಡ ಗಾತ್ರದ ಟ್ರಕ್ ಒಂದು ಬರುವುದನ್ನು ಎಲ್ಲರೂ ಬಾಯಿಬಿಟ್ಟು ನೋಡುವುದನ್ನು ಕಂಡು ನಾನೂ ಗಮನಿಸಿದೆ. ಯುವತಿಯೊಬ್ಬಳು ಅದನ್ನು ಚಲಾಯಿಸುತ್ತಿರುವುದೇ ಅವರ ಆಶ್ಚರ್ಯಕ್ಕೆ ಕಾರಣವೆಂದು ತಿಳಿಯಿತು. ಬೈಕ್ ಚಲಾಯಿಸುವ, ರಿಕ್ಷಾ, ಟ್ಯಾಕ್ಸಿಗಳನ್ನು ಚಲಾಯಿಸುವ ಮಹಿಳೆಯರಿಗೆ ಈಗ ಕೊರತೆಯಿಲ್ಲ. ಕೇರಳ ರಾಜ್ಯದಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕೆಲಸವನ್ನು ಈಗ ಹೆಂಗಸರೂ ಮಾಡುತ್ತಿದ್ದಾರೆ. ನಮ್ಮ ಜಾತ್ರೆಗಳಲ್ಲಿ ಕೇರಳದ ಮಹಿಳಾ ಚೆಂಡೆ ವಾದ್ಯದ ತಂಡವನ್ನು ನೀವು ನೋಡಿರಬಹುದು. ನಾವು ಯಾರಿಗೂ ಕಡಿಮೆಯಿಲ್ಲ. ನಾವು ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸಬಲ್ಲೆವು ಎಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸುತ್ತಿದ್ದಾರೆ. 
          ಇಂದು ಮಾರ್ಚ್ 8. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. "ತೊಟ್ಟಿಲು ತೂಗುವ ಕೈ ದೇಶ ಆಳೀತೇ?" ಎಂಬ ಗಾದೆ ಮಾತೊಂದಿತ್ತು. ಆ ಗಾದೆ ಮಾತಲ್ಲಿ ಹುರುಳಿಲ್ಲ ಎಂಬುದನ್ನು ಲಕ್ಷಾಂತರ ಮಹಿಳೆಯರು ಸಾಬೀತು ಮಾಡಿದ್ದಾರೆ. ತೊಟ್ಟಿಲು ತೂಗಲು, ಬಟ್ಟೆ ಒಗೆಯಲು, ಅಡುಗೆ ಮಾಡಲು, ಇಷ್ಟಕ್ಕೇ ತಾವು ಸೀಮಿತವಲ್ಲ. ವಾಹನಗಳ ಸ್ಟೀರಿಂಗ್ ಹಿಡಿಯಲು, ಭಾರೀ ಯಂತ್ರಗಳನ್ನು ಚಾಲೂ ಮಾಡಲು, ಅಷ್ಟೇಕೆ ಬಾಹ್ಯಾಕಾಶ ಯಾನ ಮಾಡುವುದಕ್ಕೂ, ಹಿಮಾಲಯವನ್ನು ಏರುವುದಕ್ಕೂ ತಾವು ಸೈ ಎಂದು ಅವರು ತೋರಿಸಿಕೊಟ್ಟಿದ್ದಾರೆ. ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿ, ನಾಜೂಕಾಗಿ, ದಕ್ಷತೆಯಿಂದ, ತಾಳ್ಮೆಯಿಂದ ಮಹಿಳೆಯರು ಕೆಲಸ ನಿರ್ವಹಿಸುತ್ತಾರೆ ಎಂಬುದು ಎಲ್ಲರೂ ಒಪ್ಪುವಂತಹ ಮಾತು. ಹಾಗಾಗಿ ಕೆಲವು ಕಂಪೆನಿಗಳು ಸೂಕ್ಷ್ಮ ಕೆಲಸಗಳಿಗೆ ಮಹಿಳೆಯರನ್ನೇ ನಿಯೋಜಿಸಲು ಆದ್ಯತೆ ಕೊಡುತ್ತವೆ. ಹೆಣ್ಣನ್ನು ಪುರುಷನ ನಂತರದ ಸ್ಥಾನದಲ್ಲಿ ಕಾಣುವ ಕಾಲವೊಂದಿತ್ತು. ಆದರೆ ಈಗ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಪುರುಷರಿಗಿಂತ ಕಡಿಮೆಯಿಲ್ಲ, ಅವರಿಗೆ ಸರಿಸಮಾನವಾಗಿ ಯಾವುದೇ ಕೆಲಸ ನಿರ್ವಹಿಸಲು ಅವಳು ಸಮರ್ಥಳು ಎಂಬುದಕ್ಕೆ ಲಕ್ಷಾಂತರ ನಿದರ್ಶನಗಳು ನಮ್ಮ ಮುಂದಿವೆ. 
            ಪ್ರೀತಿಯ ಮಕ್ಕಳೇ, ಅಂತರರಾಷ್ಟ್ರೀಯ ಮಹಿಳಾ ದಿನವಾದ ಇಂದು ಕೆಲವು ಸಾಧಕ ಮಹಿಳೆಯರ ಬಗ್ಗೆ ತಿಳಿದುಕೊಂಡು, ಮಹಿಳೆಯರ ಕುರಿತು ಮತ್ತಷ್ಟೂ ಗೌರವ ಭಾವನೆ ಬೆಳೆಸಿಕೊಳ್ಳೋಣವೇ? 
                        ಕಿರಣ್ ಬೇಡಿ
        ಭಾರತದ ಪ್ರಥಮ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರ ಹೆಸರು ನೀವೆಲ್ಲಾ ಕೇಳಿರಬಹುದು. 1972 ರಿಂದ 2007 ರ ತನಕ 35 ವರ್ಷಗಳ ಕಾಲ ಅವರು ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಅದರಲ್ಲೇನೂ ವಿಶೇಷ ಇಲ್ಲ ಅಲ್ಲವೇ.....? ಆದರೆ ವಿಶೇಷತೆ ಇರುವುದು ಗಂಡಸರೂ ಮಾಡದಂತಹ ಕೆಲಸವನ್ನು ಅವರು ಮಾಡಿದ್ದರಲ್ಲಿ. ತಿಹಾರ್ ಜೈಲಿನ ಅಧಿಕಾರಿಯಾಗಿರುವ ಸಂದರ್ಭದಲ್ಲಿ ಅವರು ಜೈಲಿನಲ್ಲಿ ತಂದ ಸುಧಾರಣೆಗಳು ಅವರನ್ನು ವಿಶ್ವವೇ ಗುರುತಿಸುವಂತೆ ಮಾಡಿದವು. ಅವರಿಂದಾಗಿ ಜೈಲಿನ ಅನೇಕ ಖೈದಿಗಳು ಜೈಲಲ್ಲಿದ್ದಕೊಂಡೇ ಉನ್ನತ ಶಿಕ್ಷಣ ಪಡೆದರು. ಜೈಲಿನ ಮೂಲ ಸೌಕರ್ಯಗಳನ್ನು ಉತ್ತಮಗೊಳಿಸುವ ಜೊತೆಗೆ ಉತ್ತಮ, ಸುಸಜ್ಜಿತ ಲೈಬ್ರರಿಯನ್ನೂ ಅವರು ವ್ಯವಸ್ಥೆಗೊಳಿಸಿದ್ದು ಇದಕ್ಕೆ ಕಾರಣ. ಅವರ ಈ ಕಾರ್ಯಗಳಿಗಾಗಿ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಬಂತು.
                   ಅರುಣಿಮಾ ಸಿನ್ಹಾ
           ಮೌಂಟ್ ಎವರೆಸ್ಟ್ ಏರುವುದು ಸುಲಭದ ಮಾತಲ್ಲ. ಕೈಕಾಲು ಗಟ್ಟಿ ಇರುವವರಿಗೇ ಅದು ದೊಡ್ಡ ಸವಾಲು. ಅಂಥದ್ದರಲ್ಲಿ ಒಂಟಿಕಾಲಿನ ಯುವತಿಯೊಬ್ಬಳು ಆ ಶಿಖರ ಏರುವುದು ಸಾಮಾನ್ಯವೇ.....? ಅರುಣಿಮಾ ಸಿನ್ಹಾ ಎಂಬ ನಮ್ಮ ದೇಶದ ಯುವತಿ ಈ ಸಾಧನೆ ಮಾಡಿ ಎವರೆಸ್ಟ್ ಏರಿದ ಪ್ರಪಂಚದ ಪ್ರಥಮ ಅಂಗ ವಿಚ್ಛೇಧಿತ ಮಹಿಳೆ ಎಂದು ಕರೆಯಲ್ಪಟ್ಟಳು. ರೈಲಿನಲ್ಲಿ ಕಳ್ಳರನ್ನು ಎದುರಿಸುವಾಗ ಆಕೆಯನ್ನು ಅವರು ಹೊರಗಡೆಗೆ ನೂಕಿ ಹಾಕಿದರು. ರೈಲು ಕಾಲ ಮೇಲೆಯೇ ಹರಿದ ಪರಿಣಾಮವಾಗಿ ಆಕೆಯ ಬಲಗಾಲು ಮೊಣಕಾಲ ಕೆಳಗಿನಿಂದ ತುಂಡಾಗಿ ಹೋಯಿತು. ಮೊದಲು ನಿರಾಶಳಾದಳೂ ನಂತರ ಧೈರ್ಯ ತಂದುಕೊಂಡ ಆಕೆ ಸತತ ಪ್ರಯತ್ನ ಹಾಗೂ ಛಲದಿಂದ ಎವರೆಸ್ಟನ್ನೇ ಏರಿ ನಿಂತಳು. ಕೇವಲ ಮಹಿಳೆಯರಿಗಷ್ಟೇ ಅಲ್ಲ, ಎಲ್ಲಾ ಯುವಜನರಿಗೂ ಅದರಲ್ಲೂ ಅಂಗವಿಕಲರಿಗೂ ವಿಶೇಷವಾಗಿ ಸ್ಪೂರ್ತಿಯಾದಳು.
                    ಕಲ್ಪನಾ ಚಾವ್ಲಾ
          ಹರಿಯಾಣದಲ್ಲಿ ಹುಟ್ಟಿದ ಕಲ್ಪನಾಳಿಗೆ ಆಕಾಶದಲ್ಲಿ ಹಾರುವ ವಿಮಾನಗಳ ಮೇಲೆ ಯಾಕೋ ವಿಶೇಷ ಆಕರ್ಷಣೆ. ಎಲ್ಲಾ ಮಕ್ಕಳೂ ಹೂವು ಹಣ್ಣು ಪ್ರಕೃತಿ ಇತ್ಯಾದಿಗಳ ಚಿತ್ರ ಬಿಡಿಸುವಾಗ ಇವಳು ವಿಮಾನಗಳ ಚಿತ್ರ ಬರೆದಳು. ಅಪ್ಪನ ಜೊತೆಗೆ ಸಮೀಪದ ಫ್ಲೈಯಿಂಗ್ ಕ್ಲಬ್ ಗಳಿಗೆ ಹೋಗಿ ವಿಮಾನಗಳನ್ನು ವೀಕ್ಷಿಸುತ್ತಿದ್ದಳು. ಮುಂದೆ ಏರೋನಾಟಿಕಲ್ ಎಂಜಿನಿಯರಿಂಗ್ ಮಾಡಿದ ಆಕೆ ಅಮೆರಿಕಾಕ್ಕೆ ಹೋದಳು. ಅಲ್ಲಿ ಏರೋಸ್ಪೇಸ್ (ಬಾಹ್ಯಾಕಾಶ ತಂತ್ರಜ್ಞಾನ) ಎಂಜಿನಿಯರಿಂಗ್ ನಲ್ಲಿ PhD ಪದವಿ ಪಡೆದಳು. 1988 ರಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ದಲ್ಲಿ ಉದ್ಯೋಗಕ್ಕೆ ಸೇರಿದಳು. 1997ರಲ್ಲಿ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದಳು. ಇತರ ಆರು ಗಗನಯಾತ್ರಿಗಳೊಂದಿಗೆ ಒಟ್ಟು 376 ಗಂಟೆ(15 ದಿನ) ಗಳ ಕಾಲ ಬಾಹ್ಯಾಕಾಶ ದಲ್ಲಿ ಕಳೆದಳು. 2001ರಲ್ಲಿ ಎರಡನೇಬಾರಿ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದಳು. 2003 ಫೆಬ್ರವರಿ 1 ಕ್ಕೆ ತಮ್ಮ ಯಾತ್ರೆಯನ್ನು ಮುಗಿಸಿ ಕೊಲಂಬಿಯಾ ಹೆಸರಿನ ಗಗನ ನೌಕೆಯಲ್ಲಿ ಮರಳಿ ಬರುವಾಗ, ಇನ್ನೇನು ನೆಲ ತಲುಪಲು ಕೆಲವೇ ನಿಮಿಷಗಳಿರುವಾಗ ತಾಂತ್ರಿಕ ದೋಷದಿಂದ ಆ ನೌಕೆ ಹೊತ್ತಿ ಉರಿದು ಇತರ ಆರು ಜನ ಗಗನಯಾತ್ರಿಗಳ ಜೊತೆ ಈಕೆಯೂ ಸುಟ್ಟು ಬೂದಿಯಾಗಿ ಹೋದಳು. ಮಹಿಳೆಯಾಗಿ ನಮ್ಮ ದೇಶಕ್ಕಷ್ಟೇ ಅಲ್ಲ ಪ್ರಪಂಚಕ್ಕೇ ಕೀರ್ತಿ ತಂದ ಅವಳ ಹೆಸರು ಚರಿತ್ರೆಯ ಪುಟಗಳಲ್ಲಿ ಅಮರವಾಗಿ ಉಳಿದಿದೆ.  
           ಪ್ರೀತಿಯ ಮಕ್ಕಳೇ ಇಂತಹ ಅಪ್ರತಿಮ ಸಾಧಕ ಮಹಿಳೆಯರ ಬಗ್ಗೆ ಹೇಳುತ್ತಾ ಹೋದರೆ ಅದೇ ಒಂದು ಪುಸ್ತಕವಾಗಬಹುದು. ಈ ಮೂವರ ಬಗ್ಗೆ ಕಿರುಪರಿಚಯ ಅಷ್ಟೇ ನೀಡಿದ್ದೇನೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಯತ್ನಿಸಿ. ಹಾಗೆಯೇ ಭಾರತ ಹಾಗೂ ಪ್ರಪಂಚದಲ್ಲಿ ಮಹತ್ತರ ಸಾಧನೆ ಮಾಡಿದ ಮಹಿಳಾಮಣಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಮದರ್ ತೆರೆಸಾ, ಆ್ಯನಿ ಬೆಸೆಂಟ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ರಜಿಯಾ ಸುಲ್ತಾನಾ, ಇಂದಿರಾಗಾಂಧಿ, ಸಿಸ್ಟರ್ ನಿವೇದಿತಾ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ವ್ಯಾಲೆಂಟಿನಾ ತೆರೆಸ್ಕೋವ, ಸುನೀತಾ ವಿಲ್ಯಂಸ್, ಮೇಡಂ ಕ್ಯೂರಿ, ಬಚೇಂದ್ರಿ ಪಾಲ್, ಅರಂಧತಿ ರಾಯ್, ಸುಧಾ ಮೂರ್ತಿ, ಸಾಲು ಮರದ ತಿಮ್ಮಕ್ಕ, ಲತಾ ಮಂಗೇಶ್ಕರ್, ಸುಧಾ ಚಂದ್ರನ್ ಈ ರೀತಿ ಹೇಳಿದಷ್ಟೂ ಮುಗಿಯದ ಸಾಧಕ ಮಹಿಳೆಯರ ದಂಡೇ ಇದೆ. ಇವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. 
            ಇವರಲ್ಲಿ ಯಾರಿಗೂ ಸಾಧನೆಯೆಂಬುದು ಸುಲಭವಾಗಿ ದಕ್ಕಿದ್ದಲ್ಲ. ನಿರಂತರ ಶ್ರಮ, ಛಲ ಹಾಗೂ ತೀವ್ರವಾದ ಆಸಕ್ತಿಯ ಪರಿಣಾಮವಾಗಿ ಇವರೆಲ್ಲಾ ಗೆಲುವಿನ ಸವಿಯುಂಡರು. ಇವರ ಉದಾಹರಣೆಗಳು ನಮಗೆ ಸ್ಪೂರ್ತಿಯಾಗಲಿ. ಪ್ರೀತಿಯ ಹೆಣ್ಣುಮಕ್ಕಳೇ, "ನಾನು ಹೆಣ್ಣು, ನನ್ನಿಂದ ಇದು ಸಾಧ್ಯವಿಲ್ಲ." ಎಂಬ ಕೀಳರಿಮೆಯಿಂದ ಹೊರಬನ್ನಿ. ಹೆಣ್ಣುಮಕ್ಕಳು ಅಬಲೆಯರಲ್ಲ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಲ್ಲರು. ಸ್ತ್ರೀ ಪುರುಷರಿಬ್ಬರೂ ಸಮಾನರು ಎಂಬುದನ್ನರಿತು ಮಹಿಳೆಯರನ್ನು ಗೌರವಿಸೋಣ. ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳು.
          (ಛಾಯಾಚಿತ್ರಗಳು : ಅಂತರ್ಜಾಲ ಕೃಪೆ)
..................................................ಜೆಸ್ಸಿ ಪಿ.ವಿ
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
****************************************Ads on article

Advertise in articles 1

advertising articles 2

Advertise under the article