-->
ಓ ಮುದ್ದು ಮನಸೇ ...…...! ಸಂಚಿಕೆ -17

ಓ ಮುದ್ದು ಮನಸೇ ...…...! ಸಂಚಿಕೆ -17

ಓ ಮುದ್ದು ಮನಸೇ ...…...! ಸಂಚಿಕೆ -17

 ಸಮಸ್ಯೆಗೆ ಒಡ್ಡಿಕೊಳ್ಳುವ ಪ್ರವೃತ್ತಿ ಮತ್ತು ತಾರುಣ್ಯ...!!
           ಇತ್ತೀಚೆಗೆ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಟ್ಟಿಗಿನ ಆಪ್ತ ಸಮಾಲೋಚನೆಯಲ್ಲಿ ತೆರೆದುಕೊಂಡ ವಿಚಾರಗಳು ನನ್ನನ್ನು ಸ್ನಿಗ್ಧನನ್ನಾಗಿಯೂ ಮತ್ತು ಅತೀವ ದುಖಿತನನ್ನಾಗಿಯೂ ಮಾಡಿಬಿಟ್ಟಿದ್ದವು.! ಕಿವಿಯಾಲೆಯಲ್ಲಿ ನುಸುಳಿದ ಆ ಪಿಸುಮಾತುಗಳು ಇವತ್ತಿನ ಟೆಕ್ ಜೆನರೇಷನ್ನಿನ ಪಾಲಕರ ಮನದಾಳದ ಸಂಕಟವನ್ನು ಕಣ್ಣ ಮುಂದೆ ಕಟ್ಟಿಕೊಟ್ಟವು.
         ಊಟ ಮಾಡುವಾಗ, ತಿಂಡಿ ತಿನ್ನುವಾಗ, ಮಲಗುವಾಗ ಮತ್ತು ಓದುವಾಗ ದಿನವಿಡೀ ಕೈಯ್ಯಲ್ಲೇ ಕುಣಿದಾಡುತ್ತಿದ್ದ ಮೊಬೈಲ್ ಫೋನ್ ತಾರುಣ್ಯದ ಗೆಳೆಯ ಗೆಳತಿಯರೊಟ್ಟಿಗೆ ಸಂಪರ್ಕ ಸಾಧಿಸಲು ಸುಲಭ ಸೇತುವೆಯಾಗಿತ್ತು. ಒಂದು ಬದಿಯಲ್ಲಿ ಆನ್ ಲೈನ್ ತರಗತಿಗಳು ಇನ್ನೊಂದು ಬದಿ ಗೆಳೆಯರೊಟ್ಟಿಗಿನ ಚಾಟಿಂಗ್..! ಎಲ್ಲವೂ ಹೊಸತು, ಅದೇನೋ ಒಂತರಾ ಖುಷಿ..! ಒಮ್ಮೆ ಗೆಳತಿಯೊಬ್ಬಳು ಕರೆ ಮಾಡಿ ಅಂದಳು ಪ್ರೀತಮ್ (ಹೆಸರು ಬದಲಿಸಲಾಗಿದೆ) ನಿನ್ನ ಬಗ್ಗೆ ಕೇಳ್ತಾ ಇದ್ದ. ಯಾಕೆ ಅಂತ ಗೊತ್ತಿಲ್ಲ ನಿನ್ನ ನಂಬರ್ ಬೇಕಂತೆ ಅವನಿಗೆ. ಕೊಟ್ಟು ಬಿಡೋಣ ಅಂತ ಮನಸ್ಸು ಆದರೂ ಹಿಂಜರಿಕೆ, ಹಾಗಂತ ಕೊಡಬೇಡಾ ಅನ್ನೋಕೂ ಮನಸ್ಸಿಲ್ಲ. ನನ್ನ ನಂಬರ್ ಯಾಕಂತೆ ಅವನಿಗೆ? ಅದನ್ನ ನೀನೆ ಅವನಲ್ಲಿ ಕೇಳು, ನಾನಿಲ್ಲಪ್ಪಾ ನಿಮ್ಮಿಬ್ಬರ ನಡುವಲ್ಲಿ ಅಂದಳು ಗೆಳತಿ. "ನಿಮ್ಮಿಬ್ಬರ ನಡುವಲ್ಲಿ ಅಂದರೆ ಏನರ್ಥ...?" ಆಸಕ್ತಿ ಇಮ್ಮಡಿಸಿತು. ಸರಿ ಹಾಗಿದ್ರೆ ನಂಬರ್ ಕೊಡು, ಆದ್ರೆ ಬೆರೆ ಯಾರಿಗೂ ಕೊಡ್ಬೇಡಾ ಅಂತ ಹೇಳು ಸರೀನಾ. ಹಾಯ್ ಸಂಜನಾ (ಹೆಸರು ಬದಲಿಸಲಾಗಿದೆ) ಕ್ಷಣಮಾತ್ರದಲ್ಲಿ ಮೆಸೇಜ್ ಬಂತು, ಘಂಟೆಗಟ್ಟಲೆ ಚಾಟಿಂಗ್, ಒಮ್ಮೆ ಕಾಲ್ ಮಾಡಿದ್ರೆ ಅಮ್ಮ ಊಟಕ್ಕೆ ಕರೇಯೋ ತನಕ ಕೋಣೆಯಿಂದ ಹೊರಬರುವ ಸಂಭವವೇ ಇಲ್ಲ. ಅಮ್ಮನ ಬೈಗುಳಗಳು ಹಾಗೆ ಬಂದು ಹೀಗೆ ಹೋಗುತ್ತಿದ್ದವಷ್ಟೇ....! ಎರಡ್ಮೂರು ದಿನಗಳ ನಂತರ ಕರೆ ಮಾಡಿದ ಗೆಳತಿಯಂದಳು "ಏನೇ ಮಾರಾಯ್ತಿ ಯಾವಾಗ ಕಾಲ್ ಮಾಡಿದ್ರೂ ಬ್ಯುಸಿ ಬರ್ತಿದೆ ಏನ್ ಸಮಾಚಾರ.....? ಹಾಗೇನಿಲ್ಲ ಮನೆ ಹತ್ರ ನೆಟ್ವರ್ಕ್ ಸರಿಯಾಗಿ ಸಿಕ್ತಿಲ್ಲ ಎನ್ನುವ ಕತೆ ಇವಳದ್ದು. ಚಾಟಿಂಗ್ ಮತ್ತು ವಾಯ್ಸ್ ಕಾಲ್ ಗೆ ಸೀಮಿತವಾಗಿದ್ದ ಗೆಳೆತನ ವಿಡಿಯೋ ಕರೆಗೆ ತಲುಪಿತು. ತಾರುಣ್ಯದ ಎಲ್ಲಾ ತುಮುಲಗಳು ಪರಸ್ಪರ ವಿನಿಮಯಗೊಂಡವು, ಕದ್ದು ಮುಚ್ಚಿ ಮಾತಾಡೋದೆ ಒಂಥರಾ ಚೆಂದ....!
      ಈ ಚೆಂದ.... ಬದುಕಿನ ಇತಿ ಮಿತಿಯೊಳಗಿದ್ದರೆ ಎಲ್ಲವೂ ಸುಸೂತ್ರ ಇಲ್ಲದಿದ್ದರೆ..? ಪ್ರೀತಮ್ ಸಲುಗೆ ಬಹಳ ದಿನ ಮುಂದುವರಿಯಲಿಲ್ಲ. ಅವನಲ್ಲಿಟ್ಟಿದ್ದ ನಂಬಿಕೆ ಮರಳುಗಾಡಿನ ಮರೀಚಿಕೆಯಾಗಿದೆ. ಅವನ ಮಾತುಗಳು ದಾರಿತಪ್ಪುತ್ತಿವೆ, ಅದೇನೋ ಗೊಂದಲ...! ಇವನ ಸಹವಾಸವೇ ಸಾಕು ಎನಿಸಿದರೂ ಈ ಮಾನಸಿಕ ಸಂಕೋಲೆಯಿಂದ ಹೊರಬರಲಾರದೆ ಚಡಪಡಿಸಿದಳು ಸಂಜನಾ. ಗೆಳೆಯರಂದರು ಅವನ ಕಾಲ್ ರಿಸೀವ್ ಮಾಡ್ಬೇಡಾ, ನಂಬರ್ ಬ್ಲಾಕ್ ಮಾಡಿಬಿಡು. ಇಂತಹ ಪ್ರಯತ್ನಗಳು ಪ್ರೀತಮ್ ನನ್ನು ಮತ್ತಷ್ಟು ಕೋಪಕ್ಕೆ ಗುರಿಮಾಡಿದವು ಹಾಗಂತ ಅವನೇನೂ ಕೆಟ್ಟವನಲ್ಲ ತಾರುಣ್ಯದ ತಳಮಳವಷ್ಟೇ ಅವನದು. ಒಂದಿನ ಅವನ ಮೊಭೈಲ್ ಸ್ವಿಚ್ ಆಫ್ ಆಯಿತು. ಅದೆಷ್ಟು ಪ್ರಯತ್ನಿಸಿದರೂ ಆನ್ ಆಗಲಿಲ್ಲ. ರಿಪೇರಿಯವನ ಸಲಹೆಯಂತೆ ತನ್ನ ಮೊಬೈಲ್ ಅವನಲ್ಲಿಟ್ಟು ಬಂದ. ರಿಪೇರಿಯವನು ಮೊಬೈಲ್ ಅನ್ನು ಸರಿಪಡಿಸಿ ಅದರಲ್ಲಿನ ಫೋಟೋ ಗ್ಯಾಲರಿಯನ್ನು ಇಣುಕಿದ, ನೂರಾರು ಬೆತ್ತಲೆ ಫೋಟೋಸ್ ಗಳು.....! ವಿಡಿಯೋಸ್ ಗಳು......!
          ಮಾರನೇ ದಿನದಿಂದ ಈ ಹುಡುಗಿಗೆ ಬೇರೆ ಬೇರೆ ನಂಬರ್ ನಿಂದ ಕಾಲ್ ಬರೋದಕ್ಕೆ ಶುರುವಾಯಿತು. ಯಾರೆಂದು ಗೊತ್ತಿಲ್ಲ, ಅಸಭ್ಯ ಮಾತು, ಕೆಟ್ಟ ವರ್ತನೆ. ಯಾವಾಗ ಸಿಕ್ತೀಯಾ? ವಿಡಿಯೋ ಕಾಲ್ ಮಾಡ್ಲಾ? ಯಾರೋ ನೀನು? ಮತ್ತೊಮ್ಮೆ ಕಾಲ್ ಮಾಡಿದ್ರೆ ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ಗದರಿದಳು ಸಂಜನಾ. ಕಂಪ್ಲೇಂಟ್ ಕೊಡ್ತೀಯಾ ಒಮ್ಮೆ ನಿನ್ನ ವಾಟ್ಸಾಪ್ ನೋಡು ಆಮೇಲೆ ಕಂಪ್ಲೇಂಟ್ ಕೊಡು. ಸಂಜನಾಳಿಗೆ ಗಾಬರಿಯಾಯಿತು..!
         ಕಣ್ಣೀರು ಧಾರಾಕಾರವಾಗಿ ಹರಿಯಿತು. ಭಯ ಬೇಡಾ, ನಾನಿದ್ದೀನಿ ನಿನ್ನ ಜೊತೆ ಏನಿತ್ತು ವಾಟ್ಸಾಪ್ ನಲ್ಲಿ, ಸರಿಯಾಗಿ ಹೇಳು...? ಅಂದೆ. ಅವಳಂದಳು, ಮತ್ತೇನಿರತ್ತೆ ಸರ್ ಅದೇ ಬೆತ್ತಲೆ ಪೋಟೋಸ್...! ಅವು ನಿನ್ನ ಫೋಟೋಸ್ಗಳಾ....? ಸಂಜನಾಳ ಮುಖ ಬಾಡಿತು.....!
         ಕ್ರೈಂ ರೆಕಾರ್ಡ್ಸ್ ಆಫ್ ಬ್ಯೂರೋ ದ ಪ್ರಕಾರ 2020 ರೊಂದರಲ್ಲೇ ಭಾರತದಾದ್ಯಂತ 26808 ಹೆಣ್ಣುಮಕ್ಕಳು ಮತ್ತು ಮಹಿಳೆಯರು ಹತ್ತಿರದ ಪರಿಚಯಸ್ತರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ 10751 ಹೆಣ್ಣುಮಕ್ಕಳು ಆಲ್ ಲೈನ್ ಗೆಳೆಯರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಅಜಾಗರೂಕತೆ ಮತ್ತು ಮೈಮರೆಯುವಿಕೆ ನಮ್ಮನ್ನು ನಾವೆ ಅಪಾಯಕ್ಕೆ ನೂಕಿಕೊಳ್ಳುವಂತೆ ಮಾಡುತ್ತದೆ. ಸಂಜನಾಳದ್ದು ಕೇವಲ ಒಂದು ನಿದರ್ಶನವಷ್ಟೇ. ಪ್ರತಿನಿತ್ಯ ಅದೆಷ್ಟೋ ಹೆಣ್ಣು ಮಕ್ಕಳು ಇಂತಹ ಸಂಕಟದ ಸುಳಿಯಲ್ಲಿ ಸಿಕ್ಕು ಹೊರಬರಲಾರದೆ ನಲುಗುತ್ತಿದ್ದಾರೆ. ಸಮರ್ಪಕ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ಸಮಯಕ್ಕೆ ಸರಿಯಾದ ಜಾಗೃತೆ ವಹಿಸುವಲ್ಲಿ ಮತ್ತು ಬದುಕಿನ ಮೌಲ್ಯವನ್ನು ಅರಿಯುವಲ್ಲಿ ವಿಫಲವಾದಾಗ ಕಷ್ಟಗಳು ಕಟ್ಟಿಟ್ಟ ಬುತ್ತಿ. ಕ್ಷಣಿಕ ಆನಂದಕ್ಕಾಗಿ ಮೈಮರೆಯುವ ಮನಸ್ಸುಗಳಿಗೆ ಸಂಜನಾ ಒಂದು ಪಾಠವಾಗಲಿ. ಉತ್ತಮ ನಿರ್ಧಾರಗಳು ಆರೋಗ್ಯಕರ ಜೀವನಕ್ಕೆ ಹುರುಪು ನೀಡಲಿ.
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************
 

Ads on article

Advertise in articles 1

advertising articles 2

Advertise under the article