ಮಕ್ಕಳ ತುಂಟ ಮನಸು : ಸಂಚಿಕೆ - 7
Thursday, March 17, 2022
Edit
ಮಕ್ಕಳ
ತುಂಟ ಮನಸು
ಸಂಚಿಕೆ - 7
ನಾನೊಮ್ಮೆ ಕಾಲೇಜಿಗೆ ಹೋಗಲೆಂದು ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಾ ಇದ್ದೆ. ಹೀಗಿದ್ದಾಗ ನನ್ನ ಹಿಂದಿನಿಂದ "ಶೂಟ್ ಕರೋ ...ಶೂಟ್ ಕರೋ" ಎಂದು ಯಾರೋ ಕೂಗಾಡುವುದು ಕೇಳಿಸಿತು. ಅದರೊಂದಿಗೆ ಗುಂಡಿನ ಶಬ್ಧ ಕೂಡಾ ಬರತೊಡಗಿತು. ನಾನು ಆಶ್ಚರ್ಯದಿಂದ ಗಾಬರಿಯಾಗಿ ಯಾರಪ್ಪ ಇದು ಬಸ್ ಸ್ಟ್ಯಾಂಡ್ ನಲ್ಲಿ ಶೂಟ್ ಮಾಡ್ತಾ ಇದ್ದಾರಲ್ಲ ಅಂತ ಹಿಂದೆ ತಿರುಗಿ ನೋಡಿದೆ... ಅಲ್ಲಿ ಯಾರೂ ಶೂಟ್ ಮಾಡುವುದು ಕಾಣಿಸಲಿಲ್ಲ.... ಬದಲಾಗಿ, ಅಲ್ಲಿ ಕೆಲವು ಹುಡುಗರ ಗುಂಪೊಂದು ಮೊಬೈಲ್ ಹಿಡಿದುಕೊಂಡು ಆಡುತ್ತಿರುವುದು ಕಾಣಿಸಿತು. ಅದರಲ್ಲಿ ಒಬ್ಬ ಹುಡುಗ ಮತ್ತೆ ಶೂಟ್ ಮಾಡು ಎಂದು ಜೋರಾಗಿ ಕಿರುಚಾಡುತ್ತಿದ್ದ. ಮತ್ತೆ ಅದೇ ಗುಂಡಿನ ಸದ್ದು ಮೊಬೈಲ್ ನಿಂದ ಬರುತ್ತಿತ್ತು. ಹೀಗೆ ಬಹಳ ಹೊತ್ತು ಗಮನಿಸಿದಾಗ ಆ ಹುಡುಗರು ವೀಡಿಯೋ ಗೇಮ್ ಆಡುತ್ತಾ ಇದ್ದಾರೆ ಎಂದು ತಿಳಿಯಿತು. ಆ ಹುಡುಗರನ್ನು ವಿಚಾರಿಸಿದಾಗ ಅದೇನೋ ಫ್ರೀ ಫಯರ್ ಗೇಮ್ ಅಂತ ಹೇಳಿದ್ದರು. ಹೀಗೆ ಅವರು ತುಂಬಾ ಹೊತ್ತು ಕಾಲಹರಣ ಮಾಡುತ್ತಾ ಕುಳಿತಿದ್ದರು.....!!
ಕೆಲವು ದಿನಗಳ ಬಳಿಕ ನಾನು ನ್ಯೂಸ್ ಪೇಪರ್ ಓದುತ್ತಾ ಇರುವಾಗ ಈ ಫ್ರೀ ಫಯರ್ ಗೇಮ್ ಆಟವನ್ನೇ ಚಟ ಮಾಡಿಕೊಂಡು 14 ವರ್ಷದ ಹುಡುಗನೊಬ್ಬ ತನ್ನ ಮನೆಯವರು ಗೇಮ್ ಆಡಲು ನಿರಾಕರಿಸಿದ್ದಕ್ಕೆ ಮನೆಯವರನ್ನೇ ಕೊಂದು ಬಿಟ್ಟ ಎನ್ನುವ ಸುದ್ದಿಯನ್ನು ಓದಿ ಗಾಬರಿಯಾಯಿತು....!! ಅಷ್ಟೇ ಯಾಕೆ... ಮತ್ತೊಂದು ದಿನ ಗೇಮ್ ಬ್ಯಾನ್ ಆಯಿತೆಂದು ಇನ್ನೊಬ್ಬ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದ...!! ಹೀಗೆ ಹಲವಾರು ಮಕ್ಕಳು ಮನೆಯ ಮೂಲೆಯಲ್ಲಿ ಮೊಬೈಲ್ ಹಿಡಿದುಕೊಂಡು ಡಿಶುಂ.. ಡಿಶುಂ ..ಎಂದು ಸದ್ದು ಮಾಡುತ್ತಾ ಬೇರೆ ಯಾವುದೇ ಕೆಲಸಗಳನ್ನು ಮಾಡದೇ ಮೊಬೈಲ್ ಒಳಗಡೆ ಹೊಕ್ಕಿರುವುದನ್ನು ಅನೇಕ ಪೋಷಕರು ತಮ್ಮ ಮನೆಗಳಲ್ಲಿ ನೋಡುತ್ತಾರೆ.
ಅದಲ್ಲದೇ ನಮ್ಮ ಪಕ್ಕದ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರೆ. ಅವರ ಅಮ್ಮ ಮಕ್ಕಳಿಗೆ ಊಟ ಮಾಡಿಸಲು ಅವರ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುತ್ತಾರೆ. ಒಂದು ವೇಳೆ ಮಕ್ಕಳಿಗೆ ಮೊಬೈಲ್ ಕೊಡದೇ ಇದ್ದರೆ ಆ ಮಕ್ಕಳು ಊಟ ಮಾಡುವುದೇ ಇಲ್ಲ....!! ಯಾಕೆಂದರೆ ಮೊಬೈಲ್ ನೋಡಿ ಅಭ್ಯಾಸ ಆಗಿಬಿಟ್ಟಿದೆ. ಆ ಮಕ್ಕಳಿಗೆ ಮೊಬೈಲ್ ನೋಡುತ್ತಾ ಅಲ್ಲಿಗೆ ನಿದ್ದೆ ಬರುತ್ತದೆ. ಹೀಗೆ ಪ್ರತಿನಿತ್ಯ ಮಕ್ಕಳನ್ನು ಊಟ ಕೊಟ್ಟು ಮಲಗಿಸುತ್ತಾರೆ. ಇದು ಆ ಮನೆಯಲ್ಲಿ ಮಾತ್ರ ಅಲ್ಲ, ಅನೇಕ ಜನ ಪೋಷಕರು ಇದೇ ರೀತಿ ಮಕ್ಕಳನ್ನು ತಪ್ಪಾಗಿ ಬೆಳೆಸುತ್ತಾ ಇದ್ದಾರೆ ಎನ್ನುವುದು ದುರಂತವೇ ಸರಿ...!
ಈ ಮೊಬೈಲ್ ಎನ್ನುವ ಸಾಧನ ಮಕ್ಕಳಿಂದ ಊಟ, ನಿದ್ದೆ, ಆಟ- ಪಾಠ ಎಲ್ಲವನ್ನೂ ಕೂಡ ಕಸಿದುಕೊಂಡಿದೆ. ಇದರಿಂದ ಮಕ್ಕಳಲ್ಲಿ ಹಠಮಾರಿತನ ಕೂಡ ಜಾಸ್ತಿಯಾಗಿದೆ. ಈ ರೀತಿಯ ಕೊಲ್ಲುವ ಆಟಗಳನ್ನು ಆಡುವುದರಿಂದ ಮಕ್ಕಳಲ್ಲಿ ಕೋಪದ ಜೊತೆಗೆ ಆಕ್ರಮಣಶೀಲತೆಯ ಮನೋಭಾವ ಬೆಳೆಯಬಹುದು. ಹಾಗೆಯೇ ಮಕ್ಕಳಲ್ಲಿ ಮುಗ್ಧತೆ ಕಡಿಮೆಯಾಗಿ ವಯಸ್ಸಿಗೆ ಮೀರಿದ ಕೆಲಸಗಳನ್ನು ಹಾಗೂ ಮಾತುಗಳನ್ನು ಆಡಬಹುದು. ಅಷ್ಟೇ ಅಲ್ಲದೆ ಮೊಬೈಲ್ ನಿಂದಾಗಿ ಅನೇಕ ಸಾವು ನೋವುಗಳು ಕೂಡ ಸಂಭವಿಸಬಹುದು. ಇಡೀ ದಿನ ಮೊಬೈಲ್ ಹಿಡಿದುಕೊಂಡು ಕುಳಿತರೆ ಕಣ್ಣಿನ ದೃಷ್ಟಿಯನ್ನು ಕೂಡ ಕಳೆದುಕೊಳ್ಳಬಹುದು. ಮಕ್ಕಳಿಗೆ ಮನರಂಜನೆ ಅನ್ನುವುದು ಖಂಡಿತವಾಗಿಯೂ ಬೇಕು. ಆದರೆ ಮೊಬೈಲ್ ಬಳಸುವಾಗ ಮಿತಿಯಿದ್ದರೆ ಒಳಿತು. ಮಕ್ಕಳು ಆಟ- ಪಾಠದ ಜೊತೆಗೆ ಬಾಲ್ಯವನ್ನು ಸುಂದರವಾಗಿ ಕಳೆಯಬೇಕು. ಮೊಬೈಲ್ ಬಳಕೆಯನ್ನು ಚಟವಾಗಿಸಿಕೊಂಡು ವ್ಯರ್ಥ ಮಾಡಿದ ಸಮಯ ಮತ್ತೆ ಬರುವುದಿಲ್ಲ. ಹಾಗೆಯೇ ಈ ರೀತಿಯ ಆಟಗಳಿಂದಾಗಿ ಹೋದ ಜೀವ ಕೂಡ ಮತ್ತೆ ಬರುವುದಿಲ್ಲ ಎನ್ನುವುದನ್ನು ತಿಳಿಯಬೇಕು.
........................................... ರಮ್ಯ. ಎಮ್
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ,
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************