ಜೀವನ ಸಂಭ್ರಮ : ಸಂಚಿಕೆ - 27
Sunday, March 13, 2022
Edit
ಜೀವನ ಸಂಭ್ರಮ : ಸಂಚಿಕೆ - 27
ಸ್ಪರ್ಧೆ
----------
ನಾನು ಒಮ್ಮೆ ಮಕ್ಕಳ ಜೂನಿಯರ್ ಡ್ರಾಮಾ ರಿಯಾಲಿಟಿ ಶೋ ಕಾರ್ಯಕ್ರಮವನ್ನು TVಯಲ್ಲಿ ನೋಡುತ್ತಿದ್ದೆ. ಗೆದ್ದವರು ಸಂಭ್ರಮದಿಂದ ಕೇಕೆ ಹಾಕುತ್ತಿದ್ದರು ಹಾಗೂ ಬೇರೆ ತಂಡವನ್ನು ಸೋಲಿಸಿದೆವು ಎನ್ನುವ ಭಾವ ಎದ್ದು ಕಾಣುತ್ತಿತ್ತು...!! ಸೋತವರಿಗೆ ತೀರ್ಪುಗಾರರು ತಿದ್ದಿಕೊಳ್ಳಬೇಕಾದ ಸಲಹೆ ನೀಡುತ್ತಿದ್ದಾಗ, ಅವರಲ್ಲಿ ಉಂಟಾಗುತ್ತಿದ್ದ ದುಃಖ ನೋಡಿದೆ. ಸೋತವರಲ್ಲಿ ಗೆದ್ದವರ ಬಗ್ಗೆ ಅಸಮಾಧಾನವನ್ನು , ದ್ವೇಷವನ್ನು ನೋಡಿದೆ...!! ಆಗ ನನ್ನನ್ನು ಕಾಡಿದ ಪ್ರಶ್ನೆ..... ಸ್ಪರ್ಧೆ ಎಂದರೇನು....? ನಾವೆಲ್ಲಾ ಹೇಳುತ್ತಿರುತ್ತೇವೆ..... ಈಗಿರುವುದು ಸ್ಪರ್ಧಾ ಪ್ರಪಂಚ. ಪ್ರತಿಯೊಬ್ಬರಲ್ಲೂ ಏನಾದರೊಂದು ವಿಶೇಷತೆ ಇದೆ, ಸ್ಪರ್ಧಿಸುವುದು ಅನಿವಾರ್ಯ ವಾಗಬೇಕು. ನಾವೆಲ್ಲಾ ತಿಳಿದುಕೊಂಡಿರುವಂತೆ ಸ್ಪರ್ಧೆ ಎಂದರೆ ಎದುರಾಳಿಗಳ ಜೊತೆ ಸ್ಪರ್ಧೆ ಮಾಡುವುದು, ಅವನನ್ನು ಯಾವ ರೀತಿಯಿಂದಲಾದರೂ ಸೋಲಿಸುವುದು. ಈಗಿನ ಕೆಲವು ಸ್ಪರ್ಧೆಗಳನ್ನು ನೋಡಿದಾಗ ಇದೇ ಅರ್ಥ ಬರುವಂತಿದೆ. ಹಾಗಾದರೆ ನಿಜವಾದ ಸ್ಪರ್ಧೆ ಎಂದರೇನು....? ಇನ್ನೊಬ್ಬರಿಗೆ ನೋವಾಗದಂತೆ, ದ್ವೇಷ ಬರೆದಂತೆ, ನಮ್ಮ ಪ್ರತಿಭೆ , ಸಾಮರ್ಥ್ಯವನ್ನು ಪ್ರಕಟಪಡಿಸುವುದು ಸ್ಪರ್ಧೆಯಲ್ಲವೆ...?
ಇದಕ್ಕೆ ಪೂರಕವಾದ ಒಂದು ಘಟನೆ ಈ ರೀತಿ ಇದೆ..... ಒಂದು ಊರಿನಲ್ಲಿ ರಮೇಶ ಎಂಬ ಒಬ್ಬ ಶಿಕ್ಷಕನಿದ್ದ. ಆತನ ಪತ್ನಿ ಗೃಹಿಣಿ. ಮನೆಯಲ್ಲಿ ಅಷ್ಟೊಂದು ಶ್ರೀಮಂತಿಕೆ ಇಲ್ಲದಿದ್ದರೂ ಬಡವರಲ್ಲ. ಬೇರೆ ಊರಿನಲ್ಲಿ ಶಿಕ್ಷಕನಾಗಿದ್ದ, ರಮೇಶ ದಿನಾ ಊರಿಗೆ ಹೋಗಿ ಬರುತ್ತಿದ್ದ. ರಮೇಶನ ಊರಿಗೆ ಹೊಸದಾಗಿ ಆಯ್ಕೆಯಾಗಿ ಚಂದ್ರು ಎಂಬ ಶಿಕ್ಷಕ ಬಂದ. ರಮೇಶ ಮತ್ತು ಚಂದ್ರು ಒಂದೇ ಹಾಸ್ಟೆಲ್ನಲ್ಲಿ ಓದಿದ್ದರಿಂದ ಮತ್ತು ತನಗಿಂತ ಕಿರಿಯವನಾಗಿದ್ದರಿಂದ ಊರಿಗೆ ಬಂದ ಮೇಲೆ ಗೆಳತನ ಮುಂದುವರೆಯಿತು. ಚಂದ್ರು ಜೊತೆಯಲ್ಲಿ ಲೈಲಾ ಎಂಬ ಶಿಕ್ಷಕಿ ಹೊಸದಾಗಿ ಆಯ್ಕೆಯಾಗಿ ಅದೇ ಊರಿಗೆ ಬಂದಳು. ಇಬ್ಬರೂ ಬೇರೆ ಬೇರೆ ಜಾತಿ. ಇವರಿಬ್ಬರ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ. ರಮೇಶ ಊರಿನವರ ಹಾಗು ತನ್ನ ಸಹೋದರರ ಸಹಕಾರದಿಂದ ಚಂದ್ರು ದಂಪತಿಗೆ ಏನೂ ತೊಂದರೆಯಾಗದಂತೆ ಸಹಕರಿಸಿದನು. ದಂಪತಿಗಳಿಗೆ ಇಬ್ಬರು ಮಕ್ಕಳು ಜನಿಸಿದರು. ಮಕ್ಕಳ ಜನನಕ್ಕೆ ಆಶ್ರಯ ವಾದದ್ದು ರಮೇಶನ ಮನೆ. ಗೆಳೆತನ ಹೀಗೆ ಮುಂದುವರೆದಿತ್ತು.
ರಮೇಶನಿಗೆ ಚಂದ್ರು ಮತ್ತು ದಂಪತಿಯವರಲ್ಲಿ ಯಾವುದೇ ಸ್ಪರ್ಧೆಯಿರಲಿಲ್ಲ. ಆದರೆ ಚಂದ್ರು ಮತ್ತು ದಂಪತಿಗೆ ರಮೇಶನ ಜೊತೆ ಸ್ಪರ್ಧೆ ಇತ್ತು. ಏಕೆಂದರೆ ಒಂದೇ ಕಾರಣ. ನಾವಿಬ್ಬರೂ ಸರ್ಕಾರಿ ನೌಕರರು ಎಂಬುದು. ಚಂದ್ರು ಮತ್ತು ದಂಪತಿ ಪರವೂರಿನವರು, ಆದುದರಿಂದ ಪ್ರತಿಯೊಂದಕ್ಕೂ ರಮೇಶನನ್ನು ಅವಲಂಬಿಸಿದ್ದರು. ಸ್ಪರ್ಧೆ ಮಾತ್ರ ಮುಂದುವರೆದಿತ್ತು. ರಮೇಶ ಇದನ್ನು ಗಮನಿಸುತ್ತಿರಲಿಲ್ಲ. ಅವರಿಗೆ ಕಷ್ಟವಾದಾಗ ನೆರವಾಗುತ್ತಿದ್ದ.
ರಮೇಶ ಮತ್ತು ಚಂದ್ರು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ ಇಬ್ಬರೂ ಆಯ್ಕೆಯಾದರು. ಆಯ್ಕೆಯಲ್ಲಿ ಚಂದ್ರುವಿಗೆ ಹೆಚ್ಚು ಅಂಕ ಬಂದಿತ್ತು. ಇಬ್ಬರು ಒಂದೇ ಜಿಲ್ಲೆಯಲ್ಲಿ ಆಯ್ಕೆಯಾದರು. ಕೆಲವು ವರ್ಷ ಗೆಳತನ ಹೀಗೆ ಮುಂದುವರೆದಿತ್ತು. ತದನಂತರ ಹಳೆಯ ಸಹಾಯ ಮರೆತು ದೂರವಾಗ ತೊಡಗಿದರು. ಚಂದ್ರುವಿಗೆ ದೂರದ ಊರಿಗೆ ವರ್ಗವಾಗಿತ್ತು. ರಮೇಶ ಯೋಚಿಸಿದ , ಇನ್ನು ಕೆಲವೇ ದಿನದಲ್ಲಿ ನನಗೂ ಭಡ್ತಿ ಬರುತ್ತದೆ. ಅಲ್ಲಿಯವರೆಗೆ ಒಂದು ಮನೆ ನಿರ್ಮಿಸಿದರೆ ನಿವೃತ್ತಿ ನಂತರ ಬಂದು ನೆಮ್ಮದಿಯಾಗಿರಬಹುದು ಎಂದು ಆಲೋಚಿಸಿ , ರಮೇಶ ತನ್ನ ತಂದೆ ಜಿಲ್ಲಾ ಕೇಂದ್ರದಲ್ಲಿ ಖರೀದಿ ಮಾಡಿದ ಜಾಗದಲ್ಲಿ ಕಷ್ಟಪಟ್ಟು ಒಂದು ಮೇಲಂತಸ್ತಿನ ಮನೆ ನಿರ್ಮಿಸಿದ. ಅದರ ಗೃಹಪ್ರವೇಶಕ್ಕೆ ಚಂದ್ರು ದಂಪತಿಯನ್ನೂ ಆಹ್ವಾನಿಸಿದ್ದ. ಚಂದ್ರು ದಂಪತಿಗಳು "ನಾವು ಒಂದು ಜಾಗ ತೆಗೆದುಕೊಂಡು, ಕೆಳಗಡೆ ಒಂದು ಮನೆ, ಅದರ ಮೇಲೆ ಒಂದು ಡುಪ್ಲೆಕ್ಸ್ ನಿರ್ಮಿಸಬೇಕು". ಎಂದರು , ಅದಕ್ಕೆ ರಮೇಶ ಹೇಳಿದ್ದ. "ನೀವಿಬ್ಬರೂ ಸಂಬಳದವರು, ಇದೇನು ಕಷ್ಟವಿಲ್ಲ" ಎಂದರು.
ಚಂದ್ರು ದೂರದ ಊರಿನಿಂದ ವರ್ಗಾವಣೆ ಹೊಂದಿ ಸ್ವಂತ ತಾಲೂಕಿಗೆ ಬಂದಮೇಲೆ, ಒಂದು ಡೂಪ್ಲೆಕ್ಸ್ ಮನೆ ನಿರ್ಮಿಸಿದರು. ಆಗ ರಮೇಶನಿಗೆ ಹುದ್ದೆಯಲ್ಲಿ ಭಡ್ತಿ ಬಂದು ಬೇರೆ ಊರಿಗೆ ವರ್ಗವಾದರು. ರಮೇಶ ತನಗೆ ಅಗತ್ಯ ಎಂದು ಸಾಲ ಮಾಡಿ ಕಾರು ಖರೀದಿಸಿದ. ಆ ಕಾರಿನಲ್ಲಿ ಚಂದ್ರು ದಂಪತಿಗಳು ಕಟ್ಟಿದ ಮನೆಯ ಗೃಹಪ್ರವೇಶಕ್ಕೆ ರಮೇಶ ದಂಪತಿ ಸಮೇತ ಹೋದರು. ಗೃಹಪ್ರವೇಶದಲ್ಲಿ ಮನೆಯನ್ನು ತುಂಬಾ ಸಂತೋಷದಿಂದ ರಮೇಶನ ದಂಪತಿಗೆ ಚಂದ್ರು ದಂಪತಿ ವರ್ಣಿಸಿದರು. ಹೊರಡುವಾಗ ಕಾರಿನ ಹತ್ತಿರ ಬಂದಾಗ ಅವರು ಕಟ್ಟಿಸಿದ ಮನೆಯ ಬಗ್ಗೆ ಸಂತೋಷ ಇರಲಿಲ್ಲ. ಏಕೆಂದರೆ ಚಂದ್ರು ದಂಪತಿಗಳು ಇನ್ನೂ ಕಾರು ಖರೀದಿಸಿರಲಿಲ್ಲ....!!!
ಮಕ್ಕಳೇ, ಈ ಘಟನೆ ಓದಿದಾಗ ರಮೇಶ, ತನ್ನನ್ನು ತಾನು ಯಾರೊಂದಿಗೂ ಹೋಲಿಸಿ ಕೊಳ್ಳದೆ, ಬಂದ ಆದಾಯದಲ್ಲಿ, ಯೋಜಿತ ರೀತಿ ಜೀವನ ಮಾಡಿ, ಹಂತ ಹಂತವಾಗಿ ಯಶಸ್ಸಿನತ್ತ ಬರುತ್ತಿದ್ದ. ಸಂಭ್ರಮ ಪಡುತ್ತಿದ್ದ. ಚಂದ್ರು ದಂಪತಿಗಳು ಬೇರೊಬ್ಬರೊಂದಿಗೆ ಹೋಲಿಸಿಕೊಂಡು , ದುಂದುವೆಚ್ಚ ಮಾಡಿ , ಶ್ರೀಮಂತಿಕೆ ತೋರಿಸಿಕೊಂಡು ಸಂಕಟಪಡುತ್ತಿದ್ದರು....!!!
ಹಾಗಾದರೆ ಸ್ಪರ್ಧೆ ಎಂದರೇನು....? ವ್ಯಕ್ತಿ ತನಗೆ ತಾನೇ ಸ್ಪರ್ಧಿಯಾಗಬೇಕು. ಈ ದಿನಕ್ಕಿಂತ ನಾಳೆ ದಿನ ಉತ್ತಮನಾಗಬೇಕು. ನಾಳೆಗಿಂತ ಮರುದಿನ ಇನ್ನೂ ಉತ್ತಮನಾಗಬೇಕು. ಆಗ ವ್ಯಕ್ತಿ ಉನ್ನತ ಹಂತಕ್ಕೆ ತಲುಪುತ್ತಾನೆ. ಇನ್ನೊಬ್ಬರೊಂದಿಗೆ ಹೋಲಿಸಿಕೊಂಡಾಗ , ಗೆದ್ದರೆ ಇನ್ನೊಬ್ಬನನ್ನು ಸೋಲಿಸಿದ ಸಂತೋಷ , ಅವನು ನನ್ನ ಸರಿಸಾಟಿಯಲ್ಲ ಎನ್ನುವ ಭಾವನೆ ಬರುತ್ತದೆ. ಸೋತ ಮೇಲೆ ಸೋತವನಿಗೆ ಗೆದ್ದವನ ಮೇಲೆ ದ್ವೇಷ. ಇದು ಮಾನವ ಸಂಬಂಧಕ್ಕೆ ಕಳಂಕ...!!
ಮಕ್ಕಳೇ ನಿಮಗೆ ನೀವೇ ಸ್ಪರ್ಧೆ ಮಾಡಿಕೊಂಡು ದಿನಾ ಪ್ರಗತಿ ಹೆಚ್ಚಾಗಬೇಕು. ಇದರಿಂದ ನೀವು ಮೇಲ್ಮುಖವಾಗಿ ಚಲಿಸುತ್ತೀರಿ. ಯಾರ ಬಗ್ಗೆ ದ್ವೇಷ , ಮತ್ಸರ , ಅಹಂಕಾರ ಬರುವುದಿಲ್ಲ. ಸ್ಪರ್ಧೆ ಎಂದರೆ ತನಗೆ ತಾನೆ ಹೋಲಿಸಿಕೊಳ್ಳುವುದು ವಿನಹ ಬೇರೊಬ್ಬರೊಂದಿಗೆ ಅಲ್ಲ...!!
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************