-->
ಜೀವನ ಸಂಭ್ರಮ : ಸಂಚಿಕೆ - 26

ಜೀವನ ಸಂಭ್ರಮ : ಸಂಚಿಕೆ - 26

ಜೀವನ ಸಂಭ್ರಮ : ಸಂಚಿಕೆ - 26


                        ಪ್ರವಾಸದ ಸಂಭ್ರಮ
         ನಾನು ಮುಖ್ಯ ಶಿಕ್ಷಕರಾಗಿ , ಸರ್ಕಾರಿ ಪ್ರೌಢಶಾಲೆ , ತಿಮ್ಮನ ಹೊಸೂರು , ಮಂಡ್ಯ ತಾಲೂಕು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯ. ನಮ್ಮ ಶಾಲೆಗೆ ಅತೀ ಹೆಚ್ಚು ಬಡ ಮಕ್ಕಳೇ ಬರುತ್ತಿದ್ದರು. ವರ್ಷದ ಪ್ರಾರಂಭದಲ್ಲಿ ನಾವು ಶಿಕ್ಷಕರೆಲ್ಲಾ ಸೇರಿ ಕೆಲಸ ಹಂಚಿಕೆ ಮಾಡಿಕೊಳ್ಳುತ್ತಿದ್ದೆವು. ಪ್ರವಾಸಕ್ಕೆ , ಸಾಂಸ್ಕೃತಿಕ ಕಾರ್ಯಕ್ರಮಕ್ಕೆ , ಪರೀಕ್ಷೆ ಮತ್ತು ಕಿರುಪರೀಕ್ಷೆಗೆ , ಕ್ರೀಡೆಗೆ ಹೀಗೆ ಒಬ್ಬೊಬ್ಬರೂ ಜವಾಬ್ದಾರಿ ವಹಿಸಿಕೊಂಡು ಸುಂದರವಾಗಿ ಚೆನ್ನಾಗಿ ಚಟುವಟಿಕೆ ನಡೆಸುತ್ತಿದ್ದೆವು. ಆದರೆ ಇದರಲ್ಲಿ ಪ್ರವಾಸಕ್ಕೆ ಅಣಿ ಮಾಡುವುದು ತ್ರಾಸದಾಯಕವಾದ ಕೆಲಸವಾಗಿತ್ತು. ಪ್ರವಾಸದ ನೇತೃತ್ವವನ್ನು ಅರೆಕಾಲಿಕ ವೃತ್ತಿ ಶಿಕ್ಷಕರಾದ ಶ್ರೀ ಷಣ್ಮುಖ ಆರಾಧ್ಯರಿಗೆ ವಹಿಸಲಾಗಿತ್ತು. ಅವರಿಗೆ ಕಡಿಮೆ ವೇತನ ಬರುತ್ತಿದ್ದರಿಂದ ಶಾಲೆಯೇತರ ಅವಧಿಯಲ್ಲಿ ದೇವಸ್ಥಾನದ ಅರ್ಚಕರಾಗಿ ಕೆಲಸಮಾಡುತ್ತಿದ್ದರು. ಪ್ರವಾಸಕ್ಕೆ ವರ್ಷದ ಪ್ರಾರಂಭದಿಂದಲೇ ಸಿದ್ಧತೆ ನಡೆಯುತ್ತಿತ್ತು. ಅವರ ಸಿದ್ದತೆ ಹೇಗಿತ್ತು ಹಾಗೂ ಕಡಿಮೆ ವೆಚ್ಚದಲ್ಲಿ ಹೇಗೆ ಪ್ರವಾಸ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾದ ಅಂಶ.
         ವರ್ಷದ ಪ್ರಾರಂಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಅಂಚೆ ಕಚೇರಿಯಲ್ಲಿ ವೈಯಕ್ತಿಕ ಖಾತೆ ತೆರೆಯುತ್ತಿದ್ದರು. ಆ ಗ್ರಾಮ ಪೂರ್ತಿ ರೈತರಿಂದ ಕೂಡಿದ್ದು, ಬಹುತೇಕ ಮಂದಿ ಹಸು ಸಾಕಿದ್ದರು. ಹಾಲನ್ನು ಜಿಲ್ಲಾ ಹಾಲು ಒಕ್ಕೂಟದ ಕೇಂದ್ರಗಳಿಗೆ ಹಾಕುತ್ತಿದ್ದರು. ಪ್ರತಿ ಶುಕ್ರವಾರ ಹಾಲಿನ ಹಣ ಬರುತ್ತಿತ್ತು. ಅದರಲ್ಲಿ ಇಂತಿಷ್ಟು ಹಣವನ್ನು ಪ್ರತಿ ಶನಿವಾರ ಮಕ್ಕಳು ತಂದು ಷಣ್ಮುಖ ಆರಾಧ್ಯರಿಗೆ ನೀಡುತ್ತಿದ್ದರು. ಅವರು ಅಷ್ಟು ಹಣವನ್ನು ಅಂದೆ ಪೋಸ್ಟಾಫೀಸಿಗೆ ಹೋಗಿ ಜಮಾ ಮಾಡಿ ಪಾಸ್ ಪುಸ್ತಕದಲ್ಲಿ ನಮೂದಿಸಿ ವಿದ್ಯಾರ್ಥಿಗೆ ಪಾಸ್ ಪುಸ್ತಕ ನೀಡುತ್ತಿದ್ದರು. ಹೀಗೆ ಹಣ ವರ್ಷದ ಪ್ರಾರಂಭದಿಂದಲೇ ಕ್ರೋಡೀಕರಣ ಆಗುತ್ತಿತ್ತು. ಡಿಸೆಂಬರ್ ತಿಂಗಳಿಗೆ ಪ್ರವಾಸಕ್ಕೆ ಸಿದ್ಧರಾಗುತ್ತಿದ್ದೆವು. 
      ಪ್ರವಾಸಕ್ಕೆ ಹೊರಡುವ ಒಂದು ವಾರದ ಮುಂಚೆ, ಪ್ರವಾಸದ ದಿನಗಳಿಗೆ ಲೆಕ್ಕಹಾಕಿ ಪ್ರತಿ ವಿದ್ಯಾರ್ಥಿ ಇಷ್ಟು ಅಕ್ಕಿ ಮತ್ತು 2 ತುಂಡು ಸೌದೆ ತರುವಂತೆ ತಿಳಿಸಲಾಗುತ್ತಿತ್ತು. ಅಕ್ಕಿಯನ್ನು ಸಂಗ್ರಹಿಸಿದ ಮೇಲೆ ಮಿಲ್ಲಿಗೆ ಕೊಟ್ಟು ಅಷ್ಟೇ ಪ್ರಮಾಣದ ಒಂದೇ ತರದ ಅಕ್ಕಿಯನ್ನು ರೈಸ್ ಮಿಲ್ ನಿಂದ ಪಡೆಯಲಾಗುತ್ತಿತ್ತು. ನಮ್ಮಿಂದ ಪಡೆದ ಅಕ್ಕಿಯಿಂದ ಅಕ್ಕಿಹಿಟ್ಟು ಮಾಡುತ್ತಿದ್ದರು.
       ಪ್ರವಾಸದ ಹಿಂದಿನ ದಿನ ಮಕ್ಕಳೆಲ್ಲ ರಾತ್ರಿ ಬಂದು ತಂಗುತ್ತಿದ್ದರು. ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಕೊಠಡಿ ನೀಡಲಾಗುತ್ತಿತ್ತು. ಷಣ್ಮುಖ ಆರಾಧ್ಯರು ಹಿಂದಿನ ರಾತ್ರಿ ಪ್ರವಾಸದ ದಿನಗಳಿಗೆ ಸಾಕಾಗುವಷ್ಟು ಚಿತ್ರಾನ್ನದ ಗೊಜ್ಜು, ಪುಳಿಯೊಗರೆ ಗೊಜ್ಜು , ಉಪ್ಪು , ಸಾರಿಗೆ ಬಳಸುವ ಚಟ್ನಿ ಮತ್ತು ಖಾರದಪುಡಿ ಸಿದ್ಧ ಮಾಡಿಕೊಳ್ಳುತ್ತಿದ್ದರು. ಮೊದಲ ದಿನದ ಬೆಳಗ್ಗೆಗೆ ಇಡ್ಲಿ ಚಟ್ನಿ ಹೋಟೆಲ್ ಗೆ ಹೇಳಿ ಮಾಡಿಸುತ್ತಿದ್ದರು. ಬಸ್ಸು ರಾತ್ರಿಯೇ ಬಂದಿರುತ್ತಿತ್ತು. 
           ಬೆಳಗ್ಗೆ ಪೂಜೆ ಮಾಡಿ ಮಕ್ಕಳನ್ನು ಹತ್ತಿಸಿದ್ದೆವು. ಮುಂದಿನ ಸೀಟುಗಳು ಹೆಣ್ಣುಮಕ್ಕಳಿಗೆ, ಹಿಂದಿನ ಸೀಟುಗಳು ಗಂಡುಮಕ್ಕಳಿಗೆ. ಹಿಂದಿನ ರಾತ್ರಿ ಮಕ್ಕಳಿಗೆ ಪ್ರವಾಸದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಮಾಹಿತಿ ನೀಡುತ್ತಿದ್ದೆವು. ಮಕ್ಕಳು ಲಘು ಸಾಮಗ್ರಿಯೊಂದಿಗೆ 
ತಟ್ಟೆ , ಲೋಟ ತರುತ್ತಿದ್ದರು. ಬಸ್ಸಿಗೆ ಅಡುಗೆ ಮಾಡಲು ಬೇಕಾದ ಸೌದೆಗಳು, ಪಾತ್ರೆಗಳು, ಸ್ಟೌವ್ ಮತ್ತು ಬಿಂದಿಗೆಗಳು ಸೇರಿದಂತೆ ಅಡುಗೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಹೊರಡುತ್ತಿದ್ದೆವು.
ತಿಂಡಿ, ಊಟದ ಸಮಯಕ್ಕೆ ನೀರು ಸಿಗುವ ಜಾಗ ನೋಡಿಕೊಂಡು ಬಸ್ಸನ್ನು ನಿಲ್ಲಿಸಿ , ತಿಂಡಿ ತಿಂದು, ಹೊರಡುತ್ತಿದ್ದೆವು. ಪ್ರವಾಸದ ಹಿಂದಿನ ದಿನ ಹುಡುಗರು ಹಾಗೂ ಹುಡುಗಿಯರು ತಂಡ ಮಾಡುತ್ತಿದ್ದೆವು. ಅವರು ಆಯಾ ದಿನದ ಅಡುಗೆಯಲ್ಲಿ ಷಣ್ಮುಖ ಆರಾಧ್ಯರಿಗೆ ಸಹಾಯ ಮಾಡಬೇಕಿತ್ತು. ಆರಾಧ್ಯರು ಒಳ್ಳೆ ಅಡುಗೆ ಮಾಡುವವರಾಗಿದ್ದರು. 
        ಪ್ರವಾಸದಲ್ಲಿ ಸ್ಥಳ ವೀಕ್ಷಣೆಗೆ ಹೋಗಬೇಕಾದರೆ , ಪ್ರತಿ ವಿದ್ಯಾರ್ಥಿ ಬಳಿ ಪೇಪರ್ ಪೆನ್ ಇಟ್ಟುಕೊಂಡು ಬರೆದುಕೊಳ್ಳಬೇಕು. ಬಸ್ಸು ಇಳಿಯುತ್ತಿದ್ದಂತೆಯೇ ಒಬ್ಬ ಶಿಕ್ಷಕ ಮುಂದೆ , ಅವರು ಹಿಂದೆ ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳ ಸಾಲು ಹೀಗೆ ಎರಡು ಸಾಲಿನಲ್ಲಿ ಹೋಗಬೇಕು. ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ಶಿಕ್ಷಕರು ಬೆಂಗಾವಲು. ಸಾಲಿನಲ್ಲಿ ಹೋಗದಿದ್ದರೆ ದೊಡ್ಡ ಹುಡುಗರು ಮುಂದೆ ನಿಂತಿದ್ದರೆ ಅವರ ಹಿಂದೆ ನಿಂತಿರುವ ಚಿಕ್ಕವರಿಗೆ ಏನೂ ಕಾಣುತ್ತಿರಲಿಲ್ಲ. 
        ಪ್ರತಿ ವಿದ್ಯಾರ್ಥಿಗಳೂ ಸಾಲು ಬಿಟ್ಟು ಹೋಗಿ ಸಾಮಗ್ರಿ ಖರೀದಿಸುವಂತ್ತಿರಲಿಲ್ಲ. ಅದಕ್ಕಾಗಿ ಮೊದಲೇ ಸೂಚನೆ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳನ್ನು ಕಂಡಕೂಡಲೇ ಅಂಗಡಿಯವರು ಹಣ ದುಪ್ಪಟ್ಟು ಮಾಡುತ್ತಾರೆ ಶಿಕ್ಷಕರ ನೇತೃತ್ವದಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಶಿಕ್ಷಕರ ಹತ್ತಿರ ಲೆಕ್ಕಬರೆಸಿ ಇಟ್ಟ ಹಣದಿಂದ ಶಿಕ್ಷಕರ ನೇತೃತ್ವದಲ್ಲಿ ಖರೀದಿ ಮಾಡಲಾಗುತ್ತಿತ್ತು. ಖರೀದಿಯಲ್ಲಿ ಮಕ್ಕಳ ಅಪೇಕ್ಷೆಯಂತೆ ಖರೀದಿ ಇರುತ್ತಿತ್ತು. ಅಂದು
ರಾತ್ರಿಯಾಗುತ್ತಿದ್ದಂತೆ ಯಾವುದಾದರೂ ಸಮುದಾಯ ಭವನ , ಅದು ಸಿಗಲಿಲ್ಲ ಅಂದ್ರೆ ಶಾಲೆಯ ಹೊರಾಂಡದಲ್ಲಿ ಇರುತ್ತಿದ್ದೆವು. ಅಡುಗೆಗೆ ಸಹಾಯ ಮಾಡುವ ಹುಡುಗರು ಅಡುಗೆ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು. ಊಟ ಆದ ಮೇಲೆ ಮಲಗಿ ಮುಂಜಾನೆ ಬೇಗ ಎದ್ದು ಕಾಫಿ , ಚಹಾ , ಬೆಳಗಿನ ತಿಂಡಿ, ಮತ್ತು ಮಧ್ಯಾಹ್ನದ ಊಟದ ಸಾಂಬಾರು ತಯಾರು ಮಾಡಿಕೊಳ್ಳ ಬೇಕಿತ್ತು. ಉಳಿದ ವಿದ್ಯಾರ್ಥಿಗಳಿಗೆ 
 ಹಾಡು , ನೃತ್ಯ ಮತ್ತು ಮೂಕಾಭಿನಯದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಊಟದ ನಂತರ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಮಲಗಲು ಪ್ರತ್ತ್ಯೇಕ ಅವಕಾಶ ಕಲ್ಪಿಸಲಾಗುತ್ತಿತ್ತು. ಮಕ್ಕಳಿಗೆ ಮಲಗಲು ಹೀಗೆಯೇ ಇರಬೇಕೆಂಬ ನಿಬಂಧನೆ ಇರಲಿಲ್ಲ. ಇರುವುದರಲ್ಲೇ ಆನಂದವಾಗಿ ಮಲಗುತ್ತಿದ್ದರು. ಊಟದಲ್ಲಿ ಹೀಗೆಯೇ ಇರಬೇಕೆಂಬ ಷರತ್ತು ಇರಲಿಲ್ಲ. ಆದರೆ ಹೆಚ್ಚು ಸ್ಥಳ ನೋಡಬೇಕೆಂಬುದು ಮಾತ್ರ ಬಯಕೆಯಿತ್ತು.
          ಮಕ್ಕಳು ಪ್ರವಾಸಕ್ಕೆ ಬರುವಾಗ ಚಕ್ಕುಲಿ , ನಿಪ್ಪಟ್ಟು , ಕೋಡುಬಳೆ ಸೇರಿದಂತೆ ಬಗೆಬಗೆಯ ತಿಂಡಿಗಳನ್ನು ತರುತ್ತಿದ್ದರು. ಅದನ್ನು ಕೊನೆಯ ದಿನ ತೆಗೆದು ತಿನ್ನಬೇಕು. ಏಕೆಂದರೆ ಮೊದಲೇ ತಿಂದು ಆರೋಗ್ಯ ಕೆಟ್ಟರೆ ಪ್ರವಾಸ ಕಷ್ಟವಾದೀತು ಎಂದು. ಬಸ್ಸಿನಲ್ಲಿ ಮಕ್ಕಳು ಅಂತ್ಯಾಕ್ಷರಿ , ಹಾಡುಗಳ ಹಾಡುವುದೇ ಒಂದು ಸಂಭ್ರಮ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. 
        ಐದು ವರ್ಷದಲ್ಲಿ ತಮಿಳುನಾಡು , ಕೇರಳ ಮತ್ತು ಕರ್ನಾಟಕದ ವಿವಿಧ ಸ್ಥಳಗಳು ಸೇರಿದಂತೆ 5 ಪ್ರವಾಸ ಮಾಡಿದ್ದು , ಪ್ರತೀ ಪ್ರವಾಸ ಐದು ದಿನಗಳು ಇರುತ್ತಿತ್ತು. ಪ್ರತಿ ವಿದ್ಯಾರ್ಥಿಯ ಖರ್ಚು ರೂ ಐದುನೂರು ಮೀರುತ್ತಿರಲಿಲ್ಲ. ಪ್ರವಾಸದಿಂದ ಬಂದಮೇಲೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮಾಡಿ ಬಹುಮಾನ ನೀಡುತ್ತಿದ್ದೆವು. ನಂತರ ಮಕ್ಕಳ ಮುಂದೆ ಲೆಕ್ಕ ನೀಡಿ ಉಳಿಕೆ ಹಣ ವಾಪಸ್ ಮಾಡಲಾಗುತ್ತಿತ್ತು. ಕೆಲವು ವರ್ಷ ಮಕ್ಕಳೇ ವರ್ಷದ ಪ್ರವಾಸದ ಸವಿನೆನಪಿಗಾಗಿ ಉಳಿಕೆ ಹಣದಲ್ಲಿ ಯಾವುದಾದರೂ ವಸ್ತು ದಾನವಾಗಿ ಶಾಲೆಗೆ ನೀಡುತ್ತಿದ್ದರು. ಹೀಗೆ ನಮ್ಮ ಷಣ್ಮುಖ ಆರಾಧ್ಯರ ನೇತೃತ್ವದಲ್ಲಿ ಕಡಿಮೆ ಹಣದಲ್ಲಿ ಹೆಚ್ಚು ದಿನ ಸಂಭ್ರಮದ ಪ್ರವಾಸ ಮಾಡುತ್ತಿದ್ದೆವು.
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************* 


Ads on article

Advertise in articles 1

advertising articles 2

Advertise under the article