ವಿಶ್ವ ಗುಬ್ಬಚ್ಚಿ ದಿನ
Sunday, March 20, 2022
Edit
ಮಕ್ಕಳೇ ನಮಸ್ತೇ. ಇವತ್ತು ಮಾರ್ಚ್ 20, World Sparrow Day ಅಂದರೆ ಇವತ್ತಿನ ದಿನವನ್ನು ವಿಶ್ವ ಗುಬ್ಬಚ್ಚಿ ದಿನ ಎಂದು ಆಚರಿಸಲಾಗುತ್ತದೆ. ಗುಬ್ಬಚ್ಚಿ ಎಂಬ ಪುಟಾಣಿ ಪಕ್ಷಿಯು ಪ್ರಪಂಚದ ಎಲ್ಲ ಭಾಗಗಳಲ್ಲೂ ಕಂಡುಬರುತ್ತದೆ. ಭೂಮಿಯ ಮೇಲೆ ಎಲ್ಲೆಲ್ಲಿ ಮನುಷ್ಯ ವಾಸವಾಗಿ ಕೃಷಿ ಮಾಡುತ್ತಿದ್ದನೋ ಅಲ್ಲೆಲ್ಲಾ ಗುಬ್ಬಚ್ಚಿ (House Sparrow) ಗಳು ವಾಸವಾಗಿದ್ದವು ಎಂದು ಹೇಳುತ್ತಾರೆ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯ ಮಾಡಿನ ಮೂಲೆಯ ಸಂದಿಗಳಲ್ಲಿ, ಗೋಡೆಯಲ್ಲಿ ಹಾಕುತ್ತಿದ್ದ ಫೋಟೂ ಫ್ರೇಮಿನ ಹಿಂದುಗಡೆ ಗುಬ್ಬಚ್ಚಿಗಳು ಗೂಡು ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಇಂದು ಬೆಳೆಯುತ್ತಿರುವ ನಗರಗಳು, ಕಾಂಕ್ರೀಟ್ ಕಟ್ಟಡಗಳು, ಶಬ್ದಮಾಲಿನ್ಯ, ಬದಲಾದ ಕೃಷಿಪದ್ಧತಿ, ಕೃಷಿಯಲ್ಲಿ ಅತಿಯಾದ ಯಂತ್ರಗಳ ಬಳಕೆ, ಕೀಟ ನಾಶಕಗಳ ಬಳಕೆ ಇವುಗಳೆಲ್ಲ ಸೇರಿ ಗುಬ್ಬಚ್ಚಿಗಳನ್ನು ಕಾಣುವುದೇ ಬಹಳ ಅಪರೂಪವಾಗಿದೆ.
1958 ರಿಂದ 1962 ರ ನಡುವೆ ಚೀನಾ ದೇಶದಲ್ಲಿ ಒಂದು ಘಟನೆ ನಡೆಯಿತು. ಇಲಿ, ಸೊಳ್ಳೆ, ನೊಣ ಮತ್ತು ಗುಬ್ಬಚ್ಚಿಗಳನ್ನು ಮಾನವನಿಗೆ ಅತ್ಯಂತ ಉಪದ್ರವಕಾರಿ ಜೀವಿಗಳೆಂದು ಪರಿಗಣಿಸಿ ಅವುಗಳ ನಿರ್ಮೂಲನೆಗೆ ಮಹಾ ಅಭಿಯಾನವನ್ನೇ ನಡೆಸಲಾಯಿತು. ಗುಬ್ಬಚ್ಚಿಗಳು ಬೆಳೆಯನ್ನು ತಿಂದು ಹಾಳುಮಾಡುತ್ತವೆ ಆದ್ದರಿಂದ ಅವುಗಳನ್ನು ನಾಶಮಾಡಲು Smash Sparrows Campain ಎಂಬ ಮಹಾಅಭಿಯಾನ ಹಮ್ಮಿಕೊಂಡು, ಕಂಡಕಂಡಲ್ಲಿ ಗುಬ್ಬಚ್ಚಿಗಳನ್ನು ಬೇರೆಬೇರೆ ವಿಧಾನಗಳ ಮೂಲಕ ಕೊಲ್ಲಲಾಯಿತು, ಅವುಗಳ ಗೂಡು ಮತ್ತು ಮೊಟ್ಟೆಗಳನ್ನು ನಾಶಮಾಡಲಾಯಿತು. ಮುಂದಿನ ವರ್ಷಗಳಲ್ಲಿ ಬೆಳೆಯ ಇಳುವರಿ ಹೆಚ್ಚಾಯಿತೇ ಎಂದು ಗಮನಿಸಿದಾಗ ಅವರು ಊಹಿಸಿದ್ದಕ್ಕೆ ವಿರುದ್ಧವಾಗಿ ಇಳುವರಿ ಕಡಿಮೆಯಾದದ್ದು ಗಮನಕ್ಕೆ ಬಂತು. ಹೀಗೇಕೆ ಆಯಿತು ಎಂದು ವಿಚಾರಮಾಡಿದಾಗ ತಿಳಿದು ಬಂದದ್ದು ಹೀಗಿದೆ
ಗುಬ್ಬಚ್ಚಿಗಳು ಬೆಳೆದ ಭತ್ತವನ್ನು ತಿನ್ನುತ್ತದೆ ಅದರಿಂದ ರೈತರಿಗೆ ನಷ್ಟವಾಗುತ್ತದೆ ಎಂಬುದು ನಿಜವೇ ಆಗಿದ್ದರೂ, ಗುಬ್ಬಚ್ಚಿಗಳು ಮೊಟ್ಟೆ ಇಟ್ಟು ಮರಿಮಾಡುವ ಕಾಲದಲ್ಲಿ ಮರಿಗಳಿಗೆ ಮಿಡತೆ, ಕಂಬಳಿಹುಳ, ಹಾತೆ ಮೊದಲಾದ ಬೆಳೆಗೆ ಹಾನಿ ಉಂಟುಮಾಡುವ ಅನೇಕ ಕೀಟಗಳನ್ನು ಹಿಡಿದು ತಂದು ತಿನ್ನಿಸುತ್ತವೆ. ಈ ಕೀಟಗಳನ್ನು ಹಿಡಿಯಲು ಗುಬ್ಬಚ್ಚಿಗಳೇ ಇಲ್ಲವಾದಾಗ ಕೀಟಗಳಿಂದ ಉಂಟಾದ ಬೆಳೆ ನಾಶವು ಗುಬ್ಬಚ್ಚಿಗಳು ತಿಂದು ಮುಗಿಸುವ ಧಾನ್ಯದ ಪ್ರಮಾಣಕ್ಕಿಂತ ತುಂಬಾ ಅಧಿಕವಾಗಿತ್ತು. ಕೀಟ ನಿಯಂತ್ರಣಕ್ಕಾಗಿ ಬಳಸಬೇಕಾಗುವ ಕೀಟನಾಶಕದ ಖರ್ಚು ಮತ್ತು ಅದರಿಂದ ಆಗುವ ವಾಯುಮಾಲಿನ್ಯ ಮತ್ತು ಅದನ್ನು ತಿನ್ನುವುದರಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಕ್ಕಿಂದ ಗುಬ್ಬಚ್ಚಿಗಳು ತಿನ್ನುವುದು ಬಹಳ ಕಡಿಮೆಯೇ ಸರಿ.
ಇಂತಹುದೇ ಹಲವಾರು ಕಾರಣಗಳಿಂದ ಕಡಿಮೆಯಾಗುತ್ತಿರುವ ಗುಬ್ಬಚ್ಚಿ ಸಂತತಿಯನ್ನು ರಕ್ಷಿಸುವುದಕ್ಕಾಗಿ, ಗುಬ್ಬಚ್ಚಿಗಳ ಬಗೆಗೆ ಪ್ರೀತಿ ಮತ್ತು ಅವುಗಳ ಉಳಿವಿನ ಬಗೆಗೆ ಕೆಲಸ ಮಾಡಲು ಬಾರತೀಯ ಮೂಲದ Nature Forever Society ಯ ಸ್ಥಾಪಕರಾದ ಮೊಹಮ್ಮದ್ ದಿಲಾವರ್ ಮತ್ತು ಫ್ರಾನ್ಸ್ ನ Eco-Sys Action Foundation ಜೊತೆಯಾಗಿ ಸೇರಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ 2010 ನೇ ಇಸವಿ ಮಾರ್ಚ್ 20 ರಿಂದ ಪ್ರತಿವರ್ಷ ಮಾರ್ಚ್ - 20 ನ್ನು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲು ಪ್ರಾರಂಭ ಮಾಡಿದರು. ಗುಬ್ಬಚ್ಚಿಗಳ ಕುರಿತಾಗಿ ತಿಳಿಯಲು, ಅವುಗಳನ್ನು ಉಳಿಸಲು ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಬೇಸಗೆ ಕಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನೀವೂ ನಿಮ್ಮ ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಅಥವಾ ನಿಮ್ಮ ಮನೆಯ ಹಿತ್ತಲಿನಲ್ಲಿ ಗುಬ್ಬಚ್ಚಿಗಳಿಗಾಗಿ ನೀರು ಮತ್ತು ಕಾಳು ಇಡಲು ಪ್ರಾರಂಭಿಸಿ. ಸಾಧ್ಯವಾದರೆ ಗುಬ್ಬಚ್ಚಿಗಳಿಗೆ ನಿಮ್ಮ ಮನೆಯಲ್ಲಿ ಗೂಡುಕಟ್ಟಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಿ. ಗುಬ್ಬಚ್ಚಿಗಳಿಗೆ ಗೂಡುಮಾಡಲು ಹೇಗೆ ಅನುಕೂಲ ಮಾಡಿ ಕೊಡಬಹುದು ಎಂಬ ಬಗ್ಗೆ ಅನೇಕ ಮಾಹಿತಿಗಳು ಇಂಟರ್ನೆಟ್ ನಲ್ಲಿ ಹುಡುಕಿದರೆ ಖಂಡಿತಾ ಸಿಗುತ್ತವೆ.
ಸಾಧ್ಯವಾದರೆ ಗುಬ್ಬಚ್ಚಿಯ ಚಿತ್ರ ಬರೆಯಿರಿ, ಗುಬ್ಬಚ್ಚಿಯ ಬಗೆಗಿನ ಹಾಡುಗಳನ್ನು ಸಂಗ್ರಹಿಸಿ, ನೀವೇ ಒಂದು ಹಾಡು ಬರೆಯಿರಿ ಮತ್ತು ಪ್ರತಿದಿನ ನಿಮ್ಮ ಸುತ್ತಲಿನ ಹಕ್ಕಿಗಳನ್ನು ಗಮನಿಸುತ್ತಾ ಇರಿ. ಅಂದ ಹಾಗೇ ನೀವು ಬರೆದ ಚಿತ್ರಗಳು ಮತ್ತು ಹಾಡುಗಳನ್ನು ಮಕ್ಕಳ ಜಗಲಿಗೆ ಕಳುಹಿಸಲು ಮರೆಯಬೇಡಿ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************