-->
ಹಕ್ಕಿ ಕಥೆ : ಸಂಚಿಕೆ - 36

ಹಕ್ಕಿ ಕಥೆ : ಸಂಚಿಕೆ - 36

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                           ಹಕ್ಕಿ ಕಥೆ - 36
                        ------------------
         ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ...... ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ತರಕಾರಿ ತರಲು ಮಾರ್ಕೆಟ್ ಗೆ ಹೋಗುತ್ತಿದ್ದೆ. ಮಾರ್ಕೆಟ್ ನಲ್ಲಿ ಹಣ್ಣು , ತರಕಾರಿ , ದಿನಸಿ ಸಾಮಾನು ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಿದ್ದೆವು. ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ಮೀನು ಮತ್ತು ಮಾಂಸದ ಅಂಗಡಿಗಳು ಇರುತ್ತಿದ್ದವು. ಅವರು ಉಳಿದ ತ್ಯಾಜ್ಯಗಳನ್ನು ಮಾರುಕಟ್ಟೆಯ ಹಿಂದೆ ಒಂದು ದೊಡ್ಡ ಕಸದ ತೊಟ್ಟಿಗೆ ಹಾಕುತ್ತಿದ್ದರು. ಅದರ ಮೇಲೆಲ್ಲಾ ಗಿಡುಗಗಳು ಹಾರಾಡುತ್ತಿದ್ದವು. ಈ ಗಿಡುಗಗಳ ಹಾರಾಟವನ್ನು ನಾವು ಬಹಳ ದೂರದಿಂದಲೇ ನೋಡಲು ಸಾಧ್ಯವಾಗುತ್ತಿತ್ತು. ಹಲವಾರು ಗಿಡುಗಗಳು ಹಾರುತ್ತಿವೆ ಎಂದರೆ ಅಲ್ಲೊಂದು ಮೀನು ಅಥವಾ ಮಾಂಸದ ಮಾರುಕಟ್ಟೆ ಇದೆ ಎಂದೇ ಅರ್ಥ ಅಥವಾ ಅದು ನಿಮ್ಮ ಊರಿನ ಕಸ ರಾಶಿ ಹಾಕುವ ಜಾಗ ಆಗಿರಬಹುದು ಎಂದರ್ಥ. ಕಡಲ ತೀರಕ್ಕೆ ಹೋದಾಗಲೂ ಈ ಗಿಡುಗಗಳನ್ನು ನಾವು ನೋಡುತ್ತಿದ್ದೆವು.
       ಕಡುಕಂದು ಅಥವಾ ಕಪ್ಪು ಬಣ್ಣದ ಈ ಗಿಡುಗ ನಮ್ಮ ಬಾಲ್ಯದ ದಿನಗಳ ನಿತ್ಯದ ಒಡನಾಡಿ. ಶಾಲೆಗೆ ಹೋಗುವಾಗ ಬರುವಾಗಲೆಲ್ಲಾ ಇವುಗಳನ್ನು ನೋಡುವುದು ಲೆಕ್ಕ ಹಾಕುವುದು, ನಾನೆಷ್ಟು ನೋಡಿದೆ ಎಂದು ಹೇಳಿಕೊಳ್ಳುವುದು ನಮಗೊಂದು ಆಟವೇ ಆಗಿತ್ತು. ಇವುಗಳಲ್ಲಿ ಎರಡು ವಿಧಗಳು ಇದ್ದು ತಲೆ, ಎದೆಭಾಗವೆಲ್ಲ ಬಿಳಿ ಬಣ್ಣವಿದ್ದ ಇನ್ನೊಂದು ಗಿಡುಗವನ್ನು ನೋಡಿದರೆ ಗೆಲುವು, ಪೂರ್ತಿ ಕಡುಕಂದು ಬಣ್ಣದ ಈ ಗಿಡುಗವನ್ನು ನೋಡಿದರೆ ಸೋಲು ಎಂದು ನಾವು ನಂಬಿದ್ದೆವು. ಆದರೆ ಈ ನಂಬಿಕೆ ಬರೇ ಸುಳ್ಳು ಎಂದು ನಮಗೆ ಆಮೇಲೆ ಗೊತ್ತಾಯಿತು.
          ನಾನು ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದ ಮೇಲೆ ನಮ್ಮ ಮನೆಯ ಹತ್ತಿರವೂ ಬಹಳ ಸಂಖ್ಯೆಯಲ್ಲಿ ಗಿಡುಗಗಳು ಇರುವುದು ತಿಳಿಯಿತು. ಹೀಗೇ ಗಮನಿಸುತ್ತಿದ್ದಾಗ ಮನೆಯ ಹತ್ತಿರದಲ್ಲಿ ಇದ್ದ ಮೊಬೈಲ್ ಟವರ್ ಕಡೆಗೆ ಈ ಗಿಡುಗ ಹಾರಿಬರುವುದು, ಮತ್ತೆ ಹಾರಿ ಹೋಗುವುದು ಕಾಣಿಸಿತು. ನನ್ನ ಬೈನಾಕುಲಾರ್ ತಂದು ಅದರ ಚಲನವಲನಗಳನ್ನು ಗಮನಿಸುತ್ತಾ ಕುಳಿತೆ. ಮೊಬೈಲ್ ಟವರ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ಮಧ್ಯಭಾಗದಲ್ಲಿ ಒಂದಷ್ಟು ಕಟ್ಟಿಗೆ ಮತ್ತು ಇತರೆ ವಸ್ತುಗಳನ್ನು ಜೋಡಿಸಿ ಒಂದು ಅಟ್ಟಳಿಗೆಯಂಥ ಗೂಡು ಮಾಡಿರುವುದು ಕಾಣಿಸಿತು. ಅದರಲ್ಲಿ ಎರಡು ಮರಿಗಳೂ ಇದ್ದವು. ಮೊಬೈಲ್ ಟವರ್ ನಿಂದಾಗಿ ಹಕ್ಕಿಯ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದಾಗಿದ್ದರೆ ಈ ಹಕ್ಕಿ ಮೊಬೈಲ್ ಟವರ್ ನಲ್ಲೇ ಗೂಡು ಮಾಡಿ ಹೇಗೆ ಮರಿಮಾಡಿತು ಎಂಬ ಪ್ರಶ್ನೆ ಮೂಡಿತು. ವಿಜ್ಞಾನಿ ಮಿತ್ರರಬಳಿ ಕೇಳಿದಾಗ, ಮೊಬೈಲ್ ಟವರ್ ಮತ್ತು ಹಕ್ಕಿಯ ಸಂತಾನೋತ್ಪತ್ತಿಗೂ ನೇರ ಸಂಬಂಧ ಇರುವುದನ್ನು ಯಾವ ಸಂಶೋಧನೆಯೂ ಇನ್ನೂ ದೃಢಪಡಿಸಿಲ್ಲ ಎಂಬ ಉತ್ತರ ಬಂತು.
             ಎತ್ತರದ ಮರಗಳ ಮೇಲೆ, ಎತ್ತರದ ಕಟ್ಟಡಗಳ ಮೇಲೆ ಸೆಪ್ಟೆಂಬರ್ ನಿಂದ ಎಪ್ರಿಲ್ ತಿಂಗಳ ನಡುವೆ ಗೂಡು ಮಾಡುವ ಈ ಹಕ್ಕಿ ಪೇಟೆ ಪಟ್ಟಣಗಳಲ್ಲಿ ಬಹಳ ಸಾಮಾನ್ಯವಾಗಿ ಕಾಣಲು ಸಿಗುತ್ತದೆ. ನೆಲದಿಂದ ಆಕಾಶದ ಎತ್ತರದ ವರೆಗೂ ಎಂಥ ಜಾಗದಲ್ಲೂ ಹಾರಾಟ ಮಾಡುವ ಸಾಮರ್ಥ್ಯ ಈ ಹಕ್ಕಿಗೆ ಇದೆ. ಆಕಾಶದ ಎತ್ತರದಲ್ಲಿ ಹಾರುವಾಗ ಬಾಲದ V ಆಕಾರದಿಂದ ಬಹಳ ಸುಲಭವಾಗಿ ಈ ಹಕ್ಕಿಯನ್ನು ಗುರುತಿಸಬಹುದು. ಕಸದ ತೊಟ್ಟಿಯಿಂದ ಮಾಂಸದ ತ್ಯಾಜ್ಯ , ಎರೆಹುಳು , ಹಾರಾಡುವ ಗೆದ್ದಲು ಹುಳು , ಹಲ್ಲಿಗಳು , ಇಲಿಗಳು , ಇತರೇ ಹಕ್ಕಿಯ ಮರಿಗಳು ಹೀಗೆ ಹಲವು ವಿಧದ ಮಾಂಸಾಹಾರವೇ ಇದರ ಮುಖ್ಯ ಆಹಾರ. ಹಾರುವಾಗ ಮತ್ತು ಎತ್ತರದ ಜಾಗದಲ್ಲಿ ಕುಳಿತಾಗ ಇವುಗಳು ಕೂಗುವುದನ್ನು ನೀವು ಖಂಡಿತಾ ಕೇಳಬಹುದು. ಗಂಡು ಮತ್ತು ಹೆಣ್ಣು ಒಂದೇ ರೀತಿ ಕಾಣುವ ಈ ಹಕ್ಕಿಯನ್ನು ನಿಮ್ಮ ಆಸುಪಾಸಿನಲ್ಲಿ ನೀವು ಖಂಡಿತಾ ನೋಡಲು ಸಾಧ್ಯ.. ಹುಡುಕಿ ಗಮನಿಸ್ತೀರಲ್ಲ..
        ಕನ್ನಡ ಹೆಸರು: ಗಿಡುಗ ಅಥವಾ ಹದ್ದು
        ಇಂಗ್ಲೀಷ್ ಹೆಸರು: Black Kite
        ವೈಜ್ಞಾನಿಕ ಹೆಸರು: Milvus migrans
ಚಿತ್ರ ಕೃಪೆ : ಗೋಪಾಲಕೃಷ್ಣ ಬಾಳಿಗಾ
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದ ಜೊತೆ ಸಿಗೋಣ, ನಮಸ್ಕಾರ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
**********************************************


Ads on article

Advertise in articles 1

advertising articles 2

Advertise under the article