-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 35

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 35

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 35
   


                ಮಾದೇಶನ ಸಮುದ್ರ ಕತೆ ....
              -------------------------------
      ತರಬೇತಿಯ ಕೊನೆಗೋರ್ವ ನನ್ನ ಬಳಿ ಬಂದು "ಸರ್ , ನನಗೆ ಬದುಕೇ ಬೇಡವಾಗಿದೆ. ನಾನು ಯೂಸ್ ಆ್ಯಂಡ್ ತ್ರೋ (ಬಳಸಿ ಬಿಸಾಡು) ಆಗುತ್ತಿದ್ದೇನೋ ಎಂಬ ಭಾವ ಉಂಟಾಗಿದೆ. ನಾನು ನಂಬಿದವರೆಲ್ಲಾ ಕೈಕೊಡುತ್ತಿದ್ದಾರೆ. ಎಲ್ಲರಿಗೂ ಸಹಾಯ ಮಾಡಿದರೂ ನನ್ನ ಕಷ್ಟ ಕಾಲದಲ್ಲಿ ಯಾರೂ ಇಲ್ಲವಾಗಿದ್ದಾರೆ. ನಂಬಿಕೆಗೆ ಬೆಲೆ ಇಲ್ಲದಾಗಿದೆ. ಅವರವರ ಸ್ವಾರ್ಥಕ್ಕೆ ನನ್ನನ್ನು ಉಪಯೋಗಿಸಿ ಈಗ ಕೈ ಬಿಟ್ಟು ಹೋಗುತ್ತಿದ್ದಾರೆ. ಬದುಕೇ ಬರಡಾಗಿದೆ. ಇದರಿಂದ ಪಾರಾಗುವ ಬಗೆ ಹೇಗೆ......? ನಾನು ಮತ್ತೆ ಮರಳಿ ಮೊದಲಿನಂತಾಗಬೇಕು. ನಾನು ಮೊದಲಿನಂತಾಗುವೆನೇ..... ಸರ್..... ಪ್ಲೀಸ್...! ಏನಾದರೂ ಹೇಳಿ ಸರ್.....? ಎಂದ. ಅವನಿಗೆ "ನೀನು ಮಾದೇಶನಾಗು.... ಸಮುದ್ರವಾಗು.." ಎಂದೆ. ನಾನು ಮಾದೇಶನ ಕತೆ ಹೇಳಿ ಸ್ಫೂರ್ತಿ ನೀಡಿದೆ.
       ಮಾದೇಶ ಒಬ್ಬ ಸಮುದ್ರ ಬದಿಯಲ್ಲಿ ಬಣ್ಣ ಬಣ್ಣದ ಬಲೂನು ಹಾಗೂ ಆಟಿಕೆಗಳನ್ನು ಮಾರುವ 26 ವರ್ಷದ ಯುವಕ. ಸುಮಾರು ಹತ್ತು ವರುಷಗಳಿಂದ ಅದೇ ಕೆಲಸದ ಅನುಭವ. ಕೆಲವೊಮ್ಮೆ ನೂರು ರೂಪಾಯಿ. ಕೆಲವೊಮ್ಮೆ ಐದುನೂರು ರೂಪಾಯಿಗಳು. ಕೆಲವೊಮ್ಮೆ ಬರಿಗೈ ವ್ಯಾಪಾರ. ನಾನು ಅವನನ್ನು ಭೇಟಿಯಾದ ದಿನ ಕೇವಲ 50 ರೂಪಾಯಿಗಳ ವ್ಯಾಪರವಾಗಿತ್ತು. ಆತ ಮತ್ತೆ ಮತ್ತೆ ವ್ಯಾಪರ ಮಾಡಲು ಗಿರಾಕಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದ . ಅವನೆಂದೂ ತನ್ನ ವೃತ್ತಿಯಲ್ಲಿ ನಿರಾಶನಾದವನಂತೆ ಕಾಣುತಿರಲಿಲ್ಲ. ಅವನಲ್ಲಿ ಆತ್ಮೀಯವಾಗಿ ಮಾತಾಡಿ "ಹತ್ತಾರು ವರುಷಗಳಿಂದ ವ್ಯಾಪರ ಮಾಡಿದರೂ ಹೆಚ್ಚೇನು ಲಾಭವಾಗದಿದ್ದರೂ ಮತ್ತೇಕೆ ಇದರಲ್ಲಿ ಮುಂದುವರೆಯುತ್ತಿರುವೆ. ಬೇರೆ ವ್ಯಾಪಾರ ಮಾಡಬಹುದಲ್ಲವೇ.....?" ಎಂದೆ. ಅದಕ್ಕೆ ಅವನು "ಸರ್ ಹಾಗೇನಿಲ್ಲ... ನಾನು ಪ್ರತಿ ದಿನ ಸಮುದ್ರ ನೋಡಿ ಬೆಳೆದವ. ಅದೇ ನನಗೆ ಸ್ಫೂರ್ತಿ. ನಾನು ಸದಾ ಸಮುದ್ರದಂತೆ ಇರುವವ. ಸಮುದ್ರ ಎಂಬುದು ಯಾವುದಕ್ಕೂ ಜಗ್ಗದೆ ಕುಗ್ಗದೆ ಸದಾ ಶಾಂತವಾಗಿ ಸ್ಥಿರವಾಗಿ ಇರುತ್ತದೆ. ಅದರ ಮೇಲೆ ದೋಣಿಗಾರರು ಮತ್ತು ಹಡಗುದಾರರು ತಮ್ಮ ಜೀವನಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಕೆಲವರು ಈಜಾಡಿ ಮನರಂಜನೆ ಪಡೆಯುತ್ತಾರೆ. ಕೆಲವರು ಹೊಟ್ಟೆಪಾಡಿಗಾಗಿ ತಿಂಡಿ - ಕ್ರಾಫ್ಟ್ ವಸ್ತುಗಳನ್ನು ಮಾರಾಟ ಮಾಡಿ ತನ್ನ ಜೀವನ ಸಾಗಿಸುತ್ತಾರೆ. ಕೆಲವರು ನೀರಿನಾಟಕ್ಕೆ ಹೆದರಿ ದಡದಲ್ಲಿ ಕುಳಿತು ದೃಶ್ಯ ವೀಕ್ಷಣೆ ಮಾಡುತ್ತಾರೆ. ಕೆಲವರು ಮರಳ ದಂಡೆಯಲ್ಲಿ ಮರಳಿನಾಟ ಆಡುತ್ತಾರೆ. ಕೆಲವರು ಸಮುದ್ರದಿಂದ ಮೀನುಗಾರಿಕೆ ಅಥವಾ ಇನ್ನಾವುದೇ ಸಂಪನ್ಮೂಲಗಳನ್ನು ಮಾತ್ರ ಬಳಸಿ ಬದುಕುತ್ತಾರೆ. ಕೆಲವರು ಸಮುದ್ರದಿಂದ ಸಿಗಬಹುದಾದ ಸ್ವಾರ್ಥ ಲಾಭದ ಲೆಕ್ಕಾಚಾರ ಮಾತ್ರ ಮಾಡುತ್ತಾರೆ . ಕೆಲವರು ಕೈಗಾರಿಕಾ ತ್ಯಾಜ್ಯ , ಚರಂಡಿ ತ್ಯಾಜ್ಯ , ಅಪಾಯಕಾರಿ ತ್ಯಾಜ್ಯಗಳನ್ನು ಬಿಸಾಡುವ ಕಸದ ಬುಟ್ಟಿಯನ್ನಾಗಿ ಮಾಡುತ್ತಾರೆ. ಹೀಗೆ ನೂರಾರು ಮನಗಳಿಗೆ ನೂರಾರು ದೃಷ್ಟಿಕೋನದಲ್ಲಿ ಸಮುದ್ರ ಬಳಸಲ್ಪಡುತ್ತದೆ. ಆದರೆ ಸಮುದ್ರ ಇದ್ಯಾವುದರಿಂದ ವಿಚಲಿತವಾಗದೆ ತನ್ನ ಪಾಡಿಗೆ ದಿನನಿತ್ಯದ ಕೆಲಸಕಾರ್ಯಗಳನ್ನು ಮಾಡುತಿರುತ್ತದೆ. ಅದೇ ರೀತಿ ನಾನು ಮಾಡುವ ವ್ಯಾಪರ ಕೂಡಾ ಸಮುದ್ರದಂತೆ. ಕೆಲವು ಗ್ರಾಹಕರು ನಮ್ಮನ್ನು ಬಳಸಿಕೊಂಡು ಜೀವನ ನಡೆಸುವವರಿದ್ದಾರೆ. ನನ್ನ ಜತೆ ಮನರಂಜನೆ ಪಡೆಯುವರಿದ್ದಾರೆ. ಬಲೂನು ಮತ್ತು ಆಟಿಕೆ ತಯಾರಿಸುವವರು ನನ್ನಂತಹ ಹಲವಾರು ಜನರನ್ನು ನಂಬಿ ಬದುಕು ನಡೆಸುತ್ತಾರೆ. ಕೆಲವರು ನನ್ನನ್ನು ಅವರ ತಮಾಷೆಗೆ ಬಳಸಿ ಆಟ ಆಡುತ್ತಾರೆ. ಕೆಲವರು ಚೌಕಾಸಿ ಮಾಡಿ ಕೊನೆಗೆ ವ್ಯಾಪಾರ ಮಾಡದೆ ವಿನಾ ಕಾರಣ ಬೈಯುತ್ತಾರೆ. ಕೆಲವರು ನನ್ನಲ್ಲಿ ಕೇವಲ ಅವರ ಟೈಂಪಾಸ್ ಗಾಗಿ ಚರ್ಚೆ ಮಾಡುತ್ತಾರೆ. ಕೆಲವರಿಗೆ ನಾವು ಯೂಸ್ ಆ್ಯಂಡ್ ತ್ರೊ ವಸ್ತುಗಳಿದ್ದಂತೆ. ಅವರ ಏಣಿಗೆ ನಮ್ಮನ್ನು ಹಲಗೆಯನ್ನಾಗಿ ಬಳಸಿ ಬಿಸಾಕುವವರಿದ್ದಾರೆ. ಕೆಲವರಿಗೆ ನಾವು ವೇಸ್ಟ್ ಬಾಡಿಗಳು (ವ್ಯರ್ಥ ಜೀವಿಗಳು). ಆದರೂ ಇದ್ಯಾವುದಕ್ಕೂ ಬೇಸರಿಸದೆ ವ್ಯಾಪರವನ್ನೇ ಗುರಿಯಲ್ಲಿಟ್ಟುಕೊಂಡು ಬದುಕುತ್ತಿದ್ದೇನೆ. ವ್ಯಾಪರವಾಗಲಿ... ಆಗದಿರಲಿ... ಸದಾ... ಆಶಾಭಾವದಿಂದ ಜೀವನ ಮುಂದುವರೆಸುತ್ತಿದ್ದೇನೆ. ನಿರಾಶಾಭಾವ ಹುಟ್ಟಿದರೆ ಬದುಕು ಚಿಂತೆಯ ಚಿತೆಯಾಗಿಬಿಡುತ್ತದೆ. ಅದಕ್ಕೆ ಸದಾ ಆಶಾವಾದಿಯಾಗಿದ್ದೇನೆ" ಎಂದನು.
           ಹೌದಲ್ಲವೇ.....!! ನಮ್ಮ ಬದುಕನ್ನು ಕೂಡಾ ನಾವು ಮಾದೇಶ ಹೇಳಿದಂತೆ ಸಮುದ್ರದ ತರಹ ಇಟ್ಟುಕೊಂಡರೆ ಉಚಿತವಲ್ಲವೇ. ಬದುಕು ಕೂಡಾ ಸಮುದ್ರದಂತೆ ವಿಸ್ತಾರವೂ ಆಳವೂ ಆಗಿದೆ. ಬದುಕು ಕ್ಷಣಿಕವಲ್ಲ. ದೀರ್ಘಾವಧಿ ಪಯಣ. ಇಲ್ಲಿ ಅಲೆಗಳಂತೆ ಸದಾ ಏರಿಳಿತಗಳು ಇದ್ದೇ ಇರುತ್ತದೆ. ಆದರೆ ಇಳಿತದ ಬೆನ್ನಲೇ ಉಬ್ಬರ ಇದೆ ಎಂಬುದು ಸದಾ ನೆನಪಿರಲಿ. ಕಷ್ಟದ ನಂತರ ಸುಖ.... ಸಮಸ್ಯೆಯ ನಂತರ ಪರಿಹಾರ... ನಿರಾಶೆಯ ನಂತರ ನಲಿವು ಸದಾ ಇದ್ದೇ ಇರುತ್ತದೆ. ಈ ಪಯಣದಲ್ಲಿ ಏನಾದರೂ ಹೇಗಾದರೂ ಸ್ಥಿರವಾಗಿ ಬದುಕುವುದನ್ನು ಕಲಿಯೋಣ. ಅಂಜದೇ ಅಳುಕದೇ ಬದುಕು ಸಾಗಿಸಬೇಕಾಗಿದೆ. ಸಮುದ್ರದಂತೆ ವಿಶಾಲವಾಗಿ ನಮ್ಮನ್ನು ನಾವು ತೆರೆದಿಟ್ಟುಕೊಂಡರೆ ಸುಖಗಳೆಂಬ ನದಿಗಳು ತನ್ನಿಂದ ತಾನೇ ಬಂದು ಸೇರಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಏನೇ ಇರಲಿ ಏನೇ ಬರಲಿ ಸದಾ ಸ್ಥಿರವಾಗಿ ನಮ್ಮನ್ನು ನಾವು ಮುನ್ನಡೆಸೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************Ads on article

Advertise in articles 1

advertising articles 2

Advertise under the article