-->
ಪದಗಳ ಆಟ ಭಾವ ಚಿತ್ರ ಪಾತ್ರ ; ಸಂಚಿಕೆ - 33

ಪದಗಳ ಆಟ ಭಾವ ಚಿತ್ರ ಪಾತ್ರ ; ಸಂಚಿಕೆ - 33

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 33


       ಇವರು ಅವರೇ ಆದರೆ.... ಅವರೇ ಇವರು
           ತನ್ನ ಚೊಚ್ಚಲ ಚಿತ್ರಕ್ಕೆ, ಪ್ರಥಮ ಯತ್ನಕ್ಕೆ 11 ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಎರಡು ಸ್ವರ್ಣ ಪ್ರಶಸ್ತಿ, ಒಟ್ಟು ಜೀವಿತಾವಧಿಯಲ್ಲಿ 36 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಅಂತಾರಾಷ್ಟ್ರೀಯ ಅಕಾಡೆಮಿ ಗೌರವ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಅತ್ಯುಚ್ಛ ಭಾರತ ರತ್ನ ಪ್ರಶಸ್ತಿ ಪಡೆದ, ಸಿನಿಮಾ ಮಾಡಿ - ಮಾಡಿ ದಂತಕಥೆಯಾದ ದೈತ್ಯ ಪ್ರತಿಭೆಯ ಬಗ್ಗೆ ಬರೆಯುತ್ತಿದ್ದೇನೆ.
        ಇವರು ದೈತ್ಯಪ್ರತಿಭೆ ಮಾತ್ರವಲ್ಲ, ಬಹುಮುಖ, ಬಹುಮಾನ್ಯ, ಬಹು ಸಂಗತ ಪ್ರತಿಭೆ. ಇವರು ಕೈಯಾಡಿಸಿದ, ಮಿಂಚಿದ ಕ್ಷೇತ್ರಗಳು..... ಚಿತ್ರಕಲೆ, ಸಾಹಿತ್ಯ, ಮಕ್ಕಳ ಸಾಹಿತ್ಯ, ಚಿತ್ರರಂಗ , ಸಂಗೀತ.... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಒಂದು ಚಿತ್ರರಂಗ ತೆಗೆದುಕೊಂಡರೆ ಅದರಲ್ಲಿ ಸವ್ಯಸಾಚಿ. ಚಿತ್ರನಿರ್ಮಾಪಕ, ನಿರ್ದೇಶಕ, ಕಥೆ ಬರಹಗಾರ, ದೃಶ್ಯ ಬರಹಗಾರ, ಸಾಕ್ಷ ಚಿತ್ರಕಾರ, ಪ್ರಬಂಧಕಾರ , ಸಂಕಲನಕಾರ , ಚಿತ್ರಸಾಹಿತಿ, ಸಂಗೀತ ಸಂಯೋಜಕ ಹೀಗೆ... ಚಲನಚಿತ್ರದ ಕತೆ ಹುಟ್ಟುವಲ್ಲಿಂದ ಹಿಡಿದು ಜನರಿಗೆ ಪರದೆಯಲ್ಲಿ ತಲುಪುವವರೆಗೆ ಇರಬಹುದಾದ ಎಲ್ಲಾ ಕೆಲಸಗಳನ್ನು ಸೃಜನಶೀಲವಾಗಿ ಮಾಡಬಲ್ಲ ದೈತ್ಯಪ್ರತಿಭೆ, ದೈತ್ಯಶಕ್ತಿ.  ಎತ್ತರದ ಸುಂದರ ಕಾಯದಿಂದಲೂ, ತನ್ನ ಬಹುಮುಖಿ ಪ್ರತಿಭೆಯಿಂದಲೂ, ಮಾನವೀಯ ವ್ಯಕ್ತಿತ್ವದಿಂದಲೂ ಎದ್ದುಕಾಣುವ, ಕಾಂತದಂತೆ ಸೆಳೆವ ವ್ಯಕ್ತಿ. ಬಂಗಾಳಿ ದಂಪತಿ ಸುಕುಮಾರ ಮತ್ತು ಸುಪ್ರಭಾ ರೇ ಅವರ ಪುತ್ರ. ಅಜ್ಜ ಉಪೇಂದ್ರ ಕಿಶೋರ್ ರೇ ಬರಹಗಾರ, ತತ್ವಜ್ಞಾನಿ, ಬ್ರಹ್ಮ ಸಮಾಜದ ನಾಯಕ, ಸಮಾಜ ಸುಧಾರಕ, ಪ್ರಿಂಟಿಂಗ್ ಪ್ರೆಸ್ ಮಾಲಕ, ಖಗೋಳಶಾಸ್ತ್ರಜ್ಞ. ತಂದೆಯವರು ಚಿತ್ರ ಕಲೆ ಮತ್ತು ಸಾಹಿತ್ಯದಲ್ಲಿ ಬಹುಶ್ರುತರೇ. ಇಂತಹ ಪ್ರತಿಭಾಸಂಪನ್ನ ಹಿನ್ನೆಲೆಯಿಂದ ಬಂದ ಅಭಿಜಾತ ಪ್ರತಿಭೆ ನಮ್ಮ ಚಲನ ಚಿತ್ರರಂಗದ ಭೀಷ್ಮ. ತಾಯಿ ಕಂಡ ಕನಸಿನಂತೆ ಗುರು ರವೀಂದ್ರನಾಥ ಟಾಗೋರರ ಶಾಂತಿನಿಕೇತನದಲ್ಲಿ ವಿದ್ಯಾಭ್ಯಾಸ. ನಂತರ ವಿಶ್ವಭಾರತಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಕಲಿಕೆ , ವ್ಯಾಸಂಗ. ಚಿತ್ರಗಳ ಕಡೆ ಒಲವು. ಅಜಂತಾ-ಎಲ್ಲೋರ ಗುಹಾಂತರ್ಗತ ದೇವಾಲಯಗಳ ಮೂಲಕ ಸಮೃದ್ಧ, ಅನನ್ಯ ಭಾರತೀಯ ಚಿತ್ರಗಳ ಬಗ್ಗೆ ಅಪಾರ ಪ್ರೀತಿ ಗೌರವ.
         ಆಮ್ ಹಾತಿಕ್.... 'ಮಾವಿನ ಬೀಜದ ಸಿಳ್ಳು' ಎಂಬರ್ಥದ ಪುಸ್ತಕಕ್ಕೆ ಮುಖಪುಟ ಮಾಡುವಾಗ ಆ ಕೃತಿ ಅವರ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಅದೇ ವಿಷಯವನ್ನು ತನ್ನ ಪ್ರಪ್ರಥಮ ಚಲನಚಿತ್ರಕ್ಕೆ ಆಯ್ಕೆಮಾಡಿಕೊಂಡರು. ಅವರು ಆ ಪುಸ್ತಕಕ್ಕೆ ಮಾಡಿದ ಚಿತ್ರಗಳನ್ನು ಸಿನಿಮಾದಲ್ಲಿ ಶಾಟ್ ಗಳಾಗಿ ಬಳಕೆ ಮಾಡಿಕೊಂಡರು. ಅದು ಅನೇಕ ಪ್ರಥಮಗಳನ್ನು ಸೃಷ್ಟಿಸಿತು.
          ವಿದೇಶಿ ಚಿತ್ರನಿರ್ಮಾಪಕ ರೇನಾಯರ್ The River ಎಂಬ ಚಲನ ಚಿತ್ರದ ಶೂಟಿಂಗಿಗೆ ಭಾರತಕ್ಕೆ ಬಂದಾಗ ಇವರು ಲೋಕೇಶನ್ ಆಯ್ಕೆ ಮಾಡಲು ಸಹಾಯ ಮಾಡಿದರು. ಆ ಸಂದರ್ಭ ರೆನಾಯಾರ್ ಇವರ ಕಲ್ಪನೆಗಳನ್ನೆಲ್ಲಾ ಆಲಿಸಿದ ಬಳಿಕ ಪತೆರ್ ಪಾಂಚಾಲಿ ಚಿತ್ರ ನಿರ್ಮಿಸಲು ಪ್ರೋತ್ಸಾಹಿಸಿದರು. ಹಾಗೆ ಲಂಡನಿಗೆ ಹೋಗಲು ಅವಕಾಶ ಪಡೆದುಕೊಂಡರು. ಅಲ್ಲಿ ಆರು ತಿಂಗಳಲ್ಲಿ 99 ಚಲನಚಿತ್ರಗಳನ್ನು ವಿಮರ್ಶಾತ್ಮಕವಾಗಿ ಒಳನೋಟದಿಂದ ಪರಿವೀಕ್ಷಿಸಿ ಸಿನಿಮಾಗಳ ಬಗ್ಗೆ ಗಾಢವಾದ, ತೀವ್ರವಾದ, ಗಂಭೀರ ಅಧ್ಯಯನ ಮಾಡಿದರು. ಅಲ್ಲಿನ ಬೈಸಿಕಲ್ ಕಳ್ಳರು ಚಿತ್ರ ಇವರ ಮೇಲೆ ಗಾಢ, ಅಮೋಘ, ಶಾಶ್ವತ ಪ್ರಭಾವ ಬೀರಿತು. ಚಿತ್ರ ನೋಡಿ ಥಿಯೇಟರ್ ನಿಂದ ಹೊರ ಬರುವಾಗಲೇ ಅವರ ಅಂತರಂಗದೊಳಗೆ ಅತ್ಯುತ್ತಮ ಭಾರತೀಯ ಚಲನಚಿತ್ರ ಮಾಡಿಯೇ ಮಾಡುವೆನೆಂಬ ಕನಸು, ದೃಢ ನಿರ್ಧಾರ ಪ್ರವೇಶಿಸಿ ಮನೆಮಾಡಿತ್ತು. ಆಸಕ್ತಿಯ ಪರಮಾವಧಿಯೇ ಹುಚ್ಚು. ಇಂತಹ ಹುಚ್ಚು ಚಲನಚಿತ್ರದ ಅಮೂಲಾಗ್ರ ಅಧ್ಯಯನಕ್ಕೆ ಅವರಿಗೆ ಪ್ರೇರೇಪಿಸಿತು.
        ಪತೇರ್ ಪಾಂಚಾಲಿ ನಿರ್ಮಾಣಕ್ಕೆ ಬರೋಬ್ಬರಿ ಎರಡೂವರೆ ವರ್ಷ ತೆಗೆದುಕೊಂಡರು. ವ್ಯಾವಹಾರಿಕವಾಗಿ, ವಿಮರ್ಶಾತ್ಮಕವಾಗಿ ಜಯಭೇರಿ ಹೊಡೆದ ಈ ಚಿತ್ರ ಭಾರತೀಯ ಚಲನಚಿತ್ರ ಕಂಡ ಅದ್ಭುತ ವಿದ್ಯಮಾನ. ಬೃಹತ್ ಯಶಸ್ಸು ತಂದ ಹಣದಿಂದ ಮತ್ತೆರಡು ಚಿತ್ರಗಳು ಇದರ ಮುಂದುವರಿದ ಭಾಗವಾಗಿ ಇವರಿಂದ ನಿರ್ಮಾಣಗೊಂಡವು. ಇದು ಅಪ್ಪು ಎಂಬ ಬಡ ಪುರೋಹಿತನ ಮಗನ ಕಥೆ. ಬಾಲ್ಯದಿಂದ ವಯಸ್ಕನಾಗುವವರೆಗೆ, ಚಿಕ್ಕ ಹಳ್ಳಿಯಿಂದ ದೊಡ್ಡ ನಗರಕ್ಕೆ  ಬರುವಲ್ಲಿವರೆಗಿನ ಕಥೆ. ಪುರೋಹಿತ ವೃತ್ತಿಗೆ ತೃಪ್ತನಾಗದೇ ಕಾದಂಬರಿಕಾರನಾಗುವ ಮಹದಾಸೆ, ಮಹತ್ವಾಕಾಂಕ್ಷೆ ಹೊತ್ತ ಪಾತ್ರದ ಮೂಲಕ ಪರಂಪರೆ ಹಾಗೂ ಆಧುನಿಕತೆಯ ನಡುವಿನ ಸಂಘರ್ಷವೇ ಮೂರು ಸಿಕ್ವೆಲ್ ಸಿನಿಮಾಗಳ ವಸ್ತು. ಸಾಂಪ್ರದಾಯಿಕ ನಿರೂಪಣೆಗಿಂತ ಮನೋ ವೈಜ್ಞಾನಿಕತೆಗೆ ಒತ್ತು, ಆದ್ಯತೆ. ಹಾಗಾಗಿ ಅವರ ಚಿತ್ರಗಳೆಂದರೆ ಮಾನವನ ವಿಭಿನ್ನ ಭಾವ ವೈವಿಧ್ಯಗಳ, ತುಮುಲಗಳ, ಸಂಘರ್ಷಗಳ ವಿಶಾಲ ಹರವು ತೆರೆದು ತೋರಿಸುವ ಆಗಸ. ಹಾಸ್ಯ, ಗಾಂಭೀರ್ಯ, ವಿಷಾದ , ಪ್ರೇಮ ಸಂಗೀತ, ಪತ್ತೆದಾರಿ ಹೀಗೆ ಸಮಾಜದ ಎಲ್ಲ ಸ್ತರಗಳ ಎಲ್ಲಾ ರಸಗಳ ವಸ್ತುವನ್ನು ಆರಿಸಿ ತಂದು ಅತ್ಯಂತ ಸೃಜನಶೀಲವಾಗಿ ನೇಯ್ದು ಕೊಟ್ಟರು. ಸಾಮಾನ್ಯ ಪ್ರತಿಭೆ ಮತ್ತು ಸಾಮರ್ಥ್ಯಗಳ ಪಾತ್ರಗಳೇ ಜೀವ ತಳೆಯುತ್ತಿದ್ದ ಅವರ ಚಿತ್ರಗಳು ವೀಕ್ಷಕರನ್ನು ಯೋಚನೆ ಮತ್ತು ಭಾವನೆಗೆ ಹಚ್ಚುತ್ತಿದ್ದವು. ರವೀಂದ್ರನಾಥ ಟಾಗೋರರ ಸಾಹಿತ್ಯದಿಂದ ಗಾಢವಾಗಿ ಪ್ರಭಾವಿತರಾಗಿದ್ದ ಇವರು ಅವರ ಚಾರುಲತಾ, ಸತರಂಗಿ ಕಿಲಾಡಿ ಮುಂತಾದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿ ಭಾರತೀಯ ಚಿತ್ರರಂಗವನ್ನು ಇಡೀ ವಿಶ್ವ ತಿರುಗಿ ನೋಡುವಂತೆ ಮಾಡಿದರು. ತನ್ನನ್ನು ಬೆಳೆಸಿದ ಚಿತ್ರರಂಗಕ್ಕೆ ಬೇರೆ ಯಾರೂ ನೀಡದಷ್ಟು ಅಪೂರ್ವ, ಅಮರ ಋಣ ಸಂದಾಯ ಮಾಡಿದ ಅಪರಂಜಿ ಇವರು. ಬಂಗಾಳದ ಬೌದ್ಧಿಕ, ನೈತಿಕ ಪತನವನ್ನು ಯಾವತ್ತು ಪ್ರತಿಭಟಿಸುತ್ತಿದ್ದ ಅವರ ನಿಲುವು ಎಲ್ಲಾ ಚಲನಚಿತ್ರಗಳಲ್ಲೂ ಪ್ರತಿಫಲಿಸುತ್ತಿತ್ತು.
           ಚಲನಚಿತ್ರವಲ್ಲದೆ ಮಕ್ಕಳ ಸಾಹಿತ್ಯ, ವಯಸ್ಕ ಸಾಹಿತ್ಯದಲ್ಲಿ ಅಪಾರ ಕೆಲಸ ಮಾಡಿದ ಇವರ ಕಥೆ-ಕಾದಂಬರಿಗಳು ಯುರೋಪ್, ಅಮೆರಿಕ ಮುಂತಾದ ದೇಶಗಳಲ್ಲಿ ಅನೇಕ ಭಾಷೆಗಳಿಗೆ ಭಾಷಾಂತರಗೊಂಡು ವಿಮರ್ಶಕರ ಮೆಚ್ಚುಗೆಗೆ, ಶ್ಲಾಘನೆಗೆ , ಪ್ರಶಂಸೆಗೆ ಪಾತ್ರವಾಗಿವೆ. ಇವರ ಚಿತ್ರಗಳು ಸಾಮಾನ್ಯರ ಬಗ್ಗೆ ಮಾಡಿದ ಅಸಾಮಾನ್ಯ ಚಿತ್ರಗಳು. ಇವರ ಚಲನಚಿತ್ರಗಳದ್ದೇ ಒಂದು ದೊಡ್ಡ ಪ್ರಪಂಚ. ವಿದೇಶಿ ಚಿತ್ರ ವಿಮರ್ಶಕರು ಅವರನ್ನು 'ಜಾಯಿಂಟ್ ಆಫ್ ಫಿಲಂ ಇಂಡಸ್ಟ್ರಿ' ಎಂದು ದಿಟವಾಗಿ, ಸತ್ಯವಾಗಿಯೇ ಗುರುತಿಸಿದ್ದಾರೆ. ಅವರು ಕಾಣಿಸಿದ ಸಮಾಜದ ಸತ್ಯಗಳು ಚಿತ್ತಭಿತ್ತಿಯಲ್ಲಿ ಚಿತ್ತಾಪಹಾರಿಗಳಾಗಿ, ಮನೋಜ್ಞ ಚಿತ್ರಗಳಾಗಿ ಆಚಂದ್ರಾರ್ಕ ಪರ್ಯಂತ ಮೆರೆಯುತ್ತದೆ. ಅವರ ಚಿತ್ರಗಳ ವರ್ಣರಂಜಿತ ಲೋಕದಲ್ಲಿ ನಾವು ಬೌದ್ಧಿಕತೆ, ಭಾವುಕತೆ, ಚಿಂತನೆಗಳ ಸಹಪಯಣಿಗರಾಗೋಣ.
ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************


Ads on article

Advertise in articles 1

advertising articles 2

Advertise under the article