-->
ಯುಗಾದಿ ಹಬ್ಬ - 2022

ಯುಗಾದಿ ಹಬ್ಬ - 2022

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

              
                ಹಬ್ಬವೆಂಬ 
                ನುಡಿಯೆ ಚೆಂದ 
                ಹಬ್ಬದೊಂದು 
                ನೋಟ ಚೆಂದ 
                ಹಬ್ಬದಂದು
                ಅಮ್ಮನಡುಗೆ 
                ಚಂದವೋ ಚಂದ |
      ಮುದ್ದು ಮಕ್ಕಳೇ.. ಮತ್ತೆ ಬಂದಿದೆ ಯುಗಾದಿ ಹಬ್ಬ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ... ಎಂಬ ಕನ್ನಡದ ವರಕವಿ ದ.ರಾ. ಬೇಂದ್ರೆಯವರ ಹಾಡಿನ ಸಾಲುಗಳು ಈಗಾಗಲೇ ನಿಮ್ಮ ಮನ‌ ಪಟಲದಲ್ಲಿ ಹಾದು ಹೋಗಿರಬಹುದಲ್ಲವೇ....? 
          ಋತುಗಳ ರಾಜ ವಸಂತ. ಹಬ್ಬಗಳ ರಾಜ ಯುಗಾದಿ. ವಸಂತ ಋತುವಿನ ಚೈತ್ರ ಮಾಸದ ಶುಕ್ಲಪಕ್ಷದ ಮೊದಲ ದಿನವೇ ಯುಗಾದಿ. ನಮ್ಮ ದೇಶದ ಹಲವಾರು ಭಾಗಗಳಲ್ಲಿ ಇಂದು ಹೊಸ ವರ್ಷಾರಂಭದ ಸಂಭ್ರಮ. ಕರ್ನಾಟಕ, ಆಂದ್ರ ಮಹಾರಾಷ್ಟ್ರ ರಾಜ್ಯಗಳ ಹಲವೆಡೆ ಈ ಹಬ್ಬದ ಆಚರಣೆ ಹೆಚ್ಚು. ದೇವಾಲಯಗಳಲ್ಲಿ ವಿಶೇಷ ಪೂಜೆ, ಪಂಚಾಂಗ ಶ್ರವಣ ನಡೆಯುತ್ತದೆ. ಮನೆಮನೆಗಳಲ್ಲೂ ಹರುಷ ತುಂಬಿದ ಮನಗಳಿಂದ ಅಬಾಲವೃಧ್ಧರಾದಿಯಾಗಿ ಸಂಭ್ರಮಿಸುವ ಸುದಿನ.
        ಮನೆಯ ಹೊಸ್ತಿಲನ್ನು ಶುಚಿಗೊಳಿಸಿ ಅಮ್ಮ ಬರೆದ ರಂಗೋಲಿ, ಮುಖ್ಯ ದ್ವಾರದ ಮೇಲ್ಭಾಗದಲ್ಲಿ ತಲೆ ಬಾಗಿ ತೂಗುವ‌ ಮಾವಿನ ತಳಿರ ತೋರಣ, ದೇವರ ಕೋಣೆಯಲ್ಲಿ ಉರಿಯುವ ನೀಲಾಂಜನ, ಅಕ್ಕಿ ತೆಂಗಿನಕಾಯಿಗಳೇ ಮೊದಲಾದ ಸುವಸ್ತುಗಳ ಜತೆ ಹೊಸ ಬೆಳೆಗಳಾದ ವಿವಿಧ ತರಕಾರಿಗಳು , ಹಣ್ಣು ಹಂಪಲುಗಳು , ವೀಳ್ಯದೆಲೆ , ಅಡಿಕೆ , ಅರಶಿನ, ಕಬ್ಬು ಮೊದಲಾದ ಫಲವಸ್ತುಗಳ ಜೋಡಣೆ, ಬೇವು ಬೆಲ್ಲಗಳ ಮಿಶ್ರಣ ಇವೆಲ್ಲಕ್ಕೂ ಕಲಶಪ್ರಾಯವಾಗಿ ಹೂಗಳ ರಾಶಿಯ ಮಧ್ಯೆ ಶೋಭಿಸುವ ಹೊಸ ಪಂಚಾಂಗ 
ಪುಸ್ತಕ , ಸಂಭ್ರಮದಿಂದ ಹೊಸ ಬಟ್ಟೆಗಳನ್ನು ತೊಟ್ಟು ನಲಿಯುತ್ತಿರುವ ಮಕ್ಕಳು, ಹಬ್ಬದ ಸಂಭ್ರಮದಲ್ಲಿ ದೇವರ ಪೂಜೆಗೆ ಅಣಿಯಾಗುತ್ತಿರುವ ಅಪ್ಪ, ಅಡುಗೆ ಮನೆಯ ತುಂಬ ಓಡಾಡಿ ಹಬ್ಬದೂಟಕ್ಕೆ ತಯಾರಿ ನಡೆಸುತ್ತಿರುವ ಅಮ್ಮ, ಯುಗಾದಿ ದಿನ ವಿಶೇಷತೆಯ ಬಗ್ಗೆ ಹಿಂದಿನ ವೈಭವ ಸಂಪ್ರದಾಯ ಬಧ್ದ ಆಚರಣೆಗಳ ಮೆಲುಕು ಹಾಕುವ ಹಿರಿಯರು , ಒಟ್ಟಾರೆ ಮನೆ ತುಂಬ ಸಂತಸದ ಸಾಗರ. ಇದು ಯುಗಾದಿ ಹಬ್ಬದ ಸಡಗರ.
        ಚೈತ್ರ ಮಾಸದ ಶುಕ್ಲ ಪಕ್ಷದ ಶುಧ್ದ ಪಾಡ್ಯದಂದು ಬ್ರಾಹ್ಮೀ ಮುಹೂರ್ತದಲ್ಲಿ ಬ್ರಹ್ಮದೇವನು ವಿಶ್ವವನ್ನು ಸೃಷ್ಟಿಸಿದ. ಗ್ರಹ, ನಕ್ಷತ್ರ, ಮಾಸ, ಋತು ವರ್ಷಗಳೆಂಬ ಕಾಲಗಣನೆ ಅಂದಿನಿಂದ ಆರಂಭವಾಯಿತು. ಅಂತೆಯೇ ಯುಗಾದಿಯ ಶುಭ ದಿನದಂದೇ ಶೀರಾಮ ಪಟ್ಟಾಭಿಷೇಕ ನಡೆಯಿತೆಂಬುದು ಪುರಾಣಗಳ ಉಲ್ಲೇಖ. 
       ವೈಜ್ಞಾನಿಕವಾಗಿಯೂ ಈ ದಿನ ವಿಶೇಷವೇ ಸರಿ. ಹಸುರುಡುಗೆ ತೊಟ್ಟು ಕಂಗೊಳಿಸುವ ವನದೇವಿ, ಗಿಡ ಮರಗಳ ಎಳೆ ಚಿಗುರುಗಳು , ಬಣ್ಣ ಬಣ್ಣದ ಹೂವುಗಳು, ಪ್ರಕೃತಿಯೇ ನವ ವಧುವಿನಂತೆ ಅಲಂಕೃತಳಾಗಿ ವಸಂತ ಋತುವಿನಾಗಮನದ ಸಂಭ್ರಮ. ಅರಳಿದ ಸುಮಗಳಿಂದ ಮಧು ಹೀರಲು ಹಿಂಡು ಹಿಂಡಾಗಿ ಬರುವ ಕೀಟ ಸಂಕುಲಗಳಿಂದ ಸಹಜವಾಗಿಯೇ ಮಾನವರ ಆರೋಗ್ಯ ಏರುಪೇರಾಗುವುದು. ಅದಕ್ಕಾಗಿಯೇ ಸೂರ್ಯೋದಯಕ್ಕೂ ಮುನ್ನ ಮೈಗೆ ಎಣ್ಣೆ ಸವರಿ , ಬಿಸಿ ನೀರ ಸ್ನಾನ ಮಾಡುವುದು ರೂಢಿ. ಉರಿ ಬಿಸಿಲಿನ ತಾಪಕ್ಕೆ ದಡಾರ, ಕೆನ್ನೆ ಬಾವು, ಹಳದಿಕಾಮಾಲೆ ಮುಂತಾದ ಹಲವು ರೋಗಗಳು ಬರುವ ಸಾಧ್ಯತೆಯಿದೆ. ಅದನ್ನು ದೂರಮಾಡಲು ಮನೆಯವರೊಂದಾಗಿ 
ಬೇವು - ಬೆಲ್ಲ ಸವಿಯುವುದು ಸತ್ಸಂಪ್ರದಾಯ. ಬೇವಿನ ಕಹಿಗೆ ಬೆಲ್ಲದ ಸಿಹಿಯ ಸೇರ್ಪಡೆ. ಮಾನವನ‌ ಜೀವನ ಕಷ್ಟ ಕಾರ್ಪಣ್ಯಗಳು, ಸುಖ ದುಃಖಗಳು , ಬೇನೆ , ಬೇಸರ‌ , ಸಂತಸ , ಉಲ್ಲಾಸಗಳೆಂಬ ಹಲವು ಭಾವಗಳ ಮಿಶ್ರಣ. ಸಂತಸ ಬಂದಾಗ ಹಿಗ್ಗಿದರೆ ದುಃಖ ನಮ್ಮನ್ನು ಕುಗ್ಗಿಸುತ್ತದೆ. ಇವೆರಡನ್ನೂ ಸಮಭಾವ ಸಮ ಚಿತ್ತದಿಂದ ಸ್ವೀಕರಿಸಿದಾಗ ಉತ್ತಮ ಜೀವನ ನಮ್ಮದಾಗುತ್ತದೆ. ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ.
        ಬೇವಿನ ಎಲೆ ಸೇವನೆಯ ಮಹತ್ವವನ್ನು ಹೀಗೆ ಉಲ್ಲೇಖಿಸಲಾಗಿದೆ ಆದುದರಿಂದ ಯುಗಾದಿಯು ವೈಜ್ಞಾನಿಕ ಹಿನ್ನೆಲೆಯನ್ನೊಳ - ಗೊಂಡ ಪರ್ವ ಕೂಡಾ ಹೌದು. ಹೊಸ ವರ್ಷಾರಂಭ‌ದ ಆಚರಣೆಯ ಸಲುವಾಗಿ ಮನೆ-ಮನೆಗಳಲ್ಲಿ , ದೇವಾಲಯಗಳಲ್ಲಿ 
ಪಂಚಾಂಗ ವಾಚನ, ಶ್ರವಣ ನಡೆಯುತ್ತದೆ. ಇದರಿಂದ ನಮ್ಮ ರಾಶಿ ಫಲದ ಜತೆ ವರ್ಷ ಭವಿಷ್ಯ ವನ್ನೂ ಅರಿಯಲು ಸಾಧ್ಯ. ಜತೆಗೆ ದೇವತಾರಾಧನೆಗೆ ಅನುಕೂಲ‌ವೂ ಹೌದು. 
         ನಮ್ಮ ‌ಹಿರಿಯರು ಬಹಳ‌ ಹಿಂದಿನ ಕಾಲದಿಂದಲೂ ವಿವಿಧ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಪ್ರತಿಯೊಂದು ಹಬ್ಬವೂ‌ ತನ್ನದೇ ಆದ ವಿಶಿಷ್ಟತೆಗಳ ಜತೆ ಆಚರಣೆಯ ಮಹತ್ವವನ್ನೂ ಒಳಗೊಂಡಿದೆ. ಇಂದಿನ ಮಕ್ಕಳೂ ಮುಂದಿನ ಭಾರತದ ಯುವ ಪೀಳಿಗೆಗಳಾದ ತಾವು ಹಬ್ಬಗಳ ಐತಿಹ್ಯವನ್ನು ಅರಿತು ಆಚರಿಸುತ್ತಾ ಭಾರತೀಯ ಸಂಸ್ಕೃತಿಯ ನಾವಿಕರಾಗಬೇಕಿದೆ. ಹಬ್ಬಗಳು ನಮ್ಮ ‌ಬಾಳಿನಲ್ಲಿ ಉತ್ತಮ ಬಾಂಧವ್ಯ, ಸೌಹಾರ್ದತೆ, ಸಹಕಾರ ಮನೋಭಾವಗಳ ಜತೆ ಕೂಡಿಬಾಳುವ ಸಗ್ಗ ಸುಖದ ಅನುಭವವನ್ನು ನೀಡಬೇಕು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ‌ ಪ್ರೀತಿ, ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಬೆಳೆಸಬೇಕು. ಆಗ ಮಾತ್ರ ಆಚರಣೆಗಳ ಅನುಪಾಲನೆಗೆ ಹಿರಿದರ್ಥ ಬರುವುದು. ಹಿರಿ ಕವಿ ಬೇಂದ್ರೆಯವರ ಮನಸಿನಾಶಯದಂತೆ        
             ಬೇವಿನ ಕಹಿ ಬಾಳಿನಲ್ಲಿ 
             ಹೂವಿನ ನಸುಗಂಪ ಸೂಸಿ 
             ಜೀವ ಕಳೆಯ ಹೊತ್ತು ತರಲಿ 
             ಯುಗಗಳೆಷ್ಟೇ ಕಳೆದರೂ 
             ಯುಗಾದಿಯ ಸಡಗರ ಮಾಸದಿರಲಿ... 
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
.......................................... ಪುಷ್ಪಲತಾ ಎಂ.     
ಸಹಶಿಕ್ಷಕಿ
ಸರಕಾರಿ ಪ್ರೌಢ ಶಾಲೆ ವಳಾಲು ,  ಬಜತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article