
ಮನದೊಳಗಿನ ಪ್ರಶ್ನೆ ಕೇಳಿ : ಸಂಚಿಕೆ - 2
Friday, March 4, 2022
Edit
ಡಾ. ಗುರುರಾಜ ಇಟಗಿಯವರ
ಮನದೊಳಗಿನ ಪ್ರಶ್ನೆ ಕೇಳಿ : ಸಂಚಿಕೆ - 2
ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ನಾವೆಲ್ಲಾ ಇದ್ದೇವೆ. ವಾರ್ಷಿಕ ಪರೀಕ್ಷೆಗಳು ಹತ್ರ ಬರ್ತಾ ಇದೆ. ಶೈಕ್ಷಣಿಕವಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷೆಯನ್ನು ಎದುರಿಸಬೇಕೆಂದು ಮಕ್ಕಳ ಜಗಲಿಯ ಉದ್ದೇಶ. ತಮ್ಮ ಮನದೊಳಗಿನ ಅನೇಕ ಪ್ರಶ್ನೆಗಳ ಗೊಂದಲದಲ್ಲಿ ಮುಳುಗದೆ ಅದನ್ನು ಪರಿಹರಿಸುವ ಸಲುವಾಗಿ ಈ ವಿಶೇಷ ಸಂಚಿಕೆಯಲ್ಲಿ....., ಓ ಮುದ್ದು ಮನಸೇ - ಅಂಕಣದ ಮೂಲಕ ಮಕ್ಕಳ ಜಗಲಿಯಲ್ಲಿ ಪರಿಚಿತರಾಗಿರುವ ಡಾ. ಗುರುರಾಜ ಇಟಗಿಯವರು....... ಮಕ್ಕಳು ಕಳಿಸಿರುವ ಮನದೊಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದಾರೆ.....
ಪ್ರಶ್ನೆ 1: ನಾನು ಹರೀಶ್ (ಹೆಸರು ಬದಲಿಸಲಾಗಿದೆ) ಕಡಿಮೆ ಸಮಯದಲ್ಲಿ ಹೆಚ್ಚು ಓದುವುದು ಮತ್ತು ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ?
ಇದೊಂದು ಬಹಳ ಉತ್ತಮ ಪ್ರಶ್ನೆ. ಬಹಳ ವಿದ್ಯಾರ್ಥಿಗಳು ಹೆಚ್ಚು ಓದುವುದು ಹೆಚ್ಚು ಅಂಕಗಳಿಸುವ ಉತ್ತಮ ಮಾರ್ಗ ಅಂದುಕೊಳ್ಳುತ್ತಾರೆ..! ಕೆಲವರಂತಾರೆ, ಸರ್ ನಾನು ರಾತ್ರಿಯಿಡೀ ಓದಿದರೂ ಸಿಗದ ಅಂಕಗಳನ್ನು ನನ್ನ ಗೆಳೆಯರು ಏನೂ ಓದದೆಯೂ ಪಡೆಯುತ್ತಾರೆ....! ಇಂತಹದ್ದೊಂದು ಸಮಸ್ಯೆಗೆ ಸಿಂಪಲ್ ಪರಿಹಾರವೆಂದರೆ "ಎಷ್ಟು" ಓದುತ್ತೀರಿ ಅನ್ನುವುದಕ್ಕಿಂತ "ಹೇಗೆ" ಓದುತ್ತೀರಿ ಅನ್ನುವುದನ್ನು ಅರಿತುಕೊಳ್ಳುವುದು.
ಸಾಮಾನ್ಯವಾಗಿ ಐ.ಎ.ಎಸ್. ನಂತಹ ಪರೀಕ್ಷಾ ತರಬೇತಿಗೆ ಹೋದರೆ ಏನನ್ನು ಓದಬೇಕು ಎನ್ನುವುದನ್ನು ಕಲಿಸುವ ಮೊದಲು ಏನನ್ನು ಓದಬಾರದು ಅನ್ನೋದನ್ನು ಹೇಳಿಕೊಡಲಾಗುತ್ತದೆ. ಪರೀಕ್ಷೆಗಳು ವಿಷಯಗಳ ಚೌಕಟ್ಟಿನಲ್ಲಿರುವುದರಿಂದ ಎಲ್ಲವನ್ನೂ ಓದುವ ಅವಶ್ಯಕತೆಯಿರುವುದಿಲ್ಲ ಬದಲಾಗಿ ಶಿಕ್ಷಕರ ಮಾರ್ಗದರ್ಶನದೊಟ್ಟಿಗೆ, ಗೆಳೆಯರೊಂದಿಗೆ ಚರ್ಚಿಸಿ ಹಿಂದಿನ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮನನ ಮಾಡಿ ಪರೀಕ್ಷೆಯಲ್ಲಿ ಕೇಳಬಹುದಾದ ಪಠ್ಯದ ಪ್ರಮುಖ ಭಾಗಗಳನ್ನು ಗುರುತಿಸುವುದು. ನಂತರ ಪರೀಕ್ಷೆಗೆ ಲಭ್ಯವಿರುವ ಒಟ್ಟೂ ದಿನಗಳನ್ನು ವಿಷಯಗಳಿಗನು ಗುಣವಾಗಿ ವಿಭಾಗಿಸುವುದು (ಕಠಿಣ ವಿಷಯಗಳಿಗೆ ಸ್ವಲ್ಪ ಹೆಚ್ಚು ದಿನಗಳು) ಪ್ರತಿದಿನ ನಿಮಗೆ ಓದಲು ಲಭ್ಯವಿರುವ ಸಮಯವನ್ನು ಗುರುತಿಸುವುದು ಮತ್ತು ಸಾಧ್ಯವಾದಷ್ಟು ಸಮಯವನ್ನು ಲಭ್ಯವಾಗುವಂತೆ ಮಾಡುವುದು. ಪ್ರತಿದಿನವೂ ಓದಲು ಒಂದಿಷ್ಟು ಗುರಿಯನ್ನು ಸಿದ್ದಪಡಿಸುವುದು. ಹತ್ತೇ ನಿಮಿಷಗಳ ಸಮಯದ ಲಭ್ಯತೆಯಿದ್ದರೂ ಓದಲು ಬಳಸಿಕೊಳ್ಳುವುದು. ಓದಲು ಲಭ್ಯವಿರುವ ಸಮಯ ಯಾವುದೇ ಕಾರಣಕ್ಕೂ ಪೋಲಾಗದಂತೆ (ಟೀವಿ, ಮೊಬೈಲ್, ಮನೆಯವರು, ಗೆಳೆಯರು ಇತ್ಯಾದಿ) ನೋಡಿಕೊಳ್ಳುವುದು. ಹೆಚ್ಚು ಓದುವ ಅವಶ್ಯಕತೆಯಿಲ್ಲ, ಆಯ್ದ ಬಾಗವನ್ನು ಸರಿಯಾಗಿ ಮನನ ಮಾಡಿಕೊಂಡರೆ ಸಾಕು.
ಇನ್ನು ಯಾವುದೇ ವಿಷಯವನ್ನೂ ಎರಡಕ್ಕಿಂತ ಹೆಚ್ಚು ಬಾರಿ ಓದುವುದು ಅತೀ ಉತ್ತಮ. ಮೊದಲಬಾರಿ ಓದುವಾಗ ಉತ್ತರಗಳ ಸಾರಾಂಶವನ್ನು ಅರ್ಥೈಸಿಕೊಂಡು ಅದರಲ್ಲಿರುವ ಪ್ರಮುಖ ಶಬ್ದಗಳನ್ನು (ಕೀ ವರ್ಡ್ಸ್) ಬೇರೊಂದು ನೋಟ್ ಬುಕ್ ನಲ್ಲಿ ಬರೆದಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಮುಂದಿನ ಸುತ್ತುಗಳ ಓದಿನಲ್ಲಿ ಕೇವಲ ಬರೆದಿಟ್ಟ ಪ್ರಮುಖ ಶಬ್ದಗಳನ್ನಷ್ಟೇ ಓದುವುದರಿಂದ ಸಮಯದ ಉಳಿತಾಯದ ಜೊತೆ ಜೊತೆಗೆ ಓದಲು ಇರುವ ವಿಷಯವೂ ಕಡಿಮೆಯಾಗುತ್ತದೆ. ಈ ವಿಧಾನವು ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ: ಮೈಸೂರಿನ ಕುರಿತು ಪಠ್ಯವಿದ್ದರೆ ಓದುವಾಗ ಅದರಲ್ಲಿ ಬರುವ ಅರಮನೆ , ಮೈಸೂರನ್ನಾಳಿದ ರಾಜರು, ವರ್ಷ, ವಿಶೇಷ ಸ್ತಳಗಳು ಇತ್ಯಾದಿ ಪ್ರಮುಖ ಶಬ್ಧಗಳನ್ನು ಬರೆದಿಟ್ಟುಕೊಂಡರೆ ಸಾಕು. ಹೆಚ್ಚಾಗಿ ಈ ಪ್ರಮುಖ ವಿಷಯಗಳೇ ಮರೆತು ಹೋಗುತ್ತವೆ. ಇವು ನೆನಪಿನಲ್ಲಿದ್ದರೆ ಸಂಪೂರ್ಣ ಉತ್ತರವನ್ನು ಬರೆಯಲು ನೀವು ಶಕ್ತರಾಗುತ್ತೀರಿ. ಕೆಲವೊಮ್ಮೆ ಕಠಿಣಾತಿ ಕಠಿಣ ಶಬ್ಧಗಳಿದ್ದರೆ ಅವುಗಳನ್ನು ನಮಗೆ ಹತ್ತಿರವಾದ ಯಾರಾದರೂ ವ್ಯಕ್ತಿಗಳ, ಸ್ಥಳಗಳ, ಪ್ರಾಣಿ ಪಕ್ಷಿಗಳ ಅಥವಾ ಬಣ್ಣ, ಆಹಾರಗಳ ಹೆಸರಿನೊಟ್ಟಿಗೆ ಬೆರೆಸಿ ಓದಬೇಕು. ಉದಾಹರಣೆಗೆ: "ಸೈಕಾಲಜಿ" ಯನ್ನು ಸೈಕಲ್ ನೊಟ್ಟಿಗೆ ಬೆರೆಸಿ ಓದುವುದು ಅಥವಾ ಗಣಿತದ ಸೂತ್ರಗಳನ್ನು ಅಮ್ಮನ ಹೆಸರಿನೊಟ್ಟಿಗೊಂದು ಸೂತ್ರ , ಅಣ್ಣನ ಹೆಸರಿನೊಟ್ಟಿಗೊಂದು ಸೂತ್ರದಂತೆ ಹೆಸರಿಸಿ ಓದುವುದು. ಈ ವಿಧಾನವು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕರಿಸುತ್ತದೆ. ಕೇವಲ ಓದುವುದಕ್ಕಿಂತ ಓದುವ ವಿಷಯವನ್ನು ಇನ್ನೊಬ್ಬರೊಟ್ಟಿಗೆ ಚರ್ಚಿಸುವುದರಿಂದ ಅಥವಾ ವಿವರಿಸುವುದರಿಂದ ವಿಷಯವನ್ನು ಪರಿಣಾಮಕಾರಿಯಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.
.....................................................
ಪ್ರಶ್ನೆ 2 : ನಮಸ್ತೇ ಸರ್ ನಾನು ನಯನಾ (ಹೆಸರು ಬದಲಾಯಿಸಲಾಗಿದೆ) ನನ್ಗೆ ಗಣಿತ ಪಾಠ ಎಷ್ಟು ಓದಿದ್ರೂ ಅರ್ಥ ಆಗಲ್ಲ. ಅಮ್ಮ ಹೇಳಿ ಕೊಡ್ತಾರೆ, ಮೇಡಂ ಹೇಳಿ ಕೊಡ್ತಾರೆ ಆದ್ರೂ ನನ್ಗೆ ತಲೆಗೆ ಹತ್ತಲ್ಲ. ಪ್ಲೀಸ್ ಹೆಲ್ಪ್ ಮಾಡಿ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.
ವೃತ್ತಿ ಜೀವನದ ಕೆಲವು ಜವಾಬ್ದಾರಿಗಳಿಂದಾಗಿ ತಮ್ಮ ಪ್ರಶ್ನೆಗೆ ಉತ್ತರ ಕೊಡುವಲ್ಲಿ ತಡವಾಗಿದ್ದಕ್ಕೆ ವಿಷಾದಿಸುತ್ತೇನೆ. ಸಾಮಾನ್ಯವಾಗಿ ಹೆಚ್ಚು ವಿದ್ಯಾರ್ಥಿಗಳಲ್ಲಿ ಇಂತಹದ್ದೊಂದು ಸಮಸ್ಯೆಯನ್ನು ಗಮನಿಸಬಹುದಾಗಿದೆ. ಪ್ರಶ್ನೆಯಲ್ಲಿರುವಂತೆ "ಗಣಿತ ನನ್ನ ತಲೆಗೆ ಹತ್ತಲ್ಲ" ಅನ್ನುವ ಯೋಚನೆಯೇ ತಪ್ಪು . ತಲೆಗೆ ಹತ್ತದ ಯಾವ ವಿಷಯಗಳೂ ಇಲ್ಲ. ಗಣಿತ ಅಂದಾಕ್ಷಣ ಮೂಗು ಮುರಿಯುವ (ಇಷ್ಟಪಡದ) ಅದೆಷ್ಟೋ ವಿದ್ಯಾರ್ಥಿಗಳು ಈ ವಿಷಯದ ಅಥವಾ ಗಣಿತ ಕಲಿಸುವ ಶಿಕ್ಷಕರ ಮೇಲೆ ನಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ. ಇದಕ್ಕೆ ಸಾಕಷ್ಟು ಕಾರಣಗಳಿವೆ, ಗಣಿತದಲ್ಲಿ ಹಾಸ್ಯಗಳಿಲ್ಲ, ಕಥೆಗಳಿಲ್ಲ, ಪಾತ್ರಗಳಿಲ್ಲ ಅಥವಾ ಮನರಂಜನೆ ಕೊಡಬಲ್ಲಂತಹ ಇನ್ಯಾವುದೇ ಚಟುವಟಿಕೆಗಳಿಲ್ಲ, ಕೆಲವೊಮ್ಮೆ ಗಣಿತದ ಅಂಕೆ ಸಂಖ್ಯೆಗಳು ತಲೆಯಲ್ಲಿ ಹುಳಬಿಡುವುದೇ ಹೆಚ್ಚು. ಹಾಗಾಗಿ ಹೆಚ್ಚು ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಗಣಿತದ ಕುರಿತು ಆಸಕ್ತಿಯನ್ನು ಕಳೆದುಕೊಂಡಿರುತ್ತಾರೆ ಅಥವಾ ಗಣಿತವನ್ನು ಕಠಿಣಾತೀ ಕಠಿಣದ ವಿಷಯದಂತೆ ನಿರಾಕರಿಸಿಬಿಟ್ಟಿರುತ್ತಾರೆ. ಇಂತಹ ಹಲವಾರು ಕಾರಣಗಳು ವಿದ್ಯಾರ್ಥಿಗಳಿಗೆ ಗಣಿತವನ್ನು ಕಬ್ಬಿಣದ ಕಡಲೆಯನ್ನಾಗಿಸಿಬಿಟ್ಟಿರುತ್ತವೆ.
ಹಾಗಿದ್ದರೂ ಗಣಿತವನ್ನು ಆಸಕ್ತಿಯಿಂದ ಕಲಿಯುವ ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ಅಂಕವನ್ನೂ ಗಳಿಸುತ್ತಾರೆ ಮತ್ತೆ ಅದು ಎಲ್ಲರಿಗೂ ಸಾಧ್ಯವಿದೆ. ಒಂದು ಪ್ರಮುಖ ವಿಷಯವನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು, ನಮ್ಮ ಮೆದುಳಿಗೆ ವಿಷಯಗಳ ಭೇದವಿಲ್ಲ ಯಾವ ವಿಷಯವನ್ನಾದರೂ ಅದು ಸಮಾನವಾಗಿ ಸ್ವೀಕರಿಸುತ್ತದೆ ಆದರೆ ನಮ್ಮ ಭಾವನೆ ವಿಷಯಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಗಣಿತವನ್ನು ಇಷ್ಟಪಡುವುದು ಹೇಗೆ? ಮತ್ತು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮ ಅಂಕಗಳಿಸುವುದು ಹೇಗೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಕೆಳಗಿನ ಮಾರ್ಗದರ್ಶನಗಳನ್ನು ಸರಿಯಾಗಿ ಪಾಲಿಸಿ ಮತ್ತು ಗಣಿತದಲ್ಲಿ ಯಶಸ್ಸು ಸಾಧಿಸಿ..!
ದಿನನಿತ್ಯದ ಬದುಕಿನಲ್ಲಿ ಹೆಚ್ಚು ಹೆಚ್ಚು ಸಂಖ್ಯೆಗಳನ್ನು ಬಳಸಿ ಉದಾಹರಣೆಗೆ: ಸಂಖ್ಯೆ ಗಳನ್ನೊಳಗೊಂಡ ಆಟಗಳನ್ನಾಡೋದು, ಒಗಟು ಬಿಡಿಸೋದು, ಲೆಕ್ಕಮಾಡೋದು, ಅಪ್ಪ ಅಂಗಡಿಯಿಂದ ತಂದ ದಿನಸಿ ವಸ್ತುಗಳ ಬೆಲೆಯ ಲೆಕ್ಕಾ ಮಾಡೋದು ಇತ್ಯಾದಿ ಹೀಗೆ ಮಾಡುವುದರಿಂದ ಗಣಿತದ ಕುರಿತಾದ ನಕಾರಾತ್ಮಕ ಮನೋಭಾವನೆಯಿಂದ ಹೊರಬರಬಹುದಾಗಿದೆ. ಗಣಿತ ಶಿಕ್ಷಕರೊಟ್ಟಿಗೆ ಉತ್ತಮ ಬಾಂಧವ್ಯ ನಿಮಗೆ ಗಣಿತದ ಮೇಲಿರುವ ಭಯವನ್ನು ಹೋಗಲಾಡಿಸುತ್ತದೆ. ಯಾವತ್ತೂ ನಿಮ್ಮ ಹಿಂದಿನ ಪರೀಕ್ಷೆಯ ಅಂಕಗಳನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ , ಬದಲಾಗಿ ಮುಂದಿನ ಪರೀಕ್ಷೆಗೆ ಏನು ಸಿದ್ಧತೆ ಬೇಕೋ ಅಷ್ಟನ್ನು ಮಾತ್ರ ಮಾಡಿದರೆ ಸಾಕು. ಇನ್ನು ನಿಮ್ಮನ್ನು ಇನ್ನಷ್ಟು ಗೊಂದಲಕ್ಕೆ ನೂಕುವ ಅಥವಾ ಭಯ ಹುಟ್ಟಿಸುವ ಗೆಳೆಯರಿಂದ ದೂರವಿರಿ. ಕ್ರಿಯಾತ್ಮಕ ಕಲಿಕೆ ಗಣಿತದಲ್ಲಿ ಯಶಸ್ಸು ಸಾಧಿಸಲು ಸಹಕರಿಸುತ್ತದೆ. ಹಾಗಾಗಿ ಗೆಳೆಯರೊಟ್ಟಿಗೆ ಕೂತು ಗಣಿತದ ಲೆಕ್ಕ ಮಾಡುವುದು ಉತ್ತಮ. ಹೀಗೆ ಮಾಡುವಾಗ ವಿಭಿನ್ನ ಲೆಕ್ಕಗಳನ್ನು ಒಟ್ಟೊಟ್ಟಿಗೆ ಮಾಡಬೇಡಿ ಅದರಿಂದ ನಿಮ್ಮ ಮೆದುಳು ಗೊಂದಲಕ್ಕೆ ಒಳಗಾಗುತ್ತದೆ, ಒಮ್ಮೆ ಒಂದು ವಿಧದ ಲೆಕ್ಕಮಾತ್ರ ಮಾಡಿ ಕಲಿಯಬೇಕು. ಹೀಗೆ ಕಲಿತದ್ದನ್ನು ಇನ್ನೊಬ್ಬರ ಮುಂದೆ ಪ್ರದರ್ಶನ ಮಾಡಿ, ವಿವರಿಸಿ ಹೇಳಿ ಅಥವಾ ಮಾಡಿ ತೋರಿಸಿ. ಕೇಳಿ ಕಲಿಯುವುದಕ್ಕಿಂತ ಇನ್ನೊಬ್ಬರಿಗೆ ಕಲಿಸಿ ಕಲಿಯುವುದು ಅತ್ಯುತ್ತಮ. ಇವುಗಳೊಂದಿಗೆ ಮೇಲೆ ಹೇಳಿದ ಕೆಲವು ಮಾರ್ಗದರ್ಶನಗಳನ್ನೂ ಪಾಲಿಸಿ. ನಿಮ್ಮ ಪರೀಕ್ಷಾ ತಯಾರಿ ಮತ್ತು ಸಂಭ್ರಮ ನಿಮಗೆ ಹೊಸ ಅನುಭವ ಕೊಡಲಿ.
ಸಂಶೋಧಕರು ಮತ್ತು ಆಪ್ತ ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು,
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
With Regards
Dr. Gururaj Itagi
MSW (Medical & Psychiatry), PGDCP, Ph.D. (Psychology)
Researcher & Counselor
Sharada Group of Educational Institutions
Mangaluru, Karnataka, India
Contact: +91 6361007190
*******************************************