
ಮಕ್ಕಳ ತುಂಟ ಮನಸು : ಸಂಚಿಕೆ - 8
Thursday, March 31, 2022
Edit
ಮಕ್ಕಳ
ತುಂಟ ಮನಸು
ಸಂಚಿಕೆ - 8
ಕೆಲವು ದಿನಗಳ ಹಿಂದೆ ನಮ್ಮ ಮನೆಗೆ ಬರುವ ರಸ್ತೆಯಲ್ಲಿ ಒಂದು ಮರವನ್ನು ನೋಡಿದೆ. ಆ ಮರದಲ್ಲಿ ಹೊಸದಾಗಿ ಜೇನು ಗೂಡು ಕಟ್ಟಿರುವುದನ್ನು ಕಂಡೆ. ಆ ದಿನ ಸಂಜೆಯ ಹೊತ್ತಿನಲ್ಲಿ ಕೆಲವು ಮಕ್ಕಳು ಜೇನು ಗೂಡಿನ ಬಳಿ ಸೈಕಲ್ ತುಳಿಯುತ್ತಾ ಬಂದು ಆ ಮರವನ್ನೇ ನೋಡುತ್ತಾ ನಿಂತಿದ್ದರು. ಅಷ್ಟು ಹೊತ್ತಲ್ಲಿ ಮಕ್ಕಳು ಜೇನು ಗೂಡನ್ನು ನೋಡಿ ಅಲ್ಲಿಂದ ಬೇಗ ಸೈಕಲ್ ತೆಗೆದುಕೊಂಡು ಹೋದರು. ಅವರಲ್ಲಿ ಕೆಲವರಿಗೆ ಭಯವಾಗಿತ್ತು. ಒಬ್ಬ ಹುಡುಗ ನನ್ನ ಬಳಿ ಇದು 'ಹನಿ ಬೀ' ಅಲ್ವಾ ಅಂತ ಕೇಳಿದ. ನಾನು ಹೌದು ಎಂದು ಉತ್ತರಿಸಿದೆ. ನಂತರ ಅಲ್ಲಿಂದ ನಾನು ಹೊರಟೆ.
ಎರಡು ದಿನಗಳ ಬಳಿಕ ಅದೇ ಮರವನ್ನು ಮತ್ತೆ ಗಮನಿಸಿದಾಗ ಆ ಮರದಲ್ಲಿ ಜೇನು ಗೂಡು ಇರಲೇ ಇಲ್ಲ. ಮಾರನೆಯ ದಿನ ಸಂಜೆ ಒಬ್ಬ ಹುಡುಗನ ಮೈಯೆಲ್ಲಾ ಈ ಜೇನು ನೊಣ ಕಡಿದಿರುವುದಾಗಿ ಆತನ ಅಮ್ಮ ಹೇಳಿದರು. ನಾನು ಸಂಶಯದಿಂದ ಆತನ ಕೆಲವು ಗೆಳೆಯರಲ್ಲಿ ಕೇಳಿದೆ. ಆಗ ಮಕ್ಕಳು ಆ ಜೇನು ಗೂಡಿಗೆ ಕಲ್ಲು ಎಸೆದಿರುವುದಾಗಿ ಹೇಳಿದರು. ಆ ಗೂಡಿನಲ್ಲಿ ಜೇನು ಇದೆಯೋ ಇಲ್ಲವೋ ಎಂದು ನೋಡಲು ಈ ಮಕ್ಕಳು ಜೇನು ಗೂಡಿಗೆ ಕಲ್ಲು ಎಸೆದು ಪ್ರಯೋಗ ಮಾಡಿದ್ದಾರೆ. ಕೋಪಗೊಂಡ ಹುಳುಗಳು ಮಕ್ಕಳಿಗೆ ಕಡಿದುಬಿಟ್ಟಿದೆ. ಇಲ್ಲಿ ಮಕ್ಕಳು ತಿಳಿದೋ, ತಿಳಿಯದೆಯೋ ಕಲ್ಲನ್ನು ಎಸೆದುಬಿಟ್ಟಿದ್ದಾರೆ. ಇದು ಮಕ್ಕಳಿಗೆ ಒಂದು ಪಾಠವೇ ಸರಿ...!!
ಕೆಲವೊಮ್ಮೆ ನಮಗೆ ತಿಳಿಯದೇ ಇರುವ ವಿಷಯಗಳನ್ನು ನಮ್ಮ ಜೀವನದಲ್ಲಿ ಆಗುವ ಅನುಭವಗಳಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು. ಈ ಘಟನೆಯಿಂದ ಜೇನು ತಿನ್ನಲು ಸಿಹಿಯಾಗಿದ್ದರೂ ಕೂಡ, ಅದರ ಗೂಡಿಗೆ ಕಲ್ಲು ಎಸೆದರೆ ಆ ಹುಳುಗಳ ಕಡಿತ ತುಂಬಾ ಕಠೋರವಾಗಿರುತ್ತದೆ ಎನ್ನುವುದು ಈ ಮಕ್ಕಳಿಗಂತೂ ಅರಿವಾಗಿರುತ್ತದೆ....!!
ಇದೇ ರೀತಿ ಇನ್ನೊಂದು ಘಟನೆ ನಡೆದಿತ್ತು. ನಾನು 6ನೇ ತರಗತಿಯಲ್ಲಿದ್ದಾಗ ನಮ್ಮ ಶಾಲೆಯ ಮೈದಾನದಲ್ಲಿ ಒಂದು ದೊಡ್ಡ ಹುಣಸೆ ಮರ ಇತ್ತು. ಸಂಜೆಯ ಹೊತ್ತಿಗೆ ನಮ್ಮನ್ನು ಆ ಮೈದಾನದ ಮರದ ಅಡಿಗೆ ಆಡಲು ಬಿಡುತ್ತಾ ಇದ್ದರು. ಹೀಗೆ ಒಮ್ಮೆ ಆ ಮರದ ಅಡಿಯಲ್ಲಿ ನಾನು ಆಡುತ್ತಾ ಇದ್ದಾಗ ನನ್ನ ತಲೆಗೆ ಎಲ್ಲಿಂದಲೋ ಒಂದು ಕಲ್ಲು ಬಂದು ಬಿತ್ತು. ನನಗೆ ಅಲ್ಲೇ ಮೂರ್ಛೆ ಹೋಗಿತ್ತು. ತುಂಬಾ ರಕ್ತ ಕೂಡ ಬರುತ್ತಿತ್ತು. ಆ ದಿನ ಯಾರೋ ಒಬ್ಬ ಹುಣಸೆ ಹಣ್ಣಿನ ಆಸೆಯಿಂದ ಮರಕ್ಕೆ ಕಲ್ಲು ಎಸೆದಿದ್ದ. ಆ ಕಲ್ಲು ನನ್ನ ಹಣೆಗೆ ಬಿದ್ದಿತ್ತು. ನನ್ನ ಹಣೆಯಲ್ಲಿ ಆ ಕಲ್ಲು ಬಿದ್ದ ಗುರುತು ಇನ್ನು ಕೂಡ ಹಾಗೆಯೇ ಇದೆ. ಈ ಗುರುತು ನನ್ನ ಬಾಲ್ಯದ ದಿನವನ್ನು ನೆನಪಿಸುತ್ತದೆ. ಆ ಹುಡುಗನಿಗೆ ಗಾಬರಿಯಾಗಿ ಆತ ಕ್ಷಮೆ ಕೂಡಾ ಕೇಳಿದ್ದ. ಇದರಿಂದ ಅವನಿಗೆ ಮತ್ತೆ ಮರಕ್ಕೆ ಕಲ್ಲು ಎಸೆಯಬಾರದು ಎಂದು ತಿಳಿಯಿತು....!
ಹೀಗೆ ಅನೇಕ ಮಕ್ಕಳು ಕಲ್ಲು ಎಸೆದು ತುಂಟಾಟ ಮಾಡುತ್ತಾ ಹೊಸ ಪಾಠವನ್ನು ಕಲಿಯುತ್ತಾರೆ. ಇಂತಹ ಅನುಭವಗಳು ತಮ್ಮನ್ನು ತಾವು ತಿದ್ದಿಕೊಳ್ಳುವಂತೆ ಮಾಡುತ್ತದೆ. ಹಾಗೂ ಮಾಡಿದ ತಪ್ಪುಗಳು ಮತ್ತೆ ಪುನರಾವರ್ತನೆ ಆಗದಂತೆ ನಮಗೆ ಎಚ್ಚರಿಕೆಯನ್ನು ಕೂಡ ನೀಡುತ್ತದೆ. ಅನುಭವಗಳು ಮನುಷ್ಯನನ್ನು ಪರಿಪೂರ್ಣರನ್ನಾಗಿ ಮಾಡುತ್ತವೆ.
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ,
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************