-->
ಅಪ್ಪಟ ಹುಟ್ಟು ಪ್ರತಿಭೆ : ಸುದೀಪ್ ಆಚಾರ್ಯ

ಅಪ್ಪಟ ಹುಟ್ಟು ಪ್ರತಿಭೆ : ಸುದೀಪ್ ಆಚಾರ್ಯ


                   ಅಪ್ಪಟ ಹುಟ್ಟು ಪ್ರತಿಭೆ..... 
                     ಸುದೀಪ್ ಆಚಾರ್ಯ
      ಈ ನಿಸರ್ಗ ನಮಗೆ ಗೋಚರಿಸುವ ಒಂದು ಸುಂದರ ಕಲಾಕೃತಿ. ಇಲ್ಲಿ ಬಣ್ಣಗಳನ್ನು ತುಂಬಿದವರಾರೆನ್ನುವುದೇ ಅಗೋಚರ. ಪ್ರಕೃತಿಯ ಸೌಂದರ್ಯದ ವೀಕ್ಷಣೆಯಲ್ಲಿ ತೊಡಗಿಕೊಳ್ಳುವ ನಾವುಗಳಿಗೆ ಆಕರ್ಷಣೆಯಾಗುವುದು ಇಲ್ಲಿ ಬಣ್ಣವೇ ಹೊರತು ಮತ್ತಾವುದೂ ಅಲ್ಲ.... ಹಾಗಾದರೆ ಬಣ್ಣಗಳು ಪ್ರತಿಯೊಬ್ಬರ ಮನಸ್ಸಿಗೂ ನೆಮ್ಮದಿ ತರುವಲ್ಲಿ ಮುಖ್ಯ ಪಾತ್ರವಹಿಸುತ್ತದೆನ್ನುವುದು ಸ್ಪಷ್ಟ. ಸೂರ್ಯಾಸ್ತದ ಬಾನಂಗಳದ ಬಣ್ಣದೋಕುಳಿ ಯಾಟ , ಜಲಪಾತದಲ್ಲಿ ಧುಮುಕುವ ನೀರಿನ ಬೆಳ್ಳಿನೊರೆಗಳು , ಪ್ರಕೃತಿಯ ಹಸಿರು ಹೊದಿಕೆಗಳು , ನವಿಲ ಮನಮೋಹಕ ಬಣ್ಣಗಳು , ಆಕರ್ಷಕ ಬಣ್ಣದ ಚಿಟ್ಟೆಗಳು , ಮನೋಹರ ಪ್ರಾಣಿ - ಪಕ್ಷಿಗಳು ವಾಹ್..... ಈ ಸೃಷ್ಟಿಯ ಅದ್ಭುತ ನೋಟಗಳು....!! 
         ಈ ಪ್ರಕೃತಿಯಿಂದ ಪ್ರಭಾವಿತರಾದ ನಾವುಗಳು ಕೂಡ ಪ್ರಕೃತಿದತ್ತವಾದ ಕಲಾ ಪ್ರಜ್ಞೆಯನ್ನು ಹೊಂದಿಕೊಳ್ಳುತ್ತೇವೆ...... ಕಲಾವಿದರು ಹುಟ್ಟಿಕೊಳ್ಳುವುದೇ ಇಲ್ಲಿಂದ...... ಮನದಲ್ಲುದಿಸಿದ ಕಲಾಸಕ್ತಿ ಗೆ ಪೂರಕವಾಗಿ ತೊಡಗಿಕೊಳ್ಳುವ ಮನಸುಗಳಿಗೆ ಪ್ರಕೃತಿಯೇ ಗುರುವಾಗಿ ನಿಲ್ಲುತ್ತದೆ.....!! ಹೀಗೆ ಕಲಾಕ್ಷೇತ್ರಕ್ಕೆ ಕಾಲಿಡುವ ಕಲಾ ಪ್ರತಿಭೆಗಳನ್ನು ಹಿಂದಿನಿಂದಲೂ ಕಾಣುತ್ತಾ ಬಂದಿದ್ದೇವೆ......ಹೀಗೆ ಬೆಳೆದ ಅಪ್ಪಟ ಹುಟ್ಟು ಪ್ರತಿಭೆ..... ಸುದೀಪ್ ಆಚಾರ್ಯ
           ಸುದೀಪ್ ಬಾಲ್ಯದಿಂದಲೇ ಚಿತ್ರಕಲೆಗೆ ಆಕರ್ಷಿತನಾದ ಬಾಲಕ. ಅಂಬೆಗಾಲಿಕ್ಕುವಾಗಲೇ ಗೋಡೆಯಲ್ಲಿ ಗೀಚಿ - ಗೀಚಿ ಬರೆದ ಮಸಿಯ ಚಿತ್ರಗಳು ಮಾಸುವ ಮುನ್ನವೇ ಕುಂಚವನ್ನು ಹಿಡಿಯುವ ಸೌಭಾಗ್ಯಕ್ಕೆ ಕಟೀಲಮ್ಮನ ಶ್ರೀರಕ್ಷೆಯೂ ಇದೆ. ದಕ್ಷಿಣ ಕನ್ನಡದ ಪ್ರಖ್ಯಾತ ಶ್ರೀದೇವಿಯ ಸಾನಿಧ್ಯ ಶ್ರೀ ಕ್ಷೇತ್ರ ಕಟೀಲಿಗೆ ಹತ್ತಿರದ ಕುರುಂಬಿಲ್ , ಮೂಡುಪೆರಾರದಲ್ಲಿ ಹುಟ್ಟಿದ ಸುದೀಪ್ ನಿಗೆ ಚಿತ್ರಕಲೆ ಎಂದರೆ ಪ್ರಾಣದಷ್ಟು ಪ್ರೀತಿ. ತಂದೆ ಸತೀಶ್ ಆಚಾರ್ಯ , ತಾಯಿ ರತ್ನಾವತಿ. ಆರ್ಥಿಕವಾಗಿ ಬಡತನದಲ್ಲಿದ್ದರೂ ಕಲೆಯ ಪ್ರೋತ್ಸಾಹಕ್ಕೆ ಈ ಮನೆಯಲ್ಲೇನೂ ಬಡತನವಿಲ್ಲ...!! ತಂದೆ-ತಾಯಿಯ ನಿರಂತರ ಪ್ರೋತ್ಸಾಹ ಈ ಹುಡುಗನಿಗೆ ಚಿತ್ರಕಲೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಟ್ಟಿತು.
       ತಾನು ಕಲಿತ ಪ್ರಾಥಮಿಕ ಶಾಲೆಯಲ್ಲಾಗಲಿ ಅಥವಾ ಪ್ರೌಢಶಾಲೆಯಲ್ಲಾಗಲಿ ವಿಶೇಷವಾದ ಚಿತ್ರಕಲಾ ಪರಿಣತರು ಇರಲಿಲ್ಲ. ತನ್ನ ಹುಟ್ಟು ಹವ್ಯಾಸ , ಶ್ರದ್ಧೆ , ಆಸಕ್ತಿ , ಬದ್ಧತೆಯಿಂದ ಸ್ವ- ಕಲಿಕೆಯನ್ನು ಕಂಡುಕೊಂಡರು. ಪ್ರಸ್ತುತ ಯೂಟ್ಯೂಬ್ - ಅಂತರ್ಜಾಲದ ಸಹಕಾರದಿಂದ ಕಲೆಯ ಅಂಚು ಇಂಚುಗಳನ್ನು ತಡಕಾಡಿ ಪಡಕೊಳ್ಳುವ ಆಸಕ್ತಿ ಸುದೀಪ್ ನಲ್ಲಿದೆ. ಬೇರೆ ಕಲಾವಿದರ ಚಿತ್ರಗಳನ್ನು ನೋಡುತ್ತಾ ಗಮನಿಸುತ್ತಾ ಬೆಳೆಯುವ ಹಂತಗಳನ್ನು ನಿರ್ದಿಷ್ಟವಾಗಿ ಗುರುತಿಸಿಕೊಂಡು ಮೈಗೂಡಿಸಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಂಡಿದ್ದಾರೆ. 
      ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಕಟೀಲು ಇಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ಸುದೀಪ್ ನಿಗೆ ಪೆನ್ಸಿಲ್ ಶೇಡಿಂಗ್ , ವಾಟರ್ ಕಲರ್ , ಆಕ್ರಿಲಿಕ್ ಕಲರ್ ಕರಗತವಾಗಿದೆ. ಹೆಚ್ಚಾಗಿ ನೈಜ ಚಿತ್ರಗಳನ್ನು ರಚಿಸುವತ್ತ ಗಮನವಹಿಸುವ ಸುದೀಪ್ ಏಕಾಗ್ರತೆ , ತಾಳ್ಮೆಯನ್ನು ಮೈಗೂಡಿಸಿದಂತಿದೆ. ಚಿತ್ರರಚನೆಗೆ ತದೇಕಚಿತ್ತದಿಂದ ತಲ್ಲೀನರಾದರೆ ಭಾವಪರವಶವಾದವರಂತೆ. ಚಿತ್ರದ ರೇಖಾವಿನ್ಯಾಸ ದಿಂದ ಹಿಡಿದು ಬಣ್ಣಗಳ ಸಂಯೋಜನೆಯವರೆಗೆ ನೈಜ ಭಾವವನ್ನು ಹೊರತರುವಲ್ಲಿ ಇವರ ಕೌಶಲ್ಯ ಅದ್ಭುತವಾಗಿದೆ...!!
          ಯಾವುದೇ ಚಿತ್ರಗಳಿರಲಿ ಆ ಚಿತ್ರದಲ್ಲಿ ಬಳಸಿಕೊಳ್ಳುವ ತಾಂತ್ರಿಕತೆ , ಕೌಶಲ್ಯಗಳು ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪ್ರಬುದ್ಧ ಕಲಾವಿದರ ರೀತಿಯಲ್ಲಿ ನಿರಾಳವಾಗಿ ಚಿತ್ರ ರಚನೆ ಮಾಡುವ ಇವರ ಕೌಶಲ್ಯ ನಿಜಕ್ಕೂ ಬೆರಗು ಹುಟ್ಟಿಸುತ್ತದೆ. ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆಯ ನೆರಳಿನಲ್ಲಿ ಅನೇಕ ಕಲಾವಿದರ ಹುಟ್ಟಿಗೆ ಕಾರಣವಾದಂತೆ ಕರಾವಳಿ ಭಾಗದ ಸಾಂಸ್ಕೃತಿಕ ಚಟುವಟಿಕೆಗಳು ಇವರಿಗೆ ಸ್ಪೂರ್ತಿಯಾಗಿದೆ...!!      
               ತುಳುನಾಡಿನ , ಭೂತ ಕೋಲ , ಕಂಬಳ , ಯಕ್ಷಗಾನ ಹಾಗೂ ಇನ್ನಿತರ ಕಲಾ ವೈವಿಧ್ಯತೆಗಳು ದಕ್ಷಿಣಕನ್ನಡದ ಸಾಂಸ್ಕೃತಿಕ ಲೋಕವನ್ನು ಅದ್ಭುತವಾಗಿ ವಿನ್ಯಾಸಗೊಳಿಸಿದೆ. ಸುದೀಪ್ ಆಚಾರ್ಯರ ಕುಂಚದಲ್ಲಿ ಮೂಡಿ ಬಂದ ಅನೇಕ ಕಲಾಕೃತಿಗಳು ಈ ಭಾಗದ ಜಾನಪದ ಸೊಗಡಿಗೆ ಹಿಡಿದ ಕೈಗನ್ನಡಿಯಾಗಿದೆ. ಅದ್ಭುತವಾಗಿ ಪ್ರೇರಣೆಯಾಗಬಲ್ಲ ಹಬ್ಬದ ದೃಶ್ಯಗಳು , ಜಾತ್ರೆಯ ಮೆರವಣಿಗೆಗಳು , ಕೃಷಿಯಾಧಾರಿತ ಚಟುವಟಿಕೆಗಳು ಕಲಾವಿದರ ಮನಸ್ಸನ್ನು ಇನ್ನಷ್ಟು ಜಾಗೃತಗೊಳಿಸುವಲ್ಲಿ ಇಲ್ಲಿನ ಪರಿಸರವೂ ಕಾರಣವಾಗಿದೆ. 
           ಯಾವುದೇ ಪ್ರಶಸ್ತಿ ಬಹುಮಾನಗಳ ನಿರೀಕ್ಷೆಗಳಿಲ್ಲದೆ ಕಲಾ ಸೇವೆಯಲ್ಲಿ ನಿರತರಾಗಿರುವ ಸುದೀಪ್ ಕಲೆಯ ಸಿದ್ಧಿಯನ್ನು ಪಡೆದುಕೊಳ್ಳಲು ಅವಿರತ ಅವಿಶ್ರಾಂತ ಸಾಧನೆಯಲ್ಲಿ ತೊಡಗಿದ್ದಾರೆ. ಮನದ ಸಂತಸ ಭಾವವು ಪ್ರಕಟವಾಗಲು ರಚನೆಗೊಂಡ ಕಲಾಕೃತಿಗಳು ಹೊಸ ಚೈತನ್ಯವನ್ನು ತುಂಬುತ್ತದೆ. ನಿತ್ಯ ಕ್ರಿಯಾಶೀಲರಾಗಿ ಸೃಜನಶೀಲರಾಗಿ ಬೆಳೆಯಲು ಅನುವು ಮಾಡಿಕೊಡುವ ಈ ಚಿತ್ರಕಲೆ ಸುಂದರ ಮತ್ತು ಸೌಂದರ್ಯಭರಿತ ಸಮಾಜವನ್ನು ನಿರ್ಮಿಸುವತ್ತ ದೊಡ್ಡ ಕೊಡುಗೆಯಾಗುತ್ತದೆ. ಈ ಕಾರಣದಿಂದ ಸೌಂದರ್ಯ ಮತ್ತು ಕಲಾಪ್ರಜ್ಞೆ ಸಮಾಜದಲ್ಲಿ ನೆಲೆನಿಂತರೆ ಎಲ್ಲವೂ ಸುಂದರವಾಗಿ ಕಾಣುತ್ತದೆ...!!
       ಪ್ರಾಥಮಿಕ ಶಾಲಾ ಹಂತದಿಂದ , ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಹವ್ಯಾಸವನ್ನು ಬೆಳೆಸುತ್ತಾ ಬೆಳೆಯುತ್ತಾ ಇಂದಿನವರೆಗೆ ರಾಜ್ಯಮಟ್ಟದ ಅನೇಕ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ಪ್ರತಿಭೆ ಇವರು. ಆರ್ಥಿಕವಾಗಿ ಸವಾಲೆದುರಿಸಬಹುದಾದ ಒತ್ತಡಗಳಿದ್ದರೂ ದೃಶ್ಯಕಲೆಯಲ್ಲಿ ಪದವಿಯನ್ನು ಪಡೆದು ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬುದು ಇವರ ಕನಸು. ಪ್ರತಿಭೆಗಳು ನಿಂತ ನೀರಾಗದೆ ನಿರ್ದಿಷ್ಟ ಗುರಿ ತಲುಪುವ ಹರಿವಾಗಬೇಕು.....!! ಕಲಾಪೋಷಕರು ಕಲಾಪ್ರೇಮಿಗಳು ಇಂತಹ ಪ್ರತಿಭೆಗಳನ್ನು ಬೆಳೆಸಿ ಪೋಷಿಸಿದರೆ ನಾಡಿಗೆ ದೊಡ್ಡ ಕೊಡುಗೆ ಕೊಟ್ಟಂತಾಗಬಹುದು..!!
           ಪ್ರತಿಯೊಬ್ಬರು ಕಲಾಭಿಮಾನಿಗಳಾಗಿ ಕಲಾಕ್ಷೇತ್ರದ ಚೌಕಟ್ಟಿನಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇನ್ನು ಕೆಲವರು ಚೌಕಟ್ಟನ್ನು ದಾಟಿ ಮೀರಿ ಬೆಳೆಯಬಹುದಾದ ಅವಕಾಶಗಳನ್ನು ಗಳಿಸಿಕೊಂಡಿದ್ದಾರೆ. ಕಲಾಲೋಕದಲ್ಲಿ ಪರಿಧಿಯನ್ನು ಮೀರಿ ಅದ್ಭುತ ಯಶಸ್ಸು ಗಳಿಸುವ ಸುವರ್ಣಾವಕಾಶಗಳಿಗೆ ಯಾವತ್ತೂ ನಿರ್ಬಂಧಗಳಿಲ್ಲ ಅಂತಹ ಯಶಸ್ಸಿನತ್ತ ಯುವ ಪ್ರತಿಭೆಗಳು ದಾಪುಗಾಲಿಕ್ಕುತ್ತಾ ಬೆಳೆಯಬೇಕೆಂಬುದೇ ಎಲ್ಲರ ಕನಸು.....! ಹೀಗೆ ಬೆಳೆಯುವ ಅನೇಕ ಪ್ರತಿಭೆಗಳಲ್ಲಿ ಸುದೀಪ್ ಆಚಾರ್ಯ ಮುಂದೊಂದಿನ ಅದ್ಭುತ ಕಲಾವಿದನಾಗಿ ಮೂಡಿ ಬರಲಿ ಎಂಬುದೇ ಮಕ್ಕಳ ಜಗಲಿಯ ಆಶಯ.....!
............................ ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣ ಕನ್ನಡ ಜಿಲ್ಲೆ
*********************************************
              

         
        

Ads on article

Advertise in articles 1

advertising articles 2

Advertise under the article