
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 37
Wednesday, March 16, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 37
ಸಕರಾತ್ಮಕ ಬದಲಾವಣೆ ಎಂದರೆ ....
------------------------------------------
ಆತನೊಬ್ಬ ಪ್ರಸಿದ್ಧ ವಿಂಬಲ್ಡನ್ ಟೆನಿಸ್ ಆಟಗಾರ. ಅವನಿಗೊಂದು ದಿನ ಹೃದಯ ಚಿಕಿತ್ಸೆ ಮಾಡುವಾಗ ಆಕಸ್ಮಿಕವಾಗಿ ಏಡ್ಸ್ ರೋಗಿಯ ರಕ್ತ ಸೇರಿ ಏಡ್ಸ್ ಪೀಡಿತನಾದ. ತಾನೊಬ್ಬ ಏಡ್ಸ್ ರೋಗಿ ಎಂದು ಗೊತ್ತಾದರೂ ಆತ ಅದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ ಸಹಜ ಬದುಕು ಸಾಗಿಸುತ್ತಿದ್ದನು. ಆದರೆ ಅವನ ಅಭಿಮಾನಿಗಳು ಆತನ ಅನಾರೋಗ್ಯದ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದರು. ಅವರಲ್ಲಿ ಒಬ್ಬನು ಆತನ ಬಳಿ ಬಂದು "ಅಯ್ಯೋ ದೇವರೇ , ನೀನೆಂತಹ ಕಟುಕ. ಜಗತ್ತನ್ನೇ ಗೆದ್ದಂತಹ ಪ್ರಸಿದ್ಧ ಆಟಗಾರನಿಗೆ ಏಡ್ಸ್ ರೋಗ ಕೊಟ್ಟೆಯಲ್ಲ...? ಅವನು ಮಾಡಿದ ತಪ್ಪಾದರೂ ಏನು...?" ಎಂದನು.
ಅದನ್ನು ಕೇಳಿ ಆತ ನಗುತ್ತಾ ಹೇಳಿದ "ಅಯ್ಯಾ ಅಭಿಮಾನಿ, ನಿನಗೆ ತಿಳಿದಂತೆ ಜಗತ್ತಿನಲ್ಲಿ ಹತ್ತಾರು ಕೋಟಿ ಜನರು ಟೆನ್ನಿಸ್ ಆಡುತ್ತಾರೆ. ಆ ಪೈಕಿ ಅಂದಾಜು 1 ಕೋಟಿ ಜನರು ವೃತ್ತಿಪರ ಆಟಗಾರರು ಇರಬಹುದು. ಅದರಲ್ಲಿ 20,000 ಜನರಿಗೆ ಮಾತ್ರ ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಅದರಲ್ಲಿ ಕೇವಲ 50 ಮಂದಿ ಮಾತ್ರ ವಿಂಬಲ್ಡನ್ ಆಡಲು ಆಯ್ಕೆಯಾಗುತ್ತಾರೆ. ಅವರಲ್ಲಿ 4 ಮಂದಿ ಮಾತ್ರ
ಸೆಮಿ ಫೈನಲ್ ಗೆ ಆಯ್ಕೆಯಾಗುತ್ತಾರೆ. ಗೆದ್ದ ಇಬ್ಬರು ಕೊನೆಗೆ ಫೈನಲ್ ಆಡಿ ಕೊನೆಗೆ ಒಬ್ಬ ಮಾತ್ರ ಪ್ರಶಸ್ತಿ ಕಿರೀಟದ ವಿಜೇತನಾಗುತ್ತಾನೆ. ಆ ಪ್ರಶಸ್ತಿ ಗೆದ್ದಾಗ ಕೋಟಿಗಟ್ಟಲೇ ಆಟಗಾರರ ಮಧ್ಯೆ ನನ್ನನ್ನೇ ಏಕೆ ಗೆಲ್ಲಿಸಿದೆ....? ಎಂದು ದೇವರಲ್ಲಿ ನಾನು ಕೇಳಲಿಲ್ಲ. ಈಗ ಏಡ್ಸ್ ಬಂದಾಗ ನಾನು ಹೇಗೆ ಪ್ರಶ್ನಿಸಲಿ...? ಗೆದ್ದಾಗ ಇಲ್ಲದ ದೇವರ ನೆನಪನ್ನು ಸೋತಾಗ ಹೇಗೆ ಪ್ರಶ್ನಿಸಲಿ.... ಬದುಕಿಗೆ ಬಂದಿರುವುದನ್ನು ಸ್ವೀಕರಿಸುತ್ತೇನೆ. ಧೈರ್ಯದಿಂದ ಎದುರಿಸುತ್ತೇನೆ. ದೇವರು ಕೈ ಬಿಡೊಲ್ಲ" ಎಂದು ನಗುತ್ತಾ ಹೇಳಿದನು.
ಅಬ್ಬಾ ಎಂಥಹಾ ಸಕಾರತ್ಮಕ ಭಾವ...!! ಕೆಲವೊಮ್ಮೆ ನಾವು ಬದುಕಿನಲ್ಲಿ ಗೆದ್ದಾಗ ಬೀಗುತ್ತೇವೆ ಆದರೆ ಬಾಗುವುದಿಲ್ಲ. ಗೆಲುವನ್ನು ಸಂಭ್ರಮಿಸುತ್ತೇವೆ. ಆದರೆ ಕಾರಣರಾದವರನ್ನು ಗುರುತಿಸುವುದಿಲ್ಲ..... ಸೋತಾಗ ಇನ್ನೊಬ್ಬರನ್ನು ಕಾರಣೀಕರಿಸುತ್ತೇವೆ. ಗೆಲುವಿಗೆ ಸಾವಿರಾರು ಅಪ್ಪಂದಿರು ಆದರೆ ಸೋಲಿಗೆ ನೀನೊಬ್ಬನೆ ಅಪ್ಪ..!! ಎಂಬ ವಾಸ್ತವ ಕಟು ಸತ್ಯದ ಮಧ್ಯೆ ಸೋಲನ್ನು ಸೋಲಿಸಲು ಇಂಥಹ ಸಕರಾತ್ಮಕ ಭಾವ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಬನ್ನಿ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************