-->
ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ-18ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1

      ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ....... ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ...... ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಮಕ್ಕಳ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........  



          ನಮಸ್ತೆ ಅಕ್ಕ...... ನಾನು ಶ್ರಾವ್ಯ.. ಕಳೆದ ಬಾರಿಯೂ ನಮ್ಮ ಭೇಟಿ ನನ್ನ ಹಲವು ದೂರ ಸಂಬಂಧಿಕರನ್ನು ಸ್ನೇಹಿತರನ್ನು ಕರೆ ಮಾಡಿ ಸಂಪರ್ಕಿಸುವಂತೆ ಆಗಿತ್ತು. ಈ ಬಾರಿಯು ನೀವು ಒಂದು ಕುತೂಹಲ ಮತ್ತು ವಾಸ್ತವಿಕ ವಿಚಾರ ನಮ್ಮ ಮುಂದೆ ಇಟ್ಟಿದ್ದೀರಿ. ನೀವು ಹೇಳಿರುವ ಹಾಗೆ ನಮ್ಮ ಪ್ರತಿ ನಿತ್ಯದ ಓಡಾಟದಲ್ಲಿ ನಮ್ಮೆದುರು ಸಾವಿರಾರು ವ್ಯಕ್ತಿಗಳು ಬಂದು ಹೋಗಿರುತ್ತಾರೆ. ನಾವು ಅವರ ನೆನಪಲ್ಲಿ ಅಥವಾ ನಮ್ಮ ನೆನಪಲ್ಲಿ ಅವರು ಇದ್ದಾರೆ ಎಂದಾದರೆ ಅಲ್ಲಿ ಒಂದು ಆತ್ಮೀಯತೆ , ಪ್ರೀತಿ, ಗೆಳೆತನ ಬೆಳೆದಿರುತ್ತದೆ. ನಾನೂ ಇಲ್ಲಿ ನಮ್ಮ ಕಾಲೇಜಿನಲ್ಲಿ ಕೆಲಸ ಮಾಡುವ ಒಬ್ಬ ಅಂಕಲ್ ಬಗ್ಗೆ ಹೇಳಲು ಇಚ್ಛಿಸುತ್ತೇನೆ. ಇಡೀ ಕಾಲೇಜು ಅವರ ಕೈಯಲ್ಲಿ ಇರುವ ಕೀಲಿ ಕೈಯ ಮೇಲೆ ನಿಂತಿದೆ. ನಮ್ಮ ಕಾಲೇಜಿನ ದಿನದ ಆರಂಭದಿಂದ ಹಿಡಿದು ಎಲ್ಲರೂ ಮನೆಗೆ ಹೋಗುವವರೆಗೆ ಕಾಲೇಜಿನ ಎಲ್ಲಾ ಕೊಠಡಿ , ಕಛೇರಿಗಳನ್ನು ನೋಡಿಕೊಳ್ಳುವುದು ಭದ್ರತೆ ಕಾಪಾಡಿಕೊಳ್ಳುವುದು ಅವರ ಕೆಲಸ. ಸಾವಿರಾರು ಮಕ್ಕಳಿರುವ ಕಾಲೇಜಿನಲ್ಲಿ ನಾನು ಮತ್ತು ನನ್ನ ಗೆಳತಿಯರು ಆತ್ಮೀಯತೆಯಿಂದ ಆ ಅಂಕಲ್ ಜೊತೆ ಮಾತನಾಡಿದಾಗ ಅವರಿಗೆ ತುಂಬಾ ಖುಷಿ ಕೊಡುತ್ತದೆ. ಅತ್ತ ಇತ್ತ ತಿರುಗಾಡುತ್ತಾ ಇರುವ ಅಂಕಲ್ ಅಲ್ಲಿ ಇಲ್ಲಿ ಸಿಕ್ಕಾಗ ನಾವು ಮಾತಾಡಿಸಿದಾಗ ತುಂಬಾ ಖುಷಿ ಪಡುತ್ತಾರೆ. ಇಂತಹ ಆತ್ಮೀಯತೆಯ ಬಗ್ಗೆ ನೆನೆಯುವಾಗ ಸಂತೊಷವಾಗುತ್ತದೆ. ಹೀಗೆ ಎಷ್ಟೋ ಜನ ನಮ್ಮ ಜೀವನದಲ್ಲಿ ಬಂದು ಹೋಗಿರುತ್ತಾರೆ. ಅವರ ನೆನಪನ್ನು ಮೆಲುಕು ಹಾಕಿಸುವ ನಿಮ್ಮ ಈ ಪತ್ರ ತುಂಬಾನೆ ಖುಷಿ ನೀಡಿದೆ. ನಿಮ್ಮ ಮಾತು ಹೀಗೆ ಸದಾ ನಮ್ಮ ಜೊತೆ ಇರಲಿ. ಧನ್ಯವಾದ ಅಕ್ಕ‌.
................................................ ಶ್ರಾವ್ಯ
ಪ್ರಥಮ ಪಿ ಯು ಸಿ 
ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



       ನಮಸ್ತೆ ಅಕ್ಕ ನಾನು ಆಯಿಷಾ ಹಮ್ನ. ನಾನು ಚೆನ್ನಾಗಿದ್ದೀನಿ ನೀವು ಚೆನ್ನಾಗಿದ್ದೀರಿ ಅಂತ ಭಾವಿಸುತ್ತೇನೆ. ನೀವು ಬರೆದ ಪತ್ರ ಓದಿದೆ. ಈ ವರ್ಷದಲ್ಲಿ ಶಾಲೆಗೆ ಹೋಗುವಾಗ ಒಂದು ಅನುಭವ ಆಗಿತ್ತು. ಅದೇನೆಂದರೆ ಎಲ್ಲಾ ದಿವಸವು ನನ್ನ ಮನೆಯಿಂದ 8:00 ಗಂಟೆ ಏಳು ನಿಮಿಷಕ್ಕೆ ಮನೆಯಿಂದ ಹೊರಟು ಬಸ್ಸಿಗಾಗಿ ಕಾಯುತ್ತಿದ್ದೆ. 8: 10 ಕ್ಕೆ ಭಗವತಿ ಬಸ್ ಬರುತ್ತಿತ್ತು. ಅದರಲ್ಲಿ ನಾನು ಶಾಲೆಗೆ ಹೋಗುತ್ತಿದ್ದೆ. ಒಂದು ದಿವಸ ಏನೋ ಒಂದು ಕಾರಣದಿಂದ ನನ್ನ ಮನೆಯಿಂದ ಹೊರಡುವಾಗ ಸ್ವಲ್ಪ ತಡವಾಯಿತು ಆಗ ನನ್ನ ಮನೆಯ ಗೇಟಿನಿಂದ ಹೊರಡುವಾಗಲೇ ನಾನು ಹೋಗುವ ಬಸ್ಸು ದಾಟಿ ಯಾಯಿತು , ಅಷ್ಟರಲ್ಲಿ ನನಗೆ ತುಂಬಾ ಬೇಸರವಾಯಿತು ಆದರೆ ಯಾವಾಗಲೂ ಬಸ್ಸು ಹತ್ತುತ್ತಿದ್ದ ಹುಡುಗಿ ಬಸ್ ಹತ್ತಲಿಲ್ಲ ಎಂದು ತಿಳಿದ ಬಸ್ ಡ್ರೈವರ್ ನನ್ನ ಮನೆ ಇರುವ ಭಾಗಕ್ಕೆ ಇಣುಕಿದಾಕ್ಷಣ ನನ್ನ ಬರುವಿಕೆಯನ್ನು ಕಂಡು ಬ್ರೇಕ್ ಹಾಕಿದರು. ಇದರಿಂದ ಆ ದಿವಸದ ಶಾಲೆಗೆ ಹೋಗುವ ಪ್ರಯಾಣ ಯಾವಾಗಲೂ ಹೋದ ಹಾಗೆ ಆಯಿತು. ಇದಕ್ಕೆ ಕಾರಣ ನನ್ನ ಬಸ್ಸಿನ ಡ್ರೈವರ್ ಅವರ ಸಮಯಪ್ರಜ್ಞೆ ಮತ್ತು ಶಾಲಾ ಮಕ್ಕಳ ಮೇಲಿರುವ ಪ್ರೀತಿಯಾಗಿತ್ತು. ಎಲ್ಲಾ ದಿವಸವು ಹೋಗುವ ಶಾಲಾ ಮಕ್ಕಳನ್ನು ತುಂಬಾ ಆತ್ಮೀಯತೆಯಿಂದ ಸಹಕರಿಸುತ್ತಾರೆ ಎಂದು ಅರ್ಥವಾಯಿತು. ಅಂತಹ ಡ್ರೈವರ್ ಗಳನ್ನು ಅಥವಾ ಕಂಡಕ್ಟರ್ ಗಳನ್ನು ನಮಗೆ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಹೀಗೆಯೇ ಯಾವಾಗಲೂ ಎಲ್ಲಿಗಾದರೂ ಹೋಗುವಾಗ ಅಥವಾ ಬರುವಾಗ ಒಬ್ಬರನ್ನೊಬ್ಬರು ಪರಿಚಯಿಸಿದರೆ ನಮ್ಮ ಜೀವನದಲ್ಲಿ ಬರುವ ಕಷ್ಟಕ್ಕೆ ಅಂತಹವರು ಆಪತ್ಬಾಂಧವರಾಗುತ್ತಾರೆ.
ಧನ್ಯವಾದಗಳು ಅಕ್ಕಾ ......
....................................... ಆಯಿಷಾ ಹಮ್ನ
9ನೇಯ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

*********************************************



       ಹಾಯ್ ಅಕ್ಕಾ ನಾನು ನಿಮ್ಮ ಪ್ರೀತಿಯ ತಂಗಿ ರಕ್ಷಾ. ಸಂಬಂಧಗಳು ಯಾವಾಗಲು ನಮ್ಮ ಜೊತೆ ಇರುತ್ತದೆ ಅನ್ನುವುದಕ್ಕೆ ಈ ಘಟನೆ ಉದಾಹರಣೆ. ದಿನನಿತ್ಯವೂ ಮಾಂಸದ ಅಂಗಡಿಗೆ ಕೆಲಸಕ್ಕೆ ಹೋಗಿ, ಸಮಯಕ್ಕೆ ಸರಿಯಾಗಿ ಮನೆಗೆ ಮರಳುತ್ತಿದ್ದ ಹುಡುಗಿ ಆ ದಿನ ಎಷ್ಟು ಹೊತ್ತಾದರೂ ಮನೆಗೆ ಬರಲೇ ಇಲ್ಲ. ಮಗಳು ಬರದೆ ಇದ್ದುದನ್ನು ಕಂಡು ತಂದೆ ತಾಯಿ ಚಡಪಡಿಸುತ್ತಿದ್ದರು... ಯಾವಾಗಲು ಆ ಹುಡುಗಿ ಹೋಗುವಾಗ ಬರುವಾಗ ವಾಚ್ ಮ್ಯಾನ್ ಹತ್ತಿರ ತಪ್ಪದೆ ಮಾತನಾಡಿಸುತ್ತಿದವಳು.. ನಿನ್ನೆ ಮನೆಗೆ ತೆರಳಲೇ ಇಲ್ಲ ಎಂದು ತಿಳಿಸಿದ.. ಆ ಕಾವಲುಗಾರ ಬರುವುದು ಒಂದೆರಡು ಗಂಟೆ ತಡವಾಗಿದ್ದರೆ ಅವಳು ಈ ಜಗತ್ತಿನಿಂದ ದೂರ ಸರಿದು ಬಿಡುತ್ತಿದ್ದಳು. ಒಂದುವೇಳೆ ಅವಳು ಆ ಕಾವಲುಗಾರನೊಂದಿಗೆ ಒಡನಾಟವನ್ನು ಬೆಳೆಸಿಕೊಳ್ಳದಿದ್ದರೆ ನಿಜವಾಗಿಯೂ ಅವಳು ಬದುಕಿರುತ್ತಿರಲಿಲ್ಲ... ನಾನು ಈ ಪತ್ರದ ಮೂಲಕ ಸಂಬಂಧಗಳ ಮಹತ್ವ , ಮೌಲ್ಯಗಳನ್ನು ತಿಳಿದೆ.
ಧನ್ಯವಾದಗಳು ಅಕ್ಕಾ.........
..................................................... ರಕ್ಷಾ
ಒಂಬತ್ತನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ,  ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



       ಪ್ರೀತಿಯ ಅಕ್ಕನಿಗೆ ಹಿತಾಶ್ರೀ ಮಾಡುವ ನಮಸ್ತೆ ....... ಅಕ್ಕ ನೀವು ಕಳಿಸಿದ ಘಟನೆಯನ್ನು ಸಂಪೂರ್ಣವಾಗಿ ಓದಿದ್ದೇನೆ. ಈ ಕಥೆಯಿಂದ ಒಳ್ಳೆಯ ರೀತಿಯ ನೀತಿ ತಿಳಿದು ಬರುತ್ತದೆ. ಎಲ್ಲರ ಜೊತೆ ಹೊಂದಾಣಿಕೆ ಇದ್ದುದರಿಂದ ಅವಳ ಜೀವವನ್ನು ಉಳಿಸಲು ಸಾಧ್ಯವಾಯಿತು. ಮನುಷ್ಯ ಒಂದು ಸಂಘ ಜೀವಿ ಆದ ಕಾರಣ ಯಾರನ್ನು ಯಾವುದೇ ರೀತಿಯಲ್ಲಿ ಕಡಿಗಣಿಸುವುದಿಲ್ಲ ಎಂಬುವುದು ಈ ಕಥೆಯಲ್ಲಿ ತಿಳಿದು ಬರುತ್ತದೆ.
..............................................ಹಿತಾಶ್ರೀ .ಪಿ
ಆರನೇ ತರಗತಿ
ಶ್ರೀ ವೇಣುಗಪಾಲ ಅ.ಹಿ.ಪ್ರಾ.ಶಾಲೆ 
ಪಕಳಕುಂಜ , ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

*********************************************


         ನಮಸ್ತೆ ಅಕ್ಕ... ನಾನು ಚೆನ್ನಾಗಿದ್ದೇನೆ.. ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ.... ಕಳೆದ ಪತ್ರವನ್ನು ಓದಿ, ನಾನು ಚಿಕ್ಕಮ್ಮನಿಗೆ ಫೋನ್ ಮಾಡಿದ್ದೆ. ನಾನು ಖುಷಿಯನ್ನೆಲ್ಲ ಹಂಚಿಕೊಂಡೆ. ಅವರಿಗೂ ತುಂಬಾ ಖುಷಿಯಾಯಿತು. ಈ ಸಂಚಿಕೆಯಲ್ಲಿ ನೀವು ಬರೆದಂತಹ 'ಹೆಲೆನ್' ಎಂಬ ಘಟನೆಯನ್ನು ಓದಿದೆ. ಅಪಘಾತಕ್ಕೆ ಒಳಗಾದಾಗ ಅವಳನ್ನು ಕಾಪಾಡಿದ್ದು ಅವಳು ಕಾವಲುಗಾರ ನಿಗೆ ತೋರುತ್ತಿದ್ದ ಪ್ರೀತಿ, ಕಾಳಜಿ, ಪ್ರೀತಿಯ ಮಾತುಗಳು. ಅವಳು ಪ್ರತಿದಿನ ಮಾತನಾಡಿಸಿ ದ್ದರಿಂದ ಕಾವಲುಗಾರನಿ ಗೆ ಅವಳ ನೆನಪು. ನಾವು ಪ್ರತಿದಿನ, ಅಂಗಡಿಯವರು, ಹಾಲು ಮಾರುವವರು ಇಂತಹವರನ್ನು ಬೇಟಿಯಾಗುತ್ತಿರುತ್ತೇವೆ. ಅವರಲ್ಲಿ ಒಂದೆರಡು ಮಾತನಾಡಬೇಕು. ನಾವು ಪ್ರತಿದಿನ ಮಾತನಾಡಿದರೆ ಅವರಿಗೆ ಎಲ್ಲಾ ಸಂಧರ್ಭದಲ್ಲೂ ನೆನಪಿರುತ್ತೇವೆ ಎಂಬುದನ್ನು ನಾನು ಇಂದಿನ ಈ ಅಕ್ಕನ ಪತ್ರದಿಂದ ತಿಳಿದೆ. ನಿಮ್ಮಿಂದ ತಿಳಿಯಲು ಬೇಕಾದಷ್ಟಿದೆ. ನಾನು ಮುಂದಿನ ಪತ್ರಕ್ಕಾಗಿ ಕಾಯುತ್ತಿದ್ದೇನೆ. ಇಷ್ಟು ಹೇಳಿ ನನ್ನ ಉತ್ತರಕ್ಕೆ ವಿರಾಮ ಹಾಕುತ್ತಿದ್ದೇನೆ...ವಂದನೆಗಳು..
................................... ಆಯಿಷತ್ ಹರ್ಝ. 
8 ನೆಯ ತರಗತಿ .
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಟ್ಟು.
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



      ಹಾಯ್ ಅಕ್ಕ ನಾನು ನಿಮ್ಮ ಮಮತೆಯ ತಂಗಿ ದಿಶಾ. ನಾನು ಚೆನ್ನಾಗಿದ್ದೇನೆ ನೀವು ಹೇಗಿದ್ದೀರ... ನಾನು ನಿಮ್ಮ ಪತ್ರವನ್ನು ಓದುತಿದ್ದೇನೆ. ನೀವು ಬರೆದಿರುವ ಪತ್ರದಲ್ಲಿ ಜೀವನದ ಮೌಲ್ಯ ಇದೆ. ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದ ಹುಡುಗಿ... ಒಂದು ದಿನ ಮನೆಗೆ ಬರಲು ತಡವಾದಾಗ ತಂದೆ ತಾಯಿ ಭಯಪಡುತ್ತಿದ್ದರು. ಪ್ರತಿದಿನ ಕಾವಾಲುಗರನನ್ನು ಮಾತನಾಡಿಸುತ್ತಿದ್ದ ಹುಡುಗಿ ಸಂಜೆ ಮಾತನಾಡಲು ಬರದೆ ಇದ್ದ ಕಾರಣ ಅವನು ಕೋಣೆಯಲ್ಲಿ ಹುಡುಕಿದಾಗ ಸಿಕ್ಕಿದಳು. ನಾವು ಈ ವಿಷಯದಿಂದ ತಿಳಿಯುವುದು ಏನೆಂದರೆ ಕಾವಲುಗಾರನು ಒಂದು ಗಂಟೆ ತಡವಾಗಿ ಬಂದಿದ್ದರೂ ಅವಳ ಪ್ರಾಣ ಹೋಗುತಿತ್ತು. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯ ಜೊತೆ ಹೇಗೆ ಒಡನಾಟ ಬೆಳೆಸಬೇಕು ಎಂದು ತಿಳಿಸಿದ್ದಾರೆ. ನಾನು ಈ ಪತ್ರದಿಂದ ಸಂಬಂಧಗಳ ಮಹತ್ವವನ್ನು ತಿಳಿಯಬಹುದಾಗಿದೆ . ಧನ್ಯವಾದಗಳು ಅಕ್ಕಾ...
.................................................... ದಿಶಾ
ಒಂಬತ್ತನೆಯ ತರಗತಿ 
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


       ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನಾವು ಮಾತನಾಡುವಾಗ ನಮ್ಮ ಮಾತುಗಳು ಇನ್ನೊಬ್ಬರಿಗೆ ಹಿತವನ್ನುಂಟು ಮಾಡುವಂತಿರಬೇಕು. ಹಿರಿಯರೇ ಇರಲಿ, ಕಿರಿಯರೇ ಇರಲಿ ಮಾತುಗಳು ಆತ್ಮೀಯತೆಯನ್ನುಂಟು ಮಾಡುವಂತಿರಬೇಕು. ನಾನು ಶಾಲೆಯಲ್ಲಿ ನನ್ನ ಶಿಶುಮಂದಿರದ ಮಾತಾಜಿಯವರೊಂದಿಗೆ ಈಗಲೂ ಆತ್ಮೀಯತೆಯಿಂದ ಮಾತನಾಡುತ್ತಿರುತ್ತೇನೆ.
ದಿನಾಲು ಅವರೊಂದಿಗೆ ಮಾತನಾಡಿಯೇ ನನ್ನ ತರಗತಿಗೆ ಹೋಗುತ್ತೇನೆ. ಇದರಿಂದ ಅವರಿಗೂ ಒಂದು ತರಹದ ಖುಷಿ ನನಗೂ ಒಂದು ತರಹದ ಖುಷಿ. ಹೀಗೆ ನಾವು ಪ್ರೀತಿಪೂರ್ವಕವಾಗಿ ಮಾತನಾಡಿದಾಗ ಅವರಿಗೂ ಚೈತನ್ಯದ ಚಿಲುಮೆಯಂತಾಗುತ್ತದೆ. ನಮ್ಮ ಈ ಮೂರು ದಿನದ ಬಾಳ್ವೆಯಲ್ಲಿ ಆದಷ್ಟು ಸಂತೋಷ, ಆತ್ಮೀಯತೆ ಮತ್ತು ಪ್ರೀತಿ-ವಿಶ್ವಾಸದಿಂದಿರೋಣ. ಬದುಕಿನ ಪಯಣದಲ್ಲಿ ಎಲ್ಲವನ್ನೂ ಆನಂದಿಸೋಣ ಮತ್ತು ಅನುಭವಿಸೋಣ.
             ಧನ್ಯವಾದಗಳೊಂದಿಗೆ
...................................... ವೈಷ್ಣವಿ ಕಾಮತ್ 
5ನೇ ತರಗತಿ. 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************

      


        ಜೈ ಶ್ರೀರಾಮ್ ಪ್ರೀತಿಯ ಅಕ್ಕನಿಗೆ ತೃಪ್ತಿ ಮಾಡುವ ನಮಸ್ಕಾರಗಳು....... ಕಥೆ ತುಂಬಾ ಚೆನ್ನಾಗಿತ್ತು ಅಕ್ಕ. ಹೌದು ಈ ಕತೆಯನ್ನು ಅಮ್ಮ ಕೂಡ ನನಗೆ ಹೇಳಿದ್ದರು. ಹೌದು ಪ್ರತಿದಿನವೂ ನಾವು ಶಾಲೆಯಿಂದ ಬರುವಾಗ ಬಸ್ಸಿನ ಡ್ರೈವರ್ ಆಗಲಿ ಮಾತಾಜಿ ಗಳಿಗೆ ಆಗಲಿ ನಾವು ರಾಮ್ ರಾಮ್ ಎಂದು ಎಂದು ಹೇಳಿ ಬರುತ್ತೇವೆ. ದಾರಿಯಲ್ಲಿ ಸಿಕ್ಕ ಪರಿಚಯಸ್ಥರಿಗೆ ಕೂಡ ರಾಮ್ ರಾಮ್ ಎಂದು ಹೇಳಿ ಬರುತ್ತೇವೆ. ಇನ್ನೊಮ್ಮೆ ಯಾವಾಗಲಾದರೂ ಅವರು ಸಿಕ್ಕಿದಾಗ ಅವರಾಗೇ ನಮ್ಮಲ್ಲಿ ಮಾತನಾಡಿಸುತ್ತಾರೆ. ಹೇಗಿದ್ದೀಯಾ ಮಗಳೆಂದು ಮಾತನಾಡಿಸುತ್ತಾರೆ. ಅದೊಂದು ಆತ್ಮೀಯತೆಯ ಭಾವನೆ ಉಂಟಾಗುತ್ತದೆ. ನಾನಂತೂ ಎಲ್ಲರ ಜೊತೆಯೂ ಚೆನ್ನಾಗಿ ನಗುನಗುತ್ತಾ ಮಾತನಾಡುತ್ತೇನೆ. ಹೌದು ಎಲ್ಲರೊಡನೆಯೂ ನಗುನಗುತ್ತಾ ಇದ್ದರೆ ಮುಂದೆ ಅದೇ ಅಭ್ಯಾಸವಾಗಿ ನಮಗೆ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಬಹುದು ಅಲ್ಲವೇ..... ಪಾಪ ಆ ಕಥೆಯಲ್ಲಿ ಬರುವ ಹೆಣ್ಣು ಮಗಳು ಅದೆಷ್ಟು ಹೊತ್ತು ಕಷ್ಟ ಪಟ್ಟಿರಬಹುದು ಅಲ್ವಾ... ಸ್ವಲ್ಪ ಬೇಸರವೂ ಆಯಿತು. ಪತ್ರವನ್ನು ನಾವು ಎಲ್ಲರೂ ಓದಿದೆವು. ತಮ್ಮನೂ ಕೂಡ ಆ ಕತೆಯನ್ನು ಪುನಹ ಇನ್ನೊಮ್ಮೆ ಓದಿ ಹೇಳಿ ಎಂದು ಹೇಳಿದ. ಅವನಿಗೆ ಅಮ್ಮ ವಿವರಣೆ ಕೊಟ್ಟರು. ಎಲ್ಲರಿಗೂ ಶುಭವಾಗಲಿ ರಾಮ್ ರಾಮ್.. ತುಂಬಾ ಚೆನ್ನಾಗಿರುವ ಕಥೆಯನ್ನು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕ.....
 .............................................. ತೃಪ್ತಿ ವಗ್ಗ 
5ನೇ ಭರತ ತರಗತಿ 
ಶ್ರೀರಾಮ ವಿದ್ಯಾ ಕೇಂದ್ರ 
ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************

          ನಮಸ್ತೆ ಅಕ್ಕ.. ನಾನು ನಿಮ್ಮ ಪ್ರೀತಿಯ ತಂಗಿ ರಕ್ಷಾ. ನೀವು ಹೇಳಿದ ಹಾಗೆ ಬಸ್ಸಿನ ಚಾಲಕರು ಬಸ್ಸಿನ ಕಂಡಕ್ಟರ್ ಇವರೆಲ್ಲ ಅವರ ಕೆಲಸದಲ್ಲಿ ನಿರತರಾಗಿದ್ದರೂ ತುಂಬಾ ಸಂತೋಷದಿಂದ ಮಾತನಾಡುತ್ತಾರೆ. ನಾವು ಪ್ರತಿದಿನ ಹೋಗುವ ಬಸ್ಸಿನ ಚಾಲಕನಿಗೂ ಬಸ್ಸಿನ ಕಂಡಕ್ಟರ್ ಗೂ ಪರಿಚಯ ಇರುತ್ತದೆ. ಹಾಗೆಯೇ ನಾವು ಪ್ರತಿದಿನ ನಡೆದು ಹೋಗುವ ದಾರಿಯ ಅಕ್ಕ ಪಕ್ಕದ ಮನೆಯವರಲ್ಲಿ ಪ್ರೀತಿಯಿಂದ ಮಾತನಾಡುತ್ತಾ ಇದ್ದರೆ , ಅವರು ನಾವು ಬರುವ ದಾರಿಯನ್ನು ಕಾದು ನೋಡುತ್ತಾರೆ. 
 ಧನ್ಯವಾದಗಳೊಂದಿಗೆ.........
....................................................ರಕ್ಷಾ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
*********************************************


       ನಮಸ್ತೆ ಅಕ್ಕಾ..... ನಾನು ನಿಭಾ
ನೀವು ಹೇಳಿದ ಕಥೆ ತುಂಬಾ ಅದ್ಭುತವಾಗಿತ್ತು. ಹೌದು ನೀವು ಹೇಳಿದ್ದು ನಿಜ. ನಮ್ಮ ಶಾಲೆಯ ಅಡುಗೆ ಅಕ್ಕನವರನ್ನು ಪ್ರೀತಿಯಿಂದ ಮಾತನಾಡಿಸಿದರೆ ಅವರಿಗೆ ತುಂಬಾ ಖುಷಿಯಾಗುವುದನ್ನು ನಾನು ನೋಡಿದ್ದೇನೆ. ಹಾಗೆಯೇ ರಿಕ್ಷಾ ಚಾಲಕರನ್ನು ಕೂಡ ಮಾತನಾಡಿಸಿದರೆ ಅವರಿಗೂ ಬಹಳ ಖುಷಿಯಾಗುತ್ತದೆ. ಹೀಗೆ ತುಂಬಾ ಕಾರ್ಮಿಕರನ್ನು ಮಾತನಾಡಿಸಿದಾಗ ಅವರಿಗೆ ಆಗುವ ಸಂತಸವನ್ನು ಕಂಡಿದ್ದೇನೆ. ಹಾಗೆ ಇನ್ನೂ ಮುಂದೆಯೂ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತೇನೆ. ಹಾಗೂ ನನಗೆ ಈ ವಿಷಯವನ್ನು ತಿಳಿಸಿದ ಅಕ್ಕಾ ನಿಮಗೂ ತುಂಬಾ ಧನ್ಯವಾದಗಳು.
.................................................... ನಿಭಾ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ 
ಶಾಲೆ ನೇರಳಕಟ್ಟೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



       ನಮಸ್ತೆ ಅಕ್ಕ, ನಾನು ಶ್ರೇಯ. ನಾನು ಕ್ಷೇಮವಾಗಿದ್ದೇನೆ. ನೀವು ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ನೀವು ಬರೆದ ಪ್ರತಿಯೊಂದು ಪತ್ರದಲ್ಲಿಯೂ ಒಂದೊಂದು ಹೊಸ ವಿಷಯಗಳಿರುತ್ತದೆ. ಈ ಪತ್ರದಲ್ಲಿ ನನಗೆ ಏನು ತಿಳಿಯಿತೆಂದರೆ ಆ ಹುಡುಗಿ ತುಂಬಾ ಒಳ್ಳೆಯವಳು, ಎಲ್ಲರಿಗೂ ಸಹಾಯ ಮಾಡುತ್ತಿದ್ದಳು. ಆದ್ದರಿಂದ ಅವಳಿಗೆ ಕಷ್ಟ ಬಂದಾಗ ಸಹಾಯ ಮಾಡಿ ಅವಳ ಪ್ರಾಣವನ್ನು ಉಳಿಸಿದರು. ಹಾಗೆಯೇ ನಾವು ಬೇರೆಯವರಿಗೆ ಸಹಾಯ ಮಾಡಿದರೆ ನಮಗೆ ಕಷ್ಟ ಬಂದಾಗ ಯಾರಾದರೂ ಸಹಾಯ ಮಾಡುತ್ತಾರೆ. 
ಧನ್ಯವಾದಗಳೊಂದಿಗೆ,
..................................................... ಶ್ರೇಯ
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
*********************************************


          ನಮಸ್ತೇ......... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು..... ನೀವು ಬರೆದ ಪತ್ರವನ್ನು ಓದಿದೆ. ಓದಿದಾಗ ನನಗೆ "ಆಪಾತ್ತಿಗಾದವನೇ ನೆಂಟ" ಎಂಬ ಮಾತು ನೆನಪಾಯಿತು. ಎಷ್ಟು ಸಣ್ಣ ಕೆಲಸವೇ ಆಗಿರಲಿ ನಾವೂ ಆ ಕೆಲಸವನ್ನು ಗೌರವಿಸಬೇಕು. ಅವರಲ್ಲಿ ನಾವು ಪ್ರೀತಿಯಿಂದ ಮಾತನಾಡಿಸಿದಾಗ ಅವರಿಗೆ ತುಂಬಾ ಸಂತೋಷ ವಾಗುತ್ತದೆ. ಜನರನ್ನು ಅವರಿರುವ ಸ್ಥಾನದಿಂದ ಅಳೆಯದೆ ಹೃದಯದಿಂದ ಪ್ರೀತಿಸೋಣ ಎಲ್ಲರೂ ನಮ್ಮವರು ಎನ್ನುವ "ವಿಶ್ವ ಮಾನವತೆ"ಯಿಂದ ಬಾಳೋಣ. ನಮ್ಮ ಬದುಕಿನಲ್ಲಿ ಸಂತಸದ ಸಂಬಂಧ ಗಳನ್ನು ಬೆಸೆಯೋಣ ಎಂಬುದನ್ನು ತಿಳಿದುಕೊಂಡೆವು.
  ಧನ್ಯವಾದಗಳು ಅಕ್ಕಾ,
..................................... ಸಾತ್ವಿಕ್ ಗಣೇಶ್ 
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************




Ads on article

Advertise in articles 1

advertising articles 2

Advertise under the article