ಹಕ್ಕಿ ಕಥೆ - 35
Tuesday, February 22, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ ಕಥೆ - 35
------------------
ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿಕಥೆಗೆ ಸ್ವಾಗತ. ಹಿಂದಿನ ವಾರದ ಹಕ್ಕಿಕಥೆಗಳಲ್ಲಿ ನೀರನ್ನು ಆಶ್ರಯಿಸಿ ಬದುಕುವ ಕೆಲವು ಹಕ್ಕಿಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ನೀರಿನ ಮೇಲೆ ಈಜುತ್ತಾ ಆಹಾರ ಹುಡುಕುವ ಬಾತುಕೋಳಿಗಳು, ನೀರಿನ ಒಳಗೆ ಮುಳುಗಿ ಮೀನು ಹಿಡಿಯುವ ನೀರುಕಾಗೆ ಅಥವಾ ಹಾವಕ್ಕಿಗಳು, ತಮ್ಮ ಉದ್ದವಾದ ಕಾಲುಗಳನ್ನು ಬಳಸಿ ನೀರು ಅಥವಾ ಕೆಸರಿನಲ್ಲಿ ಓಡಾಡುತ್ತಾ ಆಹಾರ ಅರಸುವ ಕೊಕ್ಕರೆಯ ಜಾತಿಯ ಹಕ್ಕಿಗಳು ನಮಗೆ ಗೊತ್ತು. ನೀರಿನ ಮೇಲೆ ನಡೆಯುತ್ತಾ ಆಹಾರ ಹುಡುಕುವ ಹಕ್ಕಿಯನ್ನು ಎಂದಾದರೂ ನೋಡಿದ್ದೀರಾ....?
ನಮ್ಮ ಮನೆಗೆ ಬರುವ ದಾರಿಯಲ್ಲಿ ಹಿಂದೆ ಭತ್ತದ ಗದ್ದೆಗಳು ಇರುತ್ತಿದ್ದವು. ಕೆಲವು ಗದ್ದೆಗಳಲ್ಲಿ ಹಲವಾರು ವರ್ಷ ಕೃಷಿ ಮಾಡದೇ ಹಾಗೇ ಬಿಟ್ಟಿದ್ದ ಕಾರಣಕ್ಕೆ ಸುಮಾರು ಬೇಸಗೆಯ ಕಾಲದವರೆಗೂ ನೀರು ನಿಂತು ಅದೊಂದು ಕೆರೆಯಂತೆ ಕಾಣುತ್ತಿತ್ತು. ಅದರ ತುಂಬಾ ತಾವರೆ, ನೈದಿಲೆ ಹೂವಿನ ಗಿಡಗಳು ಮತ್ತು ಹಲವಾರು ಬಗೆಯ ಜಲಸ್ಯಗಳು ಬೆಳೆದಿದ್ದವು. ನಾವು ಚಿಕ್ಕವರಿದ್ದಾಗ ಬೇಸಗೆ ರಜೆಯಲ್ಲಿ ಅಲ್ಲೇ ಪಕ್ಕದ ಗದ್ದೆಯಲ್ಲಿ ಆಟವಾಡಿದ ನಂತರ ನೈದಿಲೆ ಹೂವನ್ನು ಕೀಳಲು ಹೋಗುತ್ತಿದ್ದೆವು. ಆವಾಗ ನಮಗೊಂದು ವಿಚಿತ್ರವಾದ ಹಕ್ಕಿ ನೋಡಲು ಸಿಗುತ್ತಿತ್ತು.
ಈ ಹಕ್ಕಿ ಅಗಲವಾದ ತಾವರೆ ಎಲೆಗಳ ಮೇಲೆ , ಇತರೆ ಜಲ ಸಸ್ಯಗಳ ಮೇಲೆ ನಡೆಯುತ್ತಾ ನೀರಿನ ಮೇಲೆ ಓಡಾಡುವುದನ್ನು ನಾವು ನೋಡುತ್ತಿದ್ದೆವು. ಈ ಹಕ್ಕಿ ನೀರುಕಾಗೆಯಂತೆ ನೀರಿನೊಳಗೆ ಮುಳುಗುತ್ತಿರಲಿಲ್ಲ, ಕೊಕ್ಕರೆಯಂತೆ ನೀರಿನೊಳಗೆ ಕಾಲು ಇಟ್ಟು ನಡೆಯುತ್ತಿರಲಿಲ್ಲ. ಆದರೆ ಇದು ನೀರಿನ ಮೇಲೆ ಹೇಗೆ ನಡೆಯುತ್ತದೆ ಎಂಬುದು ನಮಗೆ ಬಹಳ ಆಶ್ಚರ್ಯದ ವಿಷಯವಾಗಿತ್ತು. ಸುಮಾರು ಹುಂಡುಕೋಳಿಯ ಗಾತ್ರದ ಈ ಹಕ್ಕಿಯ ತಲೆ ಮತ್ತು ಮೈಬಣ್ಣ ಕಡು ಕಂದು. ಕಣ್ಣಿನ ಮೇಲೆ ತಲೆಯ ಹಿಂದಿನವರೆಗೂ ಕಾಣುವ ಬಿಳೀ ಬಣ್ಣದ ಹುಬ್ಬು , ಕಂಚಿನ ಬಣ್ಣದ ಹೊಳೆಯುವ ರೆಕ್ಕೆಗಳು. ಕೆರೆ , ಸರೋವರ ಮೊದಲಾದ ಕಡೆ ಬೆಳೆದ ಜಲಸಸ್ಯಗಳ ಮೇಲೆ ನಡೆದಾಡುವ ಈ ಹಕ್ಕಿಯನ್ನು ಕಾಣಬಹುದು. ಜಲಸಸ್ಯಗಳು ಮತ್ತು ಕೀಟಗಳು ಇದರ ಮುಖ್ಯ ಆಹಾರ. ನೀರಿನ ಮೇಲೆ ಬೆಳೆಯುವ ಹುಲ್ಲುಗಳನ್ನು ಬಳಸಿ ಜೂನ್ ನಿಂದ ಸಪ್ಟೆಂಬರ್ ತಿಂಗಳ ಮಧ್ಯೆ ತೇಲುವ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡುತ್ತದೆಯಂತೆ.
ಯಾವಾಗ ನಾನು ಪಕ್ಷಿವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದೆನೋ, ಬೈನ್ಯಾಕುಲರ್ ಮೂಲಕ ಈ ಹಕ್ಕಿಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನೋಡಿದಾಗ ತಿಳಿದದ್ದು ಇದರ ನೀರ ಮೇಲಿನ ನಡಿಗೆಯ ಗುಟ್ಟು. ಈ ಹಕ್ಕಿಯ ಕಾಲಿನ ಬೆರಳುಗಳು ಬಹಳ ಉದ್ದವಾಗಿರುತ್ತವೆ. ಮನುಷ್ಯರಾದ ನಮಗೆ ನಮ್ಮ ಕೈಯಲ್ಲಿರುವ ಬೆರಳುಗಳು ಈಗಿರುವ ಎರಡರಷ್ಟು ಉದ್ದವಾಗಿದ್ದರೆ ಹೇಗಿರುತ್ತಿತ್ತೋ ಈ ಹಕ್ಕಿಯ ಕಾಲ ಬೆರಳುಗಳು ಅಷ್ಟು ಉದ್ದವಾಗಿರುತ್ತವೆ. ಇದರಿಂದಾಗಿ ಈ ಹಕ್ಕಿ ಜಲಸಸ್ಯಯಗಳ ಮೇಲೆ ನಡೆಯುವಾಗ ಇದರ ತೂಕ ಒಂದೇ ಸಸ್ಯದ ಮೇಲೆ ಬೀಳದೆ, ಎರಡುಮೂರು ಗಿಡಗಳ ಮೇಲೆ ಹಂಚಿ ಹೋಗುತ್ತದೆ, ಹಾಗಾಗಿಯೇ ಈ ಹಕ್ಕಿ ನೀರಿನ ಮೇಲೆ ನಡೆದಂತೆ ಕಾಣುತ್ತದೆ.. ಸರಳವಾದ ವಿಜ್ಞಾನ ತತ್ವವನ್ನು ಬಳಸಿ ಹಕ್ಕಿಯೊಂದು ಹೇಗೆ ತನ್ನ ಬದುಕನ್ನು ಕಟ್ಟಿಕೊಂಡಿದೆ ಅಲ್ಲವೇ.. ಹಾಗಾದರೆ ಮಾನವರಾದ ನಮಗೆ ಮಾತ್ರ ವಿಜ್ಞಾನ ತಿಳಿದಿರುವುದು ಅಲ್ಲ ಎಂದಾಯಿತಲ್ಲವೇ....!! ನಾವೂ ಈ ಹಕ್ಕಿಯಂತೆ ಪರಿಸರ ಪೂರಕವಾಗಿ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ವಿಜ್ಞಾನವನ್ನು ಬಳಸುವ ಕಲೆಯನ್ನು ಕಲಿಯಬೇಕಿದೆ.
ಹಕ್ಕಿಯ ಕನ್ನಡ ಹೆಸರು: ಬಿಳಿ ಹುಬ್ಬಿನ ದೇವನಕ್ಕಿ ಅಥವಾ ಅರಶಿನ ರೆಕ್ಕೆ
ಇಂಗ್ಲೀಷ್ ಹೆಸರು: Bronze-winged Jacana
ವೈಜ್ಞಾನಿಕ ಹೆಸರು: Metopidius indicus
ಚಿತ್ರಗಳು : ಅಂತರ್ಜಾಲ ಕೃಪೆ
ನೀರನ್ನೇ ಆಶ್ರಯಿಸಿ ಬದುಕುವ ಇಂತಹ ಹಲವಾರು ಹಕ್ಕಿಗಳ ಉಳಿವಿಗೆ, ಅಂತರ್ಜಲದ ಮಟ್ಟ ಇನ್ನಷ್ಟು ಕುಸಿಯದಂತೆ ಕಾಪಾಡಲಿಕ್ಕಾದರೂ ನಾವು ಕೆರೆಗಳನ್ನು ಉಳಿಸಬೇಕಿದೆ ಅಲ್ಲವೇ......?
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದ ಜೊತೆ ಸಿಗೋಣ, ನಮಸ್ಕಾರ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************