-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 34

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 34

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 34
   


       ನಂಬಿಕೆಯ ಬೇರು ಬೇರೂರಿರುವ ತನಕ....
     -------------------------------------------
           12 ಹರೆಯದ ಬಾಲಕನೋರ್ವ ದಿನಾಲೂ ಶಾಲೆಯಿಂದ ಮನೆಗೆ ಮರಳಿದ ಬಳಿಕ ಒಂದು ಚಿಕ್ಕ ಕೊಡಪಾನದಲ್ಲಿ ನೀರು ತುಂಬಿಸಿ ತನ್ನ ಶಾಲಾ ದಾರಿಯಲ್ಲಿದ್ದ ಬುಡದವರೆಗೆ ಕಡಿದ ನಿಸ್ತೇಜ ಐದಾರು ಮರಗಳಿಗೆ ನೀರನ್ನು ಹಾಕುತ್ತಿದ್ದನು. ಈ ವಿಷಯ ತಂದೆಗೆ ಗೊತ್ತಾಯಿತು. ಒಂದು ದಿನ ಮಗನನ್ನು ಹಿಂಬಾಲಿಸಿ ತಂದೆಯು ಮರದ ತನಕ ಬಂದನು. ಮಗನು ನೀರು ಹಾಕಿದ ನಂತರ "ಈ ಬುಡದವರೆಗೆ ಕಡಿದ ಮರಕ್ಕೆ ನೀರು ಹಾಕಿ ಏನು ಪ್ರಯೋಜನ........? ಅದು ಸಾಯುತ್ತದೆ. ನಿನ್ನ ವ್ಯರ್ಥ ಪ್ರಯತ್ನ ಬಿಡು.....? ಬೇರೆ ಏನಾದರೂ ಕೆಲಸ ಮಾಡು" ಎಂದನು. ಅದಕ್ಕೆ ಮಗನು "ಅಪ್ಪಾ, ಅದಕ್ಕಿನ್ನೂ ಜೀವಂತ ಬೇರುಗಳಿವೆ. ಪಾಪಿಗಳು , ಕೇವಲ ಮರದ ಗೋಚರ ಭಾಗವಾದ ಎಲೆ , ರೆಂಬೆ-ಕೊಂಬೆ , ಕಾಂಡವನ್ನು ಮಾತ್ರ ಕಡಿದಿದ್ದಾರೆ. ಆದರೆ ಅಗೋಚರ ಶಕ್ತಿಯಾದ ಬೇರನ್ನು ಕಡಿದಿಲ್ಲ. ಬೇರು ಇರೋವರೆಗೆ ಮರಕ್ಕೆ ಸಾವಿಲ್ಲ. ಸ್ವಲ್ಪ ತಾಳ್ಮೆಯಿಂದ ಇರು. ಜೀವಂತ ಬೇರುಗಳು ಮತ್ತೆ ಸೇರಿ ನಿಸ್ತೇಜ ಮರದಲ್ಲಿ ಚಿಗುರು ಹುಟ್ಟಿಸುತ್ತದೆ , ರೆಂಬೆ ಕೊಂಬೆಗಳನ್ನು ಬೆಳೆಸುತ್ತದೆ. ಕೊನೆಗೆ ಬೃಹತ್ ಮರವಾಗಿ ನಮಗೆಲ್ಲಾ ನೆರಳಾಗಿ , ಹಣ್ಣು ಹಂಪಲು ಕೊಟ್ಟು ಉಪಕಾರಿಯಾಗುತ್ತದೆ " ಎಂದನು. ಮಗನ ಅಚಲ ನಂಬಿಕೆ ಮತ್ತು ಮರದ ಬದುಕಿನ ಬಗೆಗಿನ ಭರವಸೆ ನೋಡಿ ತಂದೆಗೆ ಅಚ್ಚರಿಯಾಯಿತು. ಮಗನನ್ನು ಬರಸೆಳೆದು ಅಪ್ಪಿ ಮುದ್ದಾಡಿದನು.
         ಹೌದಲ್ವ ಗೆಳೆಯರೇ.. ಗೋಚರವಾಗಿರುವ ಎಲೆ, ರೆಂಬೆ-ಕೊಂಬೆ ಹಾಗೂ ಕಾಂಡದ ಬುಡದವರೆಗೂ ಕಡಿಯಬಹುದು. ಆದರೆ ಎಲ್ಲಾ ಬೇರುಗಳನ್ನು ಕಡಿಯಲು ಸಾಧ್ಯವಿಲ್ಲ. ಮರದ ಬೇರು ಜೀವಂತವಾಗಿ ಇರುವವರೆಗೆ ಮರ ಸಾಯೋಲ್ಲ . ಆದರೆ ಆ ಬೆಳವಣಿಗೆ ನೋಡಲು ತಾಳ್ಮೆಬೇಕು , ಭರವಸೆ ಬೇಕು. ನಮ್ಮ ಬದುಕಿನಲ್ಲಿಯೂ ಕೂಡಾ ಗೋಚರವಾಗಿರುವ ಮತ್ತು ಸಕ್ರಮವಾಗಿ ಸಂಪಾದಿಸಿರೋ ಅದೆಷ್ಟೋ ಸಂಪತ್ತು , ಹಣ , ಆಸ್ತಿ ಮತ್ತು ಸೌಲಭ್ಯಗಳು ನಮ್ಮ ಅನಾರೋಗ್ಯ , ಸೇವಾ ಮನೋಭಾವ , ಅನ್ಯರ ಸ್ವಾರ್ಥ ಅಥವಾ ಇನ್ನಾವುದೇ ಕಾರಣಗಳಿಂದ ನಷ್ಟವಾಗಬಹುದು , ಕೈ ತಪ್ಪಿ ಹೋಗಬಹುದು. ಇದರ ಜತೆಗೆ ಪರಸ್ಪರ ಗೆಳೆತನ ಅಥವಾ ರಕ್ತಸಂಬಂಧಗಳು ಕೂಡಾ ಬೇರೆ- ಬೇರೆ ಕಾರಣಗಳಿಂದ ಕಡಿದು ಹೋಗಬಹುದು. ಆದರೆ ನಮ್ಮೊಳಗಿನ ಅಗೋಚರವಾದ ಛಲ , ನಂಬಿಕೆ, ಆತ್ಮವಿಶ್ವಾಸದ ಬೇರುಗಳನ್ನು ಯಾರಿಂದಲೂ ಕಡಿಯಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಅದು ನಮ್ಮೊಳಗೆ ಜೀವಂತವಾಗಿರುತ್ತದೋ ಅಲ್ಲಿಯವರೆಗೆ ನಾವು ಧೈರ್ಯಗೆಡಬೇಕಾಗಿಲ್ಲ. ಎಲ್ಲವೂ ಹೋಯಿತು.... ಬದುಕೇ ನಾಶವಾಯಿತು ಎಂಬ ನಿರಾಶಾವಾದದ ಭಾವ ಬೇಕಾಗಿಲ್ಲ..... ಅಂತರಂಗದೊಳಗಿನ ಆ ಜೀವಂತ ಬೇರುಗಳಿಂದ ಮತ್ತೆ ಸಹಜ ಸ್ಥಿತಿಗೆ ಬರಬಹುದು. ಸಾಧಿಸಿ ತೋರಿಸಬಹುದು. ಆ ಶಾಲಾ ಮಗುವಿಗೆ ಇರುವಂಥಹ ಭರವಸೆ ಸದಾ ನಮ್ಮೊಳಗೆ ಇದ್ದರೆ ನಾಳಿನ ಸುಂದರವಾದ ಬದುಕನ್ನು ಕಾಣಬಹುದು. ಭರವಸೆಯೇ ಬದುಕಾಗಲಿ....! ನಂಬಿಕೆಯೇ ಉಸಿರಾಗಲಿ....! ಈ ಭರವಸೆಗಳಿಂದಲೇ ಈ ಜಗತ್ತಿನಲ್ಲಿ ಇಂದೂ ಕೂಡಾ ಹಸಿರು ಉಸಿರಾಗಿದೆ....! ಮಾನವೀಯತೆ ಮೆರೆದಾಡುತ್ತಿದೆ.     
       ನಾವು ಕೂಡಾ ಮಾನವೀಯರಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************



Ads on article

Advertise in articles 1

advertising articles 2

Advertise under the article