-->
ಮಕ್ಕಳ ತುಂಟ ಮನಸು :  ಸಂಚಿಕೆ - 5

ಮಕ್ಕಳ ತುಂಟ ಮನಸು : ಸಂಚಿಕೆ - 5

ಮಕ್ಕಳ
ತುಂಟ ಮನಸು 
ಸಂಚಿಕೆ - 5

     
                      ತರಗತಿಯಲ್ಲಿ ನಿದ್ದೆ ...!!!
          ನಮ್ಮ ದೈನಂದಿನ ಕೆಲಸ ಚಕ್ರದ ರೀತಿಯಲ್ಲಿ ಸಾಗುತ್ತಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವ ತನಕ ಏನಾದರೊಂದು ಕೆಲಸದಲ್ಲಿ ತೊಡಗಿರುತ್ತೇವೆ. ಮಕ್ಕಳಂತೂ ಬೆಳಗ್ಗೆ ಏಳುವುದು, ಶಾಲೆಗೆ ಹೊರಟು ಹೋಗುವುದು, ಸಂಜೆ ಮತ್ತೆ ಮನೆ... ಕೆಲವೊಂದು ಬಾರಿ ನಾವು ಯಂತ್ರಗಳೇ ಎನ್ನುವ ಭಾವನೆ ಕೂಡ ಬರುವುದುಂಟು. ಯಾಕೆಂದರೆ, ಪ್ರತೀ ದಿನ ಹೊಸ ಬದಲಾವಣೆ, ಹೊಸ ಚಿಂತನೆ, ಹೊಸ ಅನುಭವ ಇಲ್ಲದೇ ಇದ್ದಾಗ ಆ ದಿನಗಳಲ್ಲಿ ವೈಶಿಷ್ಟ್ಯ ಏನೂ ಕಾಣಿಸುವುದಿಲ್ಲ. ಇಷ್ಟೆಲ್ಲಾ ಕೆಲಸಗಳಲ್ಲಿ ನಿರತರಾಗಿರುವ ನಮಗೆ, ನಿದ್ದೆ ಮಾಡಲು ಸಮಯ ಮಾತ್ರ ಸಾಕಾಗುವುದಿಲ್ಲ ಅಲ್ಲವೇ...? ರಾತ್ರಿ ಮಲಗಿ ಬೆಳಗಾಗುವಷ್ಟರಲ್ಲಿ ಪುನಃ ಎದ್ದು ಮತ್ತದೇ ಕೆಲಸ ಮಾಡಬೇಕು.. ಹೀಗಿದ್ದಾಗ ಬೆಳಗ್ಗೆ ಏಳಲು ಮನಸ್ಸಾದರೂ ಹೇಗೆ ಬರಬೇಕು...!! ಮಕ್ಕಳಿಗೆ ಚಳಿಗಾಲದಲ್ಲಂತೂ ಬೆಳಗಾದಾಗ ಮುಸುಕು ಹೊದ್ದು ಬೆಚ್ಚಗೆ ಗುಬ್ಬಚ್ಚಿಯಂತೆ ಮನೆಯೊಳಗೆಯೇ ಇರಬೇಕು ಅಂತ ಅನ್ನಿಸುತ್ತದೆ.... ಕೆಲವೊಂದು ಬಾರಿ ಬೆಳಗಿನ ಜಾವ ನಿದ್ರೆಯ ಜೊತೆಗೆ ಒಳ್ಳೆಯ ಕನಸಿನ ಲೋಕದಲ್ಲಿ ಇರುತ್ತಾರೆ. ಅಷ್ಟರಲ್ಲಿ ಅಮ್ಮ ಬಂದು ಎಚ್ಚರಿಸಿದ ಮೇಲೆ ನಾವು ಹಾಸಿಗೆಯಲ್ಲಿ ಇದ್ದೇವೆಯೇ ಹೊರತು, ಬೇರೆ ಲೋಕದಲ್ಲಿ ಅಲ್ಲ ಅಂತ ನೆನಪಾಗುತ್ತದೆ. ಎಷ್ಟೇ ಎಬ್ಬಿಸಿದರೂ ಕೂಡ "ಇನ್ನು ಸ್ವಲ್ಪವೇ ಸ್ವಲ್ಪ ಹೊತ್ತು ಮಲಗುತ್ತೇನೆ" ಅಂತ ಹೇಳುವ ಮಕ್ಕಳೇ ಹೆಚ್ಚು.....!! ಅನೇಕ ಬಾರಿ ಮಕ್ಕಳು ತಡವಾಗಿ ಎದ್ದು, ಶಾಲೆಗೆ ಹೋಗದೇ ಇರುವ ದಿನಗಳನ್ನು ಕೂಡ ಪೋಷಕರು ನೋಡಬಹುದು. ನಿದ್ದೆ ಅನ್ನುವುದು ನಮ್ಮ ದೇಹಕ್ಕೆ ಆರಾಮದ ಜೊತೆಗೆ, ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಆದರೆ ನಿದ್ದೆಯು ಅತಿಯಾದಾಗ ಅನೇಕ ಸಮಸ್ಯೆಗಳು ಕೂಡಾ ಎದುರಾಗುತ್ತದೆ. ಸಾಮಾನ್ಯವಾಗಿ ದೊಡ್ಡವರಿಗೆ 7-8 ಗಂಟೆಗಳಷ್ಟು ನಿದ್ದೆ ಬೇಕಾಗುತ್ತದೆ. ಮಕ್ಕಳು ಮಾತ್ರ ಸ್ವಲ್ಪ ಜಾಸ್ತಿ ಹೊತ್ತು ಮಲಗುತ್ತಾರೆ. 
        ತಮಾಷೆಯ ವಿಷಯ ಏನೆಂದರೆ...ನಾನು ಸಣ್ಣವಳಿದ್ದಾಗ, ನಿದ್ದೆಯ ಅಮಲಿನಲ್ಲಿ ಭಾನುವಾರದ ದಿನಗಳಲ್ಲಿ..... 'ಅಯ್ಯೋ ಇವತ್ತು ಕೂಡ ಬೇಗ ಎದ್ದು ಶಾಲೆಗೆ ಹೋಗಬೇಕಲ್ಲ' ಅಂತ ಅಂದುಕೊಳ್ಳುತ್ತಿದ್ದೆ. ನಿದ್ದೆಯೆಲ್ಲಾ ಮುಗಿದ ಮೇಲೆ ಇವತ್ತು ಭಾನುವಾರ ಅಂತ ನೆನಪಾಗುತ್ತಿತ್ತು....!! ಬೇಗ ಏಳಲು ನಾನು ಪಾಲಿಸುವ ಒಂದೇ ಒಂದು ಪರಿಣಾಮಕಾರಿ ಉಪಾಯ ಏನೆಂದರೆ..... ರಾತ್ರಿ ಬೇಗ ಮಲಗಿ ಮಾರನೆಯ ದಿನ ಬೆಳಗ್ಗೆ ಬೇಗ ಏಳುವುದು. ಅದೇ ರಾತ್ರಿ ತಡವಾಗಿ ಮಲಗಿದರೆ, ಬೆಳಗ್ಗೆ ಕೂಡ ಏಳಲು ತಡವಾಗುತ್ತದೆ. ಎಷ್ಟೋ ಮಕ್ಕಳು ರಾತ್ರಿಯಿಡೀ ಆಡಿಕೊಂಡು, ಮೊಬೈಲ್ ಹಾಗೂ ಟಿವಿ ನೋಡಿಕೊಂಡು ತಡವಾಗಿ ಮಲಗುತ್ತಾರೆ....! ಇದರಿಂದ ದುಷ್ಪರಿಣಾಮಗಳೇ ಹೆಚ್ಚು. ವಿದ್ಯಾರ್ಥಿಗಳು ಬೆಳಗ್ಗೆ ಬೇಗ ಎದ್ದು ಚುರುಕಾಗಿ ಕೆಲಸವನ್ನು ಆರಂಭಿಸಿದರೆ, ಇಡೀ ದಿನ ತರಗತಿಯಲ್ಲಿ ಹುರುಪಿನಿಂದ ಪಾಠವನ್ನು ಕೇಳಬಹುದು. ಅದೇ ರಾತ್ರಿ ತಡವಾಗಿ ಮಲಗಿದರೆ, ತರಗತಿಯಲ್ಲಿ ಕೂಡ ತೂಕಡಿಸಿಕೊಂಡು ಅರ್ಧ ಕಣ್ಣು ಮುಚ್ಚಿ ಪಾಠ ಕೇಳಬೇಕಾಗುತ್ತದೆ. ಹೀಗೆ ಮಾಡಿದರೆ ಪಾಠದ ಕಡೆ ಗಮನ ಕೊಡಲು ಸಾಧ್ಯವಾಗದೆ , ಎಲ್ಲಾ ವಿದ್ಯಾರ್ಥಿಗಳ ಮುಂದೆ ಅಪಹಾಸ್ಯಕ್ಕೀಡಾಗುವ ತೊಂದರೆಯನ್ನು ನಾವೇ ತಂದುಕೊಂಡಂತಾಗುತ್ತದೆ. ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಇದ್ದರೆ ತಲೆ ನೋವಿನ ಸಮಸ್ಯೆ, ಕಣ್ಣು ನೋವು ಕೂಡಾ ಬರುವುದುಂದು. ಅದಕ್ಕಾಗಿಯೇ ಪ್ರತಿಯೊಬ್ಬರೂ ಹೇಳುವುದು , ಮಕ್ಕಳೇ... ಬೇಗ ಮಲಗಿ ಬೇಗ ಏಳಿ....!!
............................................. ರಮ್ಯ. ಎಮ್
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ, 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article