
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 39
Wednesday, March 30, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 39
ನಮ್ಮಿಂದ ಏನು ತಪ್ಪು ನಡೆದಿದೆ ಎಂದು ಗೊತ್ತಿಲ್ಲ...!! ನಡೆದಿದ್ದರೆ ಕ್ಷಮೆ ಯಾಚಿಸುತ್ತಿದ್ದೇವೆ. ಖುಷಿ ಖುಷಿಯಾಗಿರುತ್ತಿದ್ದ ನೀವು ನಮ್ಮಿಂದಾಗಿ ಮೌನಿಯಾಗೋದು ದಯವಿಟ್ಟು ಬೇಡ.... ನೀವೂ ಖುಷಿಯಾಗಿರಿ ನಿಮ್ಮ ಮೂಲಕ ಇತರರನ್ನು ಖುಷಿಯಾಗಿರಿಸಿ... ಮಕ್ಕಳೆಲ್ಲರೂ ನಿಮ್ಮ ಮೌನದ ಬಗ್ಗೆ ಮತ್ತು ಗಂಭೀರತೆ ಬಗ್ಗೆ ಮಾತಾಡುವಂತಾಗದಿರಲಿ. ಎಲ್ಲದಕ್ಕೂ ಮೂಲ ಕಾರಣ ಮಕ್ಕಳಾದ ನಾವು.... ಇನ್ನು ಮುಂದೆ ನಮ್ಮಿಂದ ಏನೂ ತೊಂದರೆ ಆಗದು... ಎಲ್ಲಾ ಮಕ್ಕಳ ಪರವಾಗಿ ನಾವು ಬೇಷರತ್ತಾಗಿ ಕ್ಷಮೆ ಕೇಳುತ್ತಿದ್ದೇವೆ. ಪ್ಲೀಸ್ ಕ್ಷಮಿಸಿಬಿಡಿ ಸರ್... ನಮಗಾಗಿ ಮತ್ತೆ ಹಿಂದಿನಂತಾಗಿರಿ..... ಪ್ಲೀಸ್... ಪ್ಲೀಸ್....!!
ಇದು ಶಾಲೆಯಲ್ಲಿನ ಒಂದು ತರಗತಿಯ ಕೆಲವು ಮಕ್ಕಳು ಸೇರಿ ತನ್ನ ಮೆಚ್ಚಿನ ಗುರುಗಳಿಗೆ ಬರೆದ ಪತ್ರದ ಸಾಲುಗಳು. ಆ ಮುಗ್ಧ ಮನದ ನಿಷ್ಕಲ್ಮಶ ಪ್ರೀತಿಯ ಆಪ್ತತೆ ಹಾಗೂ ಕಾರಣ ಹುಡುಕದೆ ಪರಿಹಾರವನ್ನು ಕಂಡು ಕೊಳ್ಳುವ ಸೋತು ಗೆಲ್ಲುವ ಅರ್ಥಪೂರ್ಣ ಸಾಲುಗಳಿವು...!
ಅವರೊಬ್ಬರು ಸದಾ ಕ್ರಿಯಾಶೀಲರಾಗಿರುವ ವಿದ್ಯಾರ್ಥಿ ಸ್ನೇಹಿ ಶಿಕ್ಷಕರು. ಪಠ್ಯದ ಎಲ್ಲೆ ಮೀರಿ ತರಗತಿಯೊಳಗೆ ತನ್ನನ್ನು ಬಂಧಿಸದೆ ತರಗತಿಯ ಗಡಿ ದಾಟಿ ಮಕ್ಕಳೊಂದಿದೆ ಸದಾ ಖುಷಿ ಖುಷಿಯಾಗಿ ಇರುತ್ತಿದ್ದರು. ಮಕ್ಕಳ ಮನವನ್ನರಿತು ವ್ಯವಹರಿಸುತ್ತಿದ್ದರು. ಮಕ್ಕಳಿಗೆ ಒಮ್ಮೊಮ್ಮೆ ಗುರುಗಳಾಗಿ , ಒಮ್ಮೊಮ್ಮೆ ತಂದೆ - ತಾಯಿಗಳ ಸ್ಥಾನದಲ್ಲಿ ಮಾರ್ಗದರ್ಶಕರಾಗಿ , ಒಳ್ಳೆಯ ಸ್ನೇಹಿತರಾಗಿ , ತಾಳ್ಮೆಯ ಮೂರ್ತಿಯಾಗಿ, ಅಚ್ಚುಮೆಚ್ಚಿನ ಶಿಕ್ಷಕರಾಗಿ ಹೆಸರಾಗಿದ್ದರು. ಕಾಲದ ಸೆಳೆತದಿಂದಾಗಿ ಒಮ್ಮೊಮ್ಮೆ ಶಾಂತ ಸಾಗರವು ಕೂಡಾ ತನ್ನ ಎಲ್ಲೆಯನ್ನು ಮೀರಿ ಸುನಾಮಿಯಾಗಿ ವರ್ತಿಸುವಂತೆ ತರಗತಿಯೊಳಗಿನ ಒಂದು ಮಗುವಿನ ಅನುಚಿತ ವರ್ತನೆಯಿಂದಾಗಿ ಕೋಪಗೊಂಡು ತಾಳ್ಮೆಗೆಟ್ಟರು. ತನ್ನ ಸಲುಗೆಯ ವರ್ತನೆಯಿಂದಾಗಿ ಮಕ್ಕಳಿಂದ ನಿರ್ಲಕ್ಷ್ಯ ಕ್ಕೊಳಗಾಗಿದ್ದೇನು ಎಂದು ಭಾವಿಸಿದರು. ನಿರ್ಲಕ್ಷ್ಯ ಭಾವಕ್ಕೆ ತಾಳ್ಮೆಗೆಟ್ಟು ಮಕ್ಕಳೊಂದಿಗೆ ಗಂಭೀರ ಭಾವದಿಂದ ವರ್ತಿಸತೊಡಗಿದರು. ಆ ದಿನದಿಂದ ಮೌನಿಯಾಗಿ ಪಾಠದಲ್ಲಿನ ಜೀವಂತಿಕೆ ಕಳೆದುಕೊಂಡು ನಿಸ್ತೇಜರಾದರು. ಇವರ ಈ ಭಾವ ಕೇವಲ ಒಂದು ತರಗತಿಗೆ ಸೀಮಿತವಾಗದೆ ಇಡೀ ಶಾಲೆಗೆ ವ್ಯಾಪಿಸಿತು. ಎಲ್ಲಾ ಮಕ್ಕಳು ಕಕ್ಕಾಬಿಕ್ಕಿಯಾದರು. ಅವರಿದ್ದರೆ ಸದಾ ಖುಷಿ ಖುಷಿಯಾಗಿರುತ್ತಿದ್ದ ಶಾಲಾ ಪರಿಸರ ನಿಸ್ಸಾರವಾಯಿತು......!! ಎಲ್ಲರೂ ಕಾರಣ ಹುಡುಕಿದರೆ ಹೊರತು ಪರಿಹಾರ ಹುಡುಕಲಿಲ್ಲ...!! ಆದರೆ ಕೆಲವು ಮಕ್ಕಳು ಕಾರಣ ಕೇಳದೆ ಪರಿಹಾರಕ್ಕಾಗಿ ಪತ್ರ ಬರೆದರು. (ಆ ಪತ್ರ ಮೇಲಿದೆ). ಪತ್ರ ಓದಿದ ಆ ಶಿಕ್ಷಕರ ಮೌನ ಜಾರಿತು... ಮುದದಲ್ಲಿ ಮಂದಹಾಸ ಮೂಡಿತು. ಸಿಟ್ಟು ಸಡಿಲವಾಯಿತು. ತಾನು ಕಳೆದುಕೊಳ್ಳುತ್ತಿರುವ ಮಕ್ಕಳ ಪ್ರೀತಿಯ ಅರಿವಾಯಿತು. ಸಿಟ್ಟಿನ ಮೋಡ ಕರಗಿ ಪ್ರೀತಿಯ ಮಳೆ ಸುರಿಯಿತು. ಮಕ್ಕಳ ಪಾಲಿಗೆ ಶಿಕ್ಷಕರು ಮರಳಿ ಸಿಕ್ಕಿದರು. ಶಿಕ್ಷಕರು ಮೊದಲಿನಂತಾದರು.
ಹೌದಲ್ವಾ...... ಸದಾ ಸಮತೆಯಿಂದ ಬದುಕು ಸಾಗುತಿರುವಾಗ ಯಾವುದೋ ಕ್ಷುಲಕ ಕಾರಣಕ್ಕಾಗಿ ಒಮ್ಮೊಮ್ಮೆ ಬದುಕು ತಾಳ್ಮೆಗೆಟ್ಟು ದಾರಿ ತಪ್ಪುತ್ತದೆ. ಬೇಸರದ ಭಾವ ಗಟ್ಟಿಯಾಗಿ ಸಂಬಂಧಗಳ ಬಂಧ ಸಡಿಲವಾಗುತ್ತದೆ. ಆ ಹೊತ್ತಿನಲ್ಲಿ ಕಾರಣಗಳು ಸಾಲುಗಟ್ಟಿ ಬರುತ್ತದೆ. ತನ್ನನ್ನು ತಾನು ಸಮರ್ಥಿಸುವ ಸಮರ್ಥನೆಗಳ ಮಧ್ಯೆ ಗುದ್ದಾಟ ಹೆಚ್ಚಾಗಿ ನೆಮ್ಮದಿ ಕೆಡುತ್ತದೆ. ನಾನೇಕೆ ಸೋಲಬೇಕು ಎಂಬ ಭಾವ ಗಟ್ಟಿಯಾಗುತ್ತಾ ಹೋಗುತ್ತದೆ. ಕೊನೆಗೆ ಗೆಲ್ಲುತ್ತೇವೆ. ಆದರೆ ಗೆದ್ದರೂ ನೆಮ್ಮದಿಯಲ್ಲಿ ಸೋತಿರುತ್ತೇವೆ. ಗೆದ್ದರೂ ಗೆಲುವಿನ ಸಂಭ್ರಮವಿರುವುದಿಲ್ಲ. ಆಗ ಸೋತು ಗೆಲ್ಲುವ ಕಲೆ ಕಲಿಯಬೇಕು. ಮಕ್ಕಳ ಬೇಷರತ್ತು ಕ್ಷಮೆಯಾಚನೆ ಶಿಕ್ಷಕರನ್ನು ಮರಳಿ ದೊರಕಿಸಿದಂತೆ ನಾವು ಕೇಳುವ ಬೇಷರತ್ತು ಕ್ಷಮೆಯಾಚನೆಗಳು ಎಲ್ಲವನ್ನು ಮರಳಿ ಗಳಿಸಿಕೊಡುತ್ತದೆ. ಒಮ್ಮೆ ಸೋತರೂ ಗೆಲುವಿನ ಸಂಭ್ರಮ ಸದಾ ಇರುತ್ತದೆ. ನಮಗೆ ನೆಮ್ಮದಿ ಸಿಗುವುದಾದರೆ ಬೇಷರತ್ತು ಕ್ಷಮೆಯಾಚನೆ ಕೇಳುವುದರಲ್ಲಿ ತಪ್ಪೇನಿಲ್ಲ. ಕಾರಣ ಹುಡುಕುತ್ತಾ ಹೋದರೆ ಒಮ್ಮೊಮ್ಮೆ ಸಮಸ್ಯೆ ಬಿಗಾಡಿಯಿಸುತ್ತದೆ. ಪರಿಹಾರ ಕನಸಿನ ಗೋಪುರವಾಗುತ್ತದೆ. ಗೆದ್ದು ಸೋಲುವಂತೆ ಸೋತು ಗೆಲ್ಲುವುದು ಕೂಡಾ ಒಂದು ಪರಿಹಾರದ ತಂತ್ರ. ಬನ್ನಿ ಸೋತು ಗೆಲ್ಲುವುದನ್ನು ಕೂಡಾ ಕಲಿಯೋಣ....!!
ಸಮುದ್ರದಲ್ಲಿ ಸ್ನಾನಕ್ಕಾಗಿ ಪ್ರತ್ಯೇಕ ಅಲೆಗಳು ಬರುವುದಿಲ್ಲ. ಬಂದ ಅಲೆಗಳಲ್ಲಿಯೇ ಅಪಾಯರಹಿತವಾಗಿ ಸ್ನಾನ ಮಾಡೋ ಕಲೆಯನ್ನು ಕಲಿಯಬೇಕಾಗುತ್ತದೆ. ಅದೇ ರೀತಿ ಪರಿಸ್ಥಿತಿಯ ಅಲೆಗಳ ಮಧ್ಯೆ ಬದುಕುವ ಕಲೆ ಕಲಿಯಬೇಕು. ಕೆಟ್ಟವರ ಮೇಲೆ ನಂಬಿಕೆ ಇಡೋದು ಹಾಗೂ ಒಳ್ಳೆಯವರ ಮೇಲೆ ಸಂಶಯ ಪಡುವುದು ಸದಾ ಅಪಾಯಕಾರಿ. ಭಾವನಾತ್ಮಕ ಆರೋಗ್ಯ ಚೆನ್ನಾಗಿರಬೇಕಾದರೆ ಭಾವನೆಗಳಿಗೆ ಬೆಲೆಕೊಡುವವರಿಗೆ ಸಮಯ ನೀಡಬೇಕೇ ಹೊರತು ವಸ್ತು, ಸ್ಥಾನಮಾನ , ಕೀರ್ತಿ , ಪ್ರಶಸ್ತಿ, ಹಣಗಳಿಗೆ ಬೆಲೆಕೊಡುವವರಿಗಲ್ಲ. ಏಕೆಂದರೆ ಅದು ಯಾವಾಗ ಕೈಕೊಡುತ್ತದೋ ಗೊತ್ತಿಲ್ಲ. ತ್ವರಿತ ಪ್ರತಿಕ್ರಿಯೆಯು ಇನ್ನೊಬ್ಬರನ್ನು ಗೆಲ್ಲುವ ಪವರ್ ಫುಲ್ ಆಯುಧ. ನಮ್ಮ ಸಾಂಗತ್ಯಕ್ಕಾಗಿ ಸದಾ ಕಾಯುವ , ನಮ್ಮ ಒಳಿತನ್ನೇ ಸದಾ ಬಯಸುವ , ನಮ್ಮ ಕಾಳಜಿಯನ್ನೇ ಸದಾ ಕಾಣುವ ಮನಸ್ಸುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡೋಣ. ಅವರಿಗಾಗಿ ಸೋತು ಗೆಲ್ಲೋಣ. ಸೋಲುವುದು ಕೂಡಾ ಒಂದು ಗೆಲುವು ಎಂಬುದನ್ನು ಅರಿಯೋಣ. ಸೋತು ಗೆಲ್ಲುವ ಕಲೆಗಾಗಿ ನಮ್ಮ ಕಾರ್ಯಶೈಲಿಯಲ್ಲಿ ಬದಲಾವಣೆ ತರೋಣ.... ಬನ್ನಿ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************