-->
ಚಿತ್ರಕಲಾ ಪ್ರತಿಭೆ: ವಿಭಾ ಶೆಟ್ಟಿ ಮಾರ್ನಾಡ್

ಚಿತ್ರಕಲಾ ಪ್ರತಿಭೆ: ವಿಭಾ ಶೆಟ್ಟಿ ಮಾರ್ನಾಡ್



                        ಚಿತ್ರಕಲಾ ಪ್ರತಿಭೆ 
                  ವಿಭಾ ಶೆಟ್ಟಿ ಮಾರ್ನಾಡ್
       ಗೀಚುವಿಕೆ ಹಂತದಿಂದ ಬೆಳೆದು ಬರುವ ಪ್ರತಿಯೊಂದು ಮಗುವೂ ಪರಿಸರದ ಕಾರಣದಿಂದ ಕಲಾಭಿರುಚಿಯನ್ನು ಉಳಿಸಿಕೊಂಡು ಬರುತ್ತದೆ. ತನಗೆ ತೋಚಿದ , ತಾನು ಕಂಡ ದೃಶ್ಯಗಳನ್ನು ಹಾಗೂ ತನ್ನ ಮನದ ಭಾವನೆಗಳನ್ನು ಗೆರೆಗಳ ಮೂಲಕ ಪ್ರಕಟಪಡಿಸುತ್ತಾ ಹೋಗುತ್ತದೆ. ಮಾತನಾಡಲರಿಯದ ಸಣ್ಣ ಮಕ್ಕಳ ಒಂದು ಸಂಕೇತವಾಗಿ , ಭಾಷೆಯಾಗಿ ಮಕ್ಕಳ ಮನೋವಿಕಾಸ ದಲ್ಲಿ "ಚಿತ್ರಕಲೆ" ಬಹಳ ಪ್ರಾಮುಖ್ಯ ಪಡೆಯುತ್ತದೆ.
       ಮಗು ನೋಡುವ , ಗ್ರಹಿಸುವ , ಆನಂದಿಸುವ ಮೂಲಗಳಿಂದ ಪ್ರೇರಿತವಾಗಿ ಬೆಳೆಯಲು ಸಾಧ್ಯವಿದೆ. ಹೀಗೆ ಬಾಲ್ಯದಲ್ಲಿಯೇ ಬಣ್ಣಗಳ ಒಡನಾಟದೊಂದಿಗೆ ಬೆರೆವ ಮಕ್ಕಳು ಕಲಾಕ್ಷೇತ್ರಕ್ಕೊಂದು ದೊಡ್ಡ ಕೊಡುಗೆಯಾಗುತ್ತಾ ಬಂದಿದ್ದಾರೆ.... ಅಂತಹ ಚಿತ್ರಕಲಾ ಪ್ರತಿಭೆಗಳಲ್ಲಿ ವಿಭಾಶೆಟ್ಟಿ ಮಾರ್ನಾಡ್ ಒಬ್ಬರು.
          ವಿಭಾ ಶೆಟ್ಟಿ ಮಾರ್ನಾಡು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ತಂದೆ ಬಾಲಕೃಷ್ಣ ಶೆಟ್ಟಿ ಮತ್ತು ತಾಯಿ ಮಲ್ಲಿಕಾ ಬಿ ಶೆಟ್ಟಿ. ತನ್ನ ಸರಳ ಗುಣ , ಅಚ್ಚುಕಟ್ಟುತನ ಹಾಗೂ ತನ್ಮಯವಾಗುವ ರೀತಿಯಿಂದ ತನ್ನೊಳಗೆ ಮೊಳಕೆಯೊಡೆದ ಚಿತ್ರಕಲೆಯ ವಿಶೇಷ ಆಸಕ್ತಿಗೆ ಚಿತ್ರಕಲಾ ಶಿಬಿರಗಳು ಆಸರೆಯಾದವು. ಕಲಾವಿದ ರಘುರಾಮ ಆಚಾರ್ಯ ಇವರ ಮೊದಲ ಮಾರ್ಗದರ್ಶನದಿಂದ ತನ್ನ ಸಾಗುವ ದಾರಿಯನ್ನು ಕಂಡುಕೊಂಡರು. ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಗಳಿಸಿ ನಿರಂತರವಾದ ಅಭ್ಯಾಸ ತನ್ನೊಳಗೆ ಚಿತ್ರಕಲಾ ಪ್ರತಿಭೆಯೊಂದು ಅನಾವರಣಗೊಳ್ಳಲು ಕಾರಣವಾಯಿತು. ತಂದೆ-ತಾಯಿಯವರ ಯಾವುದೇ ಒತ್ತಡಗಳಿಲ್ಲದ ಪ್ರೋತ್ಸಾಹ , ಮಾನಸಿಕವಾದ ಸಂತುಲಿತಕ್ಕೆ ಪ್ರೇರಣೆಯಾಗಿ ಚಿತ್ರಕಲಾ ಪಯಣಕ್ಕೆ ಸಾಧ್ಯವಾಯಿತು. 
        ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ವಿನ್ಸೆಂಟ್ ಡಿ ಕೋಸ್ತ ರವರ ಪ್ರೋತ್ಸಾಹದ ನುಡಿಗಳಿಂದ ಇನ್ನಷ್ಟು ಹೆಚ್ಚಿನ ಅಭ್ಯಾಸಕ್ಕೆ ತೊಡಗಿಕೊಳ್ಳಲು ಅನುವಾಯಿತು. ತನ್ನ ಸ್ವ- ಕಲಿಕೆ ಕುಂಚದಲ್ಲಿ ಹಿಡಿತ ಸಾಧಿಸಲು ಸರಳವಾಯಿತು. ಶಾಲೆಯಲ್ಲಿ ನಡೆಯುವ ಯಾವುದೇ ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸುತ್ತಾ ಪ್ರಶಸ್ತಿಗಳನ್ನು ಗಳಿಸಿಕೊಳ್ಳುವ ರೂಢಿಯಾಯಿತು.
ಪೆನ್ಸಿಲ್ ಶೇಡಿಂಗ್ , ಕ್ರೇಯಾನ್ಸ್ , ಜಲವರ್ಣ , ಅಕ್ರಿಲಿಕ್ ಬಣ್ಣಗಳಲ್ಲಿ ಕಲಾಕೃತಿಗಳನ್ನು ರಚಿಸುವ ಸಾಮರ್ಥ್ಯವನ್ನು ಗಳಿಸಿಕೊಂಡರು.
         ಶಿಕ್ಷಕರಾದ ಮೋಹನ್ ಹಾಗೂ ರೇಣುಕಾಚಾರ್ಯ ಇವರ ಮಾರ್ಗದರ್ಶನವನ್ನು ತುಂಬಾ ಕಾಳಜಿಯಿಂದ ಸ್ಮರಿಸುತ್ತಾರೆ. ಚಿತ್ರಕಲೆಯ ವೈವಿಧ್ಯ ಪ್ರಕಾರಗಳನ್ನು ಅಭ್ಯಸಿಸುವ ಕನಸು ಹೊತ್ತಿರುವ ವಿಭಾ ಶೆಟ್ಟಿ..... ವಿಶಿಷ್ಟವಾಗಿ ಭಾವಚಿತ್ರಗಳ ರಚನೆ , ವಿಷಯ ವಸ್ತುಗಳಲ್ಲಿ ಜಲ ವರ್ಣಗಳ ಕಲಾಕೃತಿಗಳ ರಚನೆ , ನೈಜ ಚಿತ್ರಗಳ ರಚನೆ ಮೂಲಕ ತನ್ನ ಬಾಲ್ಯದಲ್ಲಿಯೇ ವಿಶಿಷ್ಟ ಸಾಧನೆಯತ್ತ ಮುಖ ಮಾಡಿದ್ದಾರೆ.
     ತಾಲೂಕು , ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವ ಹೆಗ್ಗಳಿಕೆ ಇವರದ್ದು. ರವಿವರ್ಮ ಚಿತ್ರಕಲಾ ಶಾಲೆ ಶಿವಮೊಗ್ಗ ಇವರ ರಾಜ್ಯಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಐದು ಬಹುಮಾನಗಳನ್ನು ಪಡೆದಿರುವುದು , ರಾಜ್ಯಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ , ಚಿಣ್ಣರ ಲೋಕ ಬಂಟ್ವಾಳ ಇವರ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ , ಹೀಗೆ ಹಲವಾರು ಬಹುಮಾನಗಳನ್ನು ಪಡೆದಿರುವರು. 
        ಕೇವಲ ಬಹುಮಾನಕ್ಕಾಗಿ ಚಿತ್ರಗಳನ್ನು ರಚಿಸದೆ ಕಲಾ ಜಾಗೃತಿಗಾಗಿ ಚಿತ್ರಗಳನ್ನು ರಚಿಸುವ ಹವ್ಯಾಸ ಇವರಲ್ಲಿದೆ. ಜನರಲ್ಲಿ ಜಾಗೃತಿ ಮೂಡಿಸುವ , ಸಂದೇಶ ನೀಡುವ ಚಿತ್ರಗಳು , ಹಲವಾರು ಖ್ಯಾತನಾಮರ ಭಾವಚಿತ್ರಗಳನ್ನು ಇವರು ರಚಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಭಾವಚಿತ್ರವನ್ನು ರಚಿಸಿ ಕಲೆಯ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದಾರೆ. ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹನೀಯರ ಭಾವ ಚಿತ್ರಗಳನ್ನು ರಚಿಸಿದ್ದಾರೆ. ಪೆನ್ಸಿಲ್ ಶೇಡಿಂಗ್ ಮೂಲಕ ತನ್ನ ಕೌಶಲ್ಯವನ್ನು ಇನ್ನಷ್ಟು ತೀಕ್ಷ್ಣ ಗೊಳಿಸುತ್ತಾ ಚಿತ್ರಕಲೆಯಲ್ಲಿ ತನ್ನ ಪ್ರಾವೀಣ್ಯತೆಯನ್ನು ಮೆರೆಯುತ್ತಿದ್ದಾರೆ.
        ಇನ್ನೂ 9ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿ - ವಿಭಾ.... ಸಾಧನೆಯ ಇನ್ನಷ್ಟು ಶಿಖರಗಳನ್ನು ಏರಲಿದ್ದಾರೆ. ಇಷ್ಟು ಸಣ್ಣ ಹರೆಯಕ್ಕೆ ದೊಡ್ಡ ಸಾಧನೆಯ ಲಕ್ಷಣಗಳನ್ನು ತೋರಿಸುತ್ತಿರುವ ವಿಭಾ ಚಿತ್ರಕಲಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ  ಒಬ್ಬರಾಗಿದ್ದಾರೆ. ವೃತ್ತಿರಂಗದ ಯಾವುದೇ ಮಜಲುಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಕನಸುಗಳನ್ನು ಹೊತ್ತಿರಲಿ. ಕಲಾ ಪ್ರಜ್ಞೆಯನ್ನು ಬೆಳೆಸಿಕೊಂಡು ಬೆಳೆಯುವ ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. 
..................................ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ , ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article