-->
ಪರೀಕ್ಷೆಯನ್ನು ಹಬ್ಬದಂತೆ ಆಚರಣೆ ಮಾಡೋಣ....

ಪರೀಕ್ಷೆಯನ್ನು ಹಬ್ಬದಂತೆ ಆಚರಣೆ ಮಾಡೋಣ....

     

                      ಪರೀಕ್ಷೆಯನ್ನು ಹಬ್ಬದಂತೆ 
                       ಆಚರಣೆ ಮಾಡೋಣ...
           ಕಲಿಕೆ ನಿಂತ ನೀರಲ್ಲ ನಿರಂತರವಾಗಿ ಸಾಗುತ್ತಿರುವ ಪ್ರಕ್ರಿಯೆ. ಕಲಿಕೆಯ ಪಯಣದಲ್ಲಿ ಶಾಲಾಜೀವನ ಪ್ರಮುಖ ಘಟ್ಟ. ಪ್ರತಿ ಮಗುವನ್ನು ವಿಶ್ವಮಾನವತೆಯತ್ತ ಕೊಂಡೊಯ್ಯುತ್ತಿರುವ ಔಪಚಾರಿಕ ಕಲಿಕಾ ಕೇಂದ್ರವೇ ಶಾಲೆ.   
      ಹೆತ್ತಮ್ಮನಿಗೆ ಹೆಗ್ಗಣ ಮುದ್ದು ಎಂಬಂತೆ
ಪ್ರತೀ ಮಗುವೂ ಶ್ರೇಷ್ಠ. ಎಲ್ಲಾ ತಂದೆ ತಾಯಂದಿರೂ ತಮ್ಮ ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಕಾಣುತ್ತಿರುತ್ತಾರೆ. ಕೈಯ ಐದು ಬೆರಳುಗಳು ಒಂದೇ ಸಮನಿಲ್ಲದಿದ್ದರೂ ಮುಷ್ಟಿಯಲ್ಲಿ ಪ್ರತೀ ಬೆರಳಿನ ಪಾತ್ರವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರತೀ ಮಗುವಿನಲ್ಲೂ ಹುದುಗಿರುವ ಸಾಮರ್ಥ್ಯ , ಪ್ರತಿಭೆಗಳು ಅಪಾರ ಅನನ್ಯ. ಮಗುವಿನ ಸಾಮರ್ಥ್ಯವನ್ನು ಅರಿತು ಶಿಕ್ಷಕರು ಪೋಷಕರು ಪ್ರೋತ್ಸಾಹ ನೀಡಬೇಕಾದ್ದು ತೀರಾ ಅನಿವಾರ್ಯ. ಮಕ್ಕಳ ಮನೋವಿಕಾಸಕ್ಕೆ ಅನುಗುಣವಾಗಿ ಬೆಳೆಯಲು ವಾತಾವರಣವನ್ನು ನಿರ್ಮಿಸಿಕೊಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದು.
             ಮಕ್ಕಳ ಮನದ ಭಾವನೆಗಳ ಅನಾವರಣಕ್ಕಾಗಿ ರೂಪುಗೊಂಡ ಮಕ್ಕಳ ಜಗಲಿ ಮಕ್ಕಳನ್ನು , ಪೋಷಕರನ್ನು ಹಾಗೂ ಆಸಕ್ತ ಪ್ರತಿಯೊಬ್ಬರನ್ನೂ ಕ್ರಿಯಾಶೀಲಗೊಳಿಸಿದೆ. ಮಕ್ಕಳ ಜಗಲಿಯಲ್ಲಿ ಕಲರವ ಮಾಡುತ್ತಿರುವ ಸೃಜನಶೀಲ ಮಕ್ಕಳೇ, ನಿಮ್ಮ ನವ-ನವೀನ ಚಟುವಟಿಕೆಗಳನ್ನು, ನಾವಿನ್ಯ ಪೂರ್ಣ ಲೇಖನಗಳನ್ನು , ಮುಗ್ಧ ಮನಸ್ಸಿನ ಕನಸುಗಳನ್ನು ನೋಡುತ್ತಾ ಅತೀವ ಸಂತಸ ಪಡುತ್ತಿರುವವರಲ್ಲಿ ನಾನೂ ಒಬ್ಬ. ನಿಮ್ಮನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಹಿರಿಯ ಸಾಹಿತಿಗಳು, ಈ ವೇದಿಕೆಯನ್ನು ಒದಗಿಸಿದ ಎಲ್ಲಾ ಸಹೃದಯಿ ಸಾಹಿತ್ಯಾಸಕ್ತರಿಗೂ ಅಭಿನಂದನೆಗಳು. ಹಿರಿಯರೆಲ್ಲಾ ನಿಮ್ಮ ಸುಂದರ ನಾಳೆಗಳಿಗಾಗಿ, ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸುಂದರ ವಿಚಾರಗಳನ್ನು ಕಾಲ ಕಾಲಕ್ಕೆ ನಿಮಗೆ ಒದಗಿಸುತ್ತಾ ಬಂದಿರುವರು.         
         ಮುದ್ದು ಮಕ್ಕಳೇ..... ಜೀವನದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂಬುದೇ ಎಲ್ಲಾ ಸಹೃದಯರ ಅಭಿಲಾಷೆ. ನಿಮ್ಮ ಮುಂದೆ ಅಗಾಧವಾದ ಅವಕಾಶಗಳು ಕಾಯುತ್ತಿವೆ. ಇದನ್ನೆಲ್ಲಾ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಬೆಳೆಯಲು ಸಾಧ್ಯತೆಗಳು ಸಾಕಷ್ಟಿದೆ. ನಿಮಗಾಗಿ ಇನ್ನೊಂದು ಸಾಧ್ಯತೆ ತೆರೆದುಕೊಳ್ಳುತ್ತಿದೆ. ನಿಮ್ಮ ಈ ವರ್ಷದ ಸಾಧನೆಯನ್ನು ಸಮಾಜಕ್ಕೆ ತಿಳಿಯಪಡಿಸುವ ಇನ್ನೊಂದು ಅವಕಾಶ ಅನಾವರಣಗೊಳ್ಳಲಿದೆ.
             ನಾನು ಮಾತನಾಡುತ್ತಿರುವುದು ಮುಂದಿರುವ ಶೈಕ್ಷಣಿಕ ಮೌಲ್ಯಮಾಪನಗಳ ಬಗ್ಗೆ. ನಮ್ಮ ಎಲ್ಲಾ ಸಾಧನೆಗಳು ಸಮಾಜದ ಮುಂದೆ ವಿಕಾಸಗೊಂಡು ಪ್ರಕಟವಾಗುವ ಒಂದು ಸುವರ್ಣಾವಕಾಶ. ವಾರ್ಷಿಕ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಮ್ಮ ಸಾಧನೆ ಪ್ರಕಟವಾಗಬೇಕಾಗಿದೆ. ಪಠ್ಯದ ವಿಷಯದಲ್ಲಿ ಇಷ್ಟಪಟ್ಟು ಓದುವ ಹವ್ಯಾಸ ಬೆಳೆದು. ಜ್ಞಾನವನ್ನು ಸಂಪಾದಿಸುವ ಕುತೂಹಲವನ್ನು ಬೆಳೆಸೋಣ. 
            ಇನ್ನು ನಮ್ಮ ಚಿತ್ತ ವಾರ್ಷಿಕ ಪರೀಕ್ಷೆಗಳತ್ತ. ನಿರ್ಭೀತಿಯಿಂದ ಸಮರ್ಥವಾಗಿ ಎದುರಿಸುವ ಬಗ್ಗೆ ಗಮನ ಹರಿಸುವ ಸಮಯ ಬಂದಿದೆ. ಪರೀಕ್ಷೆಗಳೆಂದರೆ ಯಾವುದೇ ಭಯ ಬೇಕಾಗಿಲ್ಲ. ಶಾಲೆಗಳಲ್ಲಿ ಸಿಗುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಓದಿನ ಕಡೆ ಸಮಯವನ್ನು ಮೀಸಲಿಡಬೇಕು. ಅರ್ಥವಾಗದ ಯಾವುದೇ ವಿಷಯಗಳನ್ನು ಮನನ ಮಾಡಿಕೊಳ್ಳಲು ಶಿಕ್ಷಕರ , ಪೋಷಕರ ಸಹಕಾರವನ್ನು ಪಡೆಯಬೇಕು. ನಾವು ಉಳಿದವರಿಗೆ ಮಾದರಿಯಾಗಬೇಕಾಗಿದೆ. ಎಲ್ಲಾ ಚಟುವಟಿಕೆಗಳ ಜೊತೆ - ಜೊತೆಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉನ್ನತ ಸಾಧನೆಯನ್ನು ತೋರಿಸಿಕೊಡುವ ಕಾಲ ಬಂದಿದೆ. ನಾವೆಲ್ಲರೂ ಈ ಸವಾಲನ್ನು ಅತ್ಯಂತ ಸ್ಫೂರ್ತಿದಾಯಕವಾಗಿ ಸ್ವೀಕರಿಸೋಣ. ಸತತ ಪರಿಶ್ರಮ ನಿರಂತರ ಪ್ರಯತ್ನ ಇವೆರಡೇ ನಮ್ಮ ಸಾಧನೆಗೆ ಇರುವ ರಾಜಮಾರ್ಗಗಳು. ಬನ್ನಿ ನಮ್ಮ ಯಶಸ್ಸಿನ ದಾರಿಗೆ ಮುನ್ನಡಿಯಿಡೋಣ.  
        ವರ್ಷದ ಆರಂಭದಲ್ಲಿ ಉತ್ತು ಬಿತ್ತಿದ ಬೆಳೆಗಳು ಬೆಳೆಯುತ್ತಾ ಅಂತ್ಯದಲ್ಲಿ ಫಲ ನೀಡುವಂತೆ ..... ನೀವು ವರ್ಷವಿಡೀ ಕಲಿತ ಪಠ್ಯ ವಿಚಾರಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಾರ್ಚ್ - ಎಪ್ರಿಲ್ ತಿಂಗಳುಗಳಲ್ಲಿ ನಡೆಯುವ ಪರೀಕ್ಷೆಯನ್ನು ನಿರ್ಭೀತಿಯಿಂದ ಸಮರ್ಥವಾಗಿ ಎದುರಿಸುವ ಮನೋಸ್ಥೈರ್ಯ ನಿಮ್ಮಲ್ಲಿ ಒಡಮೂಡಲಿ. ಪರೀಕ್ಷೆಯನ್ನು ಹಬ್ಬದಂತೆ ಆಚರಣೆ ಮಾಡೋಣ. ಸತತ ಪರಿಶ್ರಮ ಸಮಯದ ಸದ್ಬಳಕೆ ಹಿರಿಯರ , ಶಿಕ್ಷಕರ ಮಾರ್ಗದರ್ಶನ..... ಪೋತ್ಸಾಹ.. ಎಲ್ಲವನ್ನೂ ಸ್ಫೂರ್ತಿದಾಯಕವಾಗಿ ಸ್ವೀಕರಿಸುತ್ತಾ ಮುಂದೆ ಬರುವ ಅಂತಿಮ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸಿ ಅತ್ಯಧಿಕ ಅಂಕಗಳೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಎಂಬ ಶುಭ ಹಾರೈಕೆಗಳೊಂದಿಗೆ
.............................................. ಸುಧಾಕರ ಕೆ
ಜಿಲ್ಲಾ ಉಪನಿರ್ದೇಶಕರು (ಆಡಳಿತ)
ಸಾರ್ವಜನಿಕ ಶಿಕ್ಷಣ ಇಲಾಖೆ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article