ಅಕ್ಕನ ಪತ್ರ - 19
Saturday, March 12, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 19
ನಮಸ್ತೆ ಮಕ್ಕಳೇ, ಎಲ್ಲರೂ ಕ್ಷೇಮ ತಾನೇ...?
ಪರೀಕ್ಷೆ ಗಳನ್ನು ಎದುರಿಸುವ ಸಮಯ ಇದು.. ತರಗತಿ ಕೋಣೆಯ ಕಲಿಕೆಯ ಮೌಲ್ಯಮಾಪನ. ಮುಂದಿನ ಹೆಜ್ಜೆಯನ್ನಿಡಲು ನಿರ್ಣಾಯಕವಾದ ಸಂದರ್ಭ. ಶುಭವಾಗಲಿ ನಿಮಗೆ.
ಮಕ್ಕಳೇ, ದೊಡ್ಡವರನ್ನು ನೋಡುತ್ತಿರುವ ನಮಗೂ ಅವರ ಹಾಗೆ ಆಗ್ಬೇಕು... ಸ್ವತಂತ್ರ ಬದುಕು... ಹಣ... ನೆಮ್ಮದಿ... ಜವಾಬ್ದಾರಿ ಬೇಕೆಂದೆನಿಸುತ್ತದೆ. ಎಲ್ಲವೂ ಪ್ರಯತ್ನದ ಫಲ.
ಇವಳು ಅದಮ್ಯ ಜೀವನ ಪ್ರೀತಿಯೊಂದಿಗೆ ಬದುಕನ್ನು ಮರು ರೂಪಿಸಿಕೊಂಡ ಛಲಗಾತಿ. Iron lady of Pakistan ಎಂದು ಕರೆಸಿಕೊಳ್ಳುವ ಮುನೀಬಾ ಮಝಾರಿಯ ಬದುಕೊಂದು ರೋಚಕವಾದ ಪಯಣ.
ತನಗೆ ಇಷ್ಟವಿಲ್ಲದಿದ್ದರೂ, ತಂದೆ ತಾಯಿಯ ಖುಷಿಗಾಗಿ 18 ನೇ ವಯಸ್ಸಿನಲ್ಲಿ ಮದುವೆಗೆ ಒಪ್ಪಿಕೊಂಡ ಮುನೀಬಾ ಸಂಪ್ರದಾಯಸ್ಥ ಕುಟುಂಬದಲ್ಲಿ ಸಾಮಾನ್ಯ ಹೆಣ್ಣುಮಗಳಾಗಿ ಜೀವನ ನಡೆಸುತ್ತಿರುವಾಗ, ತನ್ನ 20ನೆಯ ವಯಸ್ಸಿನಲ್ಲಿ ದುರ್ಘಟನೆಯನ್ನು ಎದುರಿಸಿದಳು. ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದಳು ಮುನೀಬಾ. ಎಚ್ಚರವಾದಾಗ ವೈದ್ಯರು ಹೇಳಿದ ಮಾತು ಅವಳಿಗೆ ಆಘಾತವನ್ನುಂಟುಮಾಡಿತು. ಬೆನ್ನುಮೂಳೆ, ಕಾಲುಗಳು ಹಾಗೂ ದೇಹದ ಇನ್ನೂ ಕೆಲವು ಅಂಗಗಳು ಸರಿಪಡಿಸಲಾಗದ ಗಂಭೀರ ಸ್ಥಿತಿಗೆ ತಲುಪಿ, ಜೀವನ ಪೂರ್ತಿ ಹಾಸಿಗೆಯಲ್ಲಿ ಮಲಗಿಕೊಂಡೇ ಕಳೆಯಬೇಕಾಗುತ್ತದೆ , ಎನ್ನುವುದನ್ನು ಅರಿತುಕೊಂಡ ಮುನೀಬಾಳಿಗೆ ಬದುಕು ಅಲ್ಲಿಗೇ ಮುಗಿದು ಹೋಗಬೇಕೆನ್ನಿಸಿತು. ಚಿತ್ರ ಕಲಾವಿದೆ ಆಗಬೇಕೆಂದುಕೊಂಡವಳಿಗೆ ಬೆನ್ನು ಮೂಳೆ ಮುರಿತದಿಂದ ಎದ್ದು ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಎರಡು ತಿಂಗಳ ನಂತರ ಕೈಬೆರಳುಗಳು ಸರಿಯಾಗಿವೆಯಲ್ಲಾ ಎಂದುಕೊಂಡು ಬದುಕಿಗೆ ಬಣ್ಣ ತುಂಬುವ ಕನಸನ್ನು ಕಂಡಳು. ತಾನು ಮಲಗಿದ್ದ ಹಾಸಿಗೆಯಲ್ಲಿಯೇ ಚಿತ್ರ ಮಾಡಲಾರಂಭಿಸಿದಳು. ಉತ್ತಮವಾದ ಚಿತ್ರ ಕಲಾಕೃತಿಗಳು ಮೂಡಿಬಂದವು. ಬಲವಂತವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದರಿಂದ, ಗಾಯ ಉಲ್ಬಣವಾಗಿ ಶ್ವಾಸಕೋಶವೂ ಸೇರಿದಂತೆ ದೇಹದೊಳಗಿನ ಇನ್ನಿತರ ಭಾಗಗಳೂ ಸರಿಯಾಗಿ ಕಾರ್ಯ ನಿರ್ವಹಿಸದಂತಾದವು. ವೈದ್ಯರು ಇನ್ಯಾವುದೇ ಇಂತಹ ಪ್ರಯತ್ನಗಳನ್ನು ಮಾಡಬಾರದೆಂದರು. ನೇರವಾಗಿ ಒಂದೇ ರೀತಿ ಹಾಸಿಗೆಯಲ್ಲಿ ಮಲಗಿಕೊಂಡೇ ಇರಬೇಕೆಂದರು. ಮತ್ತೆ ಮಲಗಿದಳು.... ಆಸ್ಪತ್ರೆಯ ಹಾಸಿಗೆಯಲ್ಲಿ.... ಒಂದೆರಡು ತಿಂಗಳಲ್ಲ... ಎರಡು ವರ್ಷಗಳ ವರೆಗೆ...! ನಿಸ್ತೇಜವಾಗಿ ಗೋಡೆಗಳನ್ನೇ ದಿಟ್ಟಿಸಿ ನೋಡುತ್ತಾ ಮಲಗಿದವಳಿಗೆ ಹೊರಗಡೆ ಕಿಟಕಿಯಿಂದ ಹಕ್ಕಿಗಳ ದನಿ ಉತ್ಸಾಹವನ್ನು ತುಂಬಿತು. ತಾನೂ ಹೀಗೆಯೇ ಸ್ವಚ್ಛಂದವಾಗಿ ಬಾಳಬೇಕೆಂದುಕೊಂಡು ಮತ್ತೆ ಬದುಕುವ ಉತ್ಸಾಹ ಚಿಗುರೊಡೆಯಿತು. ಅದಕ್ಕಾಗಿ ಮೊದಲು ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡಳು. ಗಂಡನಿಂದ ವಿಚ್ಛೇದನಗೊಂಡು ಗಂಡು ಮಗುವೊಂದನ್ನು ದತ್ತು ತೆಗೆದುಕೊಂಡರು. ಬದುಕಬೇಕೆಂದರೆ ಭಯವನ್ನು ತೊರೆಯಬೇಕೆಂದುಕೊಂಡು ಜನರ ಮಧ್ಯೆ ಬೆರೆಯುವ ಇಚ್ಛೆಯನ್ನು ಹೊಂದಿದಳು. Wheel Chair model ಆದಳು. ಅನೇಕ ಟಿ.ವಿ ಶೋ ಗಳನ್ನು ನಡೆಸಿಕೊಟ್ಟಳು. ಕಲಾವಿದೆಯಾದಳು. ರಾಷ್ಟ್ರೀಯ ಟಿ ವಿ ಚಾನೆಲ್ ಒಂದರಲ್ಲಿ ಜನಪ್ರಿಯ ನಿರೂಪಕಿಯಾದಳು. Wheel Chair ನಲ್ಲಿದ್ದುಕೊಂಡೇ ಜಗತ್ತಿನಾದ್ಯಂತ ಸಂಚರಿಸಿ ಜನರಿಗೆ, ತನ್ನದೇ ಬದುಕಿನ ಕಥೆಯನ್ನು ಉದಾಹರಣೆಯಾಗಿಟ್ಟುಕೊಂಡು ಪ್ರೇರಣೆ ನೀಡುವಂತಹ ಮಾತುಗಳನ್ನಾಡುತ್ತಾ ಭರವಸೆಯನ್ನು ತುಂಬುತ್ತಿದ್ದಾಳೆ. ಈ ಧನಾತ್ಮಕವಾದ ಆಲೋಚನೆ, ಛಲ, ಜೀವನ ಪ್ರೀತಿ, ನ್ಯೂನತೆ ಗಳನ್ನು ಮೀರಿದ ತನ್ನ ಸಾಧ್ಯತೆಗಳು... ಹೀಗೆ ಎಲ್ಲವನ್ನೂ ಮರು ರೂಪಿಸಿಕೊಂಡು, ಮುಖ ತುಂಬಾ ನಗುವನ್ನು ಪಸರಿಸಿ ಪ್ರೀತಿಯನ್ನು ಹಂಚುವ ಸ್ಫೂರ್ತಿ.... ಸಾವನ್ನು ಗೆದ್ದ 35ರ ಹರೆಯದ ಸೋದರಿ ಮುನೀಬಾ ನಮ್ಮ ನಡುವಿನ ಸಾಧಕಿ.
ತಮ್ಮ ತಂಗಿಯಂದಿರೇ.....ನಾವು ಕೂಡಾ.... ಯಾವ ಸೋಲಿನಿಂದಲೂ ಧೈರ್ಯಕೆಡದೆ, ಹೊಸ ಸಾಧ್ಯತೆಗಳ ಬಾಗಿಲು ತೆರೆದು ಮುನ್ನುಗ್ಗುವ ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಿದೆ. ಯಾವ ಸೋಲೂ ಶಾಶ್ವತವಲ್ಲ... ಮತ್ತೆ ಬದುಕನ್ನು ಒಂದು ಸೋಲಿಗೆ ಕೊನೆಗೊಳ್ಳಲು ಬಿಡಬಾರದು... ಪರೀಕ್ಷೆಯ ಅಂಕಗಳು..... ಫಲಿತಾಂಶ ಎಲ್ಲವೂ ನಮ್ಮ ಪ್ರಯತ್ನದ ಫಲ.... ಅದೊಂದೇ ಬದುಕನ್ನು ನಿರ್ಧರಿಸುವುದೂ ಅಲ್ಲ... ನಿಮ್ಮಲ್ಲಿ ಕನಸುಗಳ ರಾಶಿಯಿದೆ... ಸಂದರ್ಭಕ್ಕೆ ಸರಿಯಾದುದನ್ನು ಆಯ್ದುಕೊಂಡು ಸತ್ವಯುತ ಬದುಕನ್ನು ಬಾಳೋಣ. ಪತ್ತ ಓದಿದ ನಿಮಗೆ ಏನನ್ನಿಸಿತು?ನಮಗೆ ಬರೆಯಿರಿ.
ಪರೀಕ್ಷಾ ತಯಾರಿ ಮುಂದುವರೆಯಲಿ.... ಶುಭವಾಗಲಿ ಎಲ್ಲರಿಗೂ... ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************